ಕೊರೋನಾ ವೈರಸ್ ದೃಢಪಟ್ಟ ಬೆನ್ನಲ್ಲೇ 17 ಮಾರುತಿ ಸುಜುಕಿ ನೌಕರರು ನಾಪತ್ತೆ!
ಸಾಕಷ್ಟು ಮುತುವರ್ಜಿ ವಹಿಸಿದ, ಮಾಸ್ಕ್, ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿರುವ ಮಂದಿಗೆ ಕೊರೋನಾ ವೈರಸ್ ಕಾಡುತ್ತಿದೆ. ಮಾರುತಿ ಸುಜುಕಿ ಘಟಕದಲ್ಲಿ ಕೆಲಸ ಮಾಡುತ್ತಿದ್ದ 17 ಮಂದಿ ನೌಕರರಿಗೆ ಕೊರೋನಾ ಕಾಣಿಸಿಕೊಂಡಿದೆ. ಇದರ ಬೆನ್ನಲ್ಲೇ 17 ಮಂದಿಯೂ ನಾಪತ್ತೆಯಾಗಿರುವುದು ಮತ್ತಷ್ಟು ಆತಂಕ ಸೃಷ್ಟಿಸಿದೆ.
ಹರಿಯಾಣ(ಜೂ.26): ಮಾರುತಿ ಸುಜುಕಿ ಹರಿಯಾಣ ಘಟಕದಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ನಿರ್ವಹಿಸುತ್ತಿದ್ದ 17 ಮಂದಿಗೆ ಕೊರೋನಾ ವೈರಸ್ ದೃಢಪಟ್ಟಿದೆ. ಕೊರೋನಾ ಕಾಣಿಸಿಕೊಂಡ ಕಾರಣ ನಿಯಮದ ಪ್ರಕಾರ ಕ್ವಾರಂಟೈನ್ ಆಗಬೇಕಿತ್ತು. ಆದರೆ 17 ಮಂದಿ ಕೂಡ ನಾಪತ್ತೆಯಾಗಿದ್ದಾರೆ. ಇದೀಗ ಇಂಡಸ್ಟ್ರಿಯಲ್ ಸೆಕ್ಟರ್ 7 ಠಾಣಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಗೊಂಡಿದೆ.
ಮೆನೆಸರ್ ಘಟಕದಲ್ಲಿ ಸೆಕ್ಯೂರಿಟಿ ಕೆಲಸ ನಿರ್ವಹಿಸುತ್ತಿದ್ದ 17 ಮಂದಿಗೆ ಜೂನ್ 17 ರಂದು ನಡೆಸಿದ ಕೊರೋನಾ ವೈರಸ್ ಪರೀಕ್ಷೆಯಲ್ಲಿ ಕೊರೋನಾ ವೈರಸ್ ದೃಢಪಟ್ಟಿತ್ತು. ಕೊರೋನಾ ಕಾಣಿಸಿಕೊಂಡ ಕಾರಣ ಮನೆಸರ್ ಮಾರುತಿ ಸುಜುಕಿ ಘಟಕ ಆರೋಗ್ಯ ಇಲಾಖೆ ಸಂಪರ್ಕಿಸಿತು. ಜೂನ್ 18 ರಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾರುತಿ ಸುಜುಕಿ ಘಟಕಕ್ಕೆ ಆಗಮಿಸಿದ್ದಾರೆ. ಈ ವೇಳೆ 17 ಮಂದಿಯೂ ನಾಪತ್ತೆಯಾಗಿದ್ದಾರೆ.
ಮಾರುತಿ ಸುಜುಕಿ ಘಟಕದ ಅಧಿಕಾರಿಗಳಿಗೆ ಯಾವುದೇ ಸೂಚನೆ ನೀಡಿದ ಪರಾರಿಯಾಗಿದ್ದಾರೆ. ಇತ್ತ 17 ಮಂದಿಯನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಲು ಆರೋಗ್ಯ ಇಲಾಖೆ ಮುಂದಾಗಿದೆ. ಇಷ್ಟೇ ಅಲ್ಲ 17 ಮಂದಿಯಿಂದ ಇದೀಗ ಮತ್ತಷ್ಟು ಜನರಿಗೆ ಸೋಂಕು ಹರಡುವ ಭೀತಿ ಎದುರಾಗಿದೆ. ಇತ್ತ ಮಾರುತಿ ಸುಜುಕಿ ಘಟಕದ ನೌಕರರಿಗೂ ಕೊರೋನಾ ಆತಂಕ ಕಾಡುತ್ತಿದೆ.