ರವಿ ಕಾಂಬಳೆ 

ಹುಕ್ಕೇರಿ(ನ.14): ಕಳೆದ ಆಗಸ್ಟ್ ತಿಂಗಳಲ್ಲಿ ಉಂಟಾದ ನೆರೆಯಿಂದ ಹುಕ್ಕೇರಿ ತಾಲೂಕಿನಲ್ಲಿ ಹಾನಿಗೊಳಗಾದ ಶಾಲಾ ಕಟ್ಟಡಗಳ ದುರಸ್ತಿಗೆ ಅನುದಾನ ಬಂದಿದೆ. ಆದರೆ, ಹೊಸದಾಗಿ 158 ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆ ಆಗಿಲ್ಲ. ಶೀಘ್ರದಲ್ಲಿ ಇಂತಹ ಶಾಲೆಗಳಿಗೆ ಕಟ್ಟಡ ಭಾಗ್ಯ ಸಿಗುವಂತೆ ಕಾಣುತ್ತಿಲ್ಲ. 

ನೆರೆಯಿಂದ ಸಣ್ಣಪುಟ್ಟ ಹಾನಿಗೊಳಗಾದ 226 ಶಾಲೆಗಳ 317 ಕೊಠಡಿಗಳ ದುರಸ್ತಿಗೆ 5 ಕೋಟಿಗೂ ಹೆಚ್ಚು ಅನುದಾನ ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆ ಆಗಿದೆ. ಆದರೆ, ಕಟ್ಟಡ ಬಿದ್ದಿರುವ ಉಪಯೋಗಕ್ಕೆ ಬಾರದೇ ಬೇರೆಡೆ ಸ್ಥಳಾಂತರಿಸಿರುವ ಶಾಲೆ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವ ಬಗ್ಗೆ ಸರ್ಕಾರ ಗಮನ ನೀಡಿದಂತೆ ಇಲ್ಲ. ಕೇವಲ ದುರಸ್ತಿಗೆ ಮಾತ್ರ ಹಣ ಬಿಡುಗಡೆ ಮಾಡಲಾಗಿದ್ದು, ಹೊಸ ಕಟ್ಟಡ ನಿರ್ಮಾಣಕ್ಕೆ ಕ್ರಮವೇನು? ಪ್ರಕೃತಿ ವಿಕೋಪದಡಿ ಅನುದಾನ ನೀಡಲಾಗುತ್ತದೆಯೇ ಎಂಬುವುದು ಯಕ್ಷ ಪ್ರಶ್ನೆ. 

ಹೊಸ ಕಟ್ಟಡ ಯಾವಾಗ: 

ಹುಕ್ಕೇರಿ ತಾಲೂಕಿನ ಬಹುತೇಕ ಶಾಲಾ ಕೊಠಡಿಗಳಿಗೆ ಪ್ರವಾಹ ಹಾಗೂ ಭೀಕರ ಮಳೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಕಟ್ಟಡಗಳು ಹಾನಿಗೊಳಗಾಗಿವೆ. ನೆಲಸಮವಾದ, ವಾರಗಟ್ಟಲೆ ಪೂರ್ಣ ಜಲಾವೃತಗೊಂಡು ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ ಕಟ್ಟಡಗಳನ್ನು ಪರಿಶೀಲನೆ ನಡೆಸಿ ಬಳಕೆಗೆ ಯೋಗ್ಯವಲ್ಲ ಎಂದು 158 ಶಾಲಾ ಕೊಠಡಿಗಳನ್ನು ಪರಿಗಣಿಸಲಾಗಿದೆ. ಇಂತಹ ಶಾಲೆಗಳನ್ನು ಸಮೀಪದ ಪ್ರಾಥಮಿಕ ಶಾಲೆ ಕಟ್ಟಡ, ಸಮುದಾಯ ಭವನ ಅಥವಾ ಸರ್ಕಾರದ ಇತರೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಇವುಗಳಿಗೆ ಸ್ವಂತ ಕಟ್ಟಡದ ಭಾಗ್ಯ ಸಿಗುತ್ತದೆಯೇ? ಸಿಕ್ಕರೆ ಯಾವಾಗ? ಎಷ್ಟು ದಿನ ಕಾಯಬೇಕೆಂಬುದು ಪಾಲ ಕರ ಮನದಲ್ಲಿ ಉಳಿದುಕೊಂಡಿದೆ.ಸರ್ಕಾರಿ ಶಾಲೆ ಸೌಲಭ್ಯವಿಲ್ಲ ಎಂದು ಖಾಸಗಿ ಶಾಲೆಗಳಿಗೆ, ಪ್ಲೇ ಸ್ಕೂಲ್ ಮೊದಲಾದವುಗಳಿಗೆ ಪಾಲಕರು ತಮ್ಮ ಮಕ್ಕಳನ್ನು ಸೇರಿಸುತ್ತಿದ್ದು ಈ ರೀತಿ ಕಟ್ಟಡವೇ ಇಲ್ಲದಿದ್ದರೆ ಮತ್ತಷ್ಟು ಮಕ್ಕಳ ಸಂಖ್ಯೆ ಕಡಿಮೆ ಆಗುವ ಆತಂಕ ಎದುರಾಗಿದೆ. 

ಯಾವ ಸ್ಥಳದಲ್ಲಿ ನಿರ್ಮಾಣ: 

158 ಶಾಲಾ ಕಟ್ಟಡಗಳು ಉಪಯೋಗಕ್ಕೆ ಯೋಗ್ಯವಲ್ಲ ಎಂದು ಪರಿಗಣಿ ಸಲಾಗಿದ್ದು, ಎಲ್ಲಿ ಪುನಃ ಹೊಸದಾಗಿ ನಿರ್ಮಾಣ ಮಾಡಬೇಕು ಎನ್ನುವ ಚಿಂತನೆ ಕೂಡಾ ಈಗಲೇ ನಡೆಯಬೇಕಿದೆ. ಈಗಿರುವ ಸ್ಥಳದಲ್ಲೇ ಕಟ್ಟಿದರೆ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಪುನಃ ಕಟ್ಟಡಕ್ಕೆ ಹಾನಿಯಾಗುವ ಸಾಧ್ಯತೆ ಇದೆ. ಜಲಾವೃತವಾಗಿದ್ದ, ನದಿ, ಸಮುದ್ರದ ಅಂಚಿನಲ್ಲಿ ಇರುವ ವಾಸದ ಮನೆಗಳನ್ನು ಬೇರೆಡೆ ಸ್ಥಳಾಂತರಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಶಾಲೆ ಕಟ್ಟಡಗಳನ್ನು ಕೂಡಾ ಇದೇ ರೀತಿ ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಿದರೆ ಶಾಶ್ವತ ಪರಿಹಾರ ದೊರೆಯಲಿದೆ. ಹಳೆ ಜಾಗದಲ್ಲೇ ನಿರ್ಮಾಣ ಮಾಡಿ ದರೆ ಪ್ರಯೋಜನ ಇಲ್ಲದಂತಾ ಗುವುದು ಎನ್ನುವ ಮಾತುಗಳಿವೆ. ಎಷ್ಟೆಷ್ಟು ಅನುದಾನ: ಶಾಲಾ ಕೊಠಡಿಗಳ ರಿಪೇರಿ ಕಾಮಗಾರಿಗಳನ್ನು ಲೋಕೋಪಯೋಗಿ ಹಾಗೂ ಜಿಪಂ ಎಂಜನಿಯರಿಂಗ್ ವಿಭಾಗಕ್ಕೆ ಹಂಚಿಕೆ ಮಾಡ ಲಾಗಿದೆ. ಲೋಕೋಪಯೋಗಿ ಇಲಾಖೆಗೆ 25 ಶಾಲೆ ಗಳ ರಿಪೇರಿಗೆ 51.32 ಲಕ್ಷ ಕಾಯ್ದಿರಿಸಲಾಗಿದೆ. ಜಿಪಂ ಎಂಜನಿಯರಿಂಗ್ ಉಪವಿಭಾಗಕ್ಕೆ 201 ಶಾಲೆಗಳ ದುರಸ್ತಿಗೆ 4.60 ಕೋಟಿ ಹಣ ಬಿಡುಗಡೆ ಮಾಡಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹುಕ್ಕೇರಿ ತಾಲೂಕಿನಲ್ಲಿ ಪ್ರವಾಹ ಹಾಗೂ ಭೀಕರ ಮಳೆಯಿಂದ ಶಾಲೆ ಕೊಠಡಿಗಳ ದುರಸ್ತಿಗೆ 5 ಕೋಟಿಗೂ ಹೆಚ್ಚಿನ ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ತ್ವರಿತವಾಗಿ ರಿಪೇರಿ ಕಾರ್ಯ ಕೈಗೊಳ್ಳಲು ಸಂಬಂಧಿಸಿದ ಇಲಾಖೆಗಳಿಗೆ ಸೂಚಿಸಲಾಗಿದೆ ಎಂದು ಶಾಸಕ ಉಮೇಶ ಕತ್ತಿ ಅವರು ಹೇಳಿದ್ದಾರೆ. 

ಈ ಬಗ್ಗೆ ಮಾಹಿತಿ ನೀಡಿದ ಬಿಇಒ ಮೋಹನ್ ದಂಡಿನ್ ಅವರು, ಕಳೆದ ಆಗಸ್ಟ್ ನಲ್ಲಿ ಸಂಭವಿಸಿದ ಪ್ರವಾಹದಿಂದ ಹುಕ್ಕೇರಿ ತಾಲೂಕಿನ 226 ಶಾಲೆಗಳ ಕೊಠಡಿಗಳಿಗೆ ಹಾನಿಯಾಗಿದೆ. ಈ ಕಟ್ಟಡಗಳ ರಿಪೇರಿಗೆ ಅನುದಾನ ಬಂದಿದ್ದು, ಜಿಲ್ಲಾಧಿಕಾರಿಗಳಿಗೆ ಆಡಳಿತಾತ್ಮಕ ಮಂಜೂರಾತಿಗೆ ಅಂದಾಜು ಪತ್ರಿಕೆಗಳನ್ನು ಕಳುಹಿಸಲಾಗಿದೆ. ಜತೆಗೆ 158 ಹೊಸ ಕಟ್ಟಡಗಳ ನಿರ್ಮಾಣಕ್ಕೂ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ.(ಸಾಂದರ್ಭಿಕ ಚಿತ್ರ)