ಬೆಳಗಾವಿ [ನ.13]: ಗೋಕಾಕ್‌ ಕ್ಷೇತ್ರದ ಟಿಕೆಟ್‌ ಬಗ್ಗೆ ಗೊಂದಲವಿಲ್ಲ. ಇನ್ನೊಂದೆರಡು ದಿನಗಳಲ್ಲಿ ಲಖನ್‌ ಜಾರಕಿಹೊಳಿಗೆ ಟಿಕೆಟ್‌ ಘೋಷಣೆಯಾಗುವುದು ಪಕ್ಕಾ ಎಂದು ಶಾಸಕ ಸತೀಶ್‌ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಖನ್‌ಗೆ ಟಿಕೆಟ್‌ ಕೊಡುವುದನ್ನು ಈ ಹಿಂದೆಯೇ ನಿರ್ಧಾರ ಮಾಡಲಾಗಿತ್ತು. ಬೆಂಗಳೂರು ಸೇರಿದಂತೆ ಇತರೆಡೆ ನಡೆದ ಸಭೆಗಳಲ್ಲಿ ಟಿಕೆಟ್‌ ಬಗ್ಗೆ ಚರ್ಚೆ ನಡೆದಿದೆ. ಈ ಹಿನ್ನೆಲೆಯಲ್ಲಿ ನಾಲ್ಕು ತಿಂಗಳ ಹಿಂದಿನಿಂದಲೇ ನಾವು ಗೋಕಾಕ್‌ನಲ್ಲಿ ಚುನಾವಣೆ ಪ್ರಚಾರ ನಡೆಸಿದ್ದೇವೆ. ಆದರೆ, ಕೊನೆ ಕ್ಷಣದಲ್ಲಿ ನಾಲ್ಕೈದು ಜನ ಟಿಕೆಟ್‌ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಪಕ್ಷ ಎಲ್ಲವನ್ನು ಪರಿಶೀಲಿಸುತ್ತದೆ. ಕೇಳಿದವರಿಗೆಲ್ಲ ಟಿಕೆಟ್‌ ಕೊಡಲು ಆಗುವುದಿಲ್ಲ. ಅಲ್ಲಿಯ ಸ್ಥಿತಿಗತಿಗಳ ಅವಲೋಕನ ಮಾಡಿ, ಯಾರು ಗೆಲ್ಲುತ್ತಾರೆ? ಯಾರಿಗೆ ಸಾಮರ್ಥ್ಯ ಇರುತ್ತದೆ ಎಂಬುದು ಪರಿಗಣಿಸಿ ಟಿಕೆಟ್‌ ನೀಡುತ್ತದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಗೋಕಾಕನಲ್ಲಿ ಅಶೋಕ ಪೂಜಾರಿಗೆ ಕಾಂಗ್ರೆಸ್‌ ಟಿಕೆಟ್‌ ಕೊಡಿಸಲು ಡಿ.ಕೆ.ಶಿವಕುಮಾರ್‌ ಲಾಬಿ ನಡೆಸಿದ್ದಾರೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯಾರು ಕೂಡ ಲಾಬಿ ಮಾಡಿಲ್ಲ. ಯಾರೋ ಹೋಗಿ ಭೇಟಿ ಮಾಡಿದ್ದಕ್ಕೆ ಅದಕ್ಕೆ ವಿಶೇಷತೆ ಕಲ್ಪಿಸುವ ಅಗತ್ಯತೆ ಇಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲವೂ ನಡೆಯುತ್ತದೆ. ಈ ಕಡೆಯವರು ಆ ಕಡೆ, ಆ ಕಡೆಯವರು ಈ ಕಡೆ ಬರುವುದು ಸಾಮಾನ್ಯ. ರಾಜು ಕಾಗೆ ಕೂಡ ಕಾಂಗ್ರೆಸ್‌ ಬರುವುದು ಗಮನಕ್ಕೆ ಬಂದಿದೆ. ಗೋಕಾಕ್‌ ಟಿಕೆಟ್‌ ಬಗ್ಗೆ ಯಾವುದೇ ಗೊಂದಲ ಇಲ್ಲ ಎಂದರು.

ಪ್ರಜಾಪ್ರಭುತ್ವದಲ್ಲಿ ಎಲ್ಲವೂ ನಡೆಯುತ್ತದೆ. ಈ ಕಡೆಯವರು ಆ ಕಡೆ, ಆ ಕಡೆಯವರು ಈ ಕಡೆ ಬರುವುದು ಸಾಮಾನ್ಯ. ಗೋಕಾಕ್‌ ಟಿಕೆಟ್‌ ಬಗ್ಗೆ ಯಾವುದೇ ಗೊಂದಲವಿಲ್ಲ.

- ಸತೀಶ್‌ ಜಾರಕಿಹೊಳಿ, ಶಾಸಕ