ಎಲೆಕ್ಟ್ರಿಕ್ ವಾಹನಕ್ಕೆ ಬಂಪರ್ ಕೊಡುಗೆ; GST ಇಳಿಕೆ, ಕೈಗೆಟುಕಲಿದೆ ಕಾರು!
ಎಲೆಕ್ಟ್ರಿಕ್ ವಾಹನಗಳ ಮೇಲಿನ GST ಇಳಿಸಲಾಗಿದೆ. GSTಯನ್ನು 12% ರಿಂದ ಇದೀಗ 5%ಗೆ ಇಳಿಸಲಾಗಿದೆ. ತೆರಿಗೆ ಇಳಿಕೆಯಿಂದ ಎಲೆಕ್ಟ್ರಿಕ್ ವಾಹನ ಕಂಪನಿ ಹಾಗೂ ಗ್ರಾಹಕರಿಗೆ ಆಗೋ ಅನುಕೂಲಗಳೇನು? ಇಲ್ಲಿದೆ ವಿವರ.
ನವದೆಹಲಿ(ಜು.27): ಪರಿಸರ ಮಾಲಿನ್ಯ ಹಾಗೂ ಇಂಧನ ಆಮದು ಕಡಿಮೆ ಮಾಡಲು ಭಾರತ ಎಲೆಕ್ಟ್ರಿಕ್ ವಾಹನಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ವಿಶೇಷ ಅನುದಾನ ಕೂಡ ನೀಡಿದೆ. ಇದೀಗ GST ಕೌನ್ಸಿಲ್ ಕೂಡ ಕೇಂದ್ರ ಸರ್ಕಾರದ ಯೋಜನೆಗೆ ಬೆಂಬಲ ವ್ಯಕ್ತಪಡಿಸಿದೆ. ಎಲೆಕ್ಟ್ರಿಕ್ ಕಾರಿನ ಮೇಲಿನ GST 12% ರಿಂದ ಇದೀಗ 5%ಗೆ ಇಳಿಸಲಾಗಿದೆ.
ಇದನ್ನೂ ಓದಿ: ಎಲೆಕ್ಟ್ರಿಕ್ ವಾಹನಕ್ಕೆ ಬಂಪರ್ ಕೊಡುಗೆ; ಆಟೋ ಕಂಪನಿಗಳಿಗೆ ಬೇವು-ಬೆಲ್ಲ ಬಜೆಟ್ !
ದೆಹಲಿಯಲ್ಲಿ ಸಭೆ ಸೇರಿದ GST ಕೌನ್ಸಿಲ್ ಎಲೆಕ್ಟ್ರಿಕ್ ವಾಹನದ ಮೇಲಿನ ತೆರಿಗೆ ಇಳಿಸಲು ಸಮ್ಮತಿಸಿದೆ. ಆಗಸ್ಟ್ 1, 2019ರಿಂದ ನೂತನ GST ದರ ಅನ್ವಯವಾಗಲಿದೆ. 36ನೇ GST ಕೌನ್ಸಿಲ್ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಇನ್ನು ಎಲೆಕ್ಟ್ರಿಕ್ ಬಸ್ ಖರೀದಿಗೆ ಮುಂದಾಗೋ ರಾಜ್ಯ ಸರ್ಕಾರಗಳಿಗೆ GST ತೆರಿಗೆ ವಿನಾಯಿತಿ ನೀಡಲಾಗಿದೆ.
ಇದನ್ನೂ ಓದಿ: ಎಲೆಕ್ಟ್ರಿಕ್ ವಾಹನ ಬಿಡುಗಡೆಗೆ ಸಜ್ಜಾದ ಕೋಲ್ಕತಾದ ಕ್ಲೀನ್‌ಟೆಕ್ ಕಂಪನಿ!
GST (ತೆರಿಗೆ) ಇಳಿಕೆಯಿಂದ, ಎಲೆಕ್ಟ್ರಿಕ್ ವಾಹನದ ಬೆಲೆ ಕೂಡ ಕಡಿಮೆಯಾಗಲಿದೆ. ಸರ್ಕಾರ ಎಲೆಕ್ಟ್ರಿಕ್ ವಾಹನಕ್ಕೆ ಉತ್ತೇಜನ ನೀಡುತ್ತಿದ್ದರೂ, ಎಲೆಕ್ಟ್ರಿಕ್ ವಾಹನದ ದರ ದುಬಾರಿಯಾಗಿತ್ತು. ಬೈಕ್ ಅಥವಾ ಸ್ಕೂಟರ್ ಬೆಲೆ ಸರಾಸರಿ 1 ಲಕ್ಷ ರೂಪಾಯಿ ಇದ್ದರೆ, ಸಣ್ಣ ಎಲೆಕ್ಟ್ರಿಕ್ ಕಾರಿನ ಬೆಲೆ ಸರಿಸುಮಾರು 10 ಲಕ್ಷ ರೂಪಾಯಿ. ಇದರಿಂದ ಮಧ್ಯಮ ವರ್ಗದ ಜನ ಎಲೆಕ್ಟ್ರಿಕ್ ಕಾರು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಇತ್ತ ಶ್ರೀಮಂತ ವರ್ಗ ದುಬಾರಿ ಕಾರುಗಳ ಮೊರೆ ಹೋಗುತ್ತಿದ್ದಾರೆ ಹೊರತು ಎಲೆಕ್ಟ್ರಿಕ್ ವಾಹನದ ಕಡೆ ತಿರುಗುತ್ತಿಲ್ಲ. ಇದೀಗ ತೆರಿಗೆ ಇಳಿಕೆಯಿಂದ ಕಾರಿನ ಬೆಲೆ ಕಡಿಮೆಯಾಗಲಿದೆ. ಇಷ್ಟೇ ಅಲ್ಲ ಇಂಧನ ವಾಹನದ ರಿಜಿಸ್ಟ್ರೇಶನ್ ಏರಿಕೆ ಮಾಡಲಾಗಿದೆ. ಇದರಿಂದ ಪೆಟ್ರೋಲ್, ಡೀಸೆಲ್ ವಾಹನಗಳು ದುಬಾರಿಯಾಗಲಿವೆ. ಈ ಕಾರಣಗಳಿಂದ ಗ್ರಾಹಕರು ಎಲೆಕ್ಟ್ರಿಕ್ ಕಾರಿನತ್ತ ಮುಖಮಾಡಲಿದ್ದಾರೆ.