ಚಿಕ್ಕೋಡಿ[ನ.13]: ಕಾಗವಾಡ ವಿಧಾನಸಭೆ ಮತಕ್ಷೇತ್ರದಲ್ಲಿ ಸ್ಪರ್ಧಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಅನರ್ಹ ಶಾಸಕರ ತೀರ್ಪು ಬಂದ ನಂತರವಷ್ಟೇ ಅಂತಿಮ ನಿರ್ಣಯ ತೆಗೆದುಕೊಳ್ಳುತ್ತೇನೆ ಎಂದು ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಅವರು ಸ್ಪಷ್ಟ ಪಡಿಸಿದ್ದಾರೆ. 

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಗವಾಡ ವಿಧಾನಸಭೆ ಮತಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ಕ್ಷೇತ್ರದ ಮತದಾರರ ಒಲವಿದೆ. ಅನರ್ಹ ಶಾಸಕರ ಅಂತಿಮ ತೀರ್ಪು ಹೊರ ಬಿದ್ದ ನಂತರವಷ್ಟೇ ನಾನು ನನ್ನ ಕಾರ್ಯಕರ್ತರ ಜೊತೆಗೂಡಿ ಸುದೀರ್ಘ ಚರ್ಚೆ ನಡೆಸಿದ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ಹಿಂದೆ ಚುನಾವಣೆ ಘೋಷಣೆಯಾದಾಗ ನಾನು ಕಾಗವಾಡ ಕ್ಷೇತ್ರದಲ್ಲಿ ಪ್ರವಾಸ ಮಾಡಿದಾಗ ಕ್ಷೇತ್ರದ ಮತದಾರರು ಸ್ಪರ್ಧಿಸಬೇಕೆಂದು ಒತ್ತಡ ಹಾಕಿದ್ದರು. ಕಾಂಗ್ರೆಸ್ ಪಕ್ಷದ ಟಿಕೆಟ್ ಕೊಟ್ಟರೂ ನಿಲ್ಲಬೇಕು, ಕೊಡದಿದ್ದರೂ ನಿಲ್ಲಬೇಕು ಎಂಬುದಾಗಿ ಅಲ್ಲಿನ ಕಾರ್ಯಕರ್ತರು ತೀವ್ರ ಒತ್ತಡ ಹಾಕಿದ್ದರು. ಆದರೆ ಚುನಾವಣೆ ಮುಂದೂಡಲ್ಪಟ್ಟಿತ್ತು. ಈಗ ಅನರ್ಹ ಶಾಸಕರ ತೀರ್ಪು ನೋಡಿ ನಾನು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದರು.

ನಾನು ಲೋಕಸಭೆ ಸದಸ್ಯನಿದ್ದಾಗ ಕಾಗವಾಡ ವಿಧಾನಸಭೆ ಮತಕ್ಷೇತ್ರದಲ್ಲಿ ನೂರಾರು ಕೋಟಿ ರು. ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಹೀಗಾಗಿ ಅಲ್ಲಿನ ಜನ ಸ್ಪರ್ಧಿಸಬೇಕೆಂದು ಒತ್ತಡ ಹಾಕಿದ್ದಾರೆ. ನಾನು ಸ್ಪರ್ಧೆ ಮಾಡಿದರೆ ಚಿಕ್ಕೋಡಿ ಲೋಕಸಭೆ ಮತಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರುನನ್ನ ಗೆಲುವಿಗೆ ಶ್ರಮಿಸಲಿದ್ದಾರೆ ಎಂದರು.

ಕಾಗವಾಡ ಮಾಜಿ ಶಾಸಕ ರಾಜು ಕಾಗೆ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡುತ್ತಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜು ಕಾಗೆ ಸ್ಪರ್ಧೆ ಮಾಡುವುದು ಬಿಡುವುದು ಅದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ಅನರ್ಹ ಶಾಸಕರ ಅಂತಿಮ ತೀರ್ಪು ನೋಡಿ ನಾನು ಸ್ಪರ್ಧೆ ಮಾಡುವುದರ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇನೆ ಎಂದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದಮಲ್ಲಿಕಾರ್ಜುನ ಪಾಟೀಲ, ರವಿ ಮಿರ್ಜೆ, ವೀರೇಂದ್ರ ಪಾಟೀಲ, ಬಸಗೌಡಪಾಟೀಲ, ವಿಜಯ ಪಾಟೀಲ, ಮಲ್ಲಪ್ಪ ಬಾಗಿ, ತಾ.ಪಂ.ಸದಸ್ಯ ರಾಜು ಪಾಟೀಲ ಮುಂತಾದವರು ಇದ್ದರು.