'ಕೈ' ಮಾಜಿ ಶಾಸಕ ಲಾಡ್ ನಮ್ಮ ಜೊತೆ ಸತತ ಸಂಪರ್ಕದಲ್ಲಿದ್ದಾರೆ ಎಂದ ಸಚಿವ
ಕಾಂಗ್ರೆಸ್ ನ ಮಾಜಿ ಶಾಸಕ ಅನಿಲ್ ಲಾಡ್ ಬಿಜೆಪಿ ಸೇರುವ ವಿಚಾರ| ಅನಿಲ್ ಲಾಡ್ ನಮ್ಮ ಬಳಿ ಬಂದು ಮಾತನಾಡಿದ್ದಾರೆ ಎಂದ ಸಚಿವ ಶ್ರೀರಾಮುಲು| ಈ ಸಂಬಂಧ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ರಾಜ್ಯ ನಾಯಕರ ಬಳಿ ಮಾತನಾಡಿದ್ದೇನೆ| ಈ ಭಾಗದಲ್ಲಿ ದೊಡ್ಡ ಶಕ್ತಿ ಅನಿಲ್ ಲಾಡ್ ಅವರದ್ದು| ಉಪ ಚುನಾವಣೆಯಲ್ಲಿ ಸಹಾಯ ಆಗಬಹುದು|
ಬಳ್ಳಾರಿ[ನ.4]: ವಾಲ್ಮೀಕಿ ಜನಾಂಗಕ್ಕೆ 7.5 ರಷ್ಟು ಮೀಸಲಾತಿ ನೀಡಬೇಕು. ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗುವ ಪ್ರಶ್ನೆಯೇ ಇಲ್ಲ. ಈ ಸಂಬಂಧ ಜಸ್ಟಿಸ್ ನಾಗಮೋಹನ್ ದಾಸ್ ಅವರ ಸಮಿತಿ ರಚನೆ ಮಾಡಲಾಗಿದೆ. ಇದರ ಬಗ್ಗೆ ಸಮಗ್ರ ವರದಿಗಾಗಿ ಸಮಿತಿಗೆ ಎರಡು ತಿಂಗಳ ಕಾಲ ಮಿತಿ ನಿಗದಿ ಮಾಡಲಾಗಿದೆ. ಈ ಹಿಂದೆ ವಾಲ್ಮೀಕಿ ಜಯಂತಿ ಜಾರಿ ಮಾಡಿದ್ದು ಯಡಿಯೂರಪ್ಪನವರೇ, ಈಗ ಅವರೇ ನಮಗೆ ಮೀಸಲಾತಿ ಜಾರಿ ಮಾಡುವ ವಿಶ್ವಾಸ ಇದೆ ಎಂದು ಆರೋಗ್ಯ ಸಚಿವ ಶ್ರೀ ರಾಮುಲು ಅವರು ಹೇಳಿದ್ದಾರೆ.
ಸೋಮವಾರ ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನ ಮಾಜಿ ಶಾಸಕ ಅನಿಲ್ ಲಾಡ್ ಅವರು ಸತತವಾಗಿ ನಮ್ಮ ಜತೆ ಸಂಪರ್ಕದಲ್ಲಿದ್ದಾರೆ. ನಮ್ಮ ಬಳಿ ಬಂದು ಮಾತನಾಡಿ ಹೋಗಿದ್ದಾರೆ. ಆ ಬಳಿಕ ನಾನು ನಮ್ಮ ರಾಜ್ಯಾಧ್ಯಕ್ಷರು ನಳೀನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ರಾಜ್ಯ ನಾಯಕರ ಬಳಿ ಮಾತನಾಡಿದ್ದೇನೆ. ಈ ಭಾಗದಲ್ಲಿ ದೊಡ್ಡ ಶಕ್ತಿ ಅನಿಲ್ ಲಾಡ್ ಅವರದ್ದು, ಅವರ ಜತೆ ದೊಡ್ಡ ಸಮಾಜದ ಶಕ್ತಿ ಇದೆ. ಉಪ ಚುನಾವಣೆಯಲ್ಲಿ ಸಹಾಯ ಆಗಬಹುದು. ಯಾವ ಸಮಯದಲ್ಲಿ ಸೇರಿಸಿಕೊಳ್ಳಬೇಕೆಂಬುದು ಚರ್ಚೆ ಮಾಡುತ್ತೇವೆ. ಚುನಾವಣೆ ಇರುವುದರಿಂದ ನಮ್ಮ ನಾಯಕರು ಬ್ಯೂಸಿ ಇದ್ದಾರೆ ಎಂದು ಹೇಳಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಅನಿಲ್ ಲಾಡ್ ಅವರು ಬಿಜೆಪಿಗೆ ಸೇರ್ಪಡೆಯಾದರೆ ಬಿಜೆಪಿಯಲ್ಲಿ ವಿರೋಧವಿದೆಯಾ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಅನಿಲ್ ಲಾಡ್ ಮೂಲ ಬಿಜೆಪಿಗರೇ. ಮೊದಲು ಬಿಜೆಪಿಯಿಂದಲೇ ಶಾಸಕರಾಗಿದ್ದರು. ಬೇರೆ, ಬೇರೆ ಕಾರಣದಿಂದ ದೂರಾಗಿದ್ದರು, ಈಗ ಎತ್ತರಕ್ಕೆ ಬೆಳೆದಿದ್ದಾರೆ. ಈ ಭಾಗದ ದೊಡ್ಡ ನಾಯಕ. ದೊಡ್ಡ ಶಕ್ತಿ ಇದೆ. ನಮಗೆ ಅನುಕೂಲವಾಗುತ್ತದೆ ಎಂದು ತಿಳಿಸಿದ್ದಾರೆ.