ನವದೆಹಲಿ(ಏ.06): ಮಾರುತಿ ಕಂಪನಿಯ ಜನಪ್ರಿಯ ಮಾಡೆÜಲ್‌ಗಳ ಪೈಕಿ ಒಂದಾ ಒಮ್ನಿ ವ್ಯಾನ್‌ನ ಉತ್ಪಾದನೆಯನ್ನು ಕಂಪನಿ ಸ್ಥಗಿತಗೊಳಿಸಿದೆ. ಇದರೊಂದಿಗೆ ಸತತ 35 ವರ್ಷಗಳ ಕಾಲ ತನ್ನ ವರ್ಗದ ವಾಹನಗಳ ಪೈಕಿ ಮುಂಚೂಣಿ ಸ್ಥಾನದಲ್ಲೇ ಇದ್ದ ಒಮ್ನಿ ಇತಿಹಾಸದ ಪುಟ ಸೇರಿದೆ.

ಕೇಂದ್ರ ಸರ್ಕಾರ, ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತೆ ಒದಗಿಸುವ ನಿಟ್ಟಿನಲ್ಲಿ ಎಬಿಎಸ್‌, ಏರ್‌ಬ್ಯಾಗ್‌ ಮತ್ತು ಬಿಎಸ್‌ 6 ಮಾನದಂಡಗಳನ್ನು ಕಡ್ಡಾಯ ಮಾಡಿದೆ. ಆದರೆ ಈ ಪೈಕಿ ಹಲವು ಸೌಕರ್ಯಗಳನ್ನು ಒಮ್ನಿ ವ್ಯಾನ್‌ನಲ್ಲಿ ಒದಗಿಸುವುದು ಸಾಧ್ಯವಿಲ್ಲ. ಹೀಗಾಗಿ ಈ ಮಾದರಿಯನ್ನೇ ಕೈಬಿಡಲು ಕಂಪನಿ ನಿರ್ಧರಿಸಿದೆ. ಇದಕ್ಕೆ ಪರ್ಯಾಯವೆಂದೇ ಕೆಲ ವರ್ಷಗಳ ಹಿಂದೆ ಮಾರುತಿ ಕಂಪನಿಯು ಒಮ್ನಿಯ ಸುಧಾರಿತ ಮಾದರಿಯ ಇಕೋ ಪರಿಚಯಿಸಿತ್ತು.

ಹಿನ್ನೆಲೆ: 1984ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಒಮ್ನಿ ಬಿಡುಗಡೆಯಾಗಿತ್ತು. ಇದು ಭಾರತದಲ್ಲಿ ಮಾರುತಿ ಸುಜುಕಿ ಕಂಪನಿಯ 2ನೇ ಕಾರಿನ ಮಾದರಿಯಾಗಿತ್ತು. 1998ರಲ್ಲಿ ಇದಕ್ಕೆ ಒಮ್ನಿ ಎಂಬ ಹೆಸರು ನೀಡಲಾಗಿತ್ತು. ಪ್ರಯಾಣಿಕರ ಜೊತೆ ಸರಕು ಸಂಚಾರಕ್ಕೂ ಇದು ಬಹುಪಯೋಗಿಯಾದ ಕಾರಣ, ಇದು ಬಹುಬೇಗ ಜನಮನ ಸೆಳೆದಿತ್ತು. ಕಳೆದ 35 ವರ್ಷಗಳಲ್ಲಿ ಕೇವಲ ಎರಡು ಬಾರಿ ಮಾತ್ರವೇ ಇದರ ವಿನ್ಯಾಸದಲ್ಲಿ ಸಣ್ಣ ಬದಲಾವಣೆ ಮಾಡಲಾಗಿತ್ತು. ಒಮ್ಮೆ 1998 ಮತ್ತು 2005ರಲ್ಲಿ ವಿನ್ಯಾಸದಲ್ಲಿ ಸಣ್ಣ ಬದಲಾವಣೆ ಮಾಡಲಾಗಿತ್ತು.