ಇವನೆಂಥಾ ಕಿಲಾಡಿ! ಚೀಲದಲ್ಲಿ ನಾಣ್ಯ ತಂದು ಸ್ಕೂಟರ್ ಖರೀದಿಸಿದ!
ದೀಪಾವಳಿಗೆ ಭರ್ಜರಿ ಆಫರ್ ನೀಡುವುದರಿಂದ ವಾಹನಗಳ ಖರೀದಿ ಜನ ಮುಗಿ ಬೀಳುವುದು ಸಾಮಾನ್ಯ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ 83 ಸಾವಿರ ಮೌಲ್ಯದ ಸ್ಕೂಟಿ ಖರೀದಿಸಿ ಅಷ್ಟೂ ಹಣವನ್ನು ಚಿಲ್ಲರೆಯಲ್ಲಿ ಪಾವತಿಸಿದ್ದಾರೆ.
ಭೋಪಾಲ್ (ಅ. 27): ದೀಪಾವಳಿ ವೇಳೆ ವಾಹನ ಖರೀದಿ ಮಾಡುವುದು ಶುಭಕರ ಎನ್ನುವ ನಂಬಿಕೆ ಭಾರತೀಯರಲ್ಲಿದೆ. ಅಲ್ಲದೇ ಹಬ್ಬಕ್ಕೆ ವಾಹನ ಖರೀದಿ ಮೇಲೆ ವಿಶೇಷ ಆಫರ್‌ಗಳಿರುವುದರಿಂದ ಇದೇ ವೇಳೆಯಲ್ಲಿ ಜನ ವಾಹನ ಖರೀದಿಗೆ ಮುಂದಾಗುತ್ತಾರೆ.
ಇದೇ ಕಾರಣಕ್ಕಾಗಿ ಮಧ್ಯಪ್ರದೇಶದಲ್ಲಿ ವ್ಯಕ್ತಿಯೊಬ್ಬರು 83 ಸಾವಿರ ರು. ಮೌಲ್ಯದ ಹೋಂಡಾ ಆ್ಯಕ್ಟಿವಾ 125 ಸ್ಕೂಟರ್ ಕೊಂಡು ಕೊಂಡಿದ್ದಾರೆ. ಇದರಲ್ಲೇನೂ ವಿಶೇಷತೆ ಇಲ್ಲದಿದ್ದರೂ, ಅವರು ಅದಕ್ಕೆ ಪಾವತಿ ಮಾಡಿದ ರೀತಿ ನೋಡಿ ಡೀಲರ್‌ಗಳು ದಂಗಾಗಿ ಹೋಗಿದ್ದಾರೆ. ಮಧ್ಯಪ್ರದೇಶದ ಸತನಾ ಜಿಲ್ಲೆ ನಿವಾಸಿ ರಾಕೇಶ್ ಕುಮಾರ್ ಎಂಬವರು ಸ್ಕೂಟರ್ ಖರೀದಿ ಮಾಡಿದ್ದು, ಸ್ಕೂಟರ್ ವೆಚ್ಚವಾದ 83 ಸಾವಿರ ರುಪಾಯಿಗಳನ್ನು ನಾಣ್ಯಗಳಲ್ಲೇ ಪಾವತಿ ಮಾಡಿದ್ದಾರೆ.
ಚೀಲದಲ್ಲಿ ತಂದಿದ್ದ ಐದು ಹಾಗೂ 10 ರು. ಮೌಲ್ಯದ ನಾಣ್ಯಗಳನ್ನು ಎಣಿಸಲು ಸಿಬ್ಬಂದಿಗಳು ಬರೋಬ್ಬರಿ ಮೂರು ತಾಸುಗಳನ್ನು ತೆಗೆದು ಕೊಂಡಿದ್ದಾರೆ. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.