ಚನ್ನಮ್ಮನ ಕಿತ್ತೂರು[ನ.13]: ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಪಟ್ಟಣದ ಹೃದಯಭಾಗದ ಅರಳಿಕಟ್ಟಿ ಪೊಲೀಸ್‌ ಠಾಣೆಯ ಮುಂಭಾಗದಲ್ಲಿ ಹಾಡಹಗಲೇ ಮಕ್ಕಳಿಬ್ಬರು ತಮ್ಮ ತಂದೆಯನ್ನೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಮಂಗಳವಾರ ನಡೆದಿದೆ. 

ಬೈಲಹೊಂಗಲ ತಾಲೂಕಿನ ಬೆಳವಡಿಯ ಫಕ್ಕೀರಪ್ಪ ಗಂಗಪ್ಪ ಲಚಮಣ್ಣವರ(58) ಕೊಲೆಯಾದ ವ್ಯಕ್ತಿ. ಮಗ ಶಂಕ್ರ ಪ್ಪಲಚಮಣ್ಣವರ (32) ಹಾಗೂ ಸಹೋದರನ ಮಗ ಮಂಜುನಾಥ ಲಚಮಣ್ಣವರ (30) ಕೊಲೆಗೈದು ಬಂಧಿತರಾದವರು.

ಫಕ್ಕೀರಪ್ಪನನ್ನು ಸ್ಥಳದಲ್ಲಿದ್ದ ಸಾರ್ವಜನಿಕರ ಸಹಾಯದಿಂದ ಕಿತ್ತೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತಾದರೂ ಹೆಚ್ಚಿನ ಚಿಕಿತ್ಸೆ ಅವಶ್ಯವಿರುವ ಕಾರಣ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ತಡರಾತ್ರಿ ಆಸ್ಪತ್ರೆಯಲ್ಲೇ ಫಕ್ಕೀರಪ್ಪ ಮೃತಪಟ್ಟಿದ್ದಾರೆ. 

ಏನಿದು ಘಟನೆ ಹಿನ್ನೆಲೆ? 

ಮೃತ ಫಕ್ಕೀರಪ್ಪದನದ ವ್ಯಾಪಾರಿಯಾಗಿದ್ದ. ಈ ನಿಟ್ಟಿನಲ್ಲಿ ಈತ ಬೆಳವಡಿಯಿಂದ ಬಾಗೇವಾಡಿಗೆ ತೆರಳಿ ಅಲ್ಲಿಂದ ಕಿತ್ತೂರಿಗೆ ಆಗಮಿಸಿದ್ದ. ಆಗ ಈತನ ಮಗ ಶಂಕ್ರಪ್ಪ ಲಚಮಣ್ಣವರ ಹಾಗೂ ಸಹೋದರನ ಮಗ ಮಂಜುನಾಥ ಲಚಮಣ್ಣವರ ತಂದೆ ಫಕ್ಕೀರಪ್ಪನಿಗೆ ಫೋನ್ ಮಾಡಿ ಎಲ್ಲಿದ್ದಿಯಾ ಎಂದು ವಿಚಾರಿಸಿದ್ದಾರೆ. ಆಗ ಬಾಗೇವಾಡಿಯಿಂದ ಕಿತ್ತೂರು ಪಟ್ಟಣಕ್ಕೆ ಬಂದಿರುವ ಬಗ್ಗೆ ಈ ಇಬ್ಬರಿಗೂ ಮಾಹಿತಿ ನೀಡಿದ್ದಾನೆ. ಆಗ ಕಿತ್ತೂರಿಗೆ ಆಗಮಿಸಿದ ಈ ಇಬ್ಬರೂ ಆರೋಪಿಗಳು ಕಬ್ಬು ಕಡಿಯಲು ಬಳಸುವ ಮಚ್ಚನ್ನು ಕೈಯಲ್ಲಿ ಹಿಡಿದು ಪಟ್ಟಣಕ್ಕೆ ಆಗಮಿಸಿ ಹಾಡಹಗಲೇ ಪೊಲೀಸ್ ಠಾಣೆಯ ಮುಂಭಾಗದಲ್ಲಿಯೇ ಏಕಾಏಕಿ ಫಕ್ಕೀರಪ್ಪನ ಮೇಲೆ ಹಲ್ಲೆ ಮಾಡಿದ್ದಾರೆ. ಆಗ ಫಕ್ಕೀರಪ್ಪನ ತಲೆಗೆ ಹಾಗೂ ಮುಖಕ್ಕೆ ಮಚ್ಚಿನ ಹೊಡೆತ ಬೀಳುತ್ತಿದ್ದಂತೆ ಆತ ನೆಲಕಚ್ಚಿದ್ದಾನೆ. ಆಗ ಸ್ಥಳೀಯರು ಹಾಗೂ ಕಿತ್ತೂರು ಪೊಲೀಸರು ಬರುತ್ತಿರುವುದು ಗಮನಿಸಿದ ಆರೋಪಿಗಳು ಕೈಯಲ್ಲಿದ್ದ ಒಂದು ಮಚ್ಚನ್ನು ಅಲ್ಲಿಯೇ ಬಿಟ್ಟು ಇಬ್ಬರೂ ಓಡಿ ಹೊಗಲು ಯತ್ನಿಸಿದ್ದಾರೆ. ಆದರೆ ಕಿತ್ತೂರು ಪೊಲೀಸ್ ಠಾಣೆಯ ಸಿಬ್ಬಂದಿ ಬೆನ್ನಟ್ಟಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇತ್ತ ಗಾಯಾಳುವನ್ನು ಕಿಮ್ಸ್‌ ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದರು. ಘಟನಾ ಸ್ಥಳಕ್ಕೆ ದೌಡಾಯಿಸಿದ ಸಿಪಿಐ ಶ್ರೀಕಾಂತ ತೋಟಗಿ, ಪಿಎಸೈ ಕುಮಾರ ಹಿತ್ತಲಮನಿ ಪರಿಶೀಲನೆ ನಡೆಸಿದರು. ಹಾಗೂ ಬೈಲಹೊಂಗಲ ಎಎಸ್‌ಪಿ ಪ್ರದೀ ಪ ಗುಂಠಿ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಸಂಬಂಧ ದೂರು ದಾಖಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್.ಎಲ್. ಅರಸಿದ್ಧಿ ಅವರು, ಆಸ್ತಿ ವಿವಾದಕ್ಕೆ ನಡೆದ ಮಾರಣಾಂತಿಕ ಹಲ್ಲೆ ಎಂಬುದರ ಬಗ್ಗೆ ಪ್ರಥಮ ಹಂತದ ತನಿಖೆಯಲ್ಲಿ ಕಂಡು ಬಂದಿದೆ. ಈಗಾಗಲೇ ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಇನ್ನೂ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗುವುದು. ಘಟನೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಫಕ್ಕಿರಪ್ಪ ಆಸ್ಪತ್ರೆಯಲ್ಲೇ  ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.