ಬಿರಿಯಾನಿ ಪ್ರಚಾರಕ್ಕೆ ಹಿಂದೂ ಶ್ರೀ ಫೋಟೋ: ಆಕ್ರೋಶ
- ಬೆಳಗಾವಿಯಲ್ಲಿರುವ ನಿಯಾಜ್ ಹೋಟೆಲ್.ನ ಎಡವಟ್ಟು
- ಹಿಂದೂ ಶ್ರೀಗಳಿರುವ ಫೋಟೊ ಬಳಸಿ ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು
- ಹಿಂದೂ ಸಂಘಟನೆಗಳ ಆಕ್ರೋಶ, ಎಚ್ಚರಿಕೆ, ಬೆಳಗಾವಿ ಡಿಸಿಪಿಗೆ ದೂರು
- ಬಾಗಿಲು ಬಂದ್ ಮಾಡಿದ ಹೋಟೆಲ್
ಬೆಳಗಾವಿ (ಆ.13): ಹಿಂದೂ ಧರ್ಮ ಗುರುಗಳಿಗೆ ಅವಮಾನ ಮಾಡುವ ರೀತಿಯಲ್ಲಿ ಹೋಟೆಲ್‌ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ಬಿರಿಯಾನಿ ಜಾಹೀರಾತು ಇದೀಗ ಹಿಂದೂಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಹೋಟೆಲ್ ಬೆಳಗಾವಿಯಲ್ಲಿರುವ ತನ್ನ ಎಲ್ಲ ಶಾಖೆಗಳನ್ನು ಬಂದ್ ಮಾಡಿದ್ದು, ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಬೆಳಗಾವಿ, ಬೆಂಗಳೂರು ಸೇರಿ ಹಲವೆಡೆ ಶಾಖೆ ಹೊಂದಿರುವ ನಿಯಾಜ್ ಹೋಟೆಲ್ ತನ್ನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಶ್ರೀಗಳೊಬ್ಬರ ಫೋಟೋ ಬಳಸಿಕೊಂಡು, ಗುರೂಜಿ ಆಫ್ಟರ್ ಟೇಸ್ಟಿಂಗ್ ನಿಯಾಜ್ (ನಿಯಾಜ್ ಹೋಟೆಲ್‌ನ ಅಡುಗೆಯ ರುಚಿ ಸವಿದ ನಂತರ ಗುರೂಜಿ...) ಬಿರಿಯಾನಿ ದೇನಾ ಹೋಗಾ (ಬಿರಿಯಾನಿ ಕೊಡಲೇಬೇಕು) ಎಂಬ ಪೋಸ್ಟರ್ ಅನ್ನು ಪೋಸ್ಟ್ ಮಾಡಿದೆ. ಇದು ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ಬೆಳಗಾವಿಯ ನೆಹರು ನಗರ, ಬಸ್ ನಿಲ್ದಾಣ ಹತ್ತಿರದಲ್ಲಿರುವ ನಿಯಾಜ್ ಹೋಟೆಲ್ ಶಾಖೆಗಳನ್ನು ಬಂದ್ ಮಾಡಲಾಗಿದೆ. ಜತೆಗೆ ಹೊಟೇಲ್ ಎದುರು ಬಿಗಿ ಪೊಲೀಸ್ ಬಂದೋಬಸ್‌್ತ ಕಲ್ಪಿಸಲಾಗಿದೆ.
ಬಾಡಿಗಾರ್ಡ್‌ಗೆ ಬಿರಿಯಾನಿ ಮಾಡಿಕೊಟ್ಟು ಬಹುದಿನದ ಆಸೆ ಈಡೇರಿಸಿದ ಕಿಚ್ಚ
ಆಕ್ರೋಶ: ನಿಯಾಜ್ ಹೋಟೆಲ್‌ನ ಯಡವಟ್ಟಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ನಿಯಾಜ್ ಹೋಟೆಲ್ ಅನ್ನು ಹಿಂದೂಗಳು ಬಹಿಷ್ಕರಿಸುತ್ತೇವೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ. ಜತೆಗೆ, ಹೋಟೆಲ್ ತನ್ನ ಕೃತ್ಯಕ್ಕೆ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದೂ ಹಿಂದೂಪರ ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ. ಈ ಸಂಬಂಧ ಡಿಸಿಪಿ ಡಾ.ವಿಕ್ರಮ ಅಮಟೆ ಅವರಿಗೆ ದೂರನ್ನೂ ನೀಡಿದ್ದಾರೆ.