ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಸರಣಿ ಬಾಣಂತಿಯರ ಸಾವು 3ಕ್ಕೇರಿಕೆ!
ನ.11ರಂದು ಬಳ್ಳಾರಿ ತಾಲೂಕಿನ ಮೋಕಾದ ನಂದಿನಿ, ನ.12ರಂದು ಬಸರಕೋಡಿನ ಲಲಿತಮ್ಮ ಮೃತಪಟ್ಟಿದ್ದರು. ಈಗ ರೋಜಾ ಎನ್ನುವವರು ಗುರುವಾರ ಸಾವಿಗೀಡಾಗಿದ್ದು, ಮತ್ತೋರ್ವ ಬಾಣಂತಿಯ ಆರೋಗ್ಯ ಗಂಭೀರವಾಗಿದೆ ಎನ್ನಲಾಗಿದೆ.
ಬಳ್ಳಾರಿ(ನ.16): ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಗೆ ದಾಖಲಾಗಿ ಶಸ್ತ್ರಚಿಕಿತ್ಸೆಗೆ ಒಳಗಾದ ಬಾಣಂತಿಯರು ಸಾಲುಸಾಲಾಗಿ ಸಾವಿಗೀಡಾಗುತ್ತಿದ್ದು, ಗುರುವಾರ ಮೃತರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.
ನ.9ರಂದು ಜಿಲ್ಲಾಸ್ಪತ್ರೆಗೆ ಹೆರಿಗೆಗಾಗಿ ದಾಖಲಾಗಿ ಶಸ್ತ್ರಚಿಕಿತ್ಸೆಗೆ ಒಳಗಾದ ಗರ್ಭಿಣಿಯರ ಪೈಕಿ ಐವರು ಬಾಣಂತಿಯರ ಆರೋಗ್ಯದಲ್ಲಿ ಏರುಪೇರಾಗಿತ್ತು. ಇವರನ್ನು ಬಿಮ್ಸ್‌ಗೆ ದಾಖಲಿಸಲಾಗಿತ್ತು. ಇದರಲ್ಲಿ ನ.11ರಂದು ಬಳ್ಳಾರಿ ತಾಲೂಕಿನ ಮೋಕಾದ ನಂದಿನಿ (24), ನ.12ರಂದು ಬಸರಕೋಡಿನ ಲಲಿತಮ್ಮ (26) ಮೃತಪಟ್ಟಿದ್ದರು. ಈಗ ರೋಜಾ (19) ಎನ್ನು ವವರು ಗುರುವಾರ ಸಾವಿಗೀಡಾಗಿದ್ದು, ಮತ್ತೋರ್ವ ಬಾಣಂತಿಯ ಆರೋಗ್ಯ ಗಂಭೀರವಾಗಿದೆ ಎನ್ನಲಾಗಿದೆ.
ಬಳ್ಳಾರಿ: ಮಧ್ಯಾಹ್ನ ಬಿಸಿಯೂಟ ಸೇವಿಸಿ 45ಕ್ಕೂ ಅಧಿಕ ವಿದ್ಯಾರ್ಥಿಗಳು ತೀವ್ರ ಅಸ್ವಸ್ಥ!
ತನಿಖಾ ತಂಡ ಭೇಟಿ:
ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವಿನ ಪ್ರಕರಣಕ್ಕೆ ಸಂಬಂಸಿದಂತೆ ಸೂಕ್ತ ತನಿಖೆ ನಡೆಸಿ ವರದಿ ಸಲ್ಲಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಸೂಚನೆ ಮೇರೆಗೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಡಾ। ಸಿ.ಸವಿತಾ, ಡಾ। ಬಿ.ಭಾಸ್ಕರ್, ಡಾ। ಟಿ. ಆರ್.ಹರ್ಷ ಅವರನ್ನು ನೇಮಿಸಲಾಗಿದೆ. ಈ ತನಿಖಾ ತಂಡ ಆಸ್ಪತ್ರೆಗೆ ಭೇಟಿ ನೀಡಿದ್ದು, ತನಿಖೆ ನಡೆಸಿದೆ.