ಬೆಳಗಾವಿ[ಅ.30]: ರಾಜಕಾರಣದಲ್ಲಿ ಯಾರೂ ನಂಬಿಗಸ್ಥರಿಲ್ಲ ಹಾಗೂ ಯಾರೂ ಸ್ನೇಹಿತರು ಇಲ್ಲ. ಇವತ್ತಿನ ಕಾಂಗ್ರೆಸ್‌ ಇಟಾಲಿಯನ್‌ ಕಾಂಗ್ರೆಸ್‌, ಮೊದಲಿನ ಗಾಂಧಿ ಕಾಂಗ್ರೆಸ್‌ ಇವತ್ತು ಇಲ್ಲ ಎಂದು ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ ಅಂಗಡಿ ಅವರು ಹೇಳಿದ್ದಾರೆ. 

ನಗರದಲ್ಲಿ ಮಂಗಳವಾರ ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ನಡುವಿನ ವಾಕ್‌ ಸಮರದ ಬಗ್ಗೆ ಸುದ್ದಿಗಾರರು ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇಲ್ಲಿ ಯಾರು ಜಾತಿ ರಾಜಕಾರಣ ಮಾಡುತ್ತಿಲ್ಲ. ದೇಶ ಮೊದಲು ಆ ಬಳಿಕ ಪಕ್ಷ. ಆದರೆ ಕೆಲವು ಜನ ಜಾತಿ ರಾಜಕಾರಣ ಮಾಡುತ್ತಿದ್ದಾರೆ. ಜಾತಿ ರಾಜಕಾರಣ ಮಾಡಿ ಯಾರೂ ಮುಂದೆ ಬರಲು ಸಾಧ್ಯವಿಲ್ಲ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಭಾರತಿ ಜನತಾ ಪಾರ್ಟಿ ಜಗತ್ತಿನ ದೊಡ್ಡ ಪಾರ್ಟಿ, ಚುನಾವಣೆ ಸಂದರ್ಭದಲ್ಲಿ ಕೆಲಸ ಮಾಡುವರಿಗೆ ಪಕ್ಷ ಗುರುತಿಸಿ ಕೆಲಸ ನೀಡುತ್ತದೆ. ಕರ್ನಾಟಕದಲ್ಲಿ ನಡೆಯುವ ಉಪ ಚುನಾವಣೆಯಲ್ಲಿ ನೂರಕ್ಕೆ ನೂರು ಅಂದರೆ 15 ಕ್ಷೇತ್ರಗಳಲ್ಲಿ 15 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ. ಅದರಲ್ಲಿ ಸಂಶಯವೇ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರೈಲ್ವೆ ಇಲಾಖೆಯನ್ನು ಅಭಿವೃದ್ಧಿ ಪಡಿಸುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇಲಾಖೆಯಲ್ಲಿನ ಎಲ್ಲ ಸಮಸ್ಯೆ ಪರಿಹರಿಸಲಾಗುವುದು. ಬ್ಯಾಂಕಿಂಗ್‌, ರೈಲ್ವೆ ಪರೀಕ್ಷೆಗಳನ್ನು ಆಯಾ ಪ್ರಾದೇಶಿಕ ಭಾಷೆಯಲ್ಲೇ ನಡೆಸಲಾಗುತ್ತಿದೆ. ಕರ್ನಾಟಕದಲ್ಲಿ ಓಡಾಡುವ ರೈಲ್ವೆಗಳಲ್ಲಿ ಕನ್ನಡ ಭಾಷೆ ಬಳಕೆ ಮಾಡಲಾಗುವುದು. ಮೀರಜ್‌ನಿಂದ ಡಬಲ್ ಲೈನ್‌ ಪೂರ್ಣವಾದ ಬಳಿಕ ಕನ್ನಡ ಭಾಷೆ ಬಳಕೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.