ದೆಹಲಿ(ಸೆ.16): ಹೊಸ ಟ್ರಾಫಿಕ್ ನಿಯಮ ಜಾರಿಯಾದ ಮೇಲೆ ಚಾಲಾಕಿ ವಾಹನ ಸವಾರರು  ಪೊಲೀಸರ ಕಣ್ತಪ್ಪಿಸಿ, ಸಿಗ್ನಲ್ ಇಲ್ಲದೇ ಇರುವ, ಸಿಸಿಟಿವಿ ಹಾಕದೇ ಇರುವ ಗಲ್ಲಿ ರೋಡ್‌ಗಳಲ್ಲೇ ಪ್ರಯಾಣಿಸುವರ ಸಂಖ್ಯೆ ಹೆಚ್ಚಾಗಿದೆ.  ಸುತ್ತಿ ಬಳಸಿ ಪ್ರಯಾಣಿಸಿದರೂ ಪರವಾಗಿಲ್ಲ, ನಿಯಮ ಪಾಲನೆ ಮಾತ್ರ ಸಾಧ್ಯವಿಲ್ಲ ಅನ್ನೋದು ಕೆಲವರ ಅಭಿಮತ. ಈಗಾಗಲೇ ಈ ರೀತಿ ಹಲವು ಘಟನೆಗಳು ನಡೆದಿವೆ. ಇದೀಗ ರಾಜಧಾನಿಯಲ್ಲಿ ನಡೆದ ಘಟನೆ ಪೊಲೀಸರು ಚಾಪೆ ಕೆಳಗಿ ತೂರಿದರೆ, ಚಾಲಾಕಿ ವಾಹನ ಸವಾರರು ರಂಗೋಲಿ ಕೆಳಗೆ ತೂರುತ್ತಾರೆ ಅನ್ನೋ ಹಾಗಾಗಿದೆ.

ಇದನ್ನೂ ಓದಿ: ನಿಯಮ ಉಲ್ಲಂಘಿಸಿದ್ರೆ ದಂಡ ಇಲ್ಲ, ಪೊಲೀಸರೇ ನೀಡುತ್ತಾರೆ ಲೈಸೆನ್ಸ್, ಹೆಲ್ಮೆಟ್!

ದೆಹಲಿಯ ಕಾಶ್ಮೀರ್ ಗೇಟ್ ಸಮೀಪದಲ್ಲಿ ಬೆಳಗ್ಗೆ 9.30 ರ ಸುಮಾರಿಗೆ  ಹೈಡ್ರಾಮವೇ ನಡೆದಿತ್ತು. ಬೆಳಗಿನ ಸಮಯವಾಗಿದ್ದರಿಂದ ಟ್ರಾಫಿಕ್ ಕೇಳುವುದೇ ಬೇಡ. ಈ ಗಿಜಿಗಿಡುವ ಟ್ರಾಫಿಕ್ ನಡುವೆ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದರು. ಇದೇ ದಾರಿಯಲ್ಲಿ ಸ್ಕೂಟಿ ಚಲಾಯಿಸುತ್ತಾ ಬಂದ ಮಹಿಳೆ ಮೊಬೈಲ್ ಫೋನ್‌ನಲ್ಲಿ ಬ್ಯೂಸಿಯಾಗಿದ್ದರು. ಇದನ್ನು ಗಮನಿಸಿದ ಪೊಲೀಸರು ತಕ್ಷಣವೇ ಸ್ಕೂಟರ್ ನಿಲ್ಲಿಸಿದ್ದಾರೆ. 

ಇದನ್ನೂ ಓದಿ: ಲಾರಿ ಚಾಲಕಗೆ 6.5 ಲಕ್ಷ ರು.ದಂಡ: ಹೊಸ ಮೋಟಾರು ಕಾಯ್ದೆ ಜಾರಿಗೆ ಮುನ್ನವೇ ದಂಡ!

ಪರಿಶೀಲಿಸಿದಾಗ ಆಕೆಯ ಬಳಿಕ ವಿಮೆ ದಾಖಲೆಗಳಿಲ್ಲ. ಹೆಲ್ಮೆಟ್ ಹಾಕಿಲ್ಲ, ಎಮಿಶನ್ ಮಾಡಿಸಿಲ್ಲ. ಜೊತೆಗೆ ಮೊಬೈಲ್ ಫೋನ್ ಬಳಕೆ. ಹೀಗಾಗಿ ಪೊಲೀಸರು ದುಬಾರಿ ದಂಡದ ಚಲನ್‌ಗೆ ಮುಂದಾದರು. ಆರಂಭದಲ್ಲಿ ತನಗೆ ಆರೋಗ್ಯ ಸಮಸ್ಯೆ ಎಂದು ಮಹಿಳೆ ಹೇಳಿಕೊಂಡಿದ್ದಾಳೆ. ಆದರೆ  ದುಬಾರಿ ದಂಡ ಬೀಳಲಿದೆ ಎಂದು ಗೊತ್ತಾಗುತ್ತಿದ್ದಂತೆ ರಂಪಾಟ ಆರಂಭಿಸಿದ್ದಾಳೆ. ಫೋನ್ ಮೂಲಕ ತನ್ನ ತಾಯಿಗೆ ಕರೆ ಮಾಡಿ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾಳೆ. 

ಇದನ್ನೂ ಓದಿ: ₹100 ಪಾವತಿಸಿದರೆ ಸಾಕು, ದುಬಾರಿ ದಂಡದಿಂದ ಸಿಗಲಿದೆ ಮುಕ್ತಿ!

ಈ ರೀತಿಯ ಸಂದರ್ಭಗಳನ್ನು ಎದುರಿಸಿದ ಪೊಲೀಸರು ಈಕೆಯ ಯಾವುದೇ ಡ್ರಾಮಗೂ ಜಗ್ಗಲಿಲ್ಲ. ಅತ್ತ ಪೊಲೀಸರು ಇನ್ನೇನು ಚಲನ್ ನೀಡೇ ಬಿಡ್ತಾರೆ ಅನ್ನುವಷ್ಟರಲ್ಲಿ, ದಂಡ ಹಾಕಿದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ನಿಮ್ಮ ಕಿರುಕುಳವೇ ಕಾರಣ ಎಂದು ಬರೆದಿಟ್ಟು ಸಾಯುತ್ತೇನೆ ಎಂದಿದ್ದಾಳೆ. ಈ ಮಾತಿಗೆ ಪೊಲೀಸರೇ ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ. ಇತ್ತ ಈಕೆಯ ಡ್ರಾಮದಿಂದ ಇತರ ವಾಹನ ಸವಾರರು ಪರದಾಡುವಂತಾಯಿತು.  ಸೂಸೈಡ್ ಮಾಡಿಕೊಂಡರೆ ನಮ್ಮ ಪಾಡೇನು ಎಂದು ಬೆಚ್ಚಿದ ಪೊಲೀಸರು ಯಾವುದೇ ಫೈನ್ ಹಾಕದೇ ಬಿಟ್ಟು ಕಳುಹಿಸಿದ್ದಾರೆ.