ಕಾಗವಾಡ(ಅ.29): ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೊಡಗಿನಲ್ಲಿ ಭಾರಿ ಮಳೆಯಿಂದ ಪ್ರವಾಹ ಬಂದಾಗ ನೆರೆ ಸಂತ್ರಸ್ತರಿಗೆ ನೀಡಿರುವ ಪರಿಹಾರದ ಮಾದರಿಯಲ್ಲಿ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಪರಿಹಾರ ಧನ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಹೇಳಿದರು.

ಜಿಲ್ಲೆಯ ಕಾಗವಾಡ ತಾಲೂಕಿನ ಜುಗೂಳ, ಮಂಗಾವತಿ, ಶಹಾಪುರ, ಶಿರಗುಪ್ಪಿ, ಕುಸನಾಳ, ಮೊಳವಾರ ಹಾಗೂ ಉಗಾರ ಗ್ರಾಮಗಳ ನೆರೆ ಸಂತ್ರಸ್ತರನ್ನು ಭಾನುವಾರ ಭೇಟಿಯಾಗಿ ಮಾತನಾಡಿದ ಅವರು, ಕೊಡಗಿನಲ್ಲಿ ಮನೆ ಕಳೆದುಕೊಂಡವರಿಗೆ ತಾತ್ಕಾಲಿಕ ಪರಿಹಾರವಾಗಿ 50 ಸಾವಿರ, ಮನೆ ಬಿದ್ದವರಿಗೆ 1 ಲಕ್ಷ ನೀಡುವುದರ ಜೊತೆಗೆ ಸರ್ಕಾರದಿಂದಲೇ 9.85 ಲಕ್ಷ ವೆಚ್ಚದ ಸುಸಜ್ಜಿತ ಮನೆಗಳನ್ನು ನಿರ್ಮಿಸಿ ಕೊಡಲಾಗಿದೆ. ಅದೇ ಮಾದರಿಯಲ್ಲಿ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೂ ಸುಸಜ್ಜಿತ ಮನೆಗಳನ್ನು ಕಟ್ಟಿಸಿ ಕೊಡಲು ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಭರವಸೆ ನೀಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಉತ್ತರ ಕರ್ನಾಟಕದ ಜನರ ಬದುಕಿನ ಜೊತೆ ಪ್ರಕೃತಿ ಚೆಲ್ಲಾಟವಾಡುತ್ತಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಬೆಂಗಳೂರಿನಲ್ಲಿ ದೀಪಾವಳಿ ಆಚರಿಸಲು ಮನಸ್ಸು ಒಪ್ಪದೇ ಇದ್ದಾಗ ನಿಮ್ಮ ಬಳಿಗೆ ಬಂದಿರುವುದಾಗಿ ಭಾವುಕರಾಗಿ ನುಡಿದರು.
ಜುಗೂಳ ಗ್ರಾಮ ಪಂಚಾಯತಿಯ ಅಧ್ಯಕ್ಷರು ನೀಡಿರುವ ಮನವಿಯಂತೆ ಜುಗೂಳ, ಮಂಗಾವಿ, ಹಾಗೂ ಶಹಾಪುರ ಗ್ರಾಮಗಳನ್ನು ಸಂಪೂರ್ಣವಾಗಿ ಸ್ಥಾಳಾಂತರಿಸಿ ಅವರಿಗೆ ಪುನರ್‌ ವಸತಿ ಕಲ್ಪಿಸುವ ಅಗ್ಯವಿದೆ. ಈ ಕುರಿತು ಮುಖ್ಯಮಂತ್ರಿಗಳ ಜೊತೆಗೆ ಮಾತುಕತೆಯ ಮೂಲಕ ಸಮಸ್ಯೆಗೆ ಪರಿಹಾರ ಕಲ್ಲಿಸಿ ಕೊಡುವುದಾಗಿ ಭರವಸೆ ನೀಡಿದರು. ನನ್ನ ಅಧಿಕಾರಾವಧಿಯಲ್ಲಿ ಕಾಗವಾಡ ತಾಲೂಕಿನ 28 ಸಾವಿರ ಕುಟುಂಬಗಳು ಹಾಗೂ ಅಥಣಿ ತಾಲೂಕಿನ 36 ಸಾವಿರ ಕುಟುಂಬಗಳ ರೈತರ ಸಾಲಮನ್ನಾ ಮಾಡಲಾಗಿದೆ ಎಂದರು.

ರೈತರು ಆತ್ಮಹತ್ಯೆಗೆ ಶರಣಾಗಬೇಡಿ: ಮನವಿ

ರೈತರಿಗೆ ಎಷ್ಟೆ ಕಷ್ಟ ಕಾರ್ಪಣ್ಯಗಳು ಎದುರಾದರೂ ಎದೆಗುಂದದೆ ಧೈರ್ಯದಿಂದ ಎದುರಿಸಿ. ಆತ್ಮಹತ್ಯೆಯಂತಹ ಕೆಟ್ಟ ನಿರ್ಧಾರ ಕೈಗೊಳ್ಳಬೇಡಿ. ಸರ್ಕಾರ ಇರುವುದೇ ನಿಮ್ಮ ಸೇವೆಗಾಗಿ ಎಂದು ರೈತರಲ್ಲಿ ಎಚ್‌ಡಿಕೆ ಮನವಿ ಮಾಡಿದರು.

ಹೆಚ್ಚಿನ ಪರಿಹಾರಕ್ಕೆ ಒತ್ತಡ:

ರಾಜ್ಯ ಸರ್ಕಾರ ಎನ್‌ಡಿಆರ್‌ಎಫ್‌ ಯೋಜನೆಯಡಿಯಲ್ಲಿ ನೀಡುತ್ತಿರುವ ಪರಿಹಾರ ರೈತರಿಗೆ ಯಾವುದಕ್ಕೂ ಸಾಲುವುದಿಲ್ಲ. ನಾಶವಾಗಿ ಹೋಗಿರುವ ಬೆಳೆಗಳನ್ನು ಹೊರ ತಗೆದು ಹಾಕಲು ಸಾಲದು. ಅವರ ಮುಂದಿನ ಉಪ ಜೀವನಕ್ಕಾಗಿ ಹೊಲವನ್ನು ಉಳಿಮೆ ಮಾಡಿ ಕಬ್ಬು ನಾಟಿ ಮಾಡಬೇಕಾದರೆ ಲಕ್ಷಾಂತ ರುಪಾಯಿ ಬೇಕಾಗುತ್ತದೆ. ಅದಕ್ಕೆ ಸರ್ಕಾರ ಹೆಚ್ಚಿನ ಪರಿಹಾರ ನೀಡುವಂತೆ ಸರ್ಕಾರಕ್ಕೆ ಮನವೊಲಿಸಲಾಗುವುದು ಎಂದು ಕುಮಾರಸ್ವಾಮಿ ತಿಳಿಸಿದರು.

ಈ ವೇಳೆ ಚಿಕ್ಕೋಡಿ ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಹಾಗೂ ಮಾಜಿ ಮಾಜಿ ಶಾಸಕ ಕೆ.ಪಿ.ಮಗೆಣ್ಣವರ, ಶಂಕರ ಮಾಡಲಗಿ, ಮುಖಂಡರಾದ ಮಾಜಿ ಜೆಡಿಎಸ್‌ ಅಧ್ಯಕ್ಷ ಉತ್ತಮ ಪಾಟೀಲ, ಗಿರೀಶ ಬುಟಾಳೆ, ಸಂಜಯ ಮಿನಚೆ ಸೇರಿದಂತೆ ಅನೇಕರು ಇದ್ದರು.

ನಾನು ಉತ್ತರ ಕರ್ನಾಟಕದಲ್ಲಿ ಪ್ರವಾಸ ಕೈಗೊಂಡಿರುವುದು ಯಾವುದೇ ರಾಜಕೀಯ ಕಾರಣಕ್ಕಾಗಿ ಅಲ್ಲ. ಯಾವುದೇ ಪಕ್ಷದ ಸರ್ಕಾರವಿರಲಿ, ಯಾರೇ ಮುಖ್ಯಮಂತ್ರಿಯಾಗಿರಲಿ, ಈಗಿರುವ ಮುಖ್ಯಮಂತ್ರಿ ಅವರೇ ಮುಂದುವರಿಯಲಿ. ನನ್ನ ಅಭ್ಯಂತರವೇನು ಇಲ್ಲ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವುದೇ ನನ್ನ ಮುಖ್ಯ ಉದ್ದೇಶ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ.  

ಮಾಜಿ ಸಿಎಂ ಕಾಯುವುದೇ ದೀಪಾವಳಿ:

ಮಾಜಿ ಸಿಎಂ ಕುಮಾರಸ್ವಾಮಿ ಅವರು ಕೃಷ್ಣಾ ನೆರೆ ಸಂತ್ರಸ್ತರ ಭೇಟಿ ಬರುವ ನಿಗದಿಸಿದ ವೇಳಾಪಟ್ಟಿಯಂತೆ ಸುಮಾರು 9 ಗಂಟೆಗೆ ಜುಗೂಳ ಗ್ರಾಮಕ್ಕೆ ಬರಬೇಕಾಗಿತ್ತು. ಸರಿಸುಮಾರು ಮಧ್ಯಾಹ್ನ ಸರಿ ಸುಮಾರು 3 ಗಂಟೆಯಾದರೂ ಎಚ್‌ಡಿಕೆ ಬಂದಿರಲಿಲ್ಲ. 3 ಗಂಟೆ ನಂತರ ಬಂದ ಎಚ್‌ಡಿಕೆ ಮುಂದಿನ ಊರಿಗೆ ಹೋಗುವ ವೇಳಾಪಟ್ಟಿಯೆಲ್ಲವೂ ವ್ಯತ್ಯಾಸವಾಗುತ್ತ ಹೋಯಿತು. ಭೇಟಿಯಾಗಲು ಬಂದ ಸಂತ್ರಸ್ತರು ದೀಪಾವಳಿಯನ್ನು ಆಚರಿಸದೇ ಕಾಯ್ದುಕುಳಿತುಕೊಳ್ಳುವುದು ಅನಿವಾರ್ಯವಾಯಿತು.

ಅನರ್ಹ ಶಾಸಕರ ಬಗ್ಗೆ ಮಾತನಾಡುವುದೇ ವೇಸ್ಟ್‌: ಎಚ್‌ಡಿಕೆ

ಕಾಗವಾಡಃ ಅನರ್ಹ ಶಾಸಕರ ಬಗ್ಗೆ ಮಾತನಾಡುವುದೇ ವೆಸ್ಟ್‌. ಕಾಗವಾಡ ಕ್ಷೇತ್ರದ ಅನರ್ಹ ಶಾಸಕ ಶ್ರೀಮಂತ ಪಾಟೀಲರು ಅನುದಾನ ಬಂದಿಲ್ಲ ಎಂದು ಸರ್ಕಾರವನ್ನು ಅಸ್ಥಿರಗೊಳಿಸಿದರು. ಆದರೆ, ಇಂದು ನಾನು ಕೊಟ್ಟ ಅನುದಾನದ ಕಾಮಗಾರಿಗಳಿಗೆ ಈಗ ಪಿಕಾಸಿ ಹಿಡಿದು ಪೂಜೆ ಮಾಡುತ್ತ ಹೊರಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವ್ಯಂಗ್ಯವಾಡಿದರು.

ತಾಲೂಕಿನ ಪ್ರವಾಹ ಪೀಡಿತ ಮಂಗಾವತಿ ಗ್ರಾಮದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಗವಾಡ ಕ್ಷೇತ್ರಕ್ಕೆ ಸಮರ್ಪಕವಾಗಿ ಅನುದಾನ ನೀಡಲಿಲ್ಲ ಎಂದು ತಮ್ಮ ಕಾರ್ಖಾನೆಯಲ್ಲಿ ನಡೆಸಿದ ಸಭೆಯಲ್ಲಿ ಹೇಳಿದರಲ್ಲಿ ಈಗ ಪಿಕಾಸಿ ಹಿಡಿದಿ ಪೂಜೆ ಮಾಡುತ್ತಿರುವುದು ಯಾರು ಕೊಟ್ಟಅನುದಾನ ಸ್ವಾಮಿ ಎಂದು ಪ್ರಶ್ನಿಸಿದರು.

ಕಾಗವಾಡ ಮತಕ್ಷೇತ್ರದ ಅಭಿವೃದ್ಧಿಗೆ ಅನುದಾನ ಕೊಡಲಿಲ್ಲ. ಇದರಿಂದ ಅಸಮಧಾನವಾಯಿತು. ಇದರಿಂದಲೇ ನನ್ನ ಆರೋಗ್ಯ ಕೆಟ್ಟಿತು ಎಂದು ಹೇಳುತ್ತಿರಲ್ಲ. ಇಷ್ಟೆಲ್ಲ ಕಾಮಗಾರಿಗಳು ಯಾರು ನೀಡಿದ ಅನುದಾನ ಎಂಬುವುದನ್ನು ಕ್ಷೇತ್ರದ ಜನತೆ ಅರ್ಥ ಮಾಡಿಕೊಳ್ಳಬೇಕು. ಅಧಿಕಾರಕ್ಕಾಗಿ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಿದ ಇಂಥ ಪುಣ್ಯಾತ್ಮರ ಬಗ್ಗೆ ಮಾತನಾಡುವುದೇ ಇರುವುದು ಒಳಿತು ಎಂದರು.