ಬೆಳಗಾವಿ(ಅ.27): ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದ ಲಕ್ಷ್ಮಣ ಸವದಿಗೆ ಅವರ ಸ್ಥಾನದ ಮಹತ್ವ ಗೊತ್ತಿಲ್ಲ. ಆತ ಕನಸಿನಲ್ಲೇ ಉಪಮುಖ್ಯಮಂತ್ರಿಯಾಗಿದ್ದೇನೆ ಎಂದು ತಿಳಿದಿದ್ದಾನೆ ಎಂದು ಗೋಕಾಕ ಕ್ಷೇತ್ರದ ಅನರ್ಹ ಶಾಸಕ ರಮೇಶ್‌ ಜಾರಕಿಹೊಳಿ ಅವರು ಕಿಡಿಕಾರಿದ್ದಾರೆ.

ಬೆಳಗಾವಿ ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನರ್ಹ ಶಾಸಕರ ಬಗ್ಗೆ ಮಾತನಾಡುವ ನೈತಿಕ ಹಕ್ಕು ಸವದಿಗೆ ಇಲ್ಲ. ಹತ್ತು ತಲೆ ರಾವಣನೇ ಹಾಳಾಗಿದ್ದಾನೆ. ಇನ್ನು ಲಕ್ಷ್ಮಣ ಸವದಿ ಯಾವ ಲೆಕ್ಕ ಎಂದು ಪ್ರಶ್ನಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಡಿಸಿಎಂ ಲಕ್ಷಣ ಸವದಿ ಅನರ್ಹ ಶಾಸಕರ ಬಗ್ಗೆ ಮಾತನಾಡುವುದು ಸರಿಯಲ್ಲ. ಬೇಜವಾಬ್ದಾರಿಯಿಂದ ಮಾತನಾಡುತ್ತಿದ್ದಾನೆ. ಅವನು ಇನ್ನೂ ಹಾಳಾಗುತ್ತಾನೆ. ಈಗಾಗಲೇ ಉಮೇಶ್‌ ಕತ್ತಿ ಅವರು ಅವನಿಗೆ ಸರಿಯಾಗಿ ಹೇಳಿದ್ದಾರೆ. ಉಪಮುಖ್ಯಮಂತ್ರಿ ಹುದ್ದೆ ಯಾರಿಂದಲೋ ಸಿಕ್ಕಿದೆ ಎಂಬ ಸೊಕ್ಕು ಸವದಿಗೆ ಇದೆ. ಅದು ಶಾಶ್ವತವಲ್ಲ. ಇನ್ನು ಮುಂದೆ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕು ಎಂದರು. ಅನರ್ಹ ಶಾಸಕರು ಉಪಚುನಾವಣೆಗೆ ಸ್ಪರ್ಧಿಸಬಹುದು ಎಂದು ಚುನಾವಣಾ ಆಯೋಗ ಹೇಳಿದೆ. ಅನರ್ಹ ಶಾಸಕರ ವಿಚಾರದಲ್ಲಿ ತೀರ್ಪು ನಮ್ಮ ಪರವಾಗಿ ಬರುವ ವಿಶ್ವಾಸವಿದೆ. ಅದು ಸವದಿಗೆ ಏನೂ ಗೊತ್ತು ಎಂದು ಹೇಳಿದ್ದಾರೆ.