ಹೂವಿನಹಡಗಲಿ: ಮೆಕ್ಕೆಜೋಳಕ್ಕೆ ಬಂಪರ್ ಬೆಲೆ, ರೈತರು ಫುಲ್ ಖುಷ್
ಮೆಕ್ಕೆಜೋಳಕ್ಕೆ ಬಂಪರ್ ಬೆಲೆ ನೆರೆ ನಡುವೆ ಭರಪೂರ ಬೆಳೆ| ತಾಲೂಕಿನಲ್ಲಿ ಉತ್ತಮ ಮಳೆ| ರೈತರು ಅತಿ ಹೆಚ್ಚು ಮೆಕ್ಕೆಜೋಳ ಬಿತ್ತನೆ ಮಾಡಿದ್ದಾರೆ|
ಚಂದ್ರು ಕೊಂಚಿಗೇರಿ
ಹೂವಿನಹಡಗಲಿ[ಅ.21]: ತಾಲೂಕಿನ ವಿವಿಧ ಕಡೆ ಆರಂಭದಲ್ಲಿ ಮುಂಗಾರು ಮುನಿಸಿಕೊಂಡಿದ್ದರೂ ನಂತರ ಉತ್ತಮ ಮಳೆಯಾಗಿರುವುದರಿಂದ ಮೆಕ್ಕೆಜೋಳ ಉತ್ತಮ ಇಳುವರಿಯ ಜತೆಗೆ ಬಂಪರ್ ಬೆಲೆ ಕೂಡಾ ಸಿಕ್ಕಿದೆ!
ಮುಂಗಾರು ಹಂಗಾಮಿನಲ್ಲಿ ಕೃಷಿ ಇಲಾಖೆಯು ವಿವಿಧ ಬೆಳೆಗಳ ಬಿತ್ತನೆ ಗುರಿ 54 ಸಾವಿರ ಎಕರೆಗೆ ನಿಗದಿಯಾಗಿತ್ತು. ಇದರಲ್ಲಿ ಅತಿ ಹೆಚ್ಚು ಅಂದರೆ 44 ಸಾವಿರ ಎಕರೆ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿತ್ತು. ತಾಲೂಕಿನ ಮುದೇನೂರು, ದೇವಗೊಂಡನಹಳ್ಳಿ,ಹಗರನೂರು, ಹಿರೇಹಡಗಲಿ, ದಾಸನಹಳ್ಳಿ ಸೇರಿದಂತೆ ಇತರೆ ಕಡೆಗಳಲ್ಲಿ ತುಂಗಭದ್ರಾ ನದಿಯಿಂದ ಕೆರೆ ನೀರು ತುಂಬಿದ ಕಾರಣ ಅಂತರ್ಜಲ ಹೆಚ್ಚಳವಾಗಿದೆ. ರೈತರ ಜಮೀನುಗಳಲ್ಲಿ ಕೊಳವೆ ಬಾವಿಗಳಲ್ಲಿ ನೀರು ಹೆಚ್ಚಾಗಿತ್ತು.ಇದರಿಂದ ನೀರಾವರಿ ಇರುವ ಹಿನ್ನೆಲೆ ರೈತರು ಅತಿ ಹೆಚ್ಚು ಮೆಕ್ಕೆಜೋಳ ಬಿತ್ತನೆ ಮಾಡಿದ್ದಾರೆ.
ಮಳೆಯಿಂದ ಹಾನಿ:
ಕೆಲವೆಡೆ ಅತಿ ಹೆಚ್ಚು ಮಳೆ ಬಂದು ಜಮೀನುಗಳಲ್ಲಿ ಹೆಚ್ಚು ತೇವಾಂಶ ಉಂಟಾಗಿ ಬ್ಯಾಲಹುಣ್ಸಿ, ನಂದಿಗಾವಿ, ಮಕರಬ್ಬಿ, ಬನ್ನಿಮಟ್ಟಿ ಸೇರಿದಂತೆ ಇತರೆ ಕಡೆ ನೂರಾರು ಎಕರೆ ಪ್ರದೇಶದಲ್ಲಿ ಬಿತ್ತನೆಮಾಡಲಾಗಿದ್ದ ಮೆಕ್ಕೆಜೋಳ ಬೆಳೆ ನಾಶವಾಗಿತ್ತು. ಆಗ ರೈತರು ಬೆಳೆನಾಶ ಮಾಡಿದರಿಂದ ನಷ್ಟ ಉಂಟಾಗಿತ್ತು.
ನೀರಿನ ಕೊರತೆ ಇಲ್ಲ:
ತಾಲೂಕಿನ ಶಿವಪುರ, ವಡ್ಡನಹಳ್ಳಿ ತಾಂಡಾ, ನಾಗತಿ ಬಸಾಪುರ, ದೇವಗೊಂಡನಹಳ್ಳಿ, ನಂದಿಹಳ್ಳಿ, ಹುಗಲೂರು, ತಿಪ್ಪಾಪುರ, ಹಾಳ್ ತಿಮ್ಲಾಪುರ, ಅಲ್ಲಿಪುರ, ಕೆ. ಅಯ್ಯನಹಳ್ಳಿ, ಹಗರನೂರು ಸೇರಿದಂತೆ ಇತರೆ ಕಡೆ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕಾಲುವೆಗಳಿಗೆ ಮುಂಗಾರಿನಿಂದ ಈವರೆಗೂ ನೀರು ಹರಿಸುತ್ತಿರುವುದರಿಂದ ಮೆಕ್ಕೆಜೋಳ ಸೇರಿದಂತೆ ಇತರೆ ಬೆಳೆಗಳಿಗೆ ನೀರಿನ ಕೊರತೆ ಉಂಟಾಗಿಲ್ಲ. ಜತೆಗೆ ಹಿಂಗಾರಿನಲ್ಲಿ ಅತಿ ಹೆಚ್ಚು ಮಳೆಯಾಗಿತ್ತು. ನೀರಾವರಿ ಸೌಲಭ್ಯ ಇರುವುದರಿಂದ ಮೆಕ್ಕೆಜೋಳ ಹೆಚ್ಚು ಇಳುವರಿ ಬರಲು ಸಾಧ್ಯವಾಗಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕಳೆದ ಬಾರಿ ಮೆಕ್ಕೆಜೋಳ ಬೆಳೆ ಸಾಕಷ್ಟು ಇಳುವರಿಯ ಜತೆಗೆ ಉತ್ತಮ ಬೆಳೆ ಬಂದಿದ್ದು,ಆದರೆ ಬೆಲೆ ಕುಸಿತದಿಂದ 1000 ದಿಂದ 1400 ಗಳಿಗೆ ಕ್ವಿಂಟಲ್ ಮೆಕ್ಕೆಜೋಳ ಮಾರಾಟ ಮಾಡಲಾಗಿತ್ತು. ಈ ಬಾರಿ ರಾಜ್ಯದಲ್ಲಿ ಅತಿ ಹೆಚ್ಚು ನೆರೆ ಹಾವಳಿ ಬಂದಿರುವ ಕಾರಣ ಸಾಕಷ್ಟು ಕಡೆಗಳಲ್ಲಿ ಮೆಕ್ಕೆಜೋಳ ಬೆಳೆನಾಶವಾಗಿತ್ತು. ತಾಲೂಕಿನ ನದಿ ತೀರದ ಗ್ರಾಮಗಳಲ್ಲಿಬೆಳೆನಾಶ ಹೊರತುಪಡಿಸಿದರೆ ಉಳಿದೆಲ್ಲಾ ಕಡೆ ಬೆಳೆ ನಾಶಆಗದಿರುವ ಕಾರಣ ಮೆಕ್ಕೆಜೋಳಕ್ಕೆ ಉತ್ತಮ ಬೆಲೆ ಬಂದಿದೆ ಎನ್ನುತ್ತಾರೆ ರೈತರು
ತಾಲೂಕಿನಲ್ಲಿ ಮುಂಗಾರಿನಲ್ಲಿ 54 ಸಾವಿರ ಎಕರೆ ಬಿತ್ತನೆ ಗುರಿ ಇತ್ತು.ಇದರಲ್ಲಿ 44 ಸಾವಿರ ಎಕರೆ ಮೆಕ್ಕೆಜೋಳ ಬಿತ್ತನೆಯಾಗಿದೆ. ಉತ್ತಮ ಇಳುವರಿ ಬಂದಿದೆ. ಕೆಲವು ಕಡೆ ಅತಿಯಾದ ಮಳೆಯಿಂದ ತೇವಾಂಶ ಹೆಚ್ಚಾಗಿ ಬೆಳೆ ನಾಶವಾಗಿತ್ತು. ಮೆಕ್ಕೆಜೋಳಕ್ಕೆ ಈ ಬಾರಿ 2300 ರಿಂದ 2400 ಕ್ಕೆ ಕ್ವಿಂಟಲ್ ಮಾರಾಟವಾಗುತ್ತಿದೆ ಎಂದು ಹೂವಿನಹಡಗಲಿ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಸಂಜೀವ್ ಪಾಟೀಲ್ ವರು ಹೇಳಿದ್ದಾರೆ.
ಎಕರೆಯೊಂದಕ್ಕೆ ಮೆಕ್ಕೆಜೋಳ 20 ಕ್ವಿಂಟಲ್ ಇಳುವರಿ ಇದೆ. ಜತೆಗೆ ಕ್ವಿಂಟಲ್‌ಗೆ 2300 ರ ವರೆಗೂ ಮೆಕ್ಕೆಜೋಳ ಮಾರಾಟವಾಗುತ್ತಿದೆ. ಆದರೆ ಕೊಯ್ಲಿಗೆ ಬಂದಿರುವ ಮೆಕ್ಕೆಜೋಳವನ್ನು ಕಟಾವು ಮಾಡಲು ಮಳೆ ಬಿಡುತ್ತಿಲ್ಲ. ಹೀಗೆ ಮಳೆ ಮುಂದುವರಿದರೆ ಉತ್ತಮ ಬೆಳೆ ಕೂಡಾ ಹಾನಿಯಾಗುತ್ತದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತದೆ ಎಂದು ಮಾಗಳ ಗ್ರಾಮದ ತಿಮ್ಲಾಪುರ ಸುರೇಶ ಅವರು ಹೇಳದ್ದಾರೆ.