Asianet Suvarna News Asianet Suvarna News

ಉಪ ಕದನ: ಬಿಜೆಪಿ ವರಿಷ್ಠರ ತಲೆನೋವಿಗೆ ಕಾರಣರಾದ ಅನರ್ಹ ಶಾಸಕರು

ಸ್ಪರ್ಧೆ ಸುಗಮ: ಮುಂದಿನ ಹಾದಿ ದುರ್ಗಮ| ಬೆಳಗಾವಿ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಮೂಲ ಬಿಜೆಪಿಗರೇ ವರಿಷ್ಠರಿಗೆ ತಲೆನೋವು| ಬಂಡಾಯ ಶಮನ ಮಾಡ್ತಾರಾ ವರಿಷ್ಠರು?|ಮೂಲ ಕಾರ್ಯಕರ್ತರು ಒಪ್ಪುತ್ತಾರೆಯೇ|ವರಿಷ್ಠರು ಹೇಗೆ ಬಗೆಹರಿಸುತ್ತಾರೆ ಎಂಬುವದು ಸದ್ಯದ ಕುತೂಹಲ|

How to BJP High Command  Solve Belagavi District Ticket in BeElection
Author
Bengaluru, First Published Nov 14, 2019, 10:27 AM IST

ಬ್ರಹ್ಮಾನಂದ ಹಡಗಲಿ 

ಬೆಳಗಾವಿ[ನ.14]: ರಾಜೀನಾಮೆ ನೀಡಿದ್ದ 17 ಶಾಸಕರನ್ನು ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಅನರ್ಹಗೊಳಿಸಿದ್ದ ಅಂದಿನ ಸ್ಪೀಕರ್‌ ರಮೇಶಕುಮಾರ್‌ ಅವರ ಆದೇಶವನ್ನು ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟ್‌, ಡಿ.5 ರಂದು ನಡೆಯಲಿರುವ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಅನುಮತಿ ನೀಡಿದೆ. ಹೀಗಾಗಿ ಅನರ್ಹರು ಒಂದು ರೀತಿಯಲ್ಲಿ ಗೆದ್ದು ಸೋತಂತಾಗಿದೆ.

ಉಪ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ನೀಡಿರುವುದು ಗೆಲುವಾದರೆ, ಅನರ್ಹತೆಯ ಪಟ್ಟ ಹಾಗೆ ಉಳಿದಿರುವುದು ಅವರಿಗೆ ಸೋಲೇ ಸರಿ ಎಂಬ ವಿಶ್ಲೇಷಣೆಗಳು ಆರಂಭವಾಗಿವೆ. ಅದೇ ರೀತಿಯಾಗಿ ಬೆಳಗಾವಿ ಜಿಲ್ಲೆಯ ಕಾಗವಾಡ, ಗೋಕಾಕ ಮತ್ತು ಅಥಣಿ ವಿಧಾನಸಭಾ ಕ್ಷೇತ್ರಗಳಲ್ಲಿನ ಅನರ್ಹ ಶಾಸಕರ ಮುಂದೆ ಸ್ಪರ್ಧಿಸಬೇಕೆಂಬ ಹಾದಿ ಈಗ ಸುಗಮವಾಗಿದೆ. ಆದರೆ, ಕ್ಷೇತ್ರದಲ್ಲಿ ಉಪಚುನಾವಣೆ ಎದುರಿಸಬೇಕಾದ ಪರಿಸ್ಥಿತಿ ಮಾತ್ರ ಮೂರೂ ಅನರ್ಹ ಶಾಸಕರಿಗೆ ಕನ್ನಡಿಯೊಳಗಿನ ಕಗ್ಗಂಟೆ ಸರಿ.

ಹೌದು. ಗೋಕಾಕ ಕ್ಷೇತ್ರದ ರಮೇಶ ಜಾರಕಿಹೊಳಿ, ಅಥಣಿ ಕ್ಷೇತ್ರದ ಮಹೇಶ ಕುಮಟಳ್ಳಿ ಅವರನ್ನು ಅಂದಿನ ಸ್ಪೀಕರ್‌ ರಮೇಶಕುಮಾರ ಜು.25 ರಂದು ಅನರ್ಹಗೊಳಿಸಿದರೆ, ಇನ್ನು ಕಾಗವಾಡ ಕ್ಷೇತ್ರದ ಶಾಸಕ ಶ್ರೀಮಂತ ಪಾಟೀಲರನ್ನು ಜು.28 ರಂದು ಅನರ್ಹಗೊಳಿಸಿ ಆದೇಶಿಸಿದ್ದರು. ಮಾತ್ರವಲ್ಲ, 15ನೇ ವಿಧಾನಸಭೆಯ ಅವಧಿ ಮುಗಿಯುವ 2023 ರವರೆಗೆ ಇವರೆಲ್ಲರೂ ಸ್ಪರ್ಧೆ ಮಾಡುವಂತಿಲ್ಲ ಎಂದೂ ತಮ್ಮ ತೀರ್ಪಿನಲ್ಲಿ ಹೇಳಿದ್ದರು. ಅಂದಿನಿಂದ ಅನರ್ಹ ಶಾಸಕರು ಸುಪ್ರೀಂ ಕೋರ್ಟ್‌ನಲ್ಲಿ ತಮ್ಮ ಹೋರಾಟ ಆರಂಭಿಸಿದ್ದರು. ಇದರ ನಡುವೆ ಚುನಾವಣಾ ಆಯೋಗ ಅ.21 ರಂದು ಉಪಚುನಾವಣೆಯನ್ನೂ ನಿಗದಿಪಡಿಸಿತ್ತು. ತದನಂತರ ಡಿಸೆಂಬರ್‌ 5ರಂದು ಮತ್ತೊಂದು ಉಪಚುನಾವಣೆಯ ದಿನಾಂಕವನ್ನು ಘೋಷಿಸಿತು. ಇದರಿಂದ ವಿಚಲಿತರಾದ ಅನರ್ಹರು ಸುಪ್ರೀಂನಲ್ಲಿ ತಮ್ಮ ಕಾನೂನು ಹೋರಾಟವನ್ನು ಅಚಲಗೊಳಿಸಿದರು. ಅನರ್ಹಗೊಂಡಾಗಿನಿಂದ ಇಲ್ಲಿಯವರೆಗೆ ಸತತ 107 ದಿನಗಳ ನಂತರ ಅನರ್ಹರಿಗೆ ಸುಪ್ರೀಂ ಕೊನೆಗೂ ನೆಮ್ಮದಿ ತಂದಿದೆ. ಆದರೆ, ಅನರ್ಹತೆಯ ಪಟ್ಟವನ್ನು ಹಾಗೆ ಉಳಿಸಿದೆ. ಗೆದ್ದರೆ ಮಾತ್ರ ಅನರ್ಹತೆ ಪಟ್ಟಅಳಿಸಿಹೋಗುತ್ತದೆ.

ಮೂರು ಕಡೆ ಬಂಡಾಯದ ಬಿಸಿ:

ಗೋಕಾಕ, ಕಾಗವಾಡ ಮತ್ತು ಅಥಣಿ ಕ್ಷೇತ್ರಗಳಲ್ಲಿ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಕ್ಕೆ ರಮೇಶ ಜಾರಕಿಹೊಳಿ, ಶ್ರೀಮಂತ ಪಾಟೀಲ ಮತ್ತು ಮಹೇಶ ಕುಮಟಳ್ಳಿಗೆ ಸುಪ್ರೀಂ ದಾರಿಯೇನೋ ಸುಗಮಗೊಳಿಸಿದೆ. ಆದರೆ, ಬಿಜೆಪಿ ಟಿಕೆಟ್‌ ತಮಗೆ ಪಕ್ಕಾ ಎಂಬ ಆತ್ಮವಿಶ್ವಾಸ ಯಾರಲ್ಲಿಯೂ ಇಲ್ಲ. ಆದರೆ, ಸಿಎಂ ಸೇರಿದಂತೆ ವರಿಷ್ಠರು ಕೂಡ ಅನರ್ಹರಿಗೆ ಬಿಜೆಪಿ ಟಿಕೆಟ್‌ ಎಂಬ ಭರವಸೆ ನೀಡಿದ್ದಾರೆ. ಇದರ ಆಧಾರದ ಮೇಲಿಂದ ಇವರಿಗೆ ಟಿಕೆಟ್‌ ಸಿಗಬಹುದು. ಆದರೆ, ಮೂಲ ಮತ್ತು ವಲಸೆ ಬಿಜೆಪಿ ಕಾರ್ಯಕರ್ತರು ಎಂಬ ಬೇಧಭಾವ ಆರಂಭವಾಗುತ್ತದೆ. ಜತೆಗೆ ಆಯಾ ಕ್ಷೇತ್ರಗಳಲ್ಲಿಯೇ ಪಕ್ಷ ಸಂಘಟನೆ ಮಾಡಿ ಬೆಳೆದಿರುವ ಮುಖಂಡರು ಅನರ್ಹರನ್ನು ಬೆಂಬಲಿಸುತ್ತಾರೆಯೇ ಎಂಬ ಪ್ರಶ್ನೆ ಎಲ್ಲರನ್ನು ಕಾಡಲು ಆರಂಭಿಸಿದೆ.

ಗೋಕಾಕ ಕ್ಷೇತ್ರದಲ್ಲಿ ರಮೇಶ ಜಾರಕಿಹೊಳಿಯೇ ಬಿಜೆಪಿ ಅಭ್ಯರ್ಥಿ ಎಂಬುದರಲ್ಲಿ ಎರಡು ಮಾತಿಲ್ಲ ಎಂಬುದು ಕಾರ್ಯಕರ್ತರ ವಿಶ್ವಾಸ. ಆದರೆ, ಇಲ್ಲಿ ಈ ಹಿಂದೆ ರಮೇಶ ವಿರುದ್ಧವೇ ಸ್ಪರ್ಧಿಸಿ ಸೋತಿರುವ ಅಶೋಕ ಪೂಜಾರಿ ವರಿಷ್ಠರಿಗೆ ದೊಡ್ಡ ಸವಾಲಾಗಿದ್ದಾರೆ. ನಿಗಮ ಮಂಡಳಿ ಅಧ್ಯಕ್ಷಗಿರಿ ಕೊಟ್ಟರೂ ಪೂಜಾರಿ ಸ್ವೀಕರಿಸದೇ, ನಯವಾಗಿ ತಳ್ಳಿಹಾಕುವ ಮೂಲಕ ತಮ್ಮ ಸ್ಪರ್ಧೆ ಇಲ್ಲಿ ಅಚಲ ಎಂಬ ಸಂದೇಶವನ್ನು ವರಿಷ್ಠರಿಗೆ ನೀಡಿದರು. ಈಗಲೂ ಅಶೋಕ ಪೂಜಾರಿ ಅವರ ಮನವೊಲಿಸುವಲ್ಲಿ ಬಿಜೆಪಿ ವರಿಷ್ಠರು ಆಸ್ಥೆ ವಹಿಸಿದ್ದು, ಮುಂದಿನ ನಡೆ ತೀವ್ರ ಕುತೂಹಲ ಮೂಡಿಸಿದೆ. ಇದರ ನಡುವೆ ಈಗಾಗಲೇ ಕಾಂಗ್ರೆಸ್‌ನತ್ತ ಚಿತ್ತ ಹರಿಸಿರುವ ಪೂಜಾರಿ, ತಮ್ಮ ಅಭ್ಯರ್ಥಿತನವನ್ನು ಬಲಿಷ್ಠವಾಗಿ ಪ್ರತಿಪಾದಿಸಿದ್ದಾರೆ. ಒಂದು ವೇಳೆ ಹಾಗೇನಾದರೂ ಕೈ ಟಿಕೆಟ್‌ ಪಡೆದರೆ, ಕ್ಷೇತ್ರದಲ್ಲಿ ಹಳೆ ಹಾಡಿಗೆ ಹೊಸ ರಾಗ ಎಂಬಂತೆ ಹಳೆ ಅಭ್ಯರ್ಥಿಗಳು ಹೊಸ ಪಕ್ಷಗಳಿಂದ ಸ್ಪರ್ಧೆ ನಡೆಯಲಿದೆ.

ಇನ್ನು ಬಿಜೆಪಿ ಸರ್ಕಾರ ರಚನೆ ವೇಳೆ ಪರೋಕ್ಷ ಸಹಾಯ ಮಾಡಿದ ಮತ್ತೊಬ್ಬ ಅನರ್ಹ ಶಾಸಕ ಕಾಗವಾಡ ಕ್ಷೇತ್ರದ ಶ್ರೀಮಂತ ಪಾಟೀಲರಿಗೆ ಮಾಜಿ ಶಾಸಕ, ಬಿಜೆಪಿ ಮುಖಂಡ ರಾಜು ಕಾಗೆ ಪ್ರಬಲ ಪೈಪೋಟಿಯಾಗಿದ್ದಾರೆ. ಮೊದಲಿನಿಂದಲೂ ಶ್ರೀಮಂತ ಪಾಟೀಲ ಸೇರ್ಪಡೆಯನ್ನು ವಿರೋಧಿಸುತ್ತಾ ಬಂದಿದ್ದ ಕಾಗೆ ಅವರು, ತಮಗೆ ಟಿಕೆಟ್‌ ನೀಡುವಂತೆ ಬಿಜೆಪಿ ವರಿಷ್ಠರ ಮೇಲೆ ಒತ್ತಡ ಹೇರುತ್ತಲೆ ಇದ್ದರು. ಆದರೆ, ಬಿಜೆಪಿ ಸರ್ಕಾರದ ರಚನೆ ಪಾಲಿನಲ್ಲಿ ಶ್ರೀಮಂತ ಪಾಟೀಲ ಕೊಡುಗೆಯೂ ಇರುವುದರಿಂದ ಅವರಿಗೆ ಟಿಕೆಟ್‌ ನೀಡಲು ವರಿಷ್ಠರು ನಿರ್ಧರಿಸಿದ್ದರು ಎಂಬ ಮಾಹಿತಿ ಕಾಗೆಗೆ ಸ್ಪಷ್ಟವಾಗುತ್ತಿದ್ದಂತೆ ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ. ಇನ್ನೇನು ಸೇರ್ಪಡೆಯೊಂದೇ ಬಾಕಿ ಇದೆ. ಆದರೆ, ಮಾಜಿ ಶಾಸಕ ಕಾಗೆಯನ್ನು ವರಿಷ್ಠರು ಮನವೊಲಿಸಿದಲ್ಲಿ ಬಿಜೆಪಿ ಹಾದಿ ಸುಗಮ ಎಂಬ ಮಾತು ಕೇಳಿಬರುತ್ತಿದೆ. ಆದರೆ, ಇದು ಅಷ್ಟು ಸುಲಭವೂ ಅಲ್ಲ ಎಂಬುದು ತಿಳಿಯದಿರುವ ಸಂಗತಿಯೇನಲ್ಲ.

ಅಥಣಿ ಕ್ಷೇತ್ರ ಕೂಡ ಇವೆರಡೂ ಕ್ಷೇತ್ರಗಳಿಂದ ಭಿನ್ನವಾಗಿದೆ. ಕಳೆದ ಬಾರಿ ಸೋತಿದ್ದ ಲಕ್ಷ್ಮಣ ಸವದಿ ಈಗಾಗಲೇ ಉಪಮುಖ್ಯಮಂತ್ರಿ ಆಗಿದ್ದಾರೆ. ಸಹಜವಾಗಿ ಕ್ಷೇತ್ರದ ಮೇಲೆ ಹಿಡಿತ ಜಾಸ್ತಿ. ಅದನ್ನು ಮತ್ತೊಬ್ಬರಿಗೆ ಹೇಗೆ ಬಿಟ್ಟು ಕೊಡಬೇಕು ಎಂಬ ಆಲೋಚನೆ ಇಲ್ಲದಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ. ಹೀಗಾಗಿ ಇಲ್ಲಿ ಡಿಸಿಎಂ ಸವದಿ ಅವರ ಮುಂದಿನ ನಡೆ ಏನು? ಅವರಿಗೆ ವರಿಷ್ಠರು ಯಾವ ವಿಧಾನ ಪರಿಷತ್ತಗೆ ಆಯ್ಕೆ ಮಾಡುತ್ತಾರೋ? ಅಥವಾ ಮಹೇಶ ಕುಮಟಳ್ಳಿಯವರನ್ನೇ ಪರಿಷತ್ತಿಗೆ ಕಳುಹಿಸಿ ಸಮಾಧಾನಪಡಿಸುವ ತಂತ್ರಗಾರಿಕೆ ಅನುಸರಿಸುತ್ತಾರೋ ಎಂಬುವುದು ಕೂಡ ತೀವ್ರ ಕುತೂಹಲ ಮೂಡಿಸಿದೆ. ಇವೆಲ್ಲದರ ನಡುವೆ ಡಿಸಿಎಂ ಸವದಿ ಅವರು ಆರಂಭದಿಂದಲೂ ಅನರ್ಹರಿಗೆ ಟಿಕೆಟ್‌ ನೀಡುವ ಬಗ್ಗೆ ಚಕಾರ ಎತ್ತುತ್ತಲೇ ಇದ್ದಾರೆ. ಇದೆಲ್ಲವನ್ನು ಗಮನಿಸಿದರೆ, ಅಥಣಿ ಕ್ಷೇತ್ರವನ್ನು ಅಷ್ಟುಸುಲಭವಾಗಿ ಬಿಟ್ಟು ಕೊಡುವರೆ ಎಂಬುದರ ಮೇಲೆ ಕುಮಟಳ್ಳಿ ಅವರ ರಾಜಕೀಯ ದಾರಿ ಅಡಗಿದೆ ಎಂಬುವುದರಲ್ಲಿ ಎರಡು ಮಾತಿಲ್ಲ.

ಮೂಲ ಕಾರ್ಯಕರ್ತರು ಒಪ್ಪುತ್ತಾರೆಯೇ?:

ಕಳೆದ ಬಾರಿ ಮೂರು ಕ್ಷೇತ್ರಗಳಲ್ಲಿ ತಳಮಟ್ಟದ ಕಾರ್ಯಕರ್ತರು ತಮ್ಮ ನಾಯಕನ ಗೆಲುವಿಗಾಗಿ ಸಾಕಷ್ಟುಪರಿಶ್ರಮಪಟ್ಟಿದ್ದಾರೆ. ಅವರೊಂದಿಗೆ ಪ್ರಚಾರ ನಡೆಸಿ, ಮತ ನೀಡುವಂತೆ ಕೇಳಿದ್ದಾರೆ. ಈಗ ಕಳೆದ ಬಾರಿ ವಿರೋಧಿಯಾಗಿ ಕೆಲಸ ಮಾಡಿದ ನಾಯಕನ ಪರವಾಗಿ ಈಗ ಹೇಗೆ ಮತಯಾಚಿಸಬೇಕು? ಅದು ಹೇಗೆ ಸಾಧ್ಯ ಎಂಬ ಪ್ರಶ್ನೆಗಳು ಕಾಡಲಾರಂಭಿಸಿವೆ. ಇದನ್ನು ವರಿಷ್ಠರು ಹೇಗೆ ಬಗೆಹರಿಸುತ್ತಾರೆ ಎಂಬುವದು ಸದ್ಯದ ಕುತೂಹಲ.
 

Follow Us:
Download App:
  • android
  • ios