ಬೆಳಗಾವಿ(ಅ.27): ಬೆಳಗಾವಿ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕ ಭಾಗದ 13 ಜಿಲ್ಲೆಗಳಲ್ಲಿ ಪ್ರವಾಹ, ಮಳೆಯಿಂದ ಜನರು ಮನೆ, ಜಮೀನು, ಕುಟುಂಬಸ್ಥರನ್ನು ಕಳೆದುಕೊಂಡು ಕಷ್ಟದಲ್ಲಿದ್ದಾರೆ. ಈ ವರ್ಷ ದೀಪಾವಳಿ ಆಚರಿಸುವ ಸ್ಥಿತಿ ಜನರಲ್ಲಿ ಇಲ್ಲ. ಬದುಕು ಏನಾಗಿದೆ. ಸರ್ಕಾರ ಯಾವ ರೀತಿ ಪರಿಹಾರ ಕೊಟ್ಟಿದೆ ಎಂದು ನೋಡಿ ಸಂತ್ರಸ್ತರ ಜತೆ ಹಬ್ಬ ಆಚರಿಸಲು ಬಂದಿದ್ದೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಬೆಳಗಾವಿ ಜಿಲ್ಲೆ ಬಗ್ಗೆ ಹೆಚ್ಚಿನ ಮಮತೆ ಇದೆ. ಕೃಷಿ ಸಂಪದ್ಭರಿತವಾದ ಜಿಲ್ಲೆ. ಈ ವರ್ಷದ ಪ್ರವಾಹ ಅನಾಹುತದಿಂದ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ. 2014 ರಿಂದ ಪ್ರಕೃತಿ ವಿಕೋಪದಿಂದ ಜಿಲ್ಲೆಯ ಜನರು ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಿದ್ದಾರೆ. ಆದ್ದರಿಂದ ಭಾನುವಾರ ಚಿಕ್ಕೋಡಿ, ಅಥಣಿ, ಕಾಗವಾಡ ಭಾಗಕ್ಕೆ ಹೋಗಿ ಜನರ ಸಮಸ್ಯೆ ಆಲಿಸುವುದರ ಜತೆಗೆ ಅವರೊಂದಿಗೆ ದೀಪಾವಳಿ ಆಚರಿಸುತ್ತೇನೆ. ಅ.28 ರಂದು ಧಾರವಾಡ ಹಾಗೂ ಹಾವೇರಿ ಜಿಲ್ಲೆ ಪ್ರವಾಹ ಪೀಡತ ಪ್ರದೇಶಕ್ಕೆ ಭೇಟಿ ನೀಡುತ್ತೇನೆ ಎಂದರು.

ಸರ್ಕಾರಕ್ಕೆ ಸಮಯ ಕೊಡಬೇಕು: 

ಈ ವರ್ಷ ಆದ ಪ್ರವಾಹ ಅನಾಹುತದಿಂದ ಜನರಿಗೆ ಹೊಸ ಜೀವನ ಕಟ್ಟಿಕೊಳ್ಳಲು 2-3 ವರ್ಷವಾದರೂ ಬೇಕು. 2.86 ಲಕ್ಷ ಹೆಕ್ಟೇರ್‌‌ ಕೃಷಿ ಜಮೀನು ಬೆಳೆ ಹಾನಿ ಆಗಿದೆ. 40 ಸಾವಿರ ಕುಟುಂಬ ಮನೆ ಕಳೆದುಕೊಂಡಿದೆ. ರಾಮದುರ್ಗ, ಬೆಳಗಾವಿ ನಗರ ನೇಕಾರರ ಬದುಕು ಹಾಳಾಗಿದೆ. ಪರಿಹಾರಕ್ಕಾಗಿ ಸರ್ಕಾರ ಜಿಲ್ಲಾಧಿಕಾರಿ ಖಾತೆಗೆ 800 ಕೋಟಿ ನೀಡಲಾಗಿದ್ದು, ಈಗಾಗಲೇ ಪರಿಹಾರ ಕಾರ್ಯಕ್ಕೆ ಕೆಲವು ಹಣವನ್ನು ವೆಚ್ಚ ಮಾಡಿದ್ದಾರೆ. ನಾನೇ ಮುಂಖ್ಯಮಂತ್ರಿಯಾಗಿದ್ದರೂ ಒಂದೆರೆಡು ತಿಂಗಳಲ್ಲಿ ಪುನಃ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಕ್ರಮ ಸಾಧ್ಯವಾಗುತ್ತಿರಲಿಲ್ಲ. ಸರ್ಕಾರಕ್ಕೆ ಸಮಯ ಕೊಡಬೇಕು ಎಂದರು.

ರಾಜಕಾರಣಿಗಳು ಚುನಾವಣೆ ಮೂಡಲ್ಲಿ ಇದ್ದಾರೆ:

ಕಳೆದ ವರ್ಷ ಕೊಡಗಿನಲ್ಲಾದ ಭೀಕರ ಪ್ರವಾಹದಿಂದ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿತ್ತು. ಆದರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ಕಲ್ಪಿಸಲು ಎನ್‌ಡಿಆರ್‌ಎಫ್ ನಿಯಮ ಬದಿಗಿಟ್ಟು, ರಾಜ್ಯ ಸರ್ಕಾರದಿಂದ ಮನೆಗೆ ನೀರು ಹೋದರೆ 50 ಸಾವಿರ, ಮನೆ ಬಿದ್ದರೆ 1 ಲಕ್ಷ ಕೊಟ್ಟಿದ್ದೇವೆ. ಬಡಾವಣೆ ನಿರ್ಮಿಸಲು 9.85 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಿದ್ದೇವೆ. ಮನೆ ನಿರ್ಮಾಣದವರಿಗೂ 10 ಸಾವಿರ ಬಾಡಿಗೆ ಕೊಟ್ಟಿದ್ದೇವೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಖಜಾನೆಯಲ್ಲಿ ಹಣ ಇದ್ದು, ಸಂತ್ರಸ್ತರಿಗೆ ಬದುಕು ರೂಪಿಸಿಕೊಳ್ಳಲು ವೆಚ್ಚ ಮಾಡಲಿ ಎಂದು ತಿಳಿಸಿದ್ದಾರೆ. 

ಎ, ಬಿ,ಸಿ ಕೆಟಗರಿಯಲ್ಲೂ ಲೋಪಗಳಿವೆ. ವಿದ್ಯುತ್‌ ದುರಸ್ತಿ, ರಸ್ತೆ ಆಗಿಲ್ಲ. ಸದ್ಯ ಚುನಾವಣೆ ಜವಾಬ್ದಾರಿಯಲ್ಲಿ ಸರ್ಕಾರ ಇದೆ. ಬಿಜೆಪಿ ಅವರಿಗೆ ಸರ್ಕಾರ ಉಳಿಸಿಕೊಳ್ಳಬೇಕಿದೆ. ಹಿರಿಯ ಅಧಿಕಾರಿಗಳನ್ನು ನೋಡಲ್ ಅಧಿಕಾರಿ ನೇಮಿಸಬೇಕು. ಜನರ ಬದುಕು ರೂಪಿಸುವದಕ್ಕಿಂತ ಚುನಾವಣೆ ಮೂಡನಲ್ಲಿ ರಾಜಕಾರಣಿಗಳಿಗಿದೆ. ಆದ್ದರಿಂದ ಹಿರಿಯ ಅಧಿಕಾರಿಗಳಿಗೆ ಜವಾಬ್ದಾರಿ ಕೊಡಿ ಎಂದರು.

ಬ್ಯಾಂಕಿನವರ ವಿರುದ್ಧ ಅಸಮಾಧಾನ: 

ಜನರಿಗೆ ಹಣ ಕೊಡುವುದು ಉಪಯೋಗಕ್ಕೆ ಬರಲ್ಲ. 2006 ರಲ್ಲೂ ಹಾನಿ ಆದಾಗ ಜಮೀನು ಖರೀದಿಗೆ 28 ಕೋಟಿ ಆಗಲೇ ಬಿಡುಗಡೆ ಮಾಡಿದ್ದೆ. ಕಳೆದ 10 ವರ್ಷದಲ್ಲಿ ಮಹಾರಾಷ್ಟ್ರದಿಂದ ಬಿಡುವ ನೀರಿನಿಂದ ಹಾನಿ ಆಗುವ ಗ್ರಾಮಗಳನ್ನು ಸ್ಥಳಾಂತರಿಸಬೇಕು. ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಬೇಕು. ರೈತರ ಸಾಲ ಮನ್ನಾಗೂ ಸರ್ಕಾರದ ಖಜಾನೆ ಖಾಲಿ ಆಗುವುದಕ್ಕೂ ಯಾವುದೇ ಸಂಬಂಧ ಇಲ್ಲ. ಅಥಣಿ ವಿಧಾನಸಭಾ ಕ್ಷೇತ್ರ 36 ಸಾವಿರ ಕುಟುಂಬ ಮನ್ನಾಆಗಿದೆ. 25 ಸಾವಿರ ಕೋಟಿ ಹೊಂದಾಣಿಕೆ ಮಾಡಲು ನನ್ನಿಂದ ಒಂದು ವರ್ಷದಲ್ಲಿ ಸಾಧ್ಯ ಆಯಿತು. ಸಾಲಮನ್ನಾ ಯೋಜನೆ ಪರಿಣಾಮಕಾರಿ ಅನುಷ್ಠಾನ ಕರ್ನಾಟಕದಲ್ಲಿ ಆಗಿದ್ದು ಮೊದಲ ಬಾರಿ. ಬ್ಯಾಂಕ್‌ನವರು ಸಾಲ ಮನ್ನಾ ಹಣ ಬಂದರೂ ಮಾಹಿತಿ ನೀಡದೆ ನಡೆದುಕೊಳ್ಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

2018 ಚುನಾವಣೆಯಲ್ಲಿ ಮತ ಪಡೆಯಲು ಸಿದ್ದರಾಮಯ್ಯ ಸರ್ಕಾರ ಅವಧಿಯಲ್ಲಿ ನೀರಾವರಿಗೆ 1200 ಕೋಟಿ, ಲೋಕೋಪಯೋಗಿ ಇಲಾಖೆಗೆ 2500 ಕೋಟಿ, ವಸತಿ ನಿಗಮಕ್ಕೆ 8 ಸಾವಿರ ಕೋಟಿ ಮೀಸಲಿಟ್ಟು, 29 ಸಾವಿರ ಕೋಟಿಕಾರ್ಯಕ್ಕೆ ಅನುಮೋದನೆ ನೀಡಿದ್ದಾರೆ. ಆದ್ದರಿಂದ 29 ಸಾವಿರ ಕೋಟಿ ವಸತಿ ನಿಗಮಕ್ಕೆ ಕೋಡಬೇಕು. ಇದು ಸಿದ್ದರಾಮಯ್ಯ ಅವರ ಸಾಧನೆ ಎಂದು ಕಿಡಿಕಾರಿದ ಅವರು, ರೈತರ ಸಾಲಮನ್ನಾಗಿ ಬಾಯಿ ಮುಚ್ಚಿಕೊಂಡಿದ್ದೆ. ನಾನು ಕೊಟ್ಟ ಹಣವನ್ನು ಆರು ತಿಂಗಳಲ್ಲಿ ಸರ್ಕಾರದ ಬೊಕ್ಕಸಕ್ಕೆ ಭರ್ತಿ ಮಾಡಿದ್ದೆನೆ. ಖಜಾನೆಯಲ್ಲಿ ದುಡ್ಡಿದೆ, ಕಷ್ಟಪಟ್ಟು ಸಿಎಂ ಆಗಿದ್ದಾರೆ. ಸಲಹೆ ಬೇಕಿದ್ದರೆ ಕೊಟ್ಟಿದ್ದೇನೆ ಎಂದರು.

ಹಳ್ಳಹಿಡಿದ ಋಣಮುಕ್ತ ಕಾಯ್ದೆ: 

ಬಡವರ ಬಂಧು, ಋಣಮುಕ್ತ ಕಾಯ್ದೆ ಹಳ್ಳ ಹಿಡಿದಿದೆ. ಅರ್ಜಿ ಕೊಟ್ಟರೆ ಒಂದು ವರ್ಷ ಸಮಯ ಇದೆ. ಕೋರ್ಟ್ ತಡೆಯಾಜ್ಞೆ ತಂದು ಅನುಷ್ಠಾನವಾಗದಂತೆ ಒತ್ತಡ ಹಾಕುತ್ತಿದ್ದಾರೆ. ಜನಪರ ನನ್ನ ಯೋಜನೆಗೆ ಹೆಚ್ಚಿನ ಪ್ರಚಾರ ಸಿಗಲಿಲ್ಲಎಂದು ಬೇಸರ ವ್ಯಕ್ತಪಡಿಸಿದರು.

ಬೆಳಗಾವಿ ಸಾಹುಕಾರರು ಗೋಕಾಕ, ಘಟಪ್ರಭಾಕ್ಷೇತ್ರದಲ್ಲಿನ ನೀರಾವರಿ ಯೋಜನೆಗೆ 250 ಕೋಟಿ, ಜಿಲ್ಲೆಗೆ 5 ಸಾವಿರ ಕೋಟಿ ಅನುದಾನ ಕೊಟ್ಟಿದ್ದೇನೆ. ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಕೆರೆ ತುಂಬಿಸುವ ಯೋಜನೆ 400ರಿಂದ 500 ಕೋಟಿ ಕೊಟ್ಟಿದ್ದೇನೆ. ಅವರಲ್ಲೇ ಪೈಪೋಟಿ ಇದೆ. ಇಲ್ಲಿ ಕ್ರಾಂತಿಕಾರಿ ಬದಲಾವಣೆ ತನ್ನಿ. ಇಲ್ಲಿಂದಲೇ ಚುನಾವಣೆ ಎಂದುಕೊಳ್ಳಿ ಎಂದರು.

ಪರಸ್ಪರ ಕೈಕುಲುಕಿದ ಎಚ್ಡಿಕೆ, ರಮೇಶ: 

ಬೆಂಗಳೂರಿನಿಂದ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಗೋಕಾಕದ ಅನರ್ಹ ಶಾಸಕ ರಮೇಶ ಜಾರಕಿಹೊಳಿ ಅವರು ಒಂದೇ ವಿಮಾನದಲ್ಲಿ ಶನಿವಾರ ಬೆಳಗಾವಿ ಸಾಂಬ್ರಾ ವಿಮಾನ ನಿಲ್ಲಾಣಕ್ಕೆ ಬಂದು ಇಳಿದರು.ಇಬ್ಬರು ಅಲ್ಲಿ ಪರಸ್ಪರ ಕೈಕುಲುಕಿ ಮುಂದೆ ತೆರಳಿದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

ಕಬ್ಬಿನ ಬಾಕಿ ಬಿಲ್ ಕೊಡದವರು ಯಾವ ಸಾಹುಕಾರ?

ಕಬ್ಬಿನ ಬಾಕಿ ಬಿಲ್ ನೀಡದವರು, ಜನರ ಸಮಸ್ಯೆಗಳಿಗೆ ಸ್ಪಂದಿಸದವರನ್ನು ಬೆಳಗಾವಿ ಜಿಲ್ಲೆಯ ಸಾಹುಕಾರರು ಎಂದು ಕೆಲ ಅಮಾಯಕರು ಹೇಳುತ್ತಿದ್ದಾರೆ. ಅವರೆಲ್ಲಾ ಯಾವ ರೀತಿ ಸಾಹುಕಾರ ಹೇಗೆ ಸಾಹುಕಾರ ಆದರು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಕ್ಷೇತ್ರದಲ್ಲಿ ಸಾಧನೆ ಮಾಡದವರು ಬೆಟ್ಟದಲ್ಲಿ ಕಲ್ಲು ಹೊಡೆಯುವ ಸಾಹಸಕ್ಕೆ ಕೈ ಹಾಕಿದ್ದಾರೆ. ಆದ್ದರಿಂದ ಗೋಕಾಕ ಕ್ಷೇತ್ರದ ಜನತೆಗೆ ಇದೀಗ ಒಳ್ಳೆಯ ಅವಕಾಶ ಬಂದಿದೆ. ಅದನ್ನು ಸದುಪ ಯೋಗಪಡಿಸಿಕೊಂಡುಎ ರಡು ದಶಕಗಳಿಂದ ಎದುರಿಸುತ್ತಿರುವ ಸಮಸ್ಯೆಯಿಂದ ಮುಕ್ತಗೊಳ್ಳುವಂತೆ ವಿನಂತಿಸಿಕೊಂಡರು.

ಉಮೇಶ ಕತ್ತಿ ಬಿಜೆಪಿಯಲ್ಲಿ ಮೂಲೆಗುಂಪಾಗಿದ್ದು, ಒಂದು ವೇಳೆ ಅವರು ಜೆಡಿಎಸ್‌ಗೆ ಬಂದರೆ ಸ್ವಾಗತಿಸುವಿರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ಜೆಡಿಎಸ್ ಪಕ್ಷದ ಸಿದ್ಧಾಂತ ಒಪ್ಪಿ ಯಾರೇ ಬಂದರೂ ಮುಕ್ತವಾಗಿ ಸ್ವಾಗತಿಸುತ್ತೇನೆ. ಜತೆಗೆ ನಮ್ಮ ಪಕ್ಷದಿಂದಲೇ ಸಾಕಷ್ಟು ಜನ ನಾಯಕರು ಹೊರಹೋಗಿದ್ದಾರೆ.ಅವರು ವಾಪಸ್ ಬಂದರೆ ಸ್ವಾಗತಿಸುತ್ತೇನೆ ಎಂದ ಅವರು, ರಾಜಕೀಯವಾಗಿ ನಾನು ಕೂಡ ಸಂತ್ರಸ್ತನಾಗಿದ್ದೇನೆ. ನಾಯಕರ ಒಡಕಿನಿಂದ ನಮ್ಮ ಪಕ್ಷ ಸಡಿಲಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.