ಗೋಕಾಕ(ಅ.26): ಅರಬಾವಿ ಮತಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ 48.65 ಕೋಟಿಗಳ ಅನುದಾನ ಬಿಡುಗಡೆಯಾಗಿದೆ ಎಂದು ಅರಬಾವಿ ಶಾಸಕ ಹಾಗೂ ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದ್ದಾರೆ. 

ಗುರುವಾರ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಲೋಕೋಪಯೋಗಿ ಇಲಾಖೆಯ ರಸ್ತೆಗಳ ಅಭಿವೃದ್ಧಿಗಾಗಿ 25 ಕೋಟಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಿಂದ ರಸ್ತೆಗಳ ಸುಧಾರಣೆಗಾಗಿ 3 ಕೋಟಿ, ಜಲಸಂಪನ್ಮೂಲ ಇಲಾಖೆಯಿಂದ ರಸ್ತೆಗಳ ಅಭಿವೃದ್ಧಿಗಾಗಿ 9.75 ಕೋಟಿ ಬಿಡುಗಡೆಯಾಗಿದೆ. ನಗರಾಭಿವೃದ್ಧಿ ಇಲಾಖೆಯ ಎಸ್‌ಎಫ್‌ಸಿ ಯೋಜನೆಯಡಿ ಮೂಡಲಗಿ ಪುರಸಭೆ ಹಾಗೂ ಅರಬಾವಿ, ಕಲ್ಲೋಳಿ, ನಾಗನೂರ ಪಟ್ಟಣ ಪಂಚಾಯತಿಗಳ ವ್ಯಾಪ್ತಿಯ ರಸ್ತೆಗಳ ಸುಧಾರಣೆಗೆ .5 ಕೋಟಿಗಳ ಅನುದಾನ ಸರ್ಕಾರದಿಂದ ಬಿಡುಗಡೆಯಾಗಿದೆ ಎಂದು ತಿಳಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸಣ್ಣ ನೀರಾವರಿ ಇಲಾಖೆಯಿಂದ 13 ಬ್ಯಾರೇಜ್‌ಗಳ ಸುಧಾರಣೆ, 4 ಏತ ನೀರಾವರಿ ಕಾಮಗಾರಿಗಳ ಸುಧಾರಣೆ ಹಾಗೂ 3 ಕೆರೆಗಳ ಸುಧಾರಣೆಗಾಗಿ 4.90 ಕೋಟಿ ಅನುದಾನ ಸೇರಿದಂತೆ ಒಟ್ಟಾರೆ 48.65 ಕೋಟಿಗಳ ಅನುದಾನ ಬಿಡುಗಡೆಯಾಗಿದೆ. ಧರ್ಮಟ್ಟಿ ಸೇತುವೆಗೆ 1 ಕೋಟಿ, ಧರ್ಮಟ್ಟಿ-ಮೂಡಲಗಿ ರಸ್ತೆಯ ಧರ್ಮಟ್ಟಿಹಳ್ಳಕ್ಕೆ ಸೇತುವೆ ನಿರ್ಮಾಣಕ್ಕಾಗಿ ಜಲಸಂಪನ್ಮೂಲ ಇಲಾಖೆಯಿಂದ 1 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಟೆಂಡರ್‌ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಶೀಘ್ರದಲ್ಲಿಯೇ ಕಾಮಗಾರಿಯನ್ನು ಕೈಗೆತ್ತಿಕೊಳ್ಳಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಶಾಲಾ ಕಟ್ಟಡಗಳ ದುರಸ್ತಿಗಾಗಿ 10.17 ಕೋಟಿ ಪ್ರಸ್ತಾವನೆ:

ಪ್ರವಾಹದಿಂದ ಹಾನಿಗೊಳಗಾದ ಮೂಡಲಗಿ ಶೈಕ್ಷಣಿಕ ವಲಯದ ಶಾಲಾ ಕೊಠಡಿಗಳ ದುರಸ್ತಿಗಾಗಿ 5.28 ಕೋಟಿ ಹಾಗೂ ಗೋಕಾಕ ಶೈಕ್ಷಣಿಕ ವಲಯದ ಶಾಲಾ ಕೊಠಡಿಗಳ ದುರಸ್ತಿಗಾಗಿ 4.89 ಕೋಟಿ ಅನುದಾನಕ್ಕಾಗಿ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಿಂದೆಂದೂ ಕಂಡರಿಯದ ನೆರೆ ಪ್ರವಾಹದಿಂದಾಗಿ ಮೂಡಲಗಿ ವಲಯದ 194 ಶಾಲೆಗಳ 459 ಕೊಠಡಿಗಳು ಹಾನಿಗೊಳಗಾಗಿವೆ. ಜೊತೆಗೆ ಗೋಕಾಕ ವಲಯದ 103 ಶಾಲೆಗಳ 417 ಶಾಲಾ ಕೊಠಡಿಗಳು ಕೂಡ ಹಾನಿಯಾಗಿವೆ. ಇವುಗಳ ದುರಸ್ತಿಗಾಗಿ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇಷ್ಟರಲ್ಲಿಯೇ ಅನುದಾನ ಬಿಡುಗಡೆಯಾಗಲಿದೆ ಎಂದು ಭರವಸೆ ನೀಡಿದ್ದಾರೆ.