ನವದೆಹಲಿ (ಮಾ.19): ಹಳೆಯ ವಾಹನಗಳನ್ನು ಗುಜರಿಗೆ ಹಾಕುವ ನೀತಿಯನ್ನು ಬರುವ ಅ.1ರಿಂದ ಜಾರಿಗೆ ತರುತ್ತಿರುವ ಕೇಂದ್ರ ಸರ್ಕಾರ, ಅದನ್ನು ಉತ್ತೇಜಿಸಲು ಹಳೆಯ ವಾಹನಗಳ ನೋಂದಣಿ ನವೀಕರಣ ಶುಲ್ಕವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಳ ಮಾಡಲು ಮುಂದಾಗಿದೆ.

ಈ ಕುರಿತು ರಸ್ತೆ ಸಾರಿಗೆ ಸಚಿವಾಲಯ ಕರಡು ಅಧಿಸೂಚನೆಯನ್ನು ಹೊರಡಿಸಿದ್ದು, 15 ವರ್ಷ ಹಳೆಯ ಕಾರಿನ ನೋಂದಣಿಯನ್ನು ನವೀಕರಿಸುವವರು 5000 ರು. ಪಾವತಿಸಬೇಕು ಎಂದು ಹೇಳಿದೆ. ಇದು ಈಗ ಇರುವ ಶುಲ್ಕಕ್ಕೆ ಹೋಲಿಸಿದರೆ 8 ಪಟ್ಟು ಅಧಿಕ. 

ಪೆಟ್ರೋಲ್, ಡೀಸೆಲ್ ವಾಹನ ಯುಗ ಮುಕ್ತಾಯ? ಎಲೆಕ್ಟ್ರಿಕ್ ವಾಹನಗಳ ಭರಾಟೆ ಶುರು ...

ಅದೇ ರೀತಿ 15 ವರ್ಷ ಮೇಲ್ಪಟ್ಟ ಬಸ್‌ ಅಥವಾ ಲಾರಿಗಳ ನೋಂದಣಿ ನವೀಕರಣಕ್ಕೆ 12500 ರು. ನಿಗದಿಪಡಿಸಿದ್ದು, ಇದು 21 ಪಟ್ಟು ಹೆಚ್ಚಿನ ಮೊತ್ತವಾಗಿದೆ. ಹಳೆಯ ಬೈಕ್‌ಗಳ ನೋಂದಣಿ ನವೀಕರಣವನ್ನು 300 ರು.ನಿಂದ 1000 ರು.ಗೆ ಹೆಚ್ಚಿಸಲಾಗಿದೆ. ಸ್ವಂತ ಬಳಕೆಯ ವಾಹನಗಳ ನೋಂದಣಿ ನವೀಕರಣ ವಿಳಂಬವಾದರೆ ಪ್ರತಿ ತಿಂಗಳಿಗೆ 300ರಿಂದ 500 ರು. ದಂಡ ವಿಧಿಸುವ ಪ್ರಸ್ತಾವ ಅಧಿಸೂಚನೆಯಲ್ಲಿದೆ.