10 ಸಾವಿರ ರೂಪಾಯಿಗೆ ಬೈಕ್ ತಯಾರಿಸಿದ 9ನೇ ತರಗತಿ ವಿದ್ಯಾರ್ಥಿ!
ಲಾಕ್‌ಡೌನ್ ಬಹುತೇಕರಿಗೆ ಸಂಕಷ್ಟ ತಂದಿದ್ದರೆ, ಕೆಲವರಿಗೆ ಇದರಿಂದ ಒಳಿತಾಗಿದೆ. ಹೀಗೆ ಲಾಕ್‌ಡೌನ್ ಸಮಯದಲ್ಲಿ 9ನೇ ತರಗತಿ ವಿದ್ಯಾರ್ಥಿ ಬೈಕ್ ತಯಾರಿಸಿದ್ದಾನೆ. ಕೇವಲ 10 ಸಾವಿರ ರೂಪಾಯಿಗೆ ಈ ಬೈಕ್ ನಿರ್ಮಿಸಲಾಗಿದೆ. ವಿದ್ಯಾರ್ಥಿ ಕಂಡು ಹಿಡಿದ ಬೈಕ್ ವಿವರ ಇಲ್ಲಿದೆ.
ಕೊಚ್ಚಿ(ಜೂ.21): ಕೊರೋನಾ ವೈರಸ್ ಲಾಕ್‌ಡೌನ್ ಸಮಯದಲ್ಲಿ 9ನೇ ತರಗತಿ ವಿದ್ಯಾರ್ಥಿ ತನ್ನ ರಜಾ ದಿನವನ್ನು ಉಪಯುಕ್ತವಾಗಿ ಬಳಸಿದ್ದಾನೆ. ತಂದೆಯ ಆಟೋಮೊಬೈಲ್ ಶಾಪ್‌ನಲ್ಲಿ ಸಹಾಯ ಮಾಡುತ್ತಿದ್ದ ವಿದ್ಯಾರ್ಥಿ ಅರ್ಶದ್, ಮೋಟಾರ್ ಬೈಕ್ ನಿರ್ಮಿಸಲು ಮುಂದಾಗಿದ್ದಾನೆ. ಇದಕ್ಕಾಗಿ ತಂದೆಯ ಸಹಾಯ ಬಳಸಿ ಅದ್ಭುತವಾದ ಬೈಸಿಕಲ್ ಮೋಟಾರ್ ಬೈಕ್ ತಯಾರಿಸಿದ್ದಾನೆ.
ಬಜಾಜ್ ಪಲ್ಸರ್ 125 ಡಬಲ್ ಸೀಟ್ ಬೈಕ್ ಬಿಡುಗಡೆ!
ಕೇರಳದ ಕೊಚ್ಚಿ ನಿವಾಸಿಯಾಗಿರುವ ಅರ್ಶದ್ ತಂದೆ ಬೈಕ್ ರಿಪೇರಿ ಶಾಪ್ ಇಟ್ಟುಕೊಂಡಿದ್ದಾರೆ. ಹೀಗಾಗಿ ಬೈಕ್ ಕುರಿತು ಹೆಚ್ಚಿನ ಮಾಹಿತಿ ತಿಳಿದುಕೊಂಡಿರುವ ಅರ್ಶದ್, ಬೈಸಿಕಲ್‌ನಲ್ಲಿ ಮೋಟಾರ್ ಬೈಕ್ ನಿರ್ಮಿಸಲು ಮುಂದಾಗಿದ್ದಾನೆ. ಅರ್ಶದ್ ತಂದೆ ಮಗನ ಐಡಿಯಾವನ್ನು ಆರಂಭದಲ್ಲಿ ತಿರಸ್ಕರಿಸಿದ್ದಾರೆ. ಆದರೆ ಪಟ್ಟು ಬಿಡದ ಅರ್ಶದ್ ಬೈಸಿಕಲ್ ಮೋಟಾರ್ ಬೈಕ್‌ಗೆ ತಯಾರಿ ಆರಂಭಿಸಿದ್ದಾನೆ.
ಬೈಸಿಕಲ್‌ಗೆ 100 ಸಿಸಿ ಬೈಕ್ ಎಂಜಿನ್ ಬಳಸಿದ್ದಾನೆ. 1 ಲೀಟರ್ ಇಂಧನ ಸಾಮರ್ಥ್ಯದ ಸಣ್ಣ ಪೆಟ್ರೋಲ್ ಟ್ಯಾಂಕ್, LED ಲೈಟ್, ಸ್ಟಾಂಡ್ ಸೇರಿದಂತೆ ಕೆಲ ಪರಿಕರಗಳನ್ನು ಬಳಸಿ ಬೈಸಿಕಲ್ ಮೋಟಾರ್ ಬೈಕ್ ತಯಾರಿಸಿದ್ದಾನೆ. ಮೋಟಾರ್ ಬೈಕ್ ನಿರ್ಮಿಸಲು ಅರ್ಶದ್ 45 ದಿನ ತೆಗೆದುಕೊಂಡಿದ್ದಾರೆ. ಇನ್ನು ಮೋಟಾರ್ ಎಂಜಿನ್ ಸೇರಿದಂತೆ ಬೈಸಿಕಲ್ ಮೋಟಾರ್ ಸೈಕಲ್ ತಯಾರಿಕೆಗೆ 10,000 ರೂಪಾಯಿ ಖರ್ಚಾಗಿದೆ.