ಮುಂಬೈ(ಸೆ.12): ಬಾಲಿವುಡ್ ನಟ ಜಾನ್ ಅಬ್ರಹಾಂ ಬಳಿ ಹಲವು ಐಷಾರಾಮಿ ಹಾಗೂ ದುಬಾರಿ ಕಾರುಗಳಿವೆ. ಜೊತೆಗೆ ದುಬಾರಿ ಮೌಲ್ಯದ ಬೈಕ್‌ಗಳಿವೆ. ಹೊಸ ಮಾಡೆಲ್, ಸ್ಪೋರ್ಟ್ಸ್ ಎಡಿಶನ್ ಕಾರು ಬೈಕ್ ಅಂದರೆ ಜಾನ್‌ಗೆ ಅಚ್ಟು ಮೆಚ್ಚು. ಹೀಗಾಗಿ ಮಾರುಕಟ್ಟೆಯಲ್ಲಿರುವ ಬಹುತೇಕ ಸ್ಪೋರ್ಟ್ಸ್ ಎಡಿಶನ್ ಕಾರು ಬೈಕ್‌ಗಳು ಜಾನ್ ವಾಹನ ಸಂಗ್ರಹಾಲದಲ್ಲಿದೆ. ಇದರಲ್ಲಿ ಒಪನ್ ಜೀಪ್ ಆಗಿ ಮಾಡಿಫಿಕೇಶನ್ ಮಾಡಿದ್ದ ಮಾರುತಿ ಸುಜುಕಿ ಜಿಪ್ಸಿ ಜಾನ್ ಅಬ್ರಹಾಂ ನೆಚ್ಚಿನ ಕಾರಾಗಿದೆ.

ಜಾನ್ ಅಬ್ರಹಾಂ ಬಳಿ ಇದೆ 6 ಸೂಪರ್ ಬೈಕ್!

ಕಾರು ಬೈಕ್‌ಗಳ ಮೇಲಿನ ಪ್ರೀತಿಗಿಂತ ಜಾನ್‌ ಅಬ್ರಹಾಂಗೆ ಪ್ರಾಣಿ ಪಕ್ಷಿಗಳ ಮೇಲೆ ಪ್ರೀತಿ ಹೆಚ್ಚು. ಕಳೆದ 5 ವರ್ಷಗಳಿಂದ ಮುಂಬೈನ ಆನಿಮಲ್ ಮ್ಯಾಟರ್ ಟು ಮಿ (AMTM) ಎಂಬ NGO ಜೊತೆ ಜಾನ್ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸಂಸ್ಥೆ ಪ್ರಾಣಿಗಳ ರಕ್ಷಣೆ, ಪಾಲನೆ ಮಾಡುತ್ತಿದೆ. ಇದೀಗ ಪ್ರಾಣಿಗಳಿಗೆ ವಾಹನ ಡಿಕ್ಕಿ ಹೊಡೆದಾಗ, ಅಥವಾ ಇನ್ಯಾವುದೋ ಕಾರಣಕ್ಕೆ ಪ್ರಾಣಿಗಳಿಗೆ ಗಾಯವಾದಾಗ, ಅನಾರೋಗ್ಯವಾದಾಗ ಈ ಸಂಸ್ಥೆ ತಕ್ಷಣೇ ಕಾರ್ಯಪ್ರವೃತ್ತವಾಗಿದೆ.

ಈಗಾಗಲೇ ಹಲವು ಪ್ರಾಣಿಗಳನ್ನು ರಕ್ಷಿಸಿ ಪಾಲನೆ ಮಾಡಿದೆ. ಈ AMTM ಸಂಸ್ಥೆಗೆ ದೂರ ಪ್ರದೇಶದಿಂದ ಪ್ರಾಣಿಗಳನ್ನು ಚಿಕಿತ್ಸೆಗಾಗಿ ಕರೆದೊಯ್ಯಲು, ಸಂಪೂರ್ಣ ಗುಣಮುಖವಾದ ಬಳಿಕ ಪ್ರಾಣಿಗಳನ್ನು ಮತ್ತೆ ಕಾಡಿಗೆ ಮರಳಿಸಲು ಸೇರಿದಂತೆ ಹಲವು ಕಾರಣಕ್ಕೆ ವಾಹನದ ಅವಶ್ಯಕತೆ ಇತ್ತು. ಇದನ್ನು ಅರಿತ ಜಾನ್ ಅಬ್ರಹಾಂ ತನ್ನ ಮಾರುತಿ ಜಿಪ್ಸಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.