Asianet Suvarna News Asianet Suvarna News

ಕಾಗವಾಡದ ದುರ್ಗಾದೇವಿ ಭಕ್ತರ ಮೇಲೆ ಹರಿದ ಲಾರಿ: ಮೂವರ ಸಾವು

ದುರ್ಗಾ ದೇವಿಯ ವಿಸರ್ಜನೆ ಮೆರವಣಿಗೆ ವೇಳೆ ಹಿಂದಿನಿಂದ ಬಂದ ಸಿಮೆಂಟ್‌ ತುಂಬಿದ ಲಾರಿಯೊಂದು ಭಕ್ತರ ಮೇಲೆ ಹರಿದ ಪರಿಣಾಮ ಸ್ಥಳದಲ್ಲಿಯೇ ಮೂವರ ಸಾವು| ಗಾಯಳುಗಳನ್ನು ಮಹಾರಾಷ್ಟ್ರದ ಮಿರಜದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ|  ದುರ್ಘಟನೆ ಸಂಭವಿಸುತ್ತಿದ್ದಂತೆ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ|

Accident at Kagawada in Belagavi District: Three Persons Dead
Author
Bengaluru, First Published Oct 11, 2019, 8:39 AM IST

ಕಾಗವಾಡ(ಅ.11): ದುರ್ಗಾ ದೇವಿಯ ವಿಸರ್ಜನೆ ಮೆರವಣಿಗೆ ವೇಳೆ ಹಿಂದಿನಿಂದ ಬಂದ ಸಿಮೆಂಟ್‌ ತುಂಬಿದ ಲಾರಿಯೊಂದು ಭಕ್ತರ ಮೇಲೆ ಹರಿದ ಪರಿಣಾಮ ಸ್ಥಳದಲ್ಲಿಯೇ ಮೂವರು ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ಪಟ್ಟಣದಲ್ಲಿ ಬುಧವಾರ ತಡರಾತ್ರಿ ನಡೆದಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮೃತರನ್ನು ಕಾಗವಾಡದ ನಿವಾಸಿ ಸಂಜೀವ ರಾವಸಾಹೇಬ ಪಾಟೀಲ(40), ಸಚಿನ ಕಲ್ಲಪ್ಪ ಪಾಟೀಲ (38) ಹಾಗೂ ನದಿ ಇಂಗಳಗಾಂವ ಗ್ರಾಮದ ಬಾಲಕ ಅಭಿಲಾಷ ಅಶೋಕ ಗುಳಪನ್ನವರ (2) ಎಂದು ಗುರುತಿಸಲಾಗಿದೆಸ. ರಾಜಶ್ರೀ ಪ್ರಕಾಶ ಪಾಟೀಲ (40), ಅಭಿಷೇಕ ಶಾಂತಿನಾಥ ಮಾಲಗಾಂವೆ (20) ಗಂಭೀರ ಗಾಯಗೊಂಡಿದ್ದು, ಅವರನ್ನು ಮಹಾರಾಷ್ಟ್ರದ ಮಿರಜದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ದುರ್ಘಟನೆ ಸಂಭವಿಸುತ್ತಿದ್ದಂತೆ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಕುರಿತು ಕಾಗವಾಡ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಗಿದ್ದೇನು?:

ಕಾಗವಾಡದಿಂದ 1 ಕಿಮೀ ಅಂತರದಲ್ಲಿರುವ ಗಣೇಶವಾಡಿ ರಸ್ತೆಯ ಬದಿಗೆ ತೋಟದ ಮನೆಗಳಲ್ಲಿ ವಾಸಿಸುವ ಭಕ್ತರು ಪ್ರತಿ ವರ್ಷದಂತೆ ನವರಾತ್ರಿ ಉತ್ಸವದ ಅಂಗವಾಗಿ ದುರ್ಗಾದೇವಿಯ ಮಂಡಳದವರು ದುರ್ಗಾದೇವಿ ಪ್ರತಿಷ್ಠಾಪಿಸಿದ್ದರು. ಕಳೆದ 9 ದಿನಗಳಿಂದ ದೇವಿಗೆ ಆರತಿ, ನೈವೇದ್ಯವನ್ನು ಏರ್ಪಡಿಸಿ ರಾತ್ರಿ ದಾಂಡಿಯಾ ನೃತ್ಯ ಮಾಡಿ ಸಂಭ್ರಮಿಸಿದ್ದರು. ಬುಧವಾರ (ಅ.9) ಭಕ್ತರಿಗೆ ಮಹಾಪ್ರಸಾದವನ್ನು ಏರ್ಪಡಿಸಿ ರಾತ್ರಿ 9 ಗಂಟೆಗೆ ಕಾಗವಾಡದಿಂದ ಗಣೇಶವಾಡಿ ಕೃಷ್ಣಾ ನದಿಯಲ್ಲಿ ದುರ್ಗಾದೇವಿಯ ವಿಸರ್ಜನೆ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಅದರಂತೆ ಟ್ರ್ಯಾಕ್ಟರ್‌ನಲ್ಲಿ ದೇವಿಯ ಮೂರ್ತಿಯನ್ನಿಟ್ಟು ಸಡಗರ, ಸಂಭ್ರಮದಿಂದ ನೃತ್ಯ ಮಾಡುತ್ತ ಮೆರವಣಿಗೆ ಮೂಲಕ ಹೋಗುತ್ತಿದ್ದಾಗ ಹಿಂಬದಿಯಿಂದ ವೇಗವಾಗಿ ಬಂದ ಸಿಮೆಂಟ್‌ ತುಂಬಿದ ಲಾರಿಯು ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲಿಯೇ ಮೂವರು ಮೃತಪಟ್ಟಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ನೀರು ಕುಡಿಯಲು ತೆರಳಿದ್ದರಿಂದ ಉಳಿದ ಜೀವಗಳು

ಆಕಸ್ಮಿಕವಾಗಿ ಎರಗಿದ ಅವಘಡದಿಂದ ಭಕ್ತರು ಭಯಭೀತರಾಗಿದ್ದರು. ಸಿಮೆಂಟ್‌ ತುಂಬಿದ ಲಾರಿಯು ಒಮ್ಮಿಂದೊಮ್ಮೆಲೆ ಅತಿ ವೇಗವಾಗಿ ದುರ್ಗಾದೇವಿ ಮೂರ್ತಿ ತೆಗೆದುಕೊಂಡು ಹೋಗುವ ಟ್ರ್ಯಾಕ್ಟರ್‌ ಮತ್ತು ಭಕ್ತರ ಮೇಲೆ ನುಗ್ಗುತ್ತ ಸುಮಾರು 15 ಅಡಿವರೆಗೆ ಎಳೆದುಕೊಂಡು ಹೋಗಿದೆ. ರಸ್ತೆ ತುಂಬೆಲ್ಲ ರಕ್ತ ಚೆಲ್ಲಾಪಿಲ್ಲಿಯಾಗಿತ್ತು. ಘಟನೆ ಸಂಭವಿಸುತ್ತಿದ್ದಂತೆ ಮೃತಪಟ್ಟ ಸಂಬಂಧಿಕರ ರೋದನ ಮುಗಿಲು ಮುಟ್ಟುವಂತಿತ್ತು. ಮೆರವಣಿಗೆಯಲ್ಲಿ ಕುಣಿದು ಸುಸ್ತಾದ ಕೆಲವರು ನೀರು ಕುಡಿಯಲು ರಸ್ತೆ ಬಳಿಯಿರುವ ಮನೆಗೆ ಹೋಗಿದ್ದರು. ಅದೃಷ್ಟವಶಾತ್‌ ಬಹಳಷ್ಟು ಜೀವಹಾನಿ ತಪ್ಪಿದೆ. ಈ ಎಲ್ಲ ಜನ ರಸ್ತೆಯಲ್ಲಿ ಇದ್ದಿದ್ದರೆ ಇನ್ನಷ್ಟು ಅನಾಹುತ ಸಂಭವಿಸುತ್ತಿತ್ತು. ಸುಮಾರು 40 ರಿಂದ 50 ರಷ್ಟು ಜನ ಮೃತಪಡುತ್ತಿದ್ದರು. ಅದರಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಜ್ಯೋತಿಭಾ ದರ್ಶನ ಪಡೆದ ಸೇಹಿತರಿಬ್ಬರ ಸಾವು

ಸಚಿನ ಪಾಟೀಲ ಹಾಗೂ ಸಂಜೀವ ಪಾಟೀಲ ಒಳ್ಳೆಯ ಸ್ನೇಹಿತರು. ಈ ಇಬ್ಬರು ಕೊಲ್ಹಾಪುರದ ಜ್ಯೋತಿಭಾ ಭಕ್ತರಾಗಿದ್ದರು. ಕಳೆದ 4 ದಿನಗಳ ಹಿಂದೆಯೇ ಜ್ಯೋತಿಭಾ ದೇವರ ದರ್ಶನ ಪಡೆದುಕೊಂಡು ಇಬ್ಬರು ಮಂದಿರದಲ್ಲಿ ಫೋಟೋವನ್ನು ಕೂಡ ತೆಗೆಸಿಕೊಂಡಿದ್ದರು. ಇವರಿಬ್ಬರು ಈ ದುರ್ಘಟನೆಯಲ್ಲಿ ಸಾವನ್ನಪ್ಪಿದ್ದು ಕಂಡು ಅನೇಕರು ಮರಗಿದರು.

ಎರಡು ವರ್ಷ ಮಗು ಸಾವು:

ತಾಯಿಯ ಜತೆಗೆ ಬೀಗರ ಮನೆಗೆ ಆಗಮಿಸಿದ್ದ ಅಭಿಲಾಷ ಅಶೋಕ ಗುಳಪ್ಪನವರ ಎರಡು ವರ್ಷದ ಮುದ್ದು ಮಗು ಸಾವನ್ನಪ್ಪಿದ್ದು ಕಲ್ಲು ಹೃದಯದವರನ್ನು ಕರಗಿಸುವಂತಿತ್ತು. ಆಕಸ್ಮಿಕವಾಗಿ ನಡೆದ ಈ ಘಟನೆಯಿಂದ ಕಾಗವಾಡ ಗ್ರಾಮದಲ್ಲಿ ಶೋಕ ಆವರಿಸಿದೆ. ಈ ಕುರಿತು ಕಾಗವಾಡ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸೈ ಹಣಮಂತ ಶಿರಹಟ್ಟಿಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
 

Follow Us:
Download App:
  • android
  • ios