ಶ್ರೀಶೈಲ ಮಠದ 

ಬೆಳಗಾವಿ[ಅ.30]: ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತೆ ತನ್ನ ಬಾಲ ಬಿಚ್ಚತೊಡಗಿದೆ. ಕನ್ನಡ ನೆಲದಲ್ಲೇ ಆಶ್ರಯ ಪಡೆದು, ಕರ್ನಾಟಕ ಸರ್ಕಾರದ ಎಲ್ಲ ಸೌಲಭ್ಯ ಪಡೆದುಕೊಂಡ ಎಂಇಎಸ್‌ ಕರ್ನಾಟಕ ರಾಜ್ಯೋತ್ಸವಕ್ಕೆ ವಿರುದ್ಧವಾಗಿ ನ.1ರಂದು ಗಡಿನಾಡು ಬೆಳಗಾವಿಯಲ್ಲಿ ಕರಾಳ ದಿನಾಚರಣೆಗೆ ಸಿದ್ಧತೆ ನಡೆಸುತ್ತಿದೆ. ಕರಾಳ ದಿನಾಚರಣೆ ರಾರ‍ಯಲಿಯ ಕುರಿತು ಗಡಿಭಾಗದ ಹಳ್ಳಿಗಳಲ್ಲಿ ಎಂಇಎಸ್‌ ನಾಯಕರು ಜಾಗೃತಿ ಮೂಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಕನ್ನಡಪರ ಸಂಘಟನೆಗಳ ತೀವ್ರ ವಿರೋಧ ನಡುವೆಯೇ ಮತ್ತೆ ನ.1ರ ರಾಜ್ಯೋತ್ಸವ ದಿನದಂದು ಕರಾಳ ದಿನಾಚರಣೆಗೆ ಎಂಇಎಸ್‌ ಮುಂದಾಗಿದೆ. ಗಡಿ, ಭಾಷಾ ವಿವಾದ ಸಂಬಂಧ ಸದಾ ಒಂದಿಲ್ಲೊಂದು ನೆಪ ಮಾಡಿಕೊಂಡು, ಕನ್ನಡಿಗರು ಮತ್ತು ಕರ್ನಾಟಕ ಸರ್ಕಾರದ ವಿರುದ್ಧ ಕಾಲು ಕೆದರಿ ಜಗಳ ತೆಗೆಯುತ್ತಿರುವ ಎಂಇಎಸ್‌ನ ಸ್ವಯಂ ಘೋಷಿತ ನಾಯಕರು ತಮ್ಮ ಸ್ವಾರ್ಥ ರಾಜಕೀಯಕ್ಕಾಗಿ ಗಡಿಭಾಗದಲ್ಲಿರುವ ಮುಗ್ಧ ಮರಾಠಿ ಭಾಷಿಕರನ್ನು ಕನ್ನಡಿಗರ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತ ಬಂದಿದ್ದಾರೆ.

ಮರಾಠಿ ಭಾಷಿಕರೇ ಎಂಇಎಸ್‌ಗೆ ಕ್ಯಾರೆ ಎನ್ನುತ್ತಿಲ್ಲ:

ಮರಾಠಿಗರು ಸಹಬಾಳ್ವೆಯಿಂದ ಕನ್ನಡಿಗರ ಜತೆ ಜೀವನ ನಡೆಸುತ್ತಿದ್ದಾರೆ. ಆದರೆ, ಇದನ್ನು ಸಹಿಸದ ಭಾಷಾಂಧ ಎಂಇಎಸ್‌ ನಾಯಕರು ತಮ್ಮ ರಾಜಕೀಯ ಅಸ್ತಿತ್ವಕ್ಕೆ ಹೆಣಗಾಡುತ್ತಿದ್ದಾರೆ. ಎಂಇಎಸ್‌ನ ಬಂಡವಾಳ ಅರಿತಿರುವ ಮರಾಠಿ ಭಾಷಿಕರೇ ಇತ್ತೀಚಿನ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸಿದ್ದಾರೆ. ಎಂಇಎಸ್‌ ಎಷ್ಟೇ ವಿನಂತಿ ಮಾಡಿದರೂ ಕರಾಳ ದಿನಾಚರಣೆ ರಾರ‍ಯಲಿಯಲ್ಲಿ ಮರಾಠಿ ಭಾಷಿಕರು ಕೂಡ ಅಷ್ಟೊಂದು ಉತ್ಸಾಹ ತೋರುತ್ತಿಲ್ಲ. ಮರಾಠಿ ಭಾಷಿಕರಿಂದಲೇ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ. ಮರಾಠಿ ಭಾಷಿಕರೇ ಎಂಇಎಸ್‌ಗೆ ಕ್ಯಾರೆ ಎನ್ನುತ್ತಿಲ್ಲ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕನ್ನಡ ನೆಲದಲ್ಲೇ ಆಶ್ರಯ ಪಡೆದು ಕರ್ನಾಟಕದ ವಿರುದ್ಧ ನಿಲುವು ಹೊಂದಿರುವ ಎಂಇಎಸ್‌ ಉಂಡ ಮನೆಗೆ ದ್ರೋಹ ಬಗೆಯುತ್ತಿದೆ. ಗಡಿ, ಭಾಷಾ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಮರಾಠಿ ಭಾಷಿಕರೇ ಇದೀಗ ಮೌನ ತಾಳಿದ್ದಾರೆ. ಎಂಇಎಸ್‌ ನಾಯಕರ ಮರುಳು ಮಾತಿಗೆ ಮರಾಠಿ ಭಾಷಿಕರು ಯಾರೂ ಬೆಲೆ ನೀಡುತ್ತಿಲ್ಲ. ಮರಾಠಿ ಭಾಷಿಕರು ಕನ್ನಡವನ್ನು ಒಪ್ಪಿಕೊಂಡಿದ್ದಾರೆ. ಎಂಇಎಸ್‌ ತನ್ನ ಎಲ್ಲ ಹೋರಾಟಗಳಲ್ಲಿ ಸೋಲನುಭವಿಸಿ, ತೀವ್ರ ಮುಖಭಂಗ ಅನುಭವಿಸಿದೆ. ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವ ಜಾಯಮಾನ ಎಂಇಎಸ್‌ನದ್ದು.

ಕರ್ನಾಟಕ ರಾಜ್ಯೋತ್ಸವ, ಸುವರ್ಣ ವಿಧಾನಸೌಧದಲ್ಲಿ ಚಳಿಗಾಲ ಅಧಿವೇಶನ ನಡೆದಾಗ ಪ್ರತಿ ಬಾರಿ ಅದಕ್ಕೆ ವಿರುದ್ಧವಾಗಿ ಕರಾಳ ದಿನಾಚರಣೆ, ಮಹಾಮೇಳಾವಗಳಂತಹ ಕಾರ್ಯಕ್ರಮ ಸಂಘಟಿಸಿ, ಕನ್ನಡಿಗರ ಸಂಭ್ರಮಕ್ಕೆ ಕಲ್ಲು ಹಾಕುತ್ತ ಬಂದಿದೆ. ಕರ್ನಾಟಕ ಸರ್ಕಾರ ವಿರುದ್ಧ ಘೋಷಣೆ ಹಾಕುವಂತಹ ಉದ್ಧಟತನ ಪ್ರದರ್ಶಿಸುತ್ತಲೇ ಬಂದಿದೆ. ಆದರೆ, ಎಂಇಎಸ್‌ ತನ್ನ ಎಲ್ಲ ಹೋರಾಟಗಳಲ್ಲಿ ಸೋಲು ಕಂಡಿದೆ. 

ಸೋಲು ಅದಕ್ಕೆ ಕಟ್ಟಿಟ್ಟ ಬುತ್ತಿ. ಎಂಇಎಸ್‌ ತನ್ನ ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಕರಾಳ ದಿನ ಸಂಘಟಿಸುತ್ತ ಬಂದಿದೆ. ಎಂಇಎಸ್‌ಗೆ ಎಷ್ಟೇ ಸೋಲು, ಅವಮಾನವಾದರೂ ತನ್ನ ಹಳೆಯ ಚಾಳಿ ಮಾತ್ರ ಬಿಡುತ್ತಿಲ್ಲ. ಪದೇ ಪದೆ ಕನ್ನಡಿಗರು, ಕರ್ನಾಟಕ ಸರ್ಕಾರ ವಿರುದ್ಧ ಕ್ಯಾತೆ ತೆಗೆಯುತ್ತಲೇ ಬಂದಿದೆ. ಗಡಿಭಾಗದಲ್ಲಿ ಗಡಿ ಕಿತಾಪತಿ ತೆಗೆದು ಕಾನೂನು, ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುತ್ತ ಬಂದಿದೆ. ಕರ್ನಾಟಕ ರಾಜ್ಯೋತ್ಸವಕ್ಕೆ ವಿರುದ್ಧವಾಗಿ ಕರಾಳ ದಿನಾಚರಣೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು. ರಾಜ್ಯದಲ್ಲಿ ಎಂಇಎಸ್‌ ಸಂಘಟನೆಯನ್ನು ನಿಷೇಧಿಸಬೇಕು ಎಂದು ಕನ್ನಡಪರ ಸಂಘಟನೆಗಳು ಒಕ್ಕೊರಲಿನಿಂದ ಆಗ್ರಹಿಸಿವೆ.

ಕರ್ನಾಟಕ ರಾಜ್ಯೋತ್ಸವಕ್ಕೆ ವಿರುದ್ಧವಾಗಿ ನಾಡದ್ರೋಹಿ ಎಂಇಎಸ್‌ ಸಂಘಟಿಸುವ ಕರಾಳ ದಿನಾಚರಣೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು. ಈ ಹಿಂದೆ ಷರತ್ತುಬದ್ಧ ಅನುಮತಿ ಪಡೆದಿದ್ದರೂ ಎಲ್ಲ ಷರತ್ತುಗಳನ್ನು ಉಲ್ಲಂಘಿಸಿದೆ. ಕರಾಳ ದಿನಾಚರಣೆಗೆ ಅನುಮತಿ ನೀಡಿದರೆ ಉಗ್ರ ಹೋರಾಟ ಮಾಡಲಾಗುವುದು. ರಾಜ್ಯದಲ್ಲಿ ಎಂಇಎಸ್‌ ಸಂಘಟನೆ ನಿಷೇಧಿಸಬೇಕು ಎಂದು ಕನ್ನಡ ಹೋರಾಟಗಾರ ದೀಪಕ ಗುಡಗನಟ್ಟಿ ಅವರು ಹೇಳಿದ್ದಾರೆ. 

ಕರ್ನಾಟಕ ರಾಜ್ಯೋತ್ಸವದಂದು ಮಹಾರಾಷ್ಟ್ರ ಏಕೀಕರಣ ಸಮಿತಿ ಕರಾಳ ದಿನಾಚರಣೆ ಮಾಡುವುದು ದೊಡ್ಡ ತಪ್ಪು. ರಾಜ್ಯದಲ್ಲೇ ಇದ್ದುಕೊಂಡು ದ್ರೋಹದ ಕೆಲಸ ಮಾಡುವುದು ಸರಿಯಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.