ಬೆಂಗಳೂರು(ಸೆ.27) : ಬೆಂಗಳೂರು ನಗರದ ಸಂಚಾರ ದಟ್ಟಣೆಯ ಚಿಂತೆಯಿಲ್ಲದೆ ಅತ್ಯಂತ ಕಡಿಮೆ ಸಮಯದಲ್ಲಿ ನಗರದಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಚರಿಸಬಹುದಾದ ಸೌಲಭ್ಯದ ಜಾರಿ ಒಪ್ಪಂದಕ್ಕೆ  ವರ್ಜಿನ್ ಹೈಪರ್‍ಲೂಪ್ ಮತ್ತು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ(BIAL)ಸಹಿ ಹಾಕಿವೆ.

ದೇಶದಲ್ಲೇ ಮೊದಲು ಕೆಂಪೇಗೌಡ ಏರ್‌ಪೋರ್ಟ್‌ 10 ಸಾವಿರ ಚದರಡಿ ವಿಸ್ತೀರ್ಣದ ಗೋದಾಮು

ಈ ಒಪ್ಪಂದದಡಿ  ಬೆಂಗಳೂರು ವಿಮಾನ ನಿಲ್ದಾಣದಿಂದ ಹೈಪರ್‍ಲೂಪ್ ಕಾರಿಡಾರ್‌ನ ಕಾರ್ಯಸಾಧ್ಯತೆ ಕುರಿತ ಅಧ್ಯಯನವನ್ನು ನಡೆಸಲಾಗುತ್ತಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಬಿಐಎಎಲ್ ನಿರ್ದೇಶಕರ ಮಂಡಳಿಯ ಅಧ್ಯಕ್ಷ ಟಿ.ಎಂ. ವಿಜಯ್ ಭಾಸ್ಕರ್ ಮತ್ತು ವರ್ಜಿನ್‍ ಹೈಪರ್‍ಲೂಪ್ ಮತ್ತು ಡಿಪಿ ವರ್ಲ್ಡ್ ಅಧ್ಯಕ್ಷ ಸುಲ್ತಾನ್‌ ಬಿನ್‌ ಸುಲಾಯೆಮ್‌ ವರ್ಚುವಲ್ ಸಭೆಯಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಿದರು. ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಮೂಲಸೌಕರ್ಯ ಅಭಿವೃದ್ದಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕಪಿಲ್ ಮೋಹನ್  ಹಾಜರಿದ್ದರು.

108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡ ಪ್ರತಿಮೆಯ ವಿಶೇಷತೆಗಳು

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದ ಜೊತೆಗೆ ಪಾಲುದಾರಿಕೆ ಮಾಡಿಕೊಳ್ಳಲು ಮತ್ತು ಬೆಂಗಳೂರಿನ ವಾಹನದಟ್ಟಣೆಯನ್ನು ನಿಭಾಯಿಸಲು ಪರಿಹಾರದ ಭಾಗವಾಗಬಹುದಾದ ಹೈಪರ್‍ಲೂಪ್ ಮುಂದಾಗಿರುವುದು ನಮಗೆ ಗೌರವದ ವಿಷಯವಾಗಿದೆ ಎಂದು  ವರ್ಜಿನ್‍ ಹೈಪರ್‍ಲೂಪ್ ಮತ್ತು ಡಿಪಿ ವಲ್ರ್ಡ್‍ ಅಧ್ಯಕ್ಷ ಸುಲ್ತಾನ್‌ ಬಿನ್‌ ಸುಲಾಯೆಮ್‌ ಹೇಳಿದರು.

ಇದು ಸಂಚಾರ ಮಾತ್ರವಲ್ಲದೆ,  ವಸ್ತುಗಳ ಸಾಗಣೆಗೂ ನೆರವಾಗಲಿದೆ.  ಅತ್ಯಂತ ಉನ್ನತ ಕಾರ್ಯಕ್ಷಮತೆಯ ಪೂರೈಕಾ ಸರಣಿಯನ್ನು ಸೃಷ್ಟಿಸುತ್ತದೆ  ಎಂಬ ವಿಶ್ವಾಸವಿದೆ. ಬೆಂಗಳೂರು ವಿಮಾನ ನಿಲ್ದಾಣವನ್ನು ಸಾರಿಗೆಯ ಕೇಂದ್ರವಾಗಿಸುವ ಮೂಲಕ ಜನರು ಮತ್ತು ಸ್ಥಳಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಉತ್ತಮವಾದ ರಸ್ತೆ ಜಾಲಕ್ಕೆ ಹೆಚ್ಚುವರಿಯಾಗಿ ವಿಮಾನ ನಿಲ್ದಾಣ ಶೀಘ್ರದಲ್ಲಿ ಸಬರ್‍ಬನ್ ರೈಲ್ವೆ ಮೂಲಕ ಸಂಪರ್ಕವನ್ನು  ಪಡೆಯಲಿದೆ ಎಂದು ಬಿನ್‌ ಸುಲಾಯೆಮ್‌ ಹೇಳಿದರು.
 
 ತಾಂತ್ರಿಕ, ಆರ್ಥಿಕ ಮತ್ತು ಮಾರ್ಗದ ಸಾಧ್ಯತೆಗಳತ್ತ ಗಮನಹರಿಸಿ ಅಧ್ಯಯನ ನಡೆಸಲಾಗುವುದು. ಇದನ್ನು ಆರು ತಿಂಗಳ  ಅವಧಿಯಲ್ಲಿ ಎರಡು ಹಂತಗಳಲ್ಲಿ ಮುಗಿಸುವ ನಿರೀಕ್ಷೆ ಇದೆ. ಗಂಟೆಗೆ 1,080 ಕಿಲೋಮೀಟರ್ ವೇಗ ಹೊಂದಿರುವ ಹೈಪರ್‍ಲೂಪ್ ಬೆಂಗಳೂರು ವಿಮಾನ ನಿಲ್ದಾಣದಿಂದ ನಗರದ ಕೇಂದ್ರಭಾಗಕ್ಕೆ ಸಾವಿರಾರು ಪ್ರಯಾಣಿಕರನ್ನು 10 ನಿಮಿಷದ ಒಳಗಡೆ ಸಾಗಿಸುತ್ತದೆ ಎಂದು ಪೂರ್ವ ವಿಶ್ಲೇಷಣೆ ತಿಳಿಸಿದೆ ಎಂದು ಬಿ.ಐ.ಎ.ಎಲ್.ನ ನಿರ್ದೇಶಕರ ಮಂಡಳಿಯ ಅಧ್ಯಕ್ಷ ಟಿ.ಎಂ. ವಿಜಯ್ ಭಾಸ್ಕರ್ ಹೇಳಿದ್ದಾರೆ.

ಸಾರಿಗೆ ಕೇಂದ್ರವಾಗಿ ಬೆಂಗಳೂರು ವಿಮಾನ ನಿಲ್ದಾಣವನ್ನು ಪರಿವರ್ತಿಸುವುದರೊಂದಿಗೆ ಅದನ್ನು ಭಾರತದ ನೂತನ ಪ್ರವೇಶದ್ವಾರವನ್ನಾಗಿ ಮಾಡುವ ದೃಷ್ಟಿಕೋನ ಹೊಂದಿದ್ದೇವೆ. ಕರ್ನಾಟಕ ರಾಜ್ಯ ಮತ್ತು ಸುತ್ತಮುತ್ತಲ ಪ್ರದೇಶದ ಆರ್ಥಿಕ ಬೆಳವಣಿಗೆಯ ವೇಗವನ್ನು ಹೆಚ್ಚಿಸಬಹುದಾದ ಹೆಗ್ಗುರುತಿನ ಕ್ರಮವನ್ನು ಕೈಗೊಳ್ಳಲು ನಾವು ಬಹಳ ಉತ್ಸಾಹಿತರಾಗಿದ್ದೇವೆ ಎಂದು ಬಿಇಎಲ್‌ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಹರಿ ಮರಾರ್ ಹೇಳಿದರು.