ಮುಂಬೈ(ಫೆ.12): ಸಾರ್ವಜನಿಕರು ರಸ್ತೆ ನಿಯಮ ಉಲ್ಲಂಘಿಸಿದರೆ ತಕ್ಷಣವೇ ದಂಡ ಪಾವತಿಸಬೇಕು. ಆದರೆ ಹಲವು ಬಾರಿ ಪೊಲೀಸರು ಹೆಲ್ಮೆಟ್ ಇಲ್ಲದೆ ಬೈಕ್ ಪ್ರಯಾಣ ಮಾಡುತ್ತಿರುವುದು ಗಮನಕ್ಕೆ ಬಂದರೂ ಯಾವುದೇ ಪ್ರಕರಣ ದಾಖಲಾಗುವುದಿಲ್ಲ. ಆದರೆ ಇದೀಗ ಪೊಲೀಸರಿಗೂ ಕೂಡ ಹೆಲ್ಮೆಟ್ ಕಡ್ಡಾಯ.

ಮುಂಬೈನ ನಿರ್ಮಲ್ ನಗರ  ಠಾಣೆ ಪೊಲೀಸ್ ಪಂಡರಿನಾಥ್ ಅಲ್ದಾರ್ ಹೆಲ್ಮೆಟ್ ಇಲ್ಲದೆ ಬೈಕ್ ಪ್ರಯಾಣ ಮಾಡಿದ ವಿಡಿಯೋ ವೈರಲ್ ಆಗಿತ್ತು. ರಸ್ತೆಯಲ್ಲಿ ಸಾರ್ವಜನಿಕರು ತಡೆದು ನಿಲ್ಲಿಸಿ, ಪೊಲೀಸರಿಗೂ ಒಂದೇ ನಿಯಮ, ಹೀಗಾಗಿ ಹೆಲ್ಮೆಟ್ ಇಲ್ಲದೆ ಪ್ರಯಾಣ ಮಾಡಲು ಬಿಡುವುದಿಲ್ಲ ಎಂದು ಕೀ ಕಿತ್ತುಕೊಂಡ ಘಟನೆ ನಡೆದಿತ್ತು. 

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಮುಂಬೈ ಪೊಲೀಸ್ ಇದೀಗ ಬೈಕ್ ಪ್ರಯಾಣ ಮಾಡೋ ಪ್ರತಿಯೊಬ್ಬ ಪೊಲೀಸರಿಗೆ ಹೆಲ್ಮೆಟ್ ಕಡ್ಡಾಯ ಎಂದಿದೆ. ನಿಯಮ ಉಲ್ಲಂಘಿಸಿದವರಿಗೆ ಹೆಚ್ಚುವರಿ ದಂಡ ವಿಧಿಸಲಾಗುವುದು ಎಂದು ಜಂಟಿ ಪೊಲೀಸ್ ಕಮೀಶನರ್ ಅಮಿತೇಶ್ ಕುಮಾರ್ ಹೇಳಿದ್ದಾರೆ. ಈ ನಿಯಮ ಶೀಘ್ರದಲ್ಲೇ ಇತರ ರಾಜ್ಯಗಳಲ್ಲೂ ಜಾರಿಯಾಗಲಿದೆ.