Asianet Suvarna News Asianet Suvarna News

Congress Vs BJP ಸಂತೋಷ್ ಮನೆಗೆ ಕಾಂಗ್ರೆಸ್ ನಾಯಕರ ಭೇಟಿ, ನ್ಯಾಯ ಸಿಗುವವರೆಗೂ ಹೋರಾಟ ಎಂದ ಡಿಕೆಶಿ!

  • ನನ್ನ ಹೆಸರು ಕೇಳಿದ ತಕ್ಷಣ ಕೆಲವರಿಗೆ ಸ್ಟ್ರೆಂತ್ ಬರ್ತದೆ ಎಂದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ
  • ರಮೇಶ್ ಜಾರಕಿಹೊಳಿ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ವ್ಯಂಗ್ಯ
  • ದಾಖಲೆ ಬಿಡುಗಡೆ ಮಾಡಲು ಮೂಹೂರ್ತ ಏಕೆ ಬೇಕು? ಟೈಮ್ ಏಕೆ ಬೇಕು?
     
DK Shivakumar and Congress leader visit contractor santosh patil house who commit suicide ckm
Author
Bengaluru, First Published Apr 19, 2022, 10:00 PM IST | Last Updated Apr 19, 2022, 10:02 PM IST

ಬೆಳಗಾವಿ(ಏ.19): ಉಡುಪಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ ಪಾಟೀಲ್ ನಿವಾಸಕ್ಕೆ ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸೇರಿದಂತೆ ಕಾಂಗ್ರೆಸ್ ನಾಯಕರ ದಂಡೇ ಭೇಟಿ ನೀಡಿತು. ಬೆಳಗಾವಿ ತಾಲೂಕಿನ ಬಡಸ ಗ್ರಾಮದಲ್ಲಿ ಇರುವ ಸಂತೋಷ ಪಾಟೀಲ್ ನಿವಾಸಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಶಾಸಕರಾದ ಲಕ್ಷ್ಮೀ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್, ಮಹಾಂತೇಶ ಕೌಜಲಗಿ, ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ಸೇರಿ ಹಲವು ನಾಯಕರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.‌ ಸಂತೋಷ ಪಾಟೀಲ್ ಪತ್ನಿ ಜಯಶ್ರೀ, ತಾಯಿ ಪಾರ್ವತಿಗೆ ಸಾಂತ್ವ‌ನ ಹೇಳಿ ಕೆಪಿಸಿಸಿ ವತಿಯಿಂದ 11 ಲಕ್ಷ ರೂಪಾಯಿಯ ಪರಿಹಾರದ ಚೆಕ್ ವಿತರಿಸಿದರು‌. ಇದೇ ವೇಳೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ ಪ್ರಕಾಶ್ ಹುಕ್ಕೇರಿ ವತಿಯಿಂದ ವೈಯಕ್ತಿಕವಾಗಿ ಐದು ಲಕ್ಷ ರೂಪಾಯಿ ಹಣವನ್ನು ಸಹ ಕುಟುಂಬಸ್ಥರಿಗೆ ನೀಡಿದರು‌. 

'ಪಾಪ... ಆತನ‌ ಕನಸು... ಒಂದು ಚಿಕ್ಕ ಮನೆ ಕಟ್ಟಿದ್ದ.. ಗೃಹಪ್ರವೇಶ ಆಗಲಿಲ್ಲ'
ಇದೇ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, 'ನಾವೆಲ್ಲ ಶಾಸಕರು, ನಾಯಕರು ಇಂದು ಸಂತೋಷ ಪಾಟೀಲ್ ಮನೆಗೆ ಭೇಟಿ ಕೊಟ್ಟಿದ್ದೇವೆ. ಪಾಪ ಆತನ ಕನಸು, ಒಂದು ಚಿಕ್ಕ ಮನೆ ಕಟ್ಟಿದ್ದಾನೆ ಅದು ಗೃಹಪ್ರವೇಶ ಆಗಿಲ್ಲ. ಧೈರ್ಯವಂತ ಯುವಕ ಏಕೆ ಆತ್ಮಹತ್ಯೆ ಮಾಡಿಕೊಂಡ ಅಂತಾ ಹೋರಾಟ ನಡೆಯುತ್ತಿದೆ. ಅವರಿಗೆ ನ್ಯಾಯ ಒದಗಿಸಿ ಕೊಡುತ್ತೇವೆ ಅಂತಾ ಮಾತು ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ.

ಈಶ್ವರಪ್ಪ ಬಂಧನ ಯಾಕೆ ಎಂದ ಎಚ್‌ಡಿಕೆ ವಿರುದ್ಧ ಸಿದ್ದರಾಮಯ್ಯ ಕೆಂಡಾಮಂಡಲ

ನಮ್ಮ ಹೋರಾಟ ಮುಂದುವರಿದಿದೆ, ಇಲ್ಲಿಗೆ ನಿಂತಿಲ್ಲ. ಪೊಲೀಸ್ ಅಧಿಕಾರಿಗಳು, ಕೆಲವು ಮಂತ್ರಿಗಳ ಹೇಳಿಕೆ ಗಮನಿಸಿದ್ದೀರಿ‌.ಸಂತೋಷ್ ಗೆ ಏನು ಅನ್ಯಾಯ ಆಗಿದೆ, ರಾಜ್ಯದಲ್ಲಿ ಏನಾಗ್ತಿದೆ. ನಿರಾಣಿ ಸಾಹೇಬ್ರು, ಕಾರಜೋಳ ಸಾಹೇಬ್ರು, ಮಾಜಿ ಮಂತ್ರಿ ಹೇಳಿದ್ದಾರೆ‌.  ಇಬ್ಬರು ಮಂತ್ರಿಗಳು ಮಾಡಿದ ಕೆಲಸಕ್ಕೆ ಬಿಲ್ ಕೊಡಿಸಬೇಕು ಎಂದಿದ್ದಾರೆ. ಸಂತೋಷ ಕುಟುಂಬಕ್ಕೆ ಪರಿಹಾರ ಕೊಡಿಸೋದಾಗಿ ಹೇಳಿದ್ದಾರೆ ಅದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.ಕಾಂಗ್ರೆಸ್‌ ಪಕ್ಷದ ಪರವಾಗಿ 11 ಲಕ್ಷ ರೂಪಾಯಿ ಪರಿಹಾರ ನೀಡಿದ್ದೇವೆ. ಪ್ರಕಾಶ್ ಹುಕ್ಕೇರಿ ರೈತರು ತಮ್ಮ ಸ್ವಂತ ದುಡಿದ ಐದು ಲಕ್ಷ ಹಣ ಕೊಟ್ಟಿದ್ದಾರೆ. ನಮ್ಮ ಹೋರಾಟ ಅವರಿಗೆ ಏನು ಹಣ ಬರಬೇಕು ಅದನ್ನ ಕೊಡಬೇಕು. ಗೋಕಾಕ್‌ನಲ್ಲಿ ನಿನ್ನೆ ಗುತ್ತಿಗೆದಾರರು ಸಹ ಹೇಳಿದ್ದಾರೆ. ನೀವು ಸ್ವಾಭಿಮಾನಕ್ಕೆ ಅವರ ವೈಯಕ್ತಿಕ ಹೆಸರು ಹಾಳು ಮಾಡಲು ಏನು ಉಳಿದುಕೊಂಡಿಲ್ಲ‌. ಅವನು ಮಾಜಿ ಕಾಂಗ್ರೆಸ್, ಫೋರ್ಜರಿ ಸಹಿ ಅದು ಇದು ಹೇಳಬಾರದ್ದನ್ನ ಹೇಳ್ತಿದ್ದಾರೆ ಎಂದು ಡಿಕೆಶಿ ಹೇಳಿದ್ದಾರೆ.

ಕೆಲಸ ಮಾಡಿದಾನೋ ಇಲ್ವೋ, ಇಲ್ಲಿ ಮನುಷ್ಯತ್ವ ಮಾನವೀಯತೆ ಮುಖ್ಯ. ಕೆಲಸ ಮಾಡಿರದಿದ್ದರೆ ಹಣ ಕೇಳೋಕೆ ಹೋಗ್ತಿರಲಿಲ್ಲ. ಪ್ರಧಾನಿ ಮೋದಿಗೆ ಅರ್ಜಿ ಕೊಟ್ಟು, ಕೇಂದ್ರ ಸಚಿವ ಗಿರಿರಾಜ ಸಿಂಗ್ ಭೇಟಿಯಾಗಿ ರೆಪ್ರೆಸೆಂಟೇಷನ್ ಕೊಟ್ಟಿದ್ದಾರೆ. ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಸಂತೋಷ ಕೊಟ್ಟ ಪತ್ರಕ್ಕೆ ಅನುಮೋದನೆ ಕೊಟ್ಟಿದ್ದಾರೆ. ನಿಮ್ಮ ಮನವಿಯನ್ನು ಸಂಬಂಧಪಟ್ಟ ಕಚೇರಿಗೆ ಕೊಟ್ಟಿದ್ದಾಗಿ ಎಂಡೊರ್ಸ್‌ಮೆಂಟ್ ಕೊಟ್ಟಿದ್ದಾರೆ. ಮೊದಲು ಅವರು ಮಾಡಿದ ಕೆಲಸಕ್ಕೆ ಬಿಲ್ ಕೊಡಲಿ. ಏನು ದೂರು ಕೊಟ್ಟಿದ್ದಾರೆ ಆ ಪ್ರಕಾರ ನ್ಯಾಯ ಒದಗಿಸಲಿ. ಸಂತೋಷ ಪಾಟೀಲ್ ಕುಟುಂಬಕ್ಕೆ ಒಂದು ಕೋಟಿ ಪರಿಹಾರ, ಸಂತೋಷ ಪಾಟೀಲ್ ಪತ್ನಿಗೆ ಒಂದು ಸರ್ಕಾರಿ ನೌಕರಿ ಕೊಡಿಸಿ.ಮೊನ್ನೆ ಸತ್ತವನಿಗೆ ಸರ್ಕಾರದ ವತಿಯಿಂದ 20 ಲಕ್ಷ ರೂ. ಸರ್ಕಾರದಿಂದ ಪರಿಹಾರ ಕೊಟ್ಟಿಲ್ವಾ? ಭ್ರಷ್ಟಾಚಾರ ನಿರ್ಮೂಲನೆಗೆ, ಅದರ ವಿರುದ್ಧ ಹೋರಾಟಕ್ಕೆ, ರಾಜ್ಯಕ್ಕೆ ದೇಶಕ್ಕೆ ಸಂದೇಶ ನೀಡಲು ನಮ್ಮ ಯುವಕ ಪ್ರಾಣ ಬಿಟ್ಟಿದ್ದಾನೆ‌. ಇದರಿಂದ ಎಲ್ಲೆಲ್ಲೋ ಕವಲು ಹೋಗ್ತಾ ಇದೆ, ಹುಬ್ಬಳ್ಳಿಯ ಕಂಪನಿಯ ಆರ್ಟಿಕಲ್, ಮಠದ ಆರ್ಟಿಕಲ್ ನೋಡಿದ್ದೇನೆ. ಈಗ ಬೇರೆ ಬೇರೆಯದ್ದು ಚರ್ಚೆ ಮಾಡೋಕೆ ನಾನು ಹೋಗೋದಿಲ್ಲ. ಎಲ್ಲಾ ಪಂಚಾಯತಿಗಳಲ್ಲಿ ಏನ್ ನಡೀತಿದೆ ಅದು ಮುಕ್ತಿಯಾಗಬೇಕು.ನ್ಯಾಯ ಕೊಡಿಸಬೇಕು ಎಂದು ನಾವು ಬಂದಿದ್ದೇವೆ' ಎಂದು ಹೇಳಿದ್ರು.

ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣ: ವಾಟ್ಸಪ್‌‌ ಮೆಸೇಜ್ ಬಗ್ಗೆ ಗೆಳೆಯರಿಗೇ ಅನುಮಾನ!

ಗೋಕಾಕ್ ಸಾಹುಕಾರ್ ಹೇಳಿಕೆಗೆ ಡಿಕೆಶಿ ವ್ಯಂಗ್ಯ
ತಮ್ಮ ವಿರುದ್ಧದ ಸಿಡಿ ಷಡ್ಯಂತ್ರ ಹಾಗೂ ಈಶ್ವರಪ್ಪ ವಿರುದ್ಧ ಷಡ್ಯಂತ್ರ ಹಿಂದೆ ಮಹಾನಾಯಕ ಇದ್ದಾನೆ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆಗೆ ಡಿ.ಕೆ‌.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ. ಈ ಕುರಿತು ಮಾತನಾಡಿದ ಡಿ.ಕೆ.ಶಿವಕುಮಾರ್, 'ದಾಖಲೆ ಬಿಡುಗಡೆ ಮಾಡೋದಾದ್ರೆ ಲೇಟ್ ಮಾಡಬಾರದಲ್ಲ ಅದಕ್ಕೆ ಮುಹೂರ್ತ ಏಕೆ ಬೇಕು ಟೈಮ್ ಏಕೆ ಬೇಕು? ಅವರಿಗೆ ನಾನು ಅಭಿನಂದಿಸುತ್ತೇನೆ,ಜನಕ್ಮೆ ತಿಳಿದುಕೊಳ್ಳೋಕೆ ಮಾಡಬೇಕು. ಬಹಳ ಪ್ರಜ್ಞಾವಂತರು ಇದ್ದಾರೆ, ಅನುಭವಸ್ಥರು ಇದ್ದಾರೆ. ಅವರ ಕಾಲದಲ್ಲೇ ಕೆಲಸ ಪ್ರಾರಂಭ ಆಗಿರೋದು. ಅವರು ಮಂತ್ರಿಯಾಗಿದ್ದಾಗ ಈ ಕೆಲಸ ಪ್ರಾರಂಭ ಮಾಡಿದ್ದು ಅನ್ನೋದಕ್ಕೆ ದಾಖಲೆ, ಫೋಟೋ ಇದೆ.‌ಅವರು ಭೂಮಿ ಪೂಜೆ ಮಾಡಿರುವ ಫೋಟೋಗಳು ಸಹ ಇವೆ ಎಂದು ಡಿಕೆಶಿ ಹೇಳಿದ್ದಾರೆ.

ಅವರಿಗೆ ಅಭಿನಂದನೆ ಸಲ್ಲಿಸಿರುವ ಫೋಟೋ ಇದೆ. ಬಹುಶಃ ಏನಿದೆ ಪಾಪ ಹೇಳಲಿ, ಪಾಪ ಅವರು ಮುಗ್ಧರಿದ್ದಾರೆ. ಎಂತಂತಹ ವಿಚಾರಗಳನ್ನೇ ಜನರ ಮುಂದೆ ಇಟ್ಟಿದ್ದಾರೆ, ಬಿಚ್ಚಿ ತೋರಿಸಿದ್ದಾರೆ. ಇದನ್ನು ಎಲ್ಲಾ ದಾಖಲೆಗಳನ್ನು ಬಿಚ್ಚಿ ತೋರಿಸಲಿ.ಅವರು ಜಿಲ್ಲಾ ಮಂತ್ರಿ ಇದ್ದಾಗ ಕೆಲಸ ಮಾಡಿದ್ದು ಅಂತಾ ಎಲ್ಲಾ ದಾಖಲೆ ಇತ್ತು ನಾವ್ಯಾಕೆ ಮಾತಾಡಿಲ್ಲ. ತನಿಖೆ ಆಗಲಿ ಅಂತಾ, ನಾನು ಹೇಳಿದ್ರೆ ರಾಜಕೀಯ ವಿರೋಧಿ ಅಂತಾರೆ, ನೀವು ಹೇಳಿದರೆ ಮಾಧ್ಯಮ ವಿರೋಧಿ ಅಂತಾ ಹೇಳ್ತಾರೆ. ಎಲ್ಲಾ ದಾಖಲೆಗಳಿವೆ ತನಿಖೆ ಆಗಲಿ. ಹಿಂಡಲಗಾ ಗ್ರಾಮ ಪಂಚಾಯತಿ ಪಿಡಿಒ, ಅಧ್ಯಕ್ಷರಿಗೆ ಗೊತ್ತಿದೆ, ಜಿ.ಪಂ.ಸಿಇಒಗೆ ಗೊತ್ತಿದೆ. ನಿನ್ನೆ ಗೋಕಾಕ್‌ನಲ್ಲಿ ಗುತ್ತಿಗೆದಾರರು ಎಲ್ಲಾ ಮೀಟಿಂಗ್ ಮಾಡಿ ಹೇಳಿದ್ದಾರೆ' ಎಂದು ತಿಳಿಸಿದರು‌. ಇನ್ನು ಏನೇ ಘಟನೆ ನಡೆದರೂ ಡಿಕೆಶಿಯನ್ನು ಎಳೆದು ಏಕೆ ತರ್ತಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ, 'ನಮ್ಮನ್ನು ನೋಡಿದ ತಕ್ಷಣ ಖುಷಿ ಇರುತ್ತೇರಿ, ನೆಮ್ಮದಿಗೆ ಖುಷಿ ಇರ್ತದೆ. ನನ್ನ ಹೆಸರು ಕೇಳಿದ ತಕ್ಷಣ ಕೆಲವು ಜನರಿಗೆ ಸ್ಟ್ರೆಂತ್ ಬರ್ತದೆ. ಈಗ ರಾಮ, ಆಂಜನೇಯನ ಹೆಸರು ಹೇಳಿದ ತಕ್ಷಣ ಕೆಲವರಿಗೆ ಸ್ಟ್ರೆಂತ್ ಬರ್ತದೆ‌. ಹಾಗೇ ಶಿವಕುಮಾರ್ ಹೇಳಿದ ತಕ್ಷಣ ಕೆಲವರು ಗಡಸು ಆಗ್ತಾರೆ' ಅಂತಾ ವ್ಯಂಗ್ಯವಾಡಿದರು.

'ಹುಬ್ಬಳ್ಳಿ ಗಲಾಟೆಗೂ ಕಾಂಗ್ರೆಸ್‌ಗೂ ಸಂಬಂಧ ಇಲ್ಲ'
ಇನ್ನು ಹಳೇ ಹುಬ್ಬಳ್ಳಿಯ ಗಲಾಟೆಯಲ್ಲಿ ಕಾಂಗ್ರೆಸ್ ಪಿತೂರಿ ಎಂದು ಬಿಜೆಪಿ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, 'ಹುಬ್ಬಳ್ಳಿ ಗಲಾಟೆಗೂ ಕಾಂಗ್ರೆಸ್ ಪಕ್ಷಕ್ಕೂ ಸಂಭದವಿಲ್ಲ. ನಮ್ಮ ನಾಯಕರುಗಳು ಹೋಗಿ ಪ್ರತಿಭಟನಾಕಾರರ ಬಳಿ ರಿಕ್ವೆಸ್ಟ್ ಮಾಡಿಕೊಂಡಿದ್ದಾರೆ. ಪೊಲೀಸರು ಕೂಡ ಬೇಡ್ರಪ್ಪ ಎಂದು ಕೈ ಮುಗಿದು ರಿಕ್ವೆಸ್ಟ್ ಮಾಡಿಕೊಂಡರು. ಅವರಿಗೂ ಕೂಡ ಕೈ ಕಾಲು ಎಲ್ಲ ಮುರಿದಿದೆ.‌ ನಮ್ಮ ಪೊಲೀಸ್ ಅಧಿಕಾರಿಗಳು ಒಳ್ಳೆಯ ಕೆಲಸ ಮಾಡಿದ್ದಾರೆ. ರಾಜಕಾರಣ ಇದರಲ್ಲಿ ಮಾಡುವುದು ಅಲ್ಲಾ. ಅದನ್ನ ತಡೆಯಲು ಪ್ರಯತ್ನ ಮಾಡಿದ್ದಾರೆ ನಿಜಕ್ಕೂ ಅವರಿಗೆ ಸೆಲ್ಯೂಟ್ ಮಾಡಬೇಕು' ಎಂದು ತಿಳಿಸಿದರು‌.

ವರದಿ: ಮಹಾಂತೇಶ ಕುರಬೇಟ್
ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ
 

Latest Videos
Follow Us:
Download App:
  • android
  • ios