ಅಥಣಿ(ಅ.27): ಮಹತ್ವದ ಬೆಳವಣಿಗೆಯೊಂದರಲ್ಲಿ ಅತ್ತ ಸುಪ್ರೀಂನಲ್ಲಿ ಅನರ್ಹರ ವಿಚಾರಣೆ ನಡೆಯುತ್ತಿದ್ದರೆ, ಇತ್ತ ಕಾಗವಾಡ, ಅಥಣಿ ಮತಕ್ಷೇತ್ರಗಳಿಗೆ ಅಭ್ಯರ್ಥಿಗಳ ಪೈಪೋಟಿ ಹೆಚ್ಚುತ್ತಿದೆ.

ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸ್ಥಳೀಯ ಮುಖಂಡರ ಸಭೆಯಲ್ಲಿ ಹಲವಾರು ಮುಖಂಡರು ತಮ್ಮ ಅಭ್ಯರ್ಥಿತನವನ್ನು ಒತ್ತಿ ಹೇಳಿದ್ದಾರೆ. ಆದರೆ, ಎಲ್ಲ ನಾಯಕರ ಮನವಿಯನ್ನು ಸ್ವೀಕರಿಸಿರುವ ನಾಯಕರು, ಯಾರು ಅಭ್ಯರ್ಥಿಯಾಗಬೇಕು ಎಂದು ಇದುವರೆಗೆ ಘೋಷಣೆ ಮಾಡಿಲ್ಲ. ಇದರ ಹಿಂದೆ ಕೆಲವು ತಂತ್ರಗಾರಿಕೆಯೂ ಇದೆ ಎಂದು ಹೇಳಲಾಗುತ್ತಿದೆ. ಅಲ್ಲದೆ, 20ಕ್ಕೂ ಅಧಿಕ ಟಿಕೆಟ್‌ ಆಶಾವಾದಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಇವರೊಟ್ಟಿಗೆ ಪ್ರತ್ಯೇಕವಾಗಿ ಸಭೆ ನಡೆಸಿದ ಕಾಂಗ್ರೆಸ್‌ ಮುಖಂಡರು ಅವರಿಂದ ಅಭಿಪ್ರಾಯ ಸಂಗ್ರಹಿಸಿದರು ಎಂದು ಮೂಲಗಳು ಖಚಿತಪಡಿಸಿವೆ.

ಎರಡು ತಂತ್ರಗಾರಿಕೆಗಳ ಬಗ್ಗೆ ಚರ್ಚೆ:

ಈಗಾಗಲೇ ಕಾಗವಾಡ, ಅಥಣಿ, ಗೋಕಾಕ ಕ್ಷೇತ್ರಗಳು ಸೇರಿದಂತೆ ಒಟ್ಟು 15 ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ಘೋಷಣೆಯಾಗಿದೆ. ಬೆಳಗಾವಿ ಜಿಲ್ಲೆಯ ಕಾಗವಾಡ ಮತ್ತು ಅಥಣಿ ಕ್ಷೇತ್ರಗಳಲ್ಲಿ ಶತಾಯಗತಾಯ ಗೆಲವು ಸಾಧಿಸಲೇಬೇಕು ಎಂಬ ನಿರ್ಧಾರಕ್ಕೆ ಬಂದಿರುವ ಕಾಂಗ್ರೆಸ್‌ ಹೈಕಮಾಂಡ್‌, ನಾನಾ ರೀತಿಯ ತಂತ್ರಗಾರಿಕೆಯನ್ನು ಬಳಸಲು ಮುಂದಾಗಿದೆ. ಇದಕ್ಕಾಗಿ ವಿಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಾನಾ ರೀತಿಯ ತಂತ್ರಗಾರಿಕೆಗಳನ್ನು ಹೆಣೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ಏನೇನು ತಂತ್ರಗಾರಿಕೆ ಹೆಣೆಯಲಾಗಿದೆ?

ಕಾಗವಾಡ ಮತ್ತು ಅಥಣಿ ಮತಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಬೇಕೆಂಬ ಅಭ್ಯರ್ಥಿಗಳು ಹೆಚ್ಚಾಗಿದ್ದಾರೆ. ಆದರೆ, ಈ ಪೈಕಿ ಕಾಗವಾಡ ಕ್ಷೇತ್ರದ ಉಪಕದನವು ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿರುವ ಅನರ್ಹರ ವಿಚಾರಣೆಯ ತೀರ್ಪಿನ ಮೇಲೆ ಅವಲಂಬನೆಯಾಗಿದೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್‌ ಎ ಮತ್ತು ಬಿ ಪ್ಲಾನ್‌ಗಳನ್ನು ಹೆಣೆದಿದೆ.

ಎ ಪ್ಲಾನ್‌ ಪ್ರಕಾರ ಕಾನೂನಿನ ಅಡೆತಡೆಗಳಿಂದಾಗಿ ಹಾಗೂ ಸುಪ್ರೀಂ ಕೋರ್ಟ್‌ ತೀರ್ಮಾನ ಸ್ಪೀಕರ್‌ಗೆ ತದ್ವಿರುದ್ಧವಾಗಿ ಬಂದರೆ ಕಾಗವಾಡ ಕ್ಷೇತ್ರದಲ್ಲಿ ಚುನಾವಣೆ ನಡೆಯುವುದು ಅನುಮಾನ. ಹೀಗಾಗಿ ಕಾಗವಾಡ ರದ್ದಾದರೆ ಅಥಣಿಗೆ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಇಲ್ಲವಾದಲ್ಲಿ ಬಿಜೆಪಿ ಮಾಜಿ ಶಾಸಕ ರಾಜು ಕಾಗೆ ಅವರನ್ನು ತಮ್ಮತ್ತ ಸೆಳೆದು ಕಣಕ್ಕೆ ಇಳಿಸುವುದು ಕಾಂಗ್ರೆಸ್‌ನ ತಂತ್ರ. ಒಂದು ವೇಳೆ ಕಾಗವಾಡಕ್ಕೆ ಚುನಾವಣೆ ನಡೆದರೆ ಪ್ರಕಾಶ ಹುಕ್ಕೇರಿಯನ್ನೇ ಕಣಕ್ಕಿಳಿಸಿ, ಅಥಣಿಗೆ ರಾಜು ಕಾಗೆ ಅವರನ್ನು ತರುವ ಚಿಂತನೆಯೂ ಸಭೆಯಲ್ಲಿ ನಡೆಯಿತು ಎಂದು ಹೇಳಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಒಂದು ವೇಳೆ ಎ ಪ್ಲಾನ್‌ ಏನಾದರೂ ಕೈಕೊಟ್ಟಲ್ಲಿ, ಬಿ ಪ್ಲಾನ್‌ ಪ್ರಕಾರ ಸ್ಥಳೀಯರಿಗೆ ಟಿಕೆಟ್‌ ಕೊಡುವ ಚಿಂತನೆ ಹೈಕಮಾಂಡ್‌ನದ್ದು. ಈ ಪೈಕಿ ಅಥಣಿ ಕ್ಷೇತ್ರಕ್ಕೆ ಎಸ್‌.ಕೆ.ಬುಟಾಳೆ, ಬಸು ಬುಟಾಳೆ, ಗಜಾನನ ಮಂಗಸೂಳಿ, ಸುರೇಶ ಪಾಟೀಲ, ಮಾಜಿ ಶಾಸಕ ಶಹಾಜಾನ ಡೊಂಗರಗಾಂವ, ಸುನೀಲ ಸಂಕ, ಅನೀಲ ಸುಣದೋಳಿ ನಡುವೆ ಪೈಪೋಟಿ ಇದೆ. ಒಟ್ಟು 20 ಜನ ಟಿಕೆಟ್‌ ಆಶಾವಾದಿಗಳು ಇದ್ದಾರೆ. ಅದೇ ರೀತಿ ಕಾಗವಾಡ ಕ್ಷೇತ್ರಕ್ಕೆ ದಿಗ್ವಿಜಯ ಪವಾರದೇಸಾಯಿ, ರವಿ ಗಾಣಿಗೇರ, ಚಂದ್ರಕಾಂತ ಇಮ್ಮಡಿ. ಪ್ರಮುಖರು ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ. ಆದರೆ, ಇವೆಲ್ಲ ಯೋಜನೆಗಳು ಸುಪ್ರೀಂ ಕೋರ್ಟ್‌ ನೀಡುವ ತೀರ್ಮಾನದ ಮೇಲೆಯೇ ಅವಲಂಬಿತವಾಗಿದೆ.

ಪಕ್ಷದ ಸಂಘಟನೆ ಮತ್ತು ಚುನಾವಣೆಯ ಗೆಲವಿಗಾಗಿ ಪೂರ್ವಯೋಜನೆ ರೂಪಿಸುವುದು ಮುಖ್ಯವಾಗಿತ್ತು. ಅದಕ್ಕಾಗಿ ಕಾಂಗ್ರೆಸ್‌ ಮುಖಂಡರು ಸಭೆ ಆಯೋಜಿಸಿದ್ದರು. ಸೋಮವಾರ ಕೇವಲ ಅಥಣಿ ಕ್ಷೇತ್ರದ ಸಭೆ ಮಾತ್ರ ಜರುಗಿದೆ. ಎಲ್ಲ ಟಿಕೆಟ್‌ ಆಕಾಂಕ್ಷಿಗಳು ಸಭೆಯಲ್ಲಿ ಪಾಲ್ಗೊಂಡಿದ್ದೆವು. ಹೈಕಮಾಂಡ್‌ ಯಾರನ್ನು ಅಭ್ಯರ್ಥಿ ಮಾಡಿದರೂ ಒಗ್ಗಟ್ಟಿನಿಂದ ಅಭ್ಯರ್ಥಿ ಗಲ್ಲಿಸುತ್ತೇವೆ ಎಂದು ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಅನೀಲ ಸುಣದೊಳಿ ಅವರು ಹೇಳಿದ್ದಾರೆ.