ರಾಯಬಾಗ[ಅ.30]: ಆಹಾರ ಧಾನ್ಯಗಳನ್ನು ಸಂರಕ್ಷಿಸಲು ಇಡುವ ಔಷಧದ ವಿಷಗಾಳಿಯನ್ನು ಸೇವಿಸಿ ಮಕ್ಕಳಿಬ್ಬರು ಮೃತಪಟ್ಟಿರುವ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ಬುಧವಾರ ನಡೆದಿದೆ. ಚಿಂಚಲಿ ಪಟ್ಟಣದ ಕುಂಬಾರ ಗಲ್ಲಿಯ ಹನಮಂತ ಕುಂಬಾರಮತ್ತು ಕವಿತಾ ದಂಪತಿಯ ಮಕ್ಕಳಾದ ಜಯಶ್ರೀ (6) ಐಶ್ವರ್ಯ(4) ಕಾಳುಗಳಿಗೆ ಕೆಡದಂತೆ ಲೇಪನ ಮಾಡಿದ ವಿಷಗಾಳಿ ಸೇವಿಸಿ ವಾಂತಿಬೇಧಿಯಿಂದ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. 

ತಾಯಿ ತೀವ್ರ ಅಸ್ವಸ್ಥಗೊಂಡು ಮಹಾರಾಷ್ಟ್ರದ ಮಿರಜ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಯೋಧ ಹನಮಂತ ಅವರ ಸಹೋದರ ಲಗಮಣ್ಣ ಕಾಳಿನ ವ್ಯಾಪಾರ ಮಾಡುತ್ತಿದ್ದು, ಹೆಸರು, ಅಲಸಂದಿ, ಕಡಲೆ ಸೇರಿದಂತೆ ವಿವಿಧ ಬೇಳೆ ಕಾಳುಗಳು ಕೆಡದಂತೆ ಕೆಮಿಕಲ್ ಲೇಪನ ಮಾಡಿ ಇಡಲಾಗುತ್ತಿತ್ತು. ಹೀಗಾಗಿ ಮಂಗಳವಾರ ಕೂಡ ಹೀಗೆ ಲೇಪನ ಮಾಡಿಟ್ಟ ಆಹಾರ ಧಾನ್ಯ ಇರೋ ಕೋಣೆಯಲ್ಲಿಯೇ ಎಂದಿನಂತೆ ತಾಯಿ ಹಾಗೂ ಮಕ್ಕಳು ಮಲಗಿದ್ದರು. ತುಂಬಾ ಸೆಕೆ ಇರೋದಾಗಿ ಫ್ಯಾನ್ ಹಾಕಿಕೊಂಡು ಮಲಗಿರೋ ಮಕ್ಕಳು ಹಾಗೂ ತಾಯಿರಾತ್ರಿ ವಿಡಿ ವಿಷಗಾಳಿ ಸೇವಿಸಿ ತೀವ್ರ ಅಸ್ವಸ್ಥರಾಗಿದ್ದು ಮನೆಯವರ ಗಮನಕ್ಕೆ ಬಂದಿದೆ.

ತೀವ್ರ ಅಸ್ವಸ್ಥಗೊಂಡ ಮಕ್ಕಳನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವುದರೊಳಗಾಗಿ ಮಕ್ಕಳು ಮೃತಪಟ್ಟಿದ್ದರು ಎನ್ನಲಾಗಿದೆ. ಅವಿಭಕ್ತ ಕುಟುಂಬದ ಹನುಮಂತ ಕಳೆದ ಹತ್ತು ವರ್ಷಗಳಿಂದ ಆಸ್ಸಾಂನ ಗುವಾಹತಿಯಲ್ಲಿ ಭಾರತೀಯ ಸೇನೆಯಲ್ಲಿ ಸೇವೆಸಲ್ಲಿಸುತ್ತಿದ್ದಾರೆ. ಪತ್ನಿ ಹಾಗೂ ಮಕ್ಕಳನ್ನು ಅವರು ಊರಲ್ಲಿಯೇ ಬಿಟ್ಟು ಹೋಗಿದ್ದರು. ಇವರೊಟ್ಟಿಗೆ ಯೋಧನ ಸಹೋದರ ಕೂಡ ವಾಸವಿದ್ದ. ಯೋಧ ಹನುಮಂತ ತನ್ನೆರಡು ಹೆಣ್ಣು ಮಕ್ಕಳನ್ನು ಪ್ರೀತಿಯಿಂದ ಬೆಳೆಸುತ್ತಿದ್ದರು. ವಿಜಯದಶಮಿಯ ಹಬ್ಬಕ್ಕೆ ಚಿಂಚಲಿಗೆ ಬಂದು ಮಕ್ಕಳೊಂದಿಗೆ ಹಬ್ಬ ಆಚರಿಸಿ ಮತ್ತೆ ಕರ್ತವ್ಯಕ್ಕೆ ತೆರಳಿದ್ದರು. ಬೆಳಕಿನ ಹಬ್ಬದ ದಿನವೇ ಕರುಳ ಕುಡಿಗಳನ್ನುಕಳೆದುಕೊಂಡ ಯೋಧನ ಬದುಕು ಬಾಳು ಕತ್ತಲಾಗಿದೆ. 

ಜನ್ಮದಿನ ಆಚರಿಸಿಕೊಂಡಿದ್ದ ಐಶ್ವರ್ಯ:

ಮಂಗಳವಾರವಷ್ಟೇ  ಐಶ್ವರ್ಯ ತನ್ನ 4 ನೇ ವರ್ಷದ ಜನ್ಮ ದಿನವನ್ನುಆಚರಿಸಿಕೊಂಡು ಬೆಳಗಾಗುವುದರೊಳಗೆ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದು, ಎಂಥವರ ಕರುಳನ್ನೂ ಹಿಂಡುವಂತಿದೆ. ಹನುಮಂತ- ಕವಿತಾ ದಂಪತಿ ಮದುವೆಯಾದ ಬಹಳ ವರ್ಷಗಳ ಬಳಿಕ ಜಯಶ್ರೀ ಹಾ ಗೂ ಐಶ್ವರ್ಯ ಜನಿಸಿದ್ದರು. ಪುತ್ರ ಶೋಕಂ ನಿರಂತರಂ ಎನ್ನುವಂತೆ ಇಂದು ಆರಿ ಹೋದ ಕರುಳ ಕುಡಿಗಳು ಯೋಧನ ಜೀವನವನ್ನು ಕತ್ತಲಾಗಿಸಿ ಮರೆಯಾಗಿಸಿದ್ದಾರೆ. ಆತನನ್ನ ಫೇಸ್‌ಬುಕ್ ಪ್ರೋಫೈಲ್ ಹಾಗೂ ವಾಟ್ಸಪ್‌ನಲ್ಲಿ ತನ್ನ ಮಕ್ಕಳ ಫೋಟೋ ಇಟ್ಟು ಪ್ರತಿದಿನ ಏಳುವಾಗ ಮಕ್ಕಳ ಮುಖ ನೋಡಿಯೇ ಏಳುತ್ತಿದ್ದ. ಬೆಳಕಿನ ದೀಪಾವಳಿ ಸಂದರ್ಭದಲ್ಲಿಯೇ ಜನ್ಮದಿನ ಆಚರಿಸಿಕೊಂಡ ದಿನವೇ ದೇಶ ರಕ್ಷಣೆ ಮಾಡುವ ಯೋಧನ ಮಕ್ಕಳನ್ನು ವಿಧಿ ರಕ್ಷಿಸಲಿಲ್ಲ.