Asianet Suvarna News Asianet Suvarna News

ವಾಹನ ಸವಾರರೇ ಎಚ್ಚರ : ಬೀಳುತ್ತೆ ಭಾರಿ ದಂಡ

ವಾಹನ ಸವಾರರೇ ಎಚ್ಚರ. ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದರೆ ನಿಮಗೆ ಬೀಳುತ್ತೆ ಭಾರೀ ದಂಡ. ಇನ್ನೆರಡು ದಿನದಲ್ಲಿ ದಂಡದ ಪ್ರಮಾಣ ಹೆಚ್ಚಳವಾಗಲಿದೆ.

Heavy Penalty For Traffic Rule Violation
Author
Bengaluru, First Published Jun 29, 2019, 8:33 AM IST

ಬೆಂಗಳೂರು [ಜೂ.29] :  ರಾಜ್ಯ ಸರ್ಕಾರವು ನಾಲ್ಕು ಪ್ರಮುಖ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡದ ಮೊತ್ತವನ್ನು ಪರಿಷ್ಕರಿಸಿದ ಬೆನ್ನೆಲ್ಲೇ ರಾಜಧಾನಿಯ ಸಂಚಾರ ವಿಭಾಗದ ಪೊಲೀಸರು, ಇನ್ನೆರಡು ದಿನಗಳಲ್ಲಿ ಕಾನೂನು ಮೀರಿ ಚಾಲನೆ ಮಾಡುವ ನಾಗರಿಕರ ಮೇಲೆ ‘ಹೊಸ ದಂಡ’ ಪ್ರಯೋಗಕ್ಕೆ ಸಿದ್ಧತೆ ನಡೆಸಿದ್ದಾರೆ.

ಅತಿವೇಗದ ಚಾಲನೆ, ಮೊಬೈಲ್‌ನಲ್ಲಿ ಸಂಭಾಷಣೆ ನಿರತ ವಾಹನ ಚಾಲನೆ, ವಿಮೆ ಇಲ್ಲದ ವಾಹನಗಳ ಚಾಲನೆ ಹಾಗೂ ನಿಲುಗಡೆ ನಿಷೇಧಿತ ಪ್ರದೇಶದಲ್ಲಿ ವಾಹನ ನಿಲುಗಡೆ ಪ್ರಕರಣಗಳ ದಂಡ ಮೊತ್ತವನ್ನು ಸರಾಸರಿ ಶೇ.60 ರಷ್ಟುಹೆಚ್ಚಿಸಿ ರಾಜ್ಯ ಸಾರಿಗೆ ಇಲಾಖೆಗೆ ಗುರುವಾರ ಆದೇಶ ಹೊರಡಿಸಿತ್ತು. ಈ ಪರಿಷ್ಕೃತ ದಂಡವು ರಾತ್ರಿಯಿಂದಲೇ ಜಾರಿಗೆ ಬಂದಿದ್ದು, ಶುಕ್ರವಾರ ಬೆಳಗ್ಗೆಯಿಂದ ಕೆಲವು ಠಾಣೆಗಳ ಪೊಲೀಸರು ದಂಡ ವಿಧಿಸಿದ್ದಾರೆ.

ಆದರೆ ನಗರ ವ್ಯಾಪ್ತಿ ಸಂಪೂರ್ಣವಾಗಿ ಇನ್ನೆರಡು ದಿನಗಳಲ್ಲಿ ಹೊಸ ನಿಯಮ ಜಾರಿಗೊಳಿಸಲು ಪೊಲೀಸರು ಮುಂದಾಗಿದ್ದಾರೆ. ಹಾಗೆ ವಾರ್ಷಿಕ ದಂಡ ಸಂಗ್ರಹ ಮೊತ್ತವು ಹೆಚ್ಚಾಗಲಿದೆ ಎಂಬ ನಿರೀಕ್ಷೆಯನ್ನು ಪೊಲೀಸರು ಹೊಂದಿದ್ದಾರೆ.

ನಗರದ ಸಂಚಾರ ನಿರ್ವಹಣಾ ಕೇಂದ್ರದಲ್ಲಿ ಶುಕ್ರವಾರ ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್ಚುವರಿ ಪೊಲೀಸ್‌ ಆಯುಕ್ತ (ಸಂಚಾರ) ಪಿ.ಹರಿಶೇಖರನ್‌, ಸಂಚಾರ ನಿಯಮಗಳ ಉಲ್ಲಂಘನೆ ಪ್ರಕರಣಗಳಲ್ಲಿ ದಂಡದ ಮೊತ್ತ ಹೆಚ್ಚಿಸುವಂತೆ 2018ರ ಜೂನ್‌ ತಿಂಗಳಲ್ಲಿ ಸಲ್ಲಿಸಿದ್ದ ಪ್ರಸ್ತಾವನೆಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ. ಆದರೆ, ಮೊದಲ ಹಂತದಲ್ಲಿ ಪ್ರಸ್ತಾಪಿತವಾದ ಪ್ರಕರಣಗಳ ಪೈಕಿ ನಾಲ್ಕು ಪ್ರಕರಣಗಳಿಗೆ ಸರ್ಕಾರ ದಂಡ ಹೆಚ್ಚಿಸಿದ್ದು, ಮುಂದಿನ ದಿನಗಳಲ್ಲಿ ನಮ್ಮ ಪ್ರಸ್ತಾವನೆ ಸಂಪೂರ್ಣವಾಗಿ ಜಾರಿಗೊಳ್ಳಬಹುದು. ಸಂಚಾರ ನಿಯಮ ಉಲ್ಲಂಘನೆ ಪ್ರಕರಣದ ದಂಡ ವಿಧಿಸಲು ಪೊಲೀಸರು ಬಳಸುವ ಡಿವೈಸ್‌ಗಳಿಗೆ ಪರಿಷ್ಕೃತ ದರದನ್ವಯ ಸಾಫ್ಟ್‌ವೇರ್‌ಗಳನ್ನು ಉನ್ನತೀಕರಿಸಲಾಗುತ್ತದೆ. ಈ ಪ್ರಕ್ರಿಯೆ ಮುಗಿದ ನಂತರ ಹೊಸ ನಿಯಮವು ನಗರ ವ್ಯಾಪ್ತಿ ಪೂರ್ಣವಾಗಿ ಅನುಷ್ಠಾನಗೊಳಿಸಲಾಗುತ್ತದೆ ಎಂದು ಹೇಳಿದರು.

ಸರ್ಕಾರದ್ದಾಗಲಿ ಅಥವಾ ಪೊಲೀಸರದ್ದಾಗಲಿ ಸುಖಾಸುಮ್ಮನೆ ಜನರಿಗೆ ತೊಂದರೆ ಕೊಡಬೇಕು ಎಂಬ ಉದ್ದೇಶವಲ್ಲ. ಆದರೆ ಕಾನೂನು ಮೀರಿ ವಾಹನ ಚಾಲನೆ ಅಪಘಾತಗಳಿಗೆ ಕಾರಣವಾಗುತ್ತಿದೆ. ಇದರಿಂದ ಪ್ರತಿ ವರ್ಷ ಅಪಘಾತಗಳಲ್ಲಿ ಪ್ರಾಣಹಾನಿ ಪ್ರಮಾಣವು ಹೆಚ್ಚುತ್ತಿದೆ. ಹೀಗಾಗಿ ಅನಿವಾರ್ಯವಾಗಿ ದಂಡ ಹೆಚ್ಚಳಕ್ಕೆ ಪ್ರಸ್ತಾಪ ಸಲ್ಲಿಸಲಾಯಿತು ಎಂದು ಹೆಚ್ಚುವರಿ ಆಯುಕ್ತರು ಸ್ಪಷ್ಟಪಡಿಸಿದರು.

ಪ್ರತಿ ವರ್ಷ ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಸಂಬಂಧ ಸುಮಾರು 100 ರು. ಕೋಟಿಯಷ್ಟುದಂಡದ ಹಣ ಸಂಗ್ರಹವಾಗುತ್ತಿತ್ತು. ಈಗ ದಂಡದ ಮೊತ್ತವು ಪರಿಷ್ಕೃತ ಹಿನ್ನೆಲೆಯಲ್ಲಿ ವಾರ್ಷಿಕ ದಂಡ ಸಂಗ್ರಹದಲ್ಲಿ ಸಹ ಹೆಚ್ಚಾಗಲಿದೆ ಎಂದು ಅಭಿಪ್ರಾಯಪಟ್ಟರು.

ವಾಹನ ನಿಲುಗಡೆಗೆ ಹೊಸ ನಿಯಮ

ದಂಡ ಮೊತ್ತದ ಪರಿಷ್ಕೃತ ಬೆನ್ನೆಲೆ ಶೀಘ್ರದಲ್ಲೇ ನಗರ ವ್ಯಾಪ್ತಿ ವಾಹನ ನಿಲುಗಡೆ ಪ್ರದೇಶಗಳ ಕುರಿತು ಸಹ ಹೊಸ ನಿಯಮ ಜಾರಿಗೆ ಬರಲಿದೆ. ಈಗಾಗಲೇ ಈ ಸಂಬಂಧ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದ್ದು, ಪೊಲೀಸರಿಂದ ಸಹ ಅಭಿಪ್ರಾಯ ಪಡೆಯಲಾಗಿದೆ ಎಂದು ತಿಳಿಸಿದರು.

ನಗರವು ಶರವೇಗದಲ್ಲಿ ವಾಹನಗಳ ಸಂಖ್ಯೆ ಏರುಮುಖವಾಗುತ್ತಿದೆ. ಆದರೆ ಅದಕ್ಕೆ ಪೂರಕವಾಗಿ ವಾಹನಗಳ ನಿಲುಗಡೆಗೆ ಸ್ಥಳವು ಲಭ್ಯವಾಗುತ್ತಿಲ್ಲ. ಇದರಿಂದ ನಗರ ವ್ಯಾಪ್ತಿಯಲ್ಲಿ ಹೊಸ ನಿಯಮ ಜಾರಿಯಾಗಲಿದೆ. ಅಲ್ಲದೆ, ಆ್ಯಪ್‌ ಆಧಾರಿತ ಸಾರಿಗೆ ಸೇವೆ ಒದಗಿಸುವ ‘ಬೌನ್ಸ್‌ ’ ವಾಹನಗಳು ಎಲ್ಲೆಂದರಲ್ಲಿ ನಿಲ್ಲಿಸುವುದರಿಂದ ತೊಂದರೆಯಾಗುತ್ತಿದೆ. ಈ ಬಗ್ಗೆ ನಗರಾಭಿವೃದ್ಧಿ ಇಲಾಖೆಗೆ ಗಮನಕ್ಕೆ ತರಲಾಗುತ್ತಿದೆ. ಹಾಗೆಯೇ ಸಂಚಾರ ಉಲ್ಲಂಘನೆ ಮಾಡದಂತೆ ಬೌನ್ಸ್‌ ಸಂಸ್ಥೆಗೆ ಸಹ ಎಚ್ಚರಿಕೆ ನೀಡಲಾಗಿದೆ ಎಂದರು.

ಹೊಸ ದಂಡ ಕುರಿತು ಮಾಹಿತಿ:

ಪರಿಷ್ಕೃತ ದರದ ಕುರಿತು ಜನರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳ ಸಹ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ನಗರದ 48 ಸಂಚಾರ ಠಾಣೆಗಳಲ್ಲಿ ಆಟೋ, ಕ್ಯಾಬ್‌ ಚಾಲಕರ ಸಭೆ ಕರೆಯಲಾಗಿದೆ. ಹಾಗೆಯೇ ಸಾಮಾಜಿಕ ಜಾಲ ಜಾಣಗಳಲ್ಲಿ ಸಹ ಹೊಸ ನಿಯಮದ ಕುರಿತು ಮಾಹಿತಿ ನೀಡಲಾಗುತ್ತಿದೆ ಎಂದು ವಿವರಿಸಿದರು.


ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ದಂಡ ವಿಧಿಸಲು ಪೊಲೀಸರು ಬಳಸುವ ಡಿವೈಸ್‌ಗಳಿಗೆ ಪರಿಷ್ಕೃತ ದಂಡದ ಅನ್ವಯ ಸಾಫ್ಟ್‌ವೇರ್‌ಗಳನ್ನು ಉನ್ನತೀಕರಿಸಲಾಗುತ್ತದೆ. ಈ ಪ್ರಕ್ರಿಯೆ ಮುಗಿದ ನಂತರ ಪೂರ್ಣವಾಗಿ ಹೊಸ ನಿಯಮ ಜಾರಿಗೆ ಬರಲಿದೆ. ಅಲ್ಲದೆ ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

-ಪಿ.ಹರಿಶೇಖರನ್‌, ಹೆಚ್ಚುವರಿ ಪೊಲೀಸ್‌ ಆಯುಕ್ತ (ಸಂಚಾರ)


ಚಾಲಕನಿಗೆ ಮಾತ್ರವಲ್ಲ ಮಾಲೀಕನಿಗೂ ದಂಡ

ಚಾಲಕನಿಗೆ ಮಾತ್ರವಲ್ಲ ಅತಿವೇಗದ ಚಾಲನೆಗೆ ಉತ್ತೇಜಿಸುವ ವಾಹನಗಳ ಮಾಲೀಕರಿಗೆ ಸಹ ದಂಡ ಬೀಳಲಿದೆ. ಅಂದರೆ ಅತಿವೇಗದ ಚಾಲನೆಗೆ ಚಾಲಕನಿಗೆ 1000 ರು. ಹಾಗೂ ಜೋರಾಗಿ ಕಾರು ಓಡಿಸುವಂತೆ ಹೇಳಿದ ತಪ್ಪಿಗೆ ಮಾಲೀಕನಿಗೆ 500 ರು. ದಂಡ ವಿಧಿಸಲಾಗುತ್ತದೆ ಎಂದು ಹೆಚ್ಚುವರಿ ಆಯುಕ್ತರು ವಿವರಿಸಿದರು.

ನಗರದಲ್ಲಿ ಆ್ಯಪ್‌ ಆಧಾರಿತ ಸಾರಿಗೆ ಹಾಗೂ ಆಹಾರ ಪೂರೈಕೆ ಸೌಲಭ್ಯ ಕಲ್ಪಿಸುವ ವಾಹನಗಳ ಚಾಲಕರೇ ಅತಿ ಹೆಚ್ಚು ಸಂಚಾರ ನಿಯಮ ಉಲ್ಲಂಘಿಸುತ್ತಿರುವುದು ಇತ್ತೀಚಿನ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ. ಅದೇ ರೀತಿ ಜೊಮ್ಯಾಟೊ, ಸ್ವಿಗ್ಗಿ ಹಾಗೂ ಉಬರ್‌ ಈಟ್ಸ್‌ ಸೇರಿದಂತೆ ಆಹಾರ ಪೂರೈಕೆ ಸಂಸ್ಥೆಯ ಸಿಬ್ಬಂದಿ ಹೆಚ್ಚು ಮೊಬೈಲ್‌ ಬಳಸುತ್ತಿರುವುದು ಸ್ಪಷ್ಟವಾಗಿದೆ ಎಂದರು.

ಸರ್ಕಾರದ ಪರಿಷ್ಕೃತ ದರದ ವಿವರ ಹೀಗಿದೆ

ಪ್ರಕರಣ    ಪ್ರಸ್ತುತ ದರ    ಪರಿಷ್ಕೃತ ದರ

ಅತಿವೇಗದ ಚಾಲನೆ    100ರು.     1000 ರು.

ಮೊಬೈಲ್‌ ಬಳಕೆ ಹಾಗೂ ಅಪಾಯಕಾರಿ ಸರಕು ಸಾಗಣೆ    300 ರು.    1ನೇ ಬಾರಿಗೆ 1000, 2ನೇ ಬಾರಿಗೆ 2000 ರು.

ವಿಮೆ ಇಲ್ಲದ ವಾಹನ ಚಾಲನೆ    500    1000 ರು.

ನೋ ಪಾರ್ಕಿಂಗ್‌    100 ರು.    1000 ರು.

Follow Us:
Download App:
  • android
  • ios