ಬಹುನಿರೀಕ್ಷಿತ ಜವಾ ಮೋಟರ್‌ಬೈಕ್ ಬಿಡುಗಡೆಯಾಗಿದೆ. ಮೂರು ಮಾಡೆಲ್‌ಗಳಲ್ಲಿ ಜಾವಾ ಭಾರತದ ರಸ್ತೆಗಿಳಿದಿದೆ. ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಬೈಕ್‌ಗಳಿಗೆ ಪ್ರತಿಸ್ಪರ್ಧಿಯಾಗಿರುವ ನೂತನ ಜಾವಾ ಮತ್ತೆ ಭಾರತದ ಬೈಕ್ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಮೊದಲ ಹೆಜ್ಜೆ ಇಟ್ಟಿದೆ. ನೂತನ ಬೈಕ್ ಬೆಲೆ, ವಿಶೇಷತೆ  ಕುರಿತ ಹೆಚ್ಚಿನ ವಿವರ ಇಲ್ಲಿದೆ.

ಮುಂಬೈ(ನ.15): ಮೋಟರ್ ಬೈಕ್ ಕ್ಷೇತ್ರದಲ್ಲಿ ದಿಗ್ಗಜನಾಗಿ ಮೆರೆದ ಜಾವಾ ಮತ್ತೆ ಬಂದಿದೆ. ಬರೋಬ್ಬರಿ 22 ವರ್ಷಗಳ ಬಳಿಕ ಜಾವಾ ಬೈಕ್ ಭಾರತದಲ್ಲಿ ಬಿಡುಗಡೆಯಾಗಿದೆ. ಇಂದು ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ನೂತನ ಜಾವಾ ಮೋಟರ್‌ಸೈಕಲ್ 3 ಬೈಕ್‌ಗಳನ್ನ ಬಿಡುಗಡೆ ಮಾಡಿದೆ.

ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ಪ್ರತಿಸ್ಪರ್ಧಿಯಾಗಿರೋ ಈ ಬೈಕ್ ಜಾವಾ, ಜಾವ 42 ಹಾಗೂ ಜಾವಾ ಪೆರಾಕ್ ಎಂಬ ಮೂರು ಮಾಡೆಲ್‌ಗಳಲ್ಲಿ ಬಿಡುಗಡೆಯಾಗಿದೆ. ಈ ಮೂಲಕ ಕಾತರದಿಂದ ಕಾಯುತ್ತಿದ್ದ ಬೈಕ್ ಪ್ರಿಯರ ಸಂತಸ ಇಮ್ಮಡಿಗೊಂಡಿದೆ. 

ಒಟ್ಟು 6 ಬಣ್ಣಗಳಲ್ಲಿ ಜಾವಾ ಬೈಕ್ ಮೋಟರ್‌ಬೈಕ್ ಲಭ್ಯವಿದೆ. ಜಾವಾ ಹಾಗೂ ಜಾವಾ 42 ಬೈಕ್ ಮೋಟರ್‍ ‌ಬೈಕ್ 293 ಸಿಸಿ ಎಂಜಿನ್ ಹೊಂದಿದ್ದರೆ, ಜಾವಾ ಪೆರಾಕ್ 334 ಸಿಸಿ ಎಂಜಿನ್ ಹೊಂದಿದೆ. ಸದ್ಯ ಅನಾವರಣಗೊಂಡಿರುವ ಕಸ್ಟಮೈಸ್‌ಡ್ ಜಾವಾ ಬೊಬರ್(ಜಾವಾ ಪೆರಾಕ್) 2019ರಲ್ಲಿ ಮಾರುಕ್ಟಟೆ ಪ್ರವೇಶಿಸಲಿದೆ.

70-80ರ ದಶಕದಲ್ಲಿ ಭಾರತದಲ್ಲಿ ಕಿಂಗ್ ಆಗಿ ಮೆರೆದ ಜಾವಾ 1996ರಲ್ಲಿ ನಿರ್ಮಾಣ ಅಂತ್ಯಗೊಳಿಸಿತು. ಬಳಿಕ 2016ರಲ್ಲಿ ಮಹೀಂದ್ರ ಮೋಟಾರು ಸಂಸ್ಥೆ ಜಾವಾ ಮೋಟಾರ್ ಸೈಕಲ್ ನಿರ್ಮಾಣದ ಹಕ್ಕನ್ನ ಪಡೆಯಿತು. ಇದೀಗ 2 ವರ್ಷಗಳ ಬಳಿಕ ಮಹೀಂದ್ರ & ಮಹೀಂದ್ರ ಕಂಪೆನಿ ಜಾವಾ ಬೈಕ್ ಬಿಡುಗಡೆ ಮಾಡಿದೆ.

Scroll to load tweet…

ಜಾವಾ ಹಾಗೂ ಜಾವಾ 42 ಎರಡೂ ಬೈಕ್ ರೆಟ್ರೋ ಲುಕ್ ಹೊಂದಿದೆ. ಈ ಹಿಂದೆ ಇದ್ದ ಜಾವಾ ಬೈಕ್ ಲುಕನ್ನೇ ನೂತನ ಬೈಕ್ ಹೊಂದಿದೆ. ಎಂಜಿನ್‌ಗಳಲ್ಲೂ ಹೆಚ್ಚಿನ ಬದಲಾವಣೆ ಇಲ್ಲ. 293 ಸಿಸಿ ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್ ಲಿಕ್ವಿಡ್ ಕೂಲ್‌ಡ್ ಎಂಜಿನ್ ಹೊಂದಿದೆ.

ಬೋರ್ ಸ್ಟ್ರೋಕ್ 76*65mm, ಕಂಪ್ರೆಶನ್ 11:1, 27bhp ಪೀಕ್ ಪವರ್ ಹಾಗೂ 28nm ಟಾರ್ಕ್ ಉತ್ಪಾದಿಸಲಿದೆ. ಟ್ವಿನ್ ಸೈಲೆನ್ಸರ್ ಹಾಗೂ 6 ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ. ಇಷ್ಟೇ ಅಲ್ಲ, ನೂತನ BS6 ಎಂಜಿನ್ ಆಗಿರೋದರಿಂದ ಸುಪ್ರೀಂ ಕೋರ್ಟ್ ಎಮಿಶನ್ ನಿಯಮವನ್ನೂ ಜಾವಾ ಪಾಲಿಸಿದೆ.

Scroll to load tweet…

ಜಾವಾ 42 ಬೈಕ್ ಬೆಲೆ 1.55 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ ದೆಹಲಿ), ಜಾವಾ ಬೈಕ್ ಬೆಲೆ 1.64 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ ದೆಹಲಿ), ಜಾವಾ ಪೆರಾಕ್(ಕಸ್ಟಮೈಸಡ್ ಬಾಬರ್) ಬೈಕ್ ಬೆಲೆ 1.89 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ ದೆಹಲಿ).

ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ಬಿಡುಗಡೆಯಾಗಿರುವ ನೂತನ ಜಾವಾ ಬೈಕ್‌ಗಳಲ್ಲಿ ಸಿಂಗಲ್ ಚಾನೆಲ್ ಎಬಿಎಸ್(ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ಹೊಂದಿದೆ. ಶೀಘ್ರದಲ್ಲೇ ಜಾವಾ ಇನ್ನೆರಡು ಮಾಡಲ್‌ ಬೈಕ್‌ಗಳನ್ನ ಬಿಡುಗಡೆ ಮಾಡಲಿದೆ. 

ಇದನ್ನೂ ಓದಿ: ಜಾವಾ ಬೈಕ್‌ಗೂ ಉಂಟು ಮೈಸೂರಿನ ನಂಟು!