ನವದೆಹಲಿ: ಎಂಜಿ ಮೋಟಾರ್ಸ್‌ ಭಾರತಕ್ಕೆ ಕಾಲಿಟ್ಟಾಗಲೇ ಆಟೋಮೊಬೈಲ್‌ ಕ್ಷೇತ್ರಕ್ಕೆ ಹೊಸ ತಂತ್ರಜ್ಞಾನ ತರಲಿದೆ ಎಂಬ ಮಾತು ಕೇಳಿಬಂದಿತ್ತು. ಅದು ನಿಜವಾಗಿದೆ. ಎಂಜಿ ತನ್ನ ಮೊತ್ತಮೊದಲ ಕಾರು ಎಂಜಿ ಹೆಕ್ಟರ್‌ ಎಸ್‌ಯುವಿಯನ್ನು ದೇಶಕ್ಕೆ ಪರಿಚಯಿಸಿದೆ. ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ನಿಂದ ಕೆಲಸ ಮಾಡುವ ಹಲವಾರು ಫೀಚರ್‌ಗಳನ್ನು ಹೊಂದಿರುವ ಈ ಕಾರನ್ನು ದೇಶದ ಮೊದಲ ಇಂಟರ್‌ನೆಟ್‌ ಕಾರು ಎಂದೇ ಕರೆಯಲಾಗಿದೆ. ಇನ್ನೆರಡು ತಿಂಗಳಲ್ಲಿ ದೇಶದ ರಸ್ತೆಗಳಲ್ಲಿ ಕಾಣಿಸಿಕೊಳ್ಳಲಿರುವ ಈ ಕಾರು ಆಟೊಮೊಬೈಲ್‌ ಕ್ಷೇತ್ರದಲ್ಲಿ ಹೊಸ ಅಲೆ ಎಬ್ಬಿಸಲಿದೆ.

ಇದನ್ನೂ ಓದಿ: ಇನೋವಾ ಪ್ರತಿಸ್ಪರ್ಧಿ- ಕಡಿಮೆ ಬೆಲೆಯಲ್ಲಿ ಸಿಗಲಿದೆ ರೆನಾಲ್ಟ್ MPV ಕಾರು!

ಏನೇ ಬೇಕಿದ್ದರೂ ಕಾರಿನೊಂದಿಗೆ ಮಾತನಾಡಿ !
ಕಾರಿನ ಬಾಗಿಲು ಹಾಕಬೇಕಿದ್ದರೆ, ಗ್ಲಾಸ್‌ ಏರಿಸಬೇಕಿದ್ದರೆ ನೀವು ಬಟನ್‌ ಪ್ರೆಸ್‌ ಮಾಡಬೇಕು. ಆದರೆ ಕೇವಲ ಬಾಯಿಂದಲೆ ಹೇಳಿ ಯಾವುದೆ ಆಯಾಸ ಇಲ್ಲದೆ ಕಾರಿನ ವ್ಯವಸ್ಥೆ ನಿರ್ವಹಿಸುವಂತಾಗಿದ್ದರೆ ಎಂದು ನಾವು ಯೋಚನೆ ಮಾಡುವುದಕ್ಕೂ ಮುನ್ನವೇ ಇಂಗ್ಲೆಂಡಿನ ಕಾರು ತಯಾರಿಕಾ ಸಂಸ್ಥೆ ಎಂ.ಜಿ. ಮೋಟಾರ್ಸ್‌ ಅಂಥಾ ಸೌಲಭ್ಯವುಳ್ಳ ಎಂಜಿ ಹೆಕ್ಟರ್‌ ಎಂಬ ಎಸ್‌ಯುವಿ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡುತ್ತಿದೆ.

ನೀವು ಏನೇ ಹೇಳುವುದಿದ್ದರೂ ಮೊದಲು ಹಲೋ ಎಂಜಿ ಎಂದು ಹೇಳಿ ಆಮೇಲೆ ಏಸಿ ಆನ್‌ ಅಂದರೆ ಏಸಿ ಆನ್‌ ಆಗುತ್ತೆ. ಬಾಗಿಲು ಹಾಕಬೇಕೆ, ವೈಪರ್‌ ಹಾಕಬೇಕೆ, ಗ್ಲಾಸ್‌ ಏರಿಸಬೇಕೆ, ಯಾವ ಬಟನ್‌ ಅನ್ನೂ ಒತ್ತಬೇಕಿಲ್ಲ. ಹಲೋ ಎಂಜಿ ಎಂದು ಹೇಳುತ್ತ ಹೋಗಿ ಕಾರು ಚಾಚೂತಪ್ಪದೆ ಮಾತು ಕೇಳುತ್ತೆ. ಬಯಸಿದ ಹಾಡನ್ನು ಕೇಳಬೇಕೆ ಅದನ್ನೂ ಹೇಳಿದರೆ ಸಾಕು ಕೇಳಿಸುತ್ತೆ. ನೆವಿಗೇಶನ್‌ ಆನ್‌ ಅಂದರೆ ಪರದೆಯ ಮೇಲೆ ನೇವಿಗೇಶನ್‌ ಮೂಡುತ್ತೆ. ಯಾವ ದಾರಿಯಲ್ಲಿ ಹೋಗುತ್ತಿದ್ದೇವೆ. ಮುಂದೇನಾದರೂ ಟ್ರಾಫಿಕ್‌ ಜಾಮ್‌ ಆಗಿದೆಯಾ, ರಸ್ತೆ, ಸೇತುವೆ ಅಥವಾ ಇತರ ಕಾಮಗಾರಿ ನಡೆಯುತ್ತಿದೆಯೇ, ಹೋಗುವ ದಾರಿಯಲ್ಲಿ ಹವಾಮಾನ ಹೇಗಿದೆ, ಎಲ್ಲಿ ಪಾರ್ಕಿಂಗ್‌ಗೆ ಅವಕಾಶ ಇದೆ ಎಲ್ಲವನ್ನೂ ಇದು ತಿಳಿಸಲಿದೆ. ಮುಂದೆ ಇರುವ ಹೊಟೇಲ್‌, ಪೆಟ್ರೋಲ್‌ ಬಂಕ್‌, ಮಾಲ್‌ಗಳು....ಈ ವಿವರಗಳನ್ನೂ ನಕ್ಷೆಯಿಂದ ತಿಳಿಯಬಹುದು. ಹೀಗೆ ನಾವು ಹೇಳುವ ನೂರಕ್ಕೂ ಹೆಚ್ಚು ಕೆಲಸವನ್ನು ಕಾರು ಮಾಡಲಿದೆ.

ಇದನ್ನೂ ಓದಿ: ರೋಲ್ಸ್ ರೋಯ್ಸ್ ಬದಲು ಹೊಸ ಕಾರು ಖರೀದಿಸಿದ ಅಮಿತಾಬ್ ಬಚ್ಚನ್!

ಕಾರು ಚಾಲನೆಯನ್ನು ಅರಾಮದಾಯಕವಾಗಿಸುವ ಜತೆ ಕಾರಿನಲ್ಲಿ ಏಕಾಂಗಿತನವನ್ನೂ ದೂರ ಮಾಡುತ್ತದೆ. ಕಾರಿನೊಂದಿಗೆ ಮಾತನಾಡುತ್ತ ಸಾಗುತ್ತಿದ್ದರೆ ಕಾರಿನ ಪ್ರಯಾಣ ಆಯಾಸವೇ ಆಗದು. ಇನ್ನು ಎರಡು ತಿಂಗಳು ಕಾದರೆ ಸಾಕು. ಬ್ರಿಟನ್‌ನ ಎಂ.ಜಿ.ಮೋಟರ್ಸ್‌ ಸಂಸ್ಥೆ ರೂಪಿಸಿರುವ ಇಂಟರ್‌ನೆಟ್‌ ಕಾರು ಭಾರತದ ಹಳ್ಳಿ ಹಳ್ಳಿಗಳಲ್ಲೂ ಅಚ್ಚರಿ ಹುಟ್ಟಿಸಲಿದೆ. ಈ ಎಸ್‌ಯುವಿ ಇಂಟರ್‌ನೆಟ್‌ನ ಬಹುತೇಕ ಸಾಧ್ಯತೆಗಳನ್ನು ಬಳಸಿಕೊಂಡು ಬೆರಗು ಮೂಡಿಸಿದೆ. ಈ ಕಾರನ್ನು ಇಂಟರ್‌ನೆಟ್‌ ಕಾರ್‌ ಎಂದೆ ಕರೆಯಲಾಗುತ್ತದೆ.

ಕಾರಿನಲ್ಲಿ ಅಳವಡಿಸಿದ ಎಂ.ಜಿ.ಐ ಸ್ಮಾರ್ಟ್‌ ಆ್ಯಪ್‌ ವ್ಯವಸ್ಥೆ ಕಾರಿನಲ್ಲಿ ಏನೆಲ್ಲ ಕೌತುಕಗಳನ್ನು ಹುಟ್ಟುಹಾಕಿದೆ. ನೀವು ಯಾವುದೋ ಹೊಟೇಲ್‌, ಈವೆಂಟ್‌ ಮುಗಿಸಿ ಹೊರಬಂದಾಗ ಚಾಲಕ ಎಲ್ಲಿ ಕಾರನ್ನು ಪಾರ್ಕ ಮಾಡಿದ್ದಾನೆ ಎಂದು ಹುಡುಕಾಡಬೇಕಿಲ್ಲ. ನಿಮ್ಮ ಮೊಬೈಲ್‌ನಲ್ಲಿ ನೋಡಿದರೆ ಗೊತ್ತಾಗಲಿದೆ. ಟೈರಿನಲ್ಲಿ ಗಾಳಿಯ ಒತ್ತಡ ಎಷ್ಟಿದೆ, ಪಂಕ್ಚರ್‌ ಆಗಿದೆಯೇ, ನಿಮ್ಮ ಕಾರನ್ನು ಸ್ನೇಹಿತರೊಬ್ಬರಿಗೆ ಕೊಟ್ಟಿದ್ದೀರಿ ಎಂದಿಟ್ಟುಕೊಳ್ಳಿ. ಆ ಕಾರು ಎಲ್ಲಿ ಓಡುತ್ತಿದೆ. ಹೇಗೆ ಓಡುತ್ತಿದೆ ಎಂದು ನಿಮ್ಮ ಅಂಗೈಯಲ್ಲಿರುವ ಮೊಬೈಲ್‌ನಿಂದಲೆ ತಿಳಿಯಬಹುದು.

ಇದನ್ನೂ ಓದಿ: 100ಕ್ಕೂ ಹೆಚ್ಚು ಲಕ್ಸುರಿ ಕಾರಿನಲ್ಲಿ ಲೋಕಸಭಾ ಚುನಾವಣಾ ಪ್ರಚಾರ!

ಈ ಕಾರು ಬಳಸುತ್ತಿದ್ದಾಗ ಅಪಘಾತದ ಸಾಧ್ಯತೆ ತುಂಬ ಕಡಿಮೆ. ಏಕೆಂದರೆ ಅಪಘಾತ ಉಂಟಾಗುವುದಕ್ಕಿಂತ ಸುಮಾರು 30 ಅಡಿಗಳ ಮುನ್ನವೇ ಮುನ್ಸೂಚನೆಯ ಸಿಗ್ನಲ್‌ ದೊರೆಯುತ್ತದೆ. ತಕ್ಷಣ ಕಾರನ್ನು ನಿಯಂತ್ರಿಸಬಹುದು. ಒಂದು ವೇಳೆ ಅಪಘಾತ ಉಂಟಾದಲ್ಲಿ ಕೂಡಲೆ ನೋಂದಣಿ ಮಾಡಲಾದ ನಂಬರ್‌ಗೆ ಎಂಜಿ ಕಸ್ಟಮರ್‌ ಕೇಂದ್ರದಿಂದ ಅಟೋಮ್ಯಾಟಿಕ್‌ ಆಗಿ ಕರೆ ಹೋಗುತ್ತದೆ. ಮೊದಲನೆ ನಂಬರಿನಲ್ಲಿ ಕರೆ ಸ್ವೀಕರಿಸದೆ ಇದ್ದರೆ ನೋಂದಣಿ ಮಾಡಿದ ಎರಡನೇ ನಂಬರ್‌ಗೆ ಕರೆ ಹೋಗುತ್ತದೆ. ಏನೇ ಸಮಸ್ಯೆ ಉಂಟಾದರೂ ಸ್ಬಂದಿಸಲು ಎಂಜಿ ಕಸ್ಟಮರ್‌ ಕೇರ್‌ ದಿನದ 24 ಗಂಟೆಯೂ ಲಭ್ಯ ಇದೆ. ತುರ್ತು ಸಂದರ್ಭದಲ್ಲಿ ಕಾರಿನ ಏರ್‌ಬ್ಯಾಗ್‌ ತೆರೆದರೆ ಅದರ ಮಾಹಿತಿಯೂ ತಕ್ಷಣ ಎಂ.ಜಿ. ಗ್ರಾಹಕರ ಕೇಂದ್ರಕ್ಕೆ ಹೋಗುತ್ತದೆ. ಗ್ರಾಹಕರ ಸಮಸ್ಯೆಗೆ ಸ್ಪಂದಿಸಲು ಅವರು ಸದಾ ಸಿದ್ಧರಿರುತ್ತಾರೆ. ಹೊಸ ಜನರೇಶನ್‌ ಕಾರು ಇದಾಗಿದ್ದು, ಭಾರತದ ಕಾರು ಮಾರುಕಟ್ಟೆಯಲ್ಲಿ ಕ್ರಾಂತಿ ಉಂಟು ಮಾಡುವ ಸಾಧ್ಯತೆ ಇದೆ. ಭಾರತೀಯರಿಗೆ ಅನುಕೂಲವಾಗುವ ದರದಲ್ಲೇ ಎಂ.ಜಿ. ಹೆಕ್ಟರ್‌ ಕಾರು ಲಭ್ಯವಾಗಲಿದೆ.

ಈಗ ನಗರದಲ್ಲಿದ್ದರೂ ನೆಟ್‌ವರ್ಕ ಕಿರಿಕಿರಿಯಿಂದ ನಾವು ಬಳಲುತ್ತೇವೆ. ಆದರೆ ಈ ಕಾರು ಯಾವುದೆ ದುರ್ಗಮ ಪ್ರದೇಶದಲ್ಲಿರಲಿ ಕ್ಷೀಣವಾದ ನೆಟ್‌ವರ್ಕ ಪ್ರದೇಶದಲ್ಲಿರಲಿ ದೂರವಾಣಿ ಹಾಗೂ ಇಂಟರ್‌ನೆಟ್‌ ಕೆಲಸ ಮಾಡಲಿದೆ. 5ಜಿ ನೆಟ್‌ವರ್ಕ ಕಾರಿನಲ್ಲಿರುವುದು ಗಮನಾರ್ಹ ಸಂಗತಿಯಾಗಿದೆ. ಈಚೆಗೆ ದೆಹಲಿಯಲ್ಲಿ ಎಂಜಿ ಮೋಟರ್ಸ್‌ ಈ ನೂತನ ಪೀಳಿಗೆಯ ಹೆಕ್ಟರ್‌ ಕಾರನ್ನು ಭಾರತಕ್ಕೆ ಪರಿಚಯಿಸಿದೆ. ಕಾರಿನ ವಿಶೇಷತೆಗಳನ್ನು ಪ್ರದರ್ಶಿಸಿತು.

ವಸಂತಕುಮಾರ್‌ ಕತಗಾಲ