ಬೆಳಗಾವಿ[ಅ.12]: ಸರಿಯಾಗಿ ಸರ್ವಿಸ್‌ ಕೊಡಲಿಲ್ಲವೆಂದು ಖಾಸಗಿ ಹೋಟೆಲ್‌ ಕೆಲಸಗಾರನ ಮೇಲೆ ಬೆಳಗಾವಿ ನಗರದ ಮಾಜಿ ನಗರ ಸೇವಕಿಯ ಪುತ್ರ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಶುಕ್ರವಾರ ಬೆಳಗಾವಿಯ ನೆಹರು ನಗರದಲ್ಲಿ ನಡೆದಿದೆ. ಆದರೆ, ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ದೂರು ದಾಖಲಾಗಿಲ್ಲ.

ಮಾಜಿ ನಗರ ಸೇವಕಿ ಜಯಶ್ರೀ ಮಾಳಗಿ ಅವರ ಪುತ್ರ ಅಶೋಕ ಕುಮಾರ ಮಾಳಗಿ ಹಲ್ಲೆ ಮಾಡಿದವರು ಎನ್ನಲಾಗಿದೆ. ನೆಹರು ನಗರದಲ್ಲಿರುವ ಹೋಟೆಲ್‌ನಲ್ಲಿ ಊಟ ಮಾಡಲು ಹೋಗಿದ್ದ ವೇಳೆ ಕುಡಿಯಲು ನೀರು ಕೊಡುವುದಕ್ಕೆ ತಡವಾಗಿದ್ದರಿಂದ ಆಕ್ಷೇಪ ವ್ಯಕ್ತಪಡಿಸಿದ ಅಶೋಕ ಕುಮಾರ ಮಾಳಗಿ ಮತ್ತು ಆತನ ಸ್ನೇಹಿತರು ಸೇರಿಕೊಂಡು ಹೋಟೆಲ್‌ ಕೆಲಸಗಾರನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹೋಟೆಲ್‌ ಕೆಲಸಗಾರನನ್ನು ಅಂಗಿ ಬಿಚ್ಚಿಸಿ ಸಾರ್ವಜನಿಕವಾಗಿ ಕಾಲಿಗೆ ಬಿಳುವಂತೆ ತಿಳಿಸಿದ್ದಾನೆ. ತಾನು ಮಾಜಿ ನಗರ ಸೇವಕಿ ಪುತ್ರನಿದ್ದು, ಹೋಟೆಲ್‌ ಮುಚ್ಚಿಸುವುದಾಗಿ ಬೆದರಿಕೆಯೊಡ್ಡಿದ್ದಾನೆ. ನಂತರ ಹೋಟೆಲ್‌ ಸಿಬ್ಬಂದಿ ಸಾರ್ವಜನಿಕವಾಗಿ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾನೆ. ಈ ಬಗ್ಗೆ ನಗರದ ಎಪಿಎಂಸಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲು ಹೋದರೆ ಅಲ್ಲಿನ ಪೊಲೀಸರು ದೂರು ದಾಖಲಿಸಿಕೊಳ್ಳದೇ ವಾಪಸ್‌ ಕಳುಹಿಸಿದ್ದಾರೆ ಎನ್ನಲಾಗಿದೆ.