ಹುಕ್ಕೇರಿ[ನ.12]: ಅತ್ತ ಗೋಕಾಕ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೆ ಅಶೋಕ ಪೂಜಾರಿ ಕಾಂಗ್ರೆಸ್‌ ಅಭ್ಯರ್ಥಿಯಾಗಲಿದ್ದಾರೆ ಎಂದು ಸೋಮವಾರ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ ಇಲ್ಲಿ ಪ್ರವಾಹ ಪರಿಶೀಲನೆ ಸಭೆ ಆಯೋಜಿಸಿದ್ದ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ತರಾತುರಿಯಲ್ಲಿ ಸಭೆ ನಡೆಸಿದ್ದಾರೆ. 

ಹುಕ್ಕೇರಿ ಮಿನಿ ವಿಧಾನ ಸೌಧದ ಸಭಾಭವನದಲ್ಲಿ ಏರ್ಪಡಿಸಿದ್ದ ಯಮಕನಮರಡಿ ಕ್ಷೇತ್ರದಲ್ಲಿ ಪ್ರವಾಹದಿಂದ ಹಾನಿ ಹಾಗೂ ಪರಿಹಾರ ಕಾರ್ಯಗಳ ಕುರಿತು ಅಧಿಕಾರಿಗಳು ಮತ್ತು ಸಾರ್ವಜನಿಕರ ಕುಂದುಕೊರತೆ ಸಭೆಯನ್ನು ಕೇವಲ 15 ನಿಮಿಷದಲ್ಲಿ ಮೊಟಕುಗೊಳಿಸಿ ಹೊರನಡೆದ ಪ್ರಸಂಗ ಜರುಗಿತು.

ಬೆಳಗ್ಗೆ 11.30ಕ್ಕೆ ನಿಗದಿಯಾಗಿದ್ದ ಸಭೆ ತಡವಾಗಿ 12.45ಕ್ಕೆ ಆರಂಭಗೊಂಡಿತು. ಶಾಸಕ ಸತೀಶ ಜಾರಕಿಹೊಳಿ ಬರುವಿಕೆಗಾಗಿ ನಿಗದಿತ ವೇಳೆಗಿಂತ ಮೊದಲೇ ಆಗಮಿಸಿದ್ದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಕಾದು ಕಾದು ಸುಸ್ತಾದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ತಾಲೂಕು ಆಡಳಿತ ಕಿರಿದಾದ ಕೊಠಡಿಯಲ್ಲಿ ಸಭೆ ಆಯೋಜಿಸಿತ್ತು. ಇದರಿಂದ ಅಧಿಕಾರಿಗಳು ಮತ್ತು ಸಾರ್ವಜನಿಕರಿಗೆ ಕುಳಿತುಕೊಳ್ಳುವಷ್ಟು ಸ್ಥಳಾವಕಾಶವಿಲ್ಲದೇ ಪರದಾಡಿದರು. ಇನ್ನು ಕೆಲ ಸರ್ಕಾರಿ ಸಿಬ್ಬಂದಿ ಹಾಗೂ ಸಾರ್ವಜನಿಕರು ಹೊರಗಡೆ ನಿಂತು ಕಿಡಕಿ ಹಾಗೂ ಬಾಗಿಲು ಮೂಲಕವೇ ತಮ್ಮ ಸಮಸ್ಯೆ ಬಗ್ಗೆ ಕೂಗಲಾರಂಭಿಸಿದರು.

ಅಷ್ಟೇ ಅಲ್ಲದೇ ಸಭಾಭವನದಲ್ಲಿ ನೂಕಾಟ, ತಳ್ಳಾಟವೂ ನಡೆಯಿತು. ಈ ಸಭಾಭವನದ ಸನಿಹದಲ್ಲಿಯೇ ನೂತನವಾಗಿ ಕೋಟ್ಯಂತರ ರು. ವೆಚ್ಚದಲ್ಲಿ ನಿರ್ಮಿಸಿರುವ ಸಭಾಭವನದಲ್ಲಿ ಈ ಸಭೆ ನಡೆಸಬೇಕಿತ್ತು ಎನ್ನುವ ಮಾತುಗಳು ಕೇಳಿ ಬಂದವು.

ಮರು ಸಮೀಕ್ಷೆ ನಡೆಸಿ :

ನೆರೆಹಾವಳಿಯಿಂದ ಜನ ಹಾಗೂ ಸಾರ್ವಜನಿಕರ ಕೋಟ್ಯಂತರ ರು. ಮೌಲ್ಯದ ಆಸ್ತಿ-ಪಾಸ್ತಿಗಳಿಗೆ ಹಾನಿಯಾಗಿದೆ. ಅದರಲ್ಲೂ ನೆರೆ ಸಂತ್ರಸ್ತರ ಹಾನಿಯಾದ ಮನೆಗಳ ಸಮೀಕ್ಷೆ ಸಮರ್ಪಕವಾಗಿಲ್ಲ. ಈ ಸಮೀಕ್ಷೆಯಲ್ಲಿ ಕೆಲ ಅನರ್ಹರೂ ಸೇರ್ಪಡೆಯಾಗಿದ್ದು ಬಹುತೇಕ ಅರ್ಹರು ಈ ಪಟ್ಟಿಯಿಂದ ಹೊರ ಉಳಿದಿದ್ದಾರೆ. ಹೀಗಾಗಿ ಕ್ಷೇತ್ರದ ವ್ಯಾಪ್ತಿಯಲ್ಲಿ ಮತ್ತೊಮ್ಮೆ ಮರು ಸಮೀಕ್ಷೆ ನಡೆಸಬೇಕು. ಈ ಮೂಲಕ ನೆರೆ ಸಂತ್ರಸ್ತರ ಪರಿಹಾರ ಕಾರ್ಯ ಚುರುಕುಗೊಳಿಸಬೇಕು ಎಂದು ಶಾಸಕ ಸತೀಶ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

ನೆರೆ ಸಮೀಕ್ಷೆಯ ಹಾನಿಗೆ ನಿಯೋಜಿಸಿದ ಗ್ರಾಮ ಲೆಕ್ಕಾಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಎಂಜಿನಿಯರರು ಪಾರದರ್ಶಕವಾಗಿ ಕಾರ್ಯ ನಿರ್ವಹಿಸಿಲ್ಲ ಎನ್ನುವ ಆರೋಪಗಳು ಸಾರ್ವಜನಿಕರಿಂದ ಕೇಳಿ ಬಂದಿವೆ. ಸ್ಥಳಾಂತರಗೊಳ್ಳುವ ಪ್ರದೇಶಗಳ ಜನರ ಸಮೀಕ್ಷೆಯನ್ನು ತ್ವರಿತವಾಗಿ ಮಾಡಬೇಕು. ಈ ಬಗ್ಗೆ ಸಂಬಂಧಿಸಿದ ಮೇಲಧಿಕಾರಿಗಳು ನಿಗಾ ವಹಿಸಿ ಸಂತ್ರಸ್ತರ ಬದುಕು ಕಟ್ಟಿಕೊಡಲು ನಿಷ್ಪಪಕ್ಷಪಾತವಾಗಿ ಕಾರ್ಯ ನಿರ್ವಹಿಸಬೇಕು. ಒಂದು ವೇಳೆ ಈ ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸುವವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ವಹಿಸಲಾಗುವುದು ಎಂದು ಜಾರಕಿಹೊಳಿ ಎಚ್ಚರಿಸಿದರು.

ತಹಸೀಲ್ದಾರ ರೇಷ್ಮಾ ತಾಳಿಕೋಟಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್‌.ಬಿರಾದಾರಪಾಟೀಲ, ಜಿಪಂ ಸದಸ್ಯ ಮಂಜುನಾಥ ಪಾಟೀಲ, ತಾಪಂ ಅಧ್ಯಕ್ಷ ದಸ್ತಗೀರ ಬಸ್ಸಾಪುರೆ, ಮುಖಂಡರಾದ ಕಿರಣ ರಜಪೂತ, ಪಪ್ಪುಗೌಡ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.