ವಲ್ಸಾಡ್(ಏ.16): ದೇಶದಲ್ಲಿ ಕೊರೋನಾ ವೈರಸ್ ತಡೆಯಲು ಎರಡನೇ ಹಂತದ ಲಾಕ್‌ಡೌನ್ ಆದೇಶ ಜಾರಿಯಲ್ಲಿದೆ. ಮೊದಲ ಹಂತದ ಲಾಕ್‌ಡೌನ್‌‌ನಲ್ಲಿ ಕೊರೋನಾ ಹತೋಟಿಗೆ ಬಂದಿಲ್ಲ. ಹೀಗಾಗಿ 2ನೇ ಬಾರಿಗೆ ಲಾಕ್‌ಡೌನ್ ವಿಸ್ತರಿಸಾಗಿದೆ. ಲಾಕ್‌ಡೌನ್ ವಿಸ್ತರಣೆಗೆ ಬಹುತೇಕರು ಸಜ್ಜಾಗಿದ್ದರು. ಆದರೆ ಮೊದಲ ಬಾರಿಗೆ ಪ್ರಧಾನಿ ಮೋದಿ ಲಾಕ್‌ಡೌನ್ ಘೋಷಣೆ ಮಾಡಿದಾಗ ಅನೇಕರು ಅಕ್ಷರಶಃ ನಲುಗಿದ್ದರು. ಹೀಗೆ ಮೊದಲ ಲಾಕ್‌ಡೌನ್ ವೇಳೆ ಸಿಲುಕಿದ ದಕ್ಷಿಣ ಕನ್ನಡದ ಪುತ್ತೂರಿನ ಯುವಕರಿಬ್ಬರು ಇನ್ನೂ ಗುಜರಾತ್‌ನಲ್ಲೇ ದಿನ ದೂಡುತ್ತಿದ್ದಾರೆ.

ರಿಯಾಯಿತಿ, ಡಿಸ್ಕೌಂಟ್ ಬಲು ಜೋರು; ಲಾಕ್‌ಡೌನ್ ತೆರವಾದರೆ ಶುರುವಾಗಲಿದೆ 'ಕಾರು-ಬಾರು!

ಪುತ್ತೂರಿನ ಆಶಿಕ್ ಹುಸೈನ್ ಹಾಗೂ ಮೊಹಮ್ಮದ್ ತಕೀನ್ ವ್ಯಾಪರದ ಕಾರಣಕ್ಕಾಗಿ ಗುಜರಾತ್‌ಗೆ ತಮ್ಮ ನಿಸಾನ್ ಮಿಕ್ರಾ ಕಾರಿನಲ್ಲಿ ತೆರಳಿದ್ದರು. ಮಾರ್ಚ್ 23 ರಂದು ವ್ಯಾಪಾರಕ್ಕೆ ಬೇಕಾದ ವಸ್ತುಗಳ ಖರೀದಿ ಮಾತುಕತೆ ಮುಗಿಸಿ ವಲ್ಸಾಡ್ ಜಿಲ್ಲೆಯಿಂದ ಹೊರಟಿದ್ದಾರೆ. ಸಂಜೆಯಾಗುತ್ತಿದ್ದಂತೆ ಪ್ರಧಾನಿ ಮೋದಿ ಲಾಕ್‌ಡೌನ್ ಘೋಷಣೆ ಮಾಡಿದ್ದಾರೆ. ಇಷ್ಟೇ ಅಲ್ಲ 24 ರಿಂದ ದೇಶಾದ್ಯಂತ ಆದೇಶ ಜಾರಿಗೆ ಬಂದಿದೆ. ಆಶಿಕ್ ಹಾಗೂ ಮೊಹಮ್ಮದ್ ಆದಷ್ಟು ಬೇಗ ತವರಿಗೆ ವಾಪಸ್ ಆಗಲು ಕಾರಿನ ವೇಗ ಹೆಚ್ಚಿಸಿದ್ದಾರೆ. 

ವಲ್ಸಾಡ್ ಜಿಲ್ಲೆಯ ಅಂಬರ್‌ಗಾಂವ್‌ನ ಬಿಲಾಡ್ ತಾಲೂಕು ಬಳಿಕ ಚೆಕ್‌ಪೋಸ್ಟ್ ಬಳಿ ನಿಸಾನ್ ಮಿಕ್ರಾ ಕಾರು ತಡೆದ ಪೊಲೀಸರು ಲಾಕ್‌ಡೌನ್ ಕಾರಣ ಮುಂದಿನ ಪ್ರಯಾಣ ಸಾಧ್ಯವಿಲ್ಲ ಎಂದಿದ್ದಾರೆ. ಪೊಲೀಸರ ಬಳಿ ಇಬ್ಬರೂ ಮನವಿ ಮಾಡಿದರೂ, ಆದೇಶ ಜಾರಿಯಲ್ಲಿದೆ, ಹೀಗಾಗಿ ಯಾರನ್ನೂ ಬಿಡುವಂತಿಲ್ಲ ಎಂದಿದ್ದಾರೆ. ಬಳಿಕ ತಮ್ಮ ನಿಸಾನ್ ಕಾರನ್ನು ಚೆಕ್ ಪೋಸ್ಟ್ ಬಳಿ ಸಾಲು ಸಾಲಾಗಿ ನಿಲ್ಲಿಸಲಾಗಿರುವ ಟ್ರಕ್ ಜೊತೆ ಪಾರ್ಕ್ ಮಾಡಿದರು. ಬಳಿಕ ತಮ್ಮ ಕುಟುಂಬಕ್ಕೆ ಫೋನ್ ಮೂಲಕ ಘಟನೆ ವಿವರಿಸಿದ್ದಾರೆ.

ಚೆಕ್‌ಪೋಸ್ಟ್ ಬಳಿ ಕಾರು ನಿಲ್ಲಿಸಿದ ಆಶಿಕ್ ಹಾಗೂ ಮೊಹಮ್ಮದ್‌ಗೆ ದಿಕ್ಕೆ ತೋಚಲಿಲ್ಲ. ಆದರೆ ಬೇರೆ ಮಾರ್ಗಗಳಿಲ್ಲ. ಚೆಕ್‌ಪೋಸ್ಟ್ ಸಮೀಪದಲ್ಲಿರುವ ಹೊಟೆಲ್ ಮಾಲೀಕ ಇವರಿಬ್ಬರಿಗೆ ಹೊಟೆಲ್ ಶೌಚಾಲಯ ಬಳಸಲು ಅನುಮತಿ ನೀಡಿದ್ದಾರೆ. ಇನ್ನು ಪೊಲೀಸರು  ಹಾಗೂ ಸಾಮಾಜಿಕ ಕಾರ್ಯಕರ್ತರು ಇವರಿಗೆ ಆಹಾರ, ನೀರು ಒದಗಿಸುತ್ತಿದ್ದಾರೆ. ಜೊತೆಗೆ ರಾತ್ರಿ ಮಲಗಲು ಬೆಡ್‌‌ಶೀಟ್ ನೀಡಿದ್ದಾರೆ.

ನಿಸಾನ್ ಮಿಕ್ರಾ ಸಣ್ಣ ಕಾರು. ಇದೇ ಕಾರಿನಲ್ಲಿ ಇಬ್ಬರು ಮಲಗುತ್ತಿದ್ದಾರೆ. ನಿಸಾನ್ ಮಿಕ್ರಾದಲ್ಲಿ ಸರಿಯಾಗಿ ಕಾಲು ಚಾಚಿ ಕುಳಿತುಕೊಳ್ಳುವುದೇ ಕಷ್ಟ. ಇದೀಗ ಅದರಲ್ಲಿ ಮಲಗುವುದು ಇನ್ನೂ ಕಷ್ಟ.  ಮಾರ್ಚ್ 24 ರಿಂದ ಕಾರಿನಲ್ಲಿ ಆರಂಭವಾದ ಇವರ ಜೀವನ ಏಪ್ರಿಲ್ 14ಕ್ಕೆ ಅಂತ್ಯವಾಗಲಿದೆ ಎಂದು ಭಾವಿಸಿದ್ದರು. ಆದರೆ ಇದೀಗ ಲಾಕ್‌ಡೌನ್ ವಿಸ್ತರಣೆಯಾಗಿದೆ. ಹೀಗಾಗಿ ಕಳೆದ 20 ದಿನಗಳಿಂದ ನಿಸಾನ್ ಮಿಕ್ರಾ ಕಾರಿನಲ್ಲೇ ಇವರು ದಿನದೂಡುತ್ತಿದ್ದಾರೆ. ಇತ್ತ ಕುಟುಂಬಸ್ಥರು, ದಕ್ಷಿಣ ಕನ್ನಡ ಪೊಲೀಸರನ್ನು ಸಂಪರ್ಕಿಸಿ ಮನವಿ ಮಾಡಿದ್ದಾರೆ. ದಕ್ಷಿಣ ಕನ್ನಡ  ಡೆಪ್ಯುಟಿ ಕಮೀಷನರ್, ಗುಜರಾತ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇಷ್ಟೇ ಅಲ್ಲ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.