ಅಹಮ್ಮದಾಬಾದ್(ಜು.18):  ಕೊರೋನಾ ಸಂಕಷ್ಟದಲ್ಲಿ ಆಟೋ ಚಾಲಕರು ಆದಾಯವಿಲ್ಲದೆ ಪರದಾಡುತ್ತಿದ್ದಾರೆ. ಕೊರೋನಾ ಭಯದಿಂದ ಬಹುತೇಕರು  ಆಟೋ ರಿಕ್ಷಾ ಮಾತ್ರವಲ್ಲ ಸಾರ್ವಜನಿಕ ವಾಹನವನ್ನು ಬಳಸುತ್ತಿಲ್ಲ. ಹೀಗಾಗಿ ಆಟೋ ಚಾಲಕರಿಗೆ ಬಾಡಿಗೆಯೂ ಇಲ್ಲ, ಇತ್ತ ಕೊರೋನಾ ಭಯವೂ ಹೆಚ್ಚಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಅಹಮ್ಮದಾಬಾದ್ ಸಾರಿಗೆ ಇಲಾಖೆ ಆಟೋ ಚಾಲಕರಿಗೆ ಖಾಕಿ ಬದಲು ನೀಲಿ ಬಣ್ಣದ ಸಮವಸ್ತ್ರ ಕಡ್ಡಾಯ ಮಾಡಿದೆ.

ಪಿಂಕ್ ಆಟೋ ಖರೀದಿಗೆ BBMPಯಿಂದ 75 ಸಾವಿರ ರೂ ಸಹಾಯ ಧನ!..

ದಿಢೀರ್ ಆಗಿ ಖಾಕಿ ಸಮವಸ್ತ್ರ ಬದಲು ನೀಲಿ ಸಮವಸ್ತ್ರ ಕಡ್ಡಾಯ ಮಾಡಿದ RTO ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಇದಕ್ಕೆ ಕಾರಣವೂ ಇದೆ. ಅಹಮ್ಮದಾಬಾದ್ ಆಟೋ ಚಾಲಕ ವಿಜಯ್ ಜಾಧವ್ ಕಳೆದ 15 ವರ್ಷಗಳಿಂದ ನಗರದಲ್ಲಿ ಆಟೋ ಚಾಲನೆ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಇಬ್ಬರು ಮಕ್ಕಳು ಸೇರಿದಂತೆ ನಾಲ್ಕು ಮಂದಿಯ ಜೀವನ ಇದೇ ರಿಕ್ಷಾ ಚಾಲನೆಯಲ್ಲೇ ಸಾಗುತ್ತಿದೆ. ಕೊರೋನಾ ವೈರಸ್ ವಕ್ಕರಿಸುವು ಮೊದಲು ಪ್ರತಿ ದಿನ ಸರಾಸರಿ 400 ರೂಪಾಯಿ ದುಡಿಯುತ್ತಿದ್ದೆ. ಆದರೆ ಕೊರೋನಾ ಬಳಿಕ ಇದೀಗ  ದಿನಕ್ಕೆ 50 ರೂಪಾಯಿ ದುಡಿಯುವುದು  ಕಷ್ಟವಾಗಿದೆ. ವಾರದಲ್ಲಿ 2 ದಿನ ಲಾಕ್‌ಡೌನ್, ಇನ್ನೆರಡು ದಿನ ದುಡಿಮೆ ಇಲ್ಲ. ಹೀಗೆ ಒಂದು ವಾರದಲ್ಲಿ 100 ರಿಂದ 150 ರೂಪಾಯಿ ಮಾತ್ರ ಸಿಗುತ್ತಿದೆ. ಇದರ ನಡುವೆ ನೀಲಿ ಸಮವಸ್ತ್ರ ಎಲ್ಲಿಂದ ಖರೀದಿಸಲಿ ಎಂದು ಅಳಲು ತೋಡಿಕೊಂಡಿದ್ದಾರೆ.

ಸಮವಸ್ತ್ರ ಧರಿಸಲು ಯಾವ ಆಟೋ ರಿಕ್ಷಾ ಚಾಲಕನಿಗೂ ವಿರೋಧವಿಲ್ಲ. ನೀವು ಹೇಳಿದ ಯಾವುದೇ ಬಣ್ಣದ ಸಮವಸ್ತ್ರ ಧರಿಸಲು ನಾವು ಸಿದ್ದ. ಆದರೆ ಸದ್ಯದ ಪರಿಸ್ಥಿತಿ ಹಾಗಿಲ್ಲ. ಸಮವಸ್ತ್ರ ಖರೀದಿ ಅಸಾಧ್ಯ. ಕನಿಷ್ಠ 3 ಜೊತೆ ಸಮವಸ್ತ್ರ ಅಗತ್ಯವಿದೆ. ಇದಕ್ಕೆ 1000 ರೂಪಾಯಿ ತಗುಲಲಿದೆ. ವಾರಕ್ಕೆ 200 ರೂಪಾಯಿ ದುಡಿಯವ ನಾವು ಇದೀಗ 1000 ರೂಪಾಯಿ ಖರ್ಚು ಮಾಡಿ ಸಮವಸ್ತ್ರ ಖರೀದಿಸಬೇಕೋ ಅಥವಾ ನಮ್ಮ ಕುಟುಂಬಕ್ಕೆ ತುತ್ತು ಅನ್ನ ನೀಡಬೇಕೋ ಎಂದು ಮತ್ತೊರ್ವ ಆಟೋ ಚಾಲಕ ಬಾಬು ಕಲಾಲ್ ಪ್ರಶ್ನಿಸಿದ್ದಾರೆ.