ಹೊಲದಲ್ಲಿ ರಾಶಿ ರಾಶಿ ಅಣಬೆಗಳು ಕಂಡ ಮಾಲೀಕರು ಖುಷಿಯಿಂದ ಅವುಗಳನ್ನ ಮನೆಗೆ ತಂದು ಸಂಬಾರ್ ಮಾಡಿದ್ದರು. ಅದನ್ನು ಸೇವಿಸಿದ್ದ 9 ಮಂದಿ ಸಾವು, ಬದುಕಿನ ಮಧ್ಯೆ ಹೋರಾಟ ನಡೆಸ್ತಿದ್ದಾರೆ. ಅಷ್ಟಕ್ಕೂ ಅಸಲಿಗೆ ಆಗಿದ್ದೇನು? ಇಲ್ಲಿದೆ ಮಾಹಿತಿ..
ಬೆಳಗಾವಿ: ಹೇಳಿ ಕೇಳಿ ಇದು ಮಳೆಗಾಲ. ಮಳೆ ಆರಂಭವಾಗುತ್ತಿದ್ದಂತೆಯೇ ಹಳ್ಳಿಗಳಲ್ಲಿ ಹೊಲ, ಗದ್ದೆ ಹಾಗೂ ಬಯಲು ಪ್ರದೇಶಗಳಲ್ಲಿ ಅಣಬೆಗಳು (Mushrooms) ಏಳುವುದು ಸಾಮಾನ್ಯ. ಈ ಅಪರೂಪದ ಅಣಬೆಗಳನ್ನು ಕಂಡ ತಕ್ಷಣ ಜನರು ಅದನ್ನು ಮನೆಗೆ ತಂದು ಅಡುಗೆ ಮಾಡಿ ಸವಿಯುತ್ತಾರೆ. ಆದರೆ, ಹೀಗೆ ಅಣಬೆ ತಿನ್ನುವ ಮೊದಲು ಒಮ್ಮೆ ಎಚ್ಚರಿಕೆ ವಹಿಸುವುದು ಉತ್ತಮ. ಇಲ್ಲದಿದ್ದರೆ ನಿಮ್ಮ ಜೀವಕ್ಕೇ ಅಪಾಯ ಬಂದೊದಗಬಹುದು!
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದಲ್ಲಿ ಇಂತಹದ್ದೇ ಒಂದು ಆತಂಕಕಾರಿ ಘಟನೆ ನಡೆದಿದ್ದು, ವಿಷಪೂರಿತ ಅಣಬೆ ಸೇವಿಸಿ ಒಂದೇ ಕುಟುಂಬದ 9 ಮಂದಿ ತೀವ್ರ ಅಸ್ವಸ್ಥರಾಗಿದ್ದಾರೆ.
ನಡೆದಿದ್ದೇನು?
ಉಮರಾಣಿ ಗ್ರಾಮದ ಜಿದ್ದಿಮನಿ ಹಾಗೂ ಕೋಳಿ ಕುಟುಂಬದ ಸದಸ್ಯರು ಹೊಲದಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ ಬರುವಾಗ, ಅಲ್ಲಿ ಬೆಳೆದಿದ್ದ ಅಣಬೆಗಳನ್ನು ಕಿತ್ತು ತಂದಿದ್ದರು. ಅಣಬೆ ಕಂಡ ಖುಷಿಯಲ್ಲಿ ಮನೆಯಲ್ಲಿ ಅಡುಗೆ ಮಾಡಿ ಎಲ್ಲರೂ ಸವಿದಿದ್ದರು. ಆದರೆ, ಊಟ ಮಾಡಿದ ಕೆಲವೇ ಹೊತ್ತಿನಲ್ಲಿ ಎಲ್ಲರಿಗೂ ವಾಂತಿ ಹಾಗೂ ಭೇದಿ ಕಾಣಿಸಿಕೊಂಡು ಮನೆಯಲ್ಲೇ ನರಳಾಡತೊಡಗಿದ್ದಾರೆ.
ಕಾರಣವೇನು?
ವರದಿಗಳ ಪ್ರಕಾರ, ಅಣಬೆ ಬೆಳೆದಿದ್ದ ಹೊಲಕ್ಕೆ ಅದರ ಮಾಲೀಕರು ಕ್ರಿಮಿನಾಶಕ ಔಷಧಿಯನ್ನು ಸಿಡಿಸಿದ್ದರು. ಔಷಧಿ ಹೊಡೆದ ವಿಷಯ ತಿಳಿಯದ ಕುಟುಂಬದ ಸದಸ್ಯರು ಆ ಅಣಬೆಯನ್ನು ಕಿತ್ತು ತಂದು ಸೇವಿಸಿದ್ದಾರೆ. ಕೀಟನಾಶಕದ ಅಂಶ ಅಣಬೆಯೊಳಗೆ ಸೇರಿದ ಪರಿಣಾಮ ಅದು ವಿಷವಾಗಿ ಮಾರ್ಪಟ್ಟು ಇಡೀ ಕುಟುಂಬ ಅಸ್ವಸ್ಥಗೊಳ್ಳಲು ಕಾರಣವಾಗಿದೆ.
ಆಸ್ಪತ್ರೆಗೆ ದಾಖಲು
ತೀವ್ರ ಅಸ್ವಸ್ಥಗೊಂಡ 9 ಜನರನ್ನು ತಕ್ಷಣವೇ ಚಿಕ್ಕೋಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಸ್ವಸ್ಥರಲ್ಲಿ ಒಬ್ಬರು ಗರ್ಭಿಣಿ ಮಹಿಳೆಯಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಚಿಕಿತ್ಸೆ ಪಡೆಯುತ್ತಿರುವ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
ಇರಲಿ ಎಚ್ಚರ
- ಮಳೆಗಾಲದಲ್ಲಿ ಎಲ್ಲೆಂದರಲ್ಲಿ ಬೆಳೆಯುವ ಅಣಬೆಗಳ ಬಗ್ಗೆ ಜಾಗ್ರತೆ ಇರಲಿ
- ಹೊಲಗಳಲ್ಲಿ ಬೆಳೆಯುವ ಅಣಬೆಗಳ ಮೇಲೆ ಕ್ರಿಮಿನಾಶಕಗಳು ಬಿದ್ದಿರುವ ಸಾಧ್ಯತೆ ಹೆಚ್ಚಿರುತ್ತದೆ
- ಕೆಲವು ಜಾತಿಯ ಅಣಬೆಗಳು ನೈಸರ್ಗಿಕವಾಗಿಯೇ ವಿಷಕಾರಿಯಾಗಿರುತ್ತವೆ. ಅವುಗಳನ್ನು ಗುರುತಿಸುವುದು ಕಷ್ಟ
- ಅಣಬೆ ತರುವ ಮುನ್ನ ಅವು ಬೆಳೆದ ಜಾಗ ಮತ್ತು ಅವುಗಳ ವಿಧದ ಬಗ್ಗೆ ಖಚಿತ ಮಾಹಿತಿ ಇರಲಿ
- ಅಪರಿಚಿತ ಅಣಬೆಗಳನ್ನು ತಿಂದು ಜೀವಕ್ಕೆ ಸಂಚಕಾರ ತಂದುಕೊಳ್ಳಬೇಡಿ


