ಬಳ್ಳಾರಿ[ಅ.30]: ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ದಮ್ಮೂರು ಶೇಖರ ಅವರ ನೇಮಕದಿಂದ ಜಿಲ್ಲೆಯ ಬಿಜೆಪಿಯಲ್ಲಿ ತೀವ್ರ ಭಿನ್ನಮತ, ಬಂಡಾಯ, ಬಿರುಗಾಳಿ ಎದ್ದಿದ್ದು , ಪಕ್ಷದ ಜಿಲ್ಲಾಧ್ಯಕ್ಷ ಸೇರಿ 40 ಕ್ಕೂ ಹೆಚ್ಚಿನ ಪದಾಧಿಕಾರಿಗಳ ಸಾಮೂಹಿಕ ರಾಜೀನಾಮೆಯಿಂದ ಬೆದರಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆದೇಶ ರದ್ದು ಪಡಿಸಿದ್ದಾರೆ.

ದಮ್ಮೂರು ಶೇಖರ್ ಅವರು ಅಧಿಕಾರ ಸ್ವೀಕರಿಸಿದ 24 ಗಂಟೆಯೊಳಗೆ ಅಧಿಕಾರದಿಂದ ಇಳಿಯಬೇಕಾಯಿತು. ಈ ಬೆಳವಣಿಗೆ ಜಿಲ್ಲೆಯಲ್ಲಿ ಬಿಜೆಪಿಯನ್ನು ಇಬ್ಭಾಗ ಮಾಡಿದೆ. ಜನಾರ್ದನ ರೆಡ್ಡಿ ಅವರ ಆಪ್ತ ಎನ್ನಲಾದ ದಮ್ಮೂರ ಶೇಖರ ಅವರ ನೇಮಕಕ್ಕೆ ಶಾಸಕ ಸೋಮಶೇಖರ ರೆಡ್ಡಿ, ಸಚಿವ ಬಿ. ಶ್ರೀರಾಮಲು ಸೇರಿ ಹಲವರು ಬೆಂಬಲ ಸೂಚಿಸಿದ್ದರು. ಸೋಮವಾರ ಶೇಖರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಸೋಮಶೇಖರ ರೆಡ್ಡಿ ಉಪಸ್ಥಿತರಿದ್ದು, ಇದನ್ನು ವಿರೋಧಿಸಿದ್ದವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು.

ಬಳ್ಳಾರಿ: ಶ್ರೀರಾಮುಲು ವಿರುದ್ಧ ಸಿಡಿದೆದ್ದ ಬಿಜೆಪಿ ಪದಾಧಿಕಾರಿಗಳು

ಮಂಗಳವಾರ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿಗಳಾದ ಕೆ.ಎ.ರಾಮಲಿಂಗಪ್ಪ, ಮುರಹರಿಗೌಡ ಸೇರಿದಂತೆ 40 ಕ್ಕೂ ಹೆಚ್ಚು ಜನರು ಪತ್ರಿಕಾಗೋಷ್ಠಿ ನಡೆಸಿ ತಮ್ಮ ರಾಜೀನಾಮೆ ವಿಚಾರ ಪ್ರಕಟಿಸಿ, ರಾಜೀನಾಮೆ ಪತ್ರ ಪ್ರದರ್ಶಿಸಿದ್ದರಲ್ಲದೇ ಶಾಸಕ ಸೋಮಶೇಖರ ರೆಡ್ಡಿ ವಿರುದ್ಧ ಹರಿ ಹಾಯ್ದಿದ್ದರಲ್ಲದೇ ಅವರ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು.

ಈ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೀಡು ಮಾಡಿ ಬುಡಾ ಅಧ್ಯಕ್ಷರ ದಮ್ಮೂರು ಶೇಖರ್ ಅವರ ಬುಡಕ್ಕೆ ಕುತ್ತು ತಂದಿತಲ್ಲದೆ, ನೇರವಾಗಿ ಮುಖ್ಯಮಂತ್ರಿಗಳಿಗೆ ಆಯ್ಕೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ. ಈ ಬೆಳವಣಿಗೆ ಜಿಲ್ಲಾ ಬಿಜೆಪಿವಲಯದಲ್ಲಿ ಮತ್ತೊಂದು ಸುತ್ತಿನ ರಾಜಕೀಯ ಸಂಘರ್ಷಕ್ಕೆ ಕಾರಣವಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದ್ದು, ಪಕ್ಷ ಹಾಗೂ ಸ್ಥಳೀಯ ನಾಯಕರ ಮುಂದಿನ ನಡೆ ಕುತೂಹಲ ಮೂಡಿಸಿದೆ. ದಮ್ಮೂರ್ ಶೇಖರ್ ಅವರ ನೇಮಕವನ್ನು ವಿರೋಧಿಸಿ ಬಳ್ಳಾರಿ ಬಿಜೆಪಿ ಅಧ್ಯಕ್ಷರ ನೇತೃತ್ವದ ನಿಯೋಗವು ಕಳೆದ ಶನಿವಾರ ಹುಬ್ಬಳ್ಳಿಗೆ ಆಗಮಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಿರಿಯ ಸಚಿವರೊಂದಿಗೆ ಚರ್ಚಿಸಿ ದೂರು ನೀಡಿದ್ದು, ಇದಕ್ಕೂ ಮೊದಲೇ ಅವರು ನೇಮಕ ವಿರೋಧಿಸಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ಆದರೆ ಅಂದು ಮುಖ್ಯಮಂತ್ರಿಗಳು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳ ಜೊತೆ ಮಾತನಾಡಿ ನೇಮಕ ರದ್ದು ಮಾಡುವಂತೆ ಸೂಚಿಸಿದ್ದರು. ಅಲ್ಲಿಗೆ ಸಮಸ್ಯೆ ಬಗೆಹರಿದಂತೆ ಅನಿಸಿತ್ತು. ಆದರೆ ಈ ಮಧ್ಯೆ ಸೋಮವಾರ ದಮ್ಮೂರುಶೇಖರ್ ಅಧಿಕಾರ ವಹಿಸಿಕೊಂಡಿದ್ದು, ಆ ಸಂದರ್ಭದಲ್ಲಿ ಶಾಸಕ ಸೋಮಶೇಖರ ರೆಡ್ಡಿ ಜಿಲ್ಲಾಧ್ಯಕ್ಷ ಸೇರಿದಂತೆ ನಾಯಕರ ವಿರುದ್ಧ ಹಗುರವಾಗಿ ಮಾತನಾಡಿದ್ದು ವಿವಾದವಾಗಿತ್ತು. 

ಸಾಮೂಹಿಕ ರಾಜೀನಾಮೆ: 

ಈ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿದ ಪಕ್ಷದ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್, ಪ್ರಧಾನ ಕಾರ್ಯದರ್ಶಿ ಕೆ.ಎ. ರಾಮಲಿಂಗಪ್ಪ ಸೇರಿದಂತೆ 40 ಕ್ಕೂ ಹೆಚ್ಚು ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ, ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ ವಿರುದ್ಧ ಏಕವಚನದಲ್ಲಿ ಹರಿಹಾಯ್ದರಲ್ಲದೆ, ಬುಡಾ ಅಧ್ಯಕ್ಷ ಸ್ಥಾನದಿಂದ ದಮ್ಮೂರು ಶೇಖರ್ ಅವರನ್ನು ತೆಗೆದುಹಾಕದಿದ್ದರೆ ಪಕ್ಷಕ್ಕೆ ಘಾಸಿಯಾಗಲಿದೆ ಎಂಬ ಎಚ್ಚರಿಕೆಯ ಸಂದೇಶವನ್ನು ರವಾನಿಸಿದರು. 

ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್‌ ಮಾತನಾಡಿ, ನಗರ ಶಾಸಕರು ನನ್ನ ರಾಜಕೀಯ ಸಾಮರ್ಥ್ಯದ(ಕೆಪ್ಯಾಸಿಟಿ) ಬಗ್ಗೆ ಮಾತನಾಡಿದ್ದಾರೆ. ಅವರ ಅವಧಿ ಮುಗಿದಿದೆ. ಹೀಗಾಗಿ ರಾಜೀನಾಮೆ ನೀಡಿದ್ದಾರೆ ಎಂದು ಹಗುರವಾಗಿ ಮಾತನಾಡಿದ್ದಾರೆ. ಆ ರೀತಿ ಹೇಳಿಕೆ ನೀಡಲು ಅವರಿಗೆ ಅಧಿಕಾರ ನೀಡಿದವರು ಯಾರು? ಒಬ್ಬ ಶಾಸಕನಾಗಿ ಜಿಲ್ಲಾಧ್ಯಕ್ಷರಿಗೆ ನೀಡುವ ಗೌರವ ಇದೇನಾ? ತಾವು ನಗರ ಶಾಸಕರಾಗಿ ಕಳೆದ ಲೋಕಸಭಾ ಚುನಾವಣೆಯಲ್ಲಿ ನಗರದಿಂದ ಎಷ್ಟು ಲೀಡ್ ನೀಡಿದ್ರಿ? ಈ ಹಿಂದೆ ಜೆ.ಶಾಂತಾ ಅವರು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ಬಳ್ಳಾರಿಯಿಂದ ನೀವು ಕೊಟ್ಟ ಲೀಡ್ ಎಷ್ಟು? ನೀವು ಸಹ ಈ ಹಿಂದೆ ಪಕ್ಷದ ಜಿಲ್ಲಾಧ್ಯಕ್ಷರಾಗಿದ್ದಾಗ ಜಿಲ್ಲೆಯಲ್ಲಿ ಎಷ್ಟು ಶಾಸಕ ಸ್ಥಾನಗಳನ್ನು ಗೆಲ್ಲಿಸಿ ಕೊಟ್ರಿ? ನೀವು ಈ ಹಿಂದೆ ನಗರದಿಂದ ಗೆದ್ದಾಗ ನಮ್ಮ ಶ್ರಮವೇನೂ ಇರಲಿಲ್ಲವೇ ಎಂದು ಚನ್ನಬಸವನಗೌಡ ಪಾಟೀಲ್ ಅವರು ಪ್ರಶ್ನಿಸಿದರು.

ಬಿಜೆಪಿಗೂ ತಟ್ಟಿದ ಸಾಮೂಹಿಕ ರಾಜೀನಾಮೆ ಶಾಕ್; 48 ಮುಖಂಡರು ಗುಡ್‌ಬೈ

ಬಳ್ಳಾರಿಯಲ್ಲಿ ಮಾತ್ರ ಪಕ್ಷದ ಪದಾಧಿಕಾರಿಗಳಿಗೆ ಮುಜುಗರ ತರುವ ಘಟನೆ ನಡೆದಿದೆ. ಪಕ್ಷ ಉಳಿಸಲೆಂದೇ ಸಾಮೂಹಿಕ ರಾಜೀನಾಮೆಯ ನಿರ್ಧಾರಕ್ಕೆ ಬಂದಿದ್ದೇವೆ. ಬುಡಾ ಅಧ್ಯಕ್ಷ ಸ್ಥಾನದ ಮ್ಮೂರು ಶೇಖರ್ ಅವರಿಗೆ ನೀಡುವುದು ಸರಿಯಲ್ಲ. ಪಕ್ಷದಲ್ಲಿ ಶ್ರಮಿಸಿದವರಿಗೆ ನೀಡಿ. ಕಾರ್ಯಕರ್ತರನ್ನುನೀಡಿ ಎಂದು ಹೇಳಿದ್ದೇನೆ. ನಾನು ಸೇರಿದಂತೆ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಕೆ.ಎ. ರಾಮಲಿಂಗಪ್ಪ, ಮುರಾರಿಗೌಡ, ಪೂಜಪ್ಪ ಅವರು ರಾಜೀನಾಮೆ ಸಲ್ಲಿಸಿದ್ದೇವೆ. 8 ಕ್ಕೂ ಹೆಚ್ಚು ಪದಾಧಿಕಾರಿಗಳು ರಾಜೀನಾಮೆ ನೀಡುತ್ತಿದ್ದಾರೆ ಎಂದು  ತಿಳಿಸಿದರು.

ರೆಡ್ಡಿಗೆ ಕೊಬ್ಬು ಜಾಸ್ತಿಯಾಗಿದೆ: 

ಮಾಜಿ ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಹಾಗೂ ಪಕ್ಷದ ಜಿಲ್ಲಾಪ್ರಧಾನ ಕಾರ್ಯದರ್ಶಿ ಕೆ.ಎ. ರಾಮಲಿಂಗಪ್ಪ ಮಾತನಾಡಿ, ಸೋಮಶೇಖರ ರೆಡ್ಡಿ ಪಕ್ಷದ ಪದಾಧಿಕಾರಿಗಳ ಬಗ್ಗೆ ಲೆಕ್ಕವಿಲ್ಲದಂತೆ ಮಾತನಾಡಿದ್ದಾರೆ. ಅವರಿಗೆ ಕೊಬ್ಬು ಜಾಸ್ತಿಯಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಣ್ಣ ಪಕ್ಕೀರಪ್ಪ ಸೋಲಿಗೆಸೋಮಶೇಖರ ರೆಡ್ಡಿಯೇ ಕಾರಣ ಎಂದು ಪಕ್ಕೀರಪ್ಪಅವರೇ ನೇರವಾಗಿ ಸೋಮಶೇಖರ ರೆಡ್ಡಿಗೆ ಹೇಳಿದ್ದಾರೆ. ಶಾಸಕ ಸೋಮಶೇಖರ ರೆಡ್ಡಿ ಹಗಲೊಂದು ಪಕ್ಷ. ರಾತ್ರಿಯೊಂದು ಪಕ್ಷ. ಈ ಹಿಂದೆ ಬಿಜೆಪಿಯಲ್ಲಿದ್ದುಆಂಧ್ರದಲ್ಲಿ ವೈಎಸ್ಸಾರ್ ಪಕ್ಷ ಬೆಳೆಸಿದ್ರು. ಗ್ರಾಮೀಣ ಕ್ಷೇತ್ರದ ಉಪಚುನಾವಣೆಯಲ್ಲಿ ಕಾರ್ಯಕರ್ತರು ಹೋರಾಟ ನಡೆಸಿದ್ದರೆ, ಇದೇ ಸೋಮಶೇಖರ ರೆಡ್ಡಿ ಡಿ.ಕೆ. ಶಿವಕುಮಾರ್ ಅವರನ್ನು ಮನೆಗೆ ಕರೆಸಿಕೊಂಡು ಊಟಕ್ಕೆ ಹಾಕಿದರು. ಇದೇನಾ ಪಕ್ಷದ ಶಿಸ್ತು ಎಂದು ಪ್ರಶ್ನಿಸಿದರು.

ದಮ್ಮೂರು ಶೇಖರ್ ಹಾಗೂ ಶ್ರೀರಾಮುಲು ಕಮಿಟ್‌ಮೆಂಟ್ ಆಗಿದ್ದಾರೆ ಎಂದು ನನಗೆ ದೂರವಾಣಿಯಲ್ಲಿ ಹೇಳಿದರು. ಅದ್ಯಾವ ಕಮಿಟ್‌ಮೆಂಟ್ ಎಂಬುದು ನನಗೆ ಗೊತ್ತಿಲ್ಲ. ಈ ಕುರಿತು ಶ್ರೀರಾಮುಲು ಅವರನ್ನು ಮಾತನಾಡಿಸಿದೆ. ದಮ್ಮೂರು ಶೇಖರ್ ಬುಡಾ ಅಧ್ಯಕ್ಷನಾಗಲು ನಾನುಪತ್ರ ನೀಡಿಲ್ಲ ಎಂದು ಶ್ರೀರಾಮುಲು ತಿಳಿಸಿದರು. ಶ್ರೀರಾಮುಲು- ಜನಾರ್ದನ ರೆಡ್ಡಿ ಅವರ ಹೆಸರು ಹೇಳಿಕೊಂಡು ಪಕ್ಷವನ್ನು ಹೈಜಾಕ್ ಮಾಡಲು ಸೋಮಶೇಖರ ರೆಡ್ಡಿ ಮುಂದಾಗಿದ್ದಾರೆ. ಇದನ್ನು ನಾವು ಸಹಿಸಲು ಸಾಧ್ಯವಿಲ್ಲ ಎಂದು ರಾಮಲಿಂಗಪ್ಪ ತಿಳಿಸಿದರು. 

ಬುಡಾ ಅಧ್ಯಕ್ಷ ದಮ್ಮೂರು ಶೇಖರ್‌ ರಾಜೀನಾಮೆ ನೀಡುವವರೆಗೆ ರಾಜೀನಾಮೆ ಸಲ್ಲಿಕೆ ಮುಂದುವರಿಯಲಿದೆ ಎಂದು ತಿಳಿಸಿದರು. ಪಕ್ಷದ ಪ್ರಮುಖರಾದ ಗುತ್ತಿಗನೂರು ವಿರುಪಾಕ್ಷಗೌಡ, ಮುರಾರಿಗೌಡ ಗೋನಾಳ್, ಎಚ್. ಹನುಮಂತಪ್ಪ,ಗಣಪಾಲ್ ಐನಾಥ ರೆಡ್ಡಿ, ಶಿವಾರೆಡ್ಡಿ, ಶರಣಪ್ಪ,ಸುಗುಣ, ಡಿ.ಗೋವಿಂದ ಸೇರಿದಂತೆ ಪಕ್ಷದ ಜಿಲ್ಲಾ ಹಾಗೂ ತಾಲೂಕು ಮುಖಂಡರು ಭಾಗವಹಿಸಿದ್ದರು.

ನನಗೂ ಈವರೆಗೆ ಅಧಿಕೃತವಾ ಗಿಯಾವುದೇ ಮಾಹಿತಿ ಬಂದಿಲ್ಲ. ಮಾಧ್ಯಮಗಳ ಮೂಲಕ ಗೊತ್ತಾಗಿದೆ. ಬುಡಾ ಅಧ್ಯಕ್ಷ ಸ್ಥಾನ ರದ್ದು ಮಾಡಬೇಕು ಎಂದೇ ನಾವು ಒತ್ತಾಯಿಸಿದ್ದೆವು. ಒಂದು ವೇಳೆ ಆಗಿದ್ದರೆ ಸಂತೋಷ. ಪಕ್ಷದ ಬೆಳವಣಿಗೆ ದೃಷ್ಟಿಯಿಂದ ಒಳ್ಳೆಯದು ಕೂಡ ಎಂದು  ಬಳ್ಳಾರಿ  ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್ ಅವರು ಹೇಳಿದ್ದಾರೆ. 

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಳ್ಳಾರಿದ ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಅವರು, ನನ್ನ ಅಧ್ಯಕ್ಷ ಸ್ಥಾನ ರದ್ದಾಗಿದೆ ಎಂದು ಅಧಿಕೃತವಾಗಿ ಇನ್ನು ಯಾವುದೇ ಆದೇಶ ಬಂದಿಲ್ಲ. ಅಂತಹ ಯಾವುದೇ ಪತ್ರ ನನ್ನ ಕೈಗೆ ತಲುಪಿಲ್ಲ. ಆದೇಶದ ಬಂದ ಬಳಿಕ ಪ್ರತಿಕ್ರಿಯಿಸುತ್ತೇನೆ ಎಂದು ತಿಳಿಸಿದ್ದಾರೆ.