ನವದೆಹಲಿ(ಜು.21): 80- 90ರ ದಶಕದ ಜನರಿಗೆ ‘ಚಲ್‌ ಮೇರಿ ಲೂನಾ’ ಎಂಬ ಲೂನಾ ದ್ವಿಚಕ್ರ ವಾಹನದ ಜಾಹಿರಾತು ಪರಿಚಯವಿದ್ದೇ ಇರುತ್ತದೆ. ಸೈಕಲ್‌ ರೀತಿ ಪೆಡಲ್‌ ತುಳಿದು ಚಾಲು ಮಾಡಬೇಕಿದ್ದ ಲೂನಾ, ಕಾಲಾಂತರದಲ್ಲಿ ಹೊಸ ವಾಹನಗಳ ಮುಂದೆ ಮಂಕಾಗಿ ಮಾರುಕಟ್ಟೆಯಿಂದ ಮಾಯವಾಗಿತ್ತು. ಆದರೆ ದಶಕಗಳ ನಂತರ ಮತ್ತೆ ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಬರಲು ಲೂನಾ ಸಜ್ಜಾಗಿದೆ.

ತ್ರಿಚಕ್ರ ವಾಹನ ಹಾಗೂ ಇ-ರಿಕ್ಷಾಗಳ ಉತ್ಪಾದನೆಯಲ್ಲಿ ಸೈ ಎನ್ನಿಸಿಕೊಂಡಿರುವ ಕೈನೆಟಿಕ್‌ ಗ್ರೂಪ್‌, ಲೂನಾವನ್ನು ಎಲೆಕ್ಟ್ರಿಕ್‌ ಮಾದರಿಯಲ್ಲಿ ಉತ್ಪಾದಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ. ಎಲೆಕ್ಟ್ರಿಕ್‌ ಕೈನೆಟಿಕ್‌ ಲೂನಾ ಹೆಸರಿನ ಈ ದ್ವಿಚಕ್ರ ವಾಹನವು ಹಳೇ ಶೈಲಿಯನ್ನೇ ಹೊಂದಿರಲಿದ್ದು, ಕೆಲವೇ ಕೆಲವು ಬದಲಾವಣೆ ಮಾಡಲಾಗುತ್ತದೆ. ಇದು ಸಂಪೂರ್ಣ ಪರಿಸರ ಸ್ನೇಹಿಯಾಗಿರಲಿದೆ ಎಂದು ಕೈನೆಟಿಕ್‌ ಸಂಸ್ಥೆ ಹೇಳಿದೆ.

ಲಿ-ಯಾನ್‌ ಬ್ಯಾಟಿರಿಯನ್ನು ಹೊಂದಲಿರುವ ಈ ವಾಹನದ ಚಾಜ್‌ರ್‍ಗಾಗಿ ಯೂಎಸ್‌ಬಿ ಸ್ಲಾಟ್‌, ಎಲ್‌ಇಡಿ ಡಿಆರ್‌ಎಲ್‌, ಥಂಬ್‌ ಸ್ಟಾರ್ಟರ್‌ ವ್ಯವಸ್ಥೆ ಒಳಗೊಂಡಿರಲಿದೆ. ಈ ವಾಹನವು 70-80 ಕಿ.ಮೀ ಚಲಿಸುವ ಸಾಮರ್ಥ್ಯ ಹೊಂದಿರಲಿದೆ. ಆದರೆ, ಗರಿಷ್ಠ ಸ್ಪೀಡ್‌ ಗಂಟೆಗೆ 25 ಕಿ.ಮೀ ಮಾತ್ರವೇ ಆಗಿರಲಿದೆ. 50 ಸಾವಿರ ರು. ಆಸುಪಾಸಿನಲ್ಲೇ ನಿಗದಿಯಾಗಬಹುದಾದ ಈ ವಾಹನದ ಬುಕ್ಕಿಂಗ್‌ಗಾಗಿ ಗ್ರಾಹಕರು ನೋಂದಣಿ ಮಾಡಿಕೊಳ್ಳುವ ಅಗತ್ಯವಿಲ್ಲ.