ಟೆಸ್ಟ್ ರೈಡ್ ನೆಪದಲ್ಲಿ 3.15 ಲಕ್ಷ ರೂಪಾಯಿ ಬೈಕ್ ಜೊತೆ ಪರಾರಿ!
ಸಿನಿಮಾದಲ್ಲಿ ಕಾಮಿಡಿ ಸೀನ್‌ಗಳಲ್ಲಿ ಈ ರೀತಿ ಘಟನೆ ನಡೆದಿರೋದು ನೀವು ನೋಡಿರುತ್ತೀರಿ. ಇದೀಗ ನಿಜ ಜೀವನದಲ್ಲೂ ಕಾಮಿಡಿ ರೀತಿಯಲ್ಲೇ ಬೈಕ್ ಕಳ್ಳತನ ಮಾಡಿದ ಘಟನೆ ಚೆನ್ನೈನಲ್ಲಿ ನಡೆದಿದೆ. ಇಲ್ಲಿದೆ ಟೆಸ್ಟ್ ರೈಡ್ ಮಾಡಿ ಬೈಕ್ ಜೊತೆ ಪರಾರಿಯಾದ ಸ್ಟೋರಿ.
ಚೆನ್ನೈ(ಅ.22): ಒಂದು ಕ್ಷಣ ಎಚ್ಚರ ತಪ್ಪಿದರೆ, ಅಪರಿಚಿತರನ್ನ ನಂಬಿದರೆ ಯಾವುದೇ ಕ್ಷಣದಲ್ಲಿ ಮೋಸ ಹೋಗಬಹುದು ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ನಾವು ಹೇಳ್ತಾ ಇರೋ ಈ ಸ್ಟೋರಿ ಯಾವ ಸಿನಿಮಾ ಕತೆಗೂ ಕಡಿಮೆ ಇಲ್ಲ.
ಹೈ-ಎಂಡ್ ಬೈಕ್ ಖರೀದಿಸೋ ಸೋಗಿನಲ್ಲಿ ಬಂದು 3.15 ಲಕ್ಷ ರೂಪಾಯಿ ಬೈಕನ್ನೇ ಕದ್ದು ಪರಾರಿಯಾದ ಘಟನೆ ಚೆನ್ನೈನಲ್ಲಿ ನಡೆದಿದೆ. ಸೆವೆನ್ ವೆಲ್ಸ್ ನಿವಾಸಿ ಮೊಹಮ್ಮದ್ ಆಫ್ರೀನ್ ಕಳೆದೆರಡು ವರ್ಷದ ಹಿಂದ ದುಬಾರಿ ಬೈಕ್ ಖರೀದಿಸಿದ್ದರು. ಆರ್ಥಿಕ ಮುಗ್ಗಟ್ಟಿನ ಕಾರಣ ಈ ಬೈಕ್ ಮಾರಾಟ ಮಾಡಲು ಮುಂದಾಗಿದ್ದರು.
ಎಲ್ಲರಂತೆ ಆಫ್ರೀನ್ OLX ಆನ್‌ಲೈನ್ ಮಾರಾಟ ಜಾಲದಲ್ಲಿ ತಮ್ಮ ಬೈಕ್ ಮಾರಾಟಕ್ಕಿರೋ ಮಾಹಿತಿ ಹಾಕಿದ್ದಾರೆ. ಕೆಲವೇ ಗಂಟೆಗಳಲ್ಲಿ ಬೈಕ್ ಖರೀದಿಸುವುದಾಗಿ ಅಫ್ರೀನ್‌ಗೆ ಅಪರಿಚಿತ ವ್ಯಕ್ತಿಯಿಂದ ಕರೆ ಬಂದಿದೆ. ತಕ್ಷಣವೇ ಬರುವುದಾಗಿ ತಿಳಿಸಿದ್ದಾನೆ.
ಅಪರಿಚಿತ ವ್ಯಕ್ತಿ ರಾಯಪೆಟಾದಿಂದ ಆಟೋ ರಿಕ್ಷಾ ಮೂಲಕ ಬೈಕ್ ಮಾಲೀಕ ಆಫ್ರೀನ್ ಸ್ಥಳಕ್ಕೆ ಹೋಗಲು ನಿರ್ಧರಿಸಿದ. ಇದಕ್ಕಾಗಿ ಆಟೋ ರಿಕ್ಷಾ ಏರಿ ಪ್ರಯಾಣ ಆರಂಭಿಸಿದ್ದಾನೆ. ಆಟೋ ಪ್ರಯಾಣದ ನಡುವೆ, ತಾನು ಗೆಳೆಯನ ಬಳಿಗೆ ತೆರಳುತ್ತಿರುವುದಾಗಿ ಹೇಳಿ, ಆಟೋ ಚಾಲಕನಿಗೆ ತನ್ನ ಮಾವನಂತೆ ನಟಿಸಲು ಕೇಳಿಕೊಂಡಿದ್ದಾನೆ. ಇಷ್ಟೇ ಅಲ್ಲ ಇದಕ್ಕಾಗಿ 2000 ರೂಪಾಯಿ ನೀಡುವುದಾಗಿ ಹೇಳಿದ್ದಾನೆ.
ಇಷ್ಟಕ್ಕೆ ಅಪರಿಚತನ ಪ್ಲಾನ್ ಮುಗಿದಿಲ್ಲ. ಆಟೋ ಚಾಲಕನ ಮೊಬೈಲ್ ಮೂಲಕ ಬೈಕ್ ಮಾಲೀಕ ಆಫ್ರೀನ್‌ಗೆ ಕರೆ ಮಾಡಿದ ಅಪರಿಚಿತ ಸರ್ಕಾರಿ ಆಸ್ಪತ್ರೆ ಬಳಿ ಬೈಕ್ ಜೊತೆ ಬರುವಂತೆ ಮನವಿ ಮಾಡಿದ್ದಾನೆ. ಸರ್ಕಾರಿ ಆಸ್ಪತ್ರೆ ಬಳಿ ಬಂದ ಅಪರಿಚಿತ ಬೈಕ್ ದಾಖಲೆಗಳನ್ನ ಪರಿಶೀಲನೆ ನಡೆಸಿದ್ದಾನೆ. ಇಷ್ಟೇ ಅಲ್ಲ ಟೆಸ್ಟ್ ರೈಡ್ ಮಾಡಲು ಬೈಕ್ ಹತ್ತಿ, ಮಾಲೀಕ ಆಫ್ರೀನ್ ಹಿಂಬದಿ ಸವಾರನಾಗಿ ಕೂರಲು ಸೂಚಿಸಿದ್ದಾನೆ.
ಇತ್ತ ಆಟೋ ಚಾಲಕನಿಗೆ ಇಲ್ಲೇ ಇರುವಂತೆ ಹೇಳಿದ್ದಾನೆ. ಬಳಿಕ ಮಾಲೀಕ ಆಫ್ರೀನ್ ಜೊತೆ ಟೆಸ್ಟ್ ರೈಡ್ ಮಾಡಿದ್ದಾನ. ದಾರಿ ನಡುವೆ ಹಿಂಬದಿಯಲ್ಲಿ ಕುಳಿತಿದ್ದ ಬೈಕ್ ಮಾಲೀಕ ಆಫ್ರೀನ್ ಬಳಿ ಟೈಯರ್ ಸಮಸ್ಯೆ ಇದೆ. ಹಿಂಬದಿ ಚಕ್ರ ಗಾಳಿ ಇದೆಯಾ ಅಥವಾ ಪಂಚರ್ ಆಗಿದೆಯಾ ಎಂದಿದ್ದಾನೆ. ಒಂದು ಸಲ ಚೆಕ್ ಮಾಡಿ ಎಂದು ಬೈಕ್ ನಿಲ್ಲಿಸಿದ್ದಾನೆ.
ಮಾಲೀಕ ಆಫ್ರೀನ್ ಬೈಕ್‌ನಿಂದ ಇಳಿದು ಹಿಂಬದಿ ಚಕ್ರ ಪರಿಶೀಲಿಸಲು ಮುಂದಾದಾಗ ಅಪರಿಚಿತ ಬೈಕ್ ಜೊತೆ ಪರಾರಿಯಾಗಿದ್ದಾನೆ. ಆಫ್ರೀನ್ ಕೂಗಿ ಕೊಂಡರೂ ಅಪರಿಚಿತ ಕ್ಷಣಾರ್ಧದಲ್ಲೇ ಮಾಯವಾಗಿದ್ದಾನೆ. ಇತ್ತ ಸರ್ಕಾರಿ ಆಸ್ಪತ್ರೆ ಬಳಿ ಬಂದಾಗ ಅಪರಿಚತನ ಮಾವ (ಆಟೋ ಚಾಲಕ) ತನಗೆ 2000 ರೂಪಾಯಿ ನೀಡುವುದಾಗಿ ಹೇಳಿದ್ದ ಎಂದು ಮತ್ತೊಂದು ಮೋಸದ ಕತೆ ಬಿಚ್ಚಿಟ್ಟ.
ತಕ್ಷಣವೇ ಪೊಲೀಸ್ ಠಾಣೆಗೆ ತೆರಳಿದ ಬೈಕ್ ಮಾಲೀಕ ದೂರು ದಾಖಲಿಸಿದ್ದಾರೆ. ಇದೀಗ ಪೊಲೀಸರು ನಗರದ ಸಿಸಿಟಿವಿ ದೃಶ್ಯಗಳನ್ನ ಪರಿಶೀಲನೆ ನಡೆಸುತ್ತಿದ್ದಾರೆ. ಇದೇ ವೇಳೆ ಪೊಲೀಸರು ಅಪರಿಚಿತರ ಕೈಯಲ್ಲಿ ಬೈಕ್ ನೀಡಬೇಡಿ ಅವರ ಜೊತೆ ಯಾವುದೇ ವ್ಯವಹಾರ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.