Asianet Suvarna News Asianet Suvarna News

ವಿಕಾರಿನಾಮ ಸಂವತ್ಸರ, ಯಾರಿಗೆ ಶುಭ? ಯಾರಿಗೆ ಅಶುಭ?

ಹೊಸ ವರ್ಷದ ಆರಂಭವಾಗುತ್ತಿದೆ. ಸಹಜವಾಗಿ ರಾಶಿ ಭವಿಷ್ಯದ ಮೇಲೆ ಕುತೂಹಲ ಇದ್ದೆ ಇರುತ್ತದೆ. ಹಾಗಾದರೆ ಈ ವರ್ಷದ ರಾಶಿ ಫಲಗಳು ಹೇಗಿವೆ? ಲಾಭ-ನಷ್ಟದ ಲೆಕ್ಕಾಚಾರ ಏನು?

Yearly-horoscope-of-2019-20 Ugadi Varsha Bhavishya Sri Vikari Nama Samvatsara
Author
Bengaluru, First Published Apr 5, 2019, 8:08 PM IST

ದೈವಜ್ಞ ಹರೀಶ್ ಕಾಶ್ಯಪ
ಅರವತ್ತು ಸಂವತ್ಸರಗಳಲ್ಲಿ 33ನೇ ಸಂವತ್ಸರವಾದ ಶ್ರೀ ವಿಕಾರೀ ಸಂವತ್ಸರದ ಯುಗಾದಿ ಪರ್ವದಲ್ಲಿ ಈ ಚರಾಚರಾ ಜಗತ್ತನ್ನು ಬೆಳಗುತ್ತಿರುವ ಸೂರ್ಯಾದಿ ನವಗ್ರಹಗಳ ಗೋಚರ ರೀತ್ಯಾ ಚಂದ್ರಮಾನ ಪದ್ಧತಿಯ ಫಲಾಫಲವನ್ನು ಇಲ್ಲಿ ಸೂಚಿಸಲಾಗಿದೆ. 

ಶುಭ ಯುಗಾದಿ ಪರ್ವದ ಚೈತ್ರ ಶುದ್ಧ ಪಾಡ್ಯವು ರೇವತೀ ನಕ್ಷತ್ರದ ರವಿಚಂದ್ರ ಮೀನಯೋಗದ ಮೀನ ಲಗ್ನದಲ್ಲೇ ಆರಂಭವಾಗಿದೆ. ವಿಕಾರಿ ಸಂವತ್ಸರದ ಗುಣಾವಗುಣ ವಿಚಾರವಾಗಿ ಭೃಗು ಪರಾಶರ್ಯಾದಿಗಳಲ್ಲಿ  ಹೇಳಿರುವಂತೆ ಈ ಕಾಲದಲ್ಲಿ ಜನರು ಬಹುವಿಷಯಾಸಕ್ತರೂ, ಒರಟು ಬುದ್ಧಿಯವರೂ ಮತ್ತು ಕಷ್ಟಕರ ಕೆಲಸಗಳಲ್ಲಿ ತೊಡಗುವರೂ ಆಗುವರು. ಅಸ್ಥಿರ ಮನಸ್ಸುಳ್ಳವರೂ, ಅತಿ ಲೋಲುಪಿ ಮಾತುಗಾರರೂ ಆಗಿರುತ್ತಾರೆ. ಪರಸ್ಪರರ ಬಗ್ಗೆ ದ್ವೇಷ ಪ್ರವೃತ್ತಿಯಿರುತ್ತದೆ. ಇನ್ನು ಗೋಚಾರ ರೀತ್ಯಾ ರವಿಚಂದ್ರರು ಮೀನಸ್ಥರಾಗಿ ಅಧಿಕ ವ್ಯವಹಾರ ಉತ್ಪತ್ತಿಗೆ ಕಾರಣರಾಗಿ, ಯಥೇಷ್ಟ ಧನಧಾನ್ಯ ಜಲ ಸಂಪತ್ತನ್ನು ವೃದ್ಧಿಸುವರು. ಕರ್ಮಸ್ಥಾನದ ಗುರು-ಶನಿಗಳು ವಾಯುಪ್ರಕೋಪ, ಪಿತ್ಥ(ಉಷ್ಣ) ವೃದ್ಧಿ ಮಾಡಿ ವಿಶೇಷವಾಗಿ ರಾಜರಿಗೆ ವೈರತ್ವ ಉಂಟುಮಾಡುವರು. ಭಾರತ ವರ್ಷಕೆ ಶನಿ ಗುರುಗಳ ‘ಉಭಯ ಪರಿವರ್ತನ ಯೋಗ’ವಿದ್ದು ಜಗತ್ ಖ್ಯಾತಿಯನ್ನು ವೃದ್ಧಿಪಡಿಸುವುದು. ಕೇಂದ್ರದಲ್ಲಿ ಗುರುಶನಿಗಳು ಇದ್ದು, ರವಿಯೂ ಮಧ್ಯ ವರ್ಷದವರೆಗೂ ಬಲಿಷ್ಠನಾಗಿರಲು ಈಗಿನ ಕೇಂದ್ರ ಸರ್ಕಾರವೇ ಇನ್ನೂ ಬಲಿಷ್ಠವಾಗುವುದು ಮತ್ತು ಜನಾದರಣೆ ಪಡೆವುದು. ಶನಿ-ರಾಹುಗಳ ಪರಸ್ಪರ ಭಾಗ್ಯದೃಷ್ಟಿದೋಷವೂ ಇರಲು, ಅನೇಕ ಶತ್ರುಗಳ ಉಪಟಳ, ಕಾದಾಟ, ಸಾವು ನೋವುಗಳ ಸಂಭಾಳಿಸಲು, ನಿಯಂತ್ರಿಸಲು ಕೇಂದ್ರ -ರಾಜ್ಯ ಸರ್ಕಾರಗಳು ಹೈರಾಣಾಗುವರು. 

ಶುಕ್ರ ಬುಧರು ಲಗ್ನಾಪ್ತರಾಗಿ ಅಂತಾರಾಷ್ಟ್ರೀಯ ವ್ಯವಹಾರ ವೃದ್ಧಿಸುವುದು. ಆಯಾತ ನಿರ್ಯಾತದಲ್ಲಿ(ಇಂಪೋರ್ಟ್, ಎಕ್ಸ್‌ಪೋರ್ಟ್) ವ್ಯವಹಾರದಲ್ಲಿ ಶುಭ. ಸಿನಿಮಾ, ವಿದ್ಯುನ್ಮಾನ ಕ್ಷೇತ್ರವು ಅಧಿಕ ಏಳಿಗೆ ಪಡೆಯುವುದು. ವೈದ್ಯಕೀಯ ಸಂಶೋಧನೆ ವೃದ್ಧಿ ಹೊಸ ಔಷಧಗಳ ಬಳಕೆ ಹೆಚ್ಚುವುದು. ಆಳುವ ಮಂತ್ರಿ-ಸರ್ಕಾರದವರಿಗೆ ಅತಿ ಭೀತಿ ಮತ್ತು ಕೆಲಸದ ಒತ್ತಡ ರವಿ, ಕುಜ, ಶನಿಗಳ ಪ್ರಭಾವದಿಂದ ಆಗುವುದು. ಯುಗಾದಿ ತಿಂಗಳಲ್ಲೇ ರಾಹು ಕೇಂದ್ರದ ಕಾಲ ಸರ್ಪಯೋಗವೂ ಇರಲಾಗಿ ಔದ್ಯೋಗಿಕ, ರಾಜಕೀಯ ದಿಢೀರ್ ಬದಲಾವಣೆ. ನವೆಂಬರ್‌ನಲ್ಲಿ ಪುನಃ ಗುರುವು ತನ್ನ ರಾಶಿ ಧನುಸ್‌ಗೆ ಪ್ರವೇಶಿಸಿದಾಗ ಅಶುಭಗಳೆಲ್ಲ ಮರೆಯಾಗಿ, ಶುಭ ಫಲಗಳನ್ನು ಜನಸಮೂಹ ಪಡೆಯುವುದು. 

ದ್ವಾದಶ ರಾಶಿಫಲ
ಮೇಷ:
ಶಕ್ತಿವಂತರಿಗೇ ಸವಾಲುಗಳು ಇರುವುದು. ಈ ಮಾತು ನಿಮ್ಮ ಅನುಭವಕ್ಕೆ ಹೆಚ್ಚು ಬರುವ ಯುಗಾದಿ ವಿಕಾರಿ ಸಂವತ್ಸರವಿದು. ಆಲೋಚನೆ ಮಾಡದೇ ಯಾವ ಮಾತನ್ನೂ ಆಡದಿರಿ. ಹಣ ಲೇವಾದೇವಿ ಮಾಡದಿರಿ. ಪಾರ್ಟ್‌ನರ್‌ಶಿಪ್ ವ್ಯವಹಾರ ಸದ್ಯ ಬೇಡ. ಹಣ-ಸಮಯ ಪೋಲು ಮಾಡುವುದರಿಂದ ದೂರ ಇರಿ. ವೆಂಕಟೇಶ ದರ್ಶನ, ಸುಬ್ರಹ್ಮಣ್ಯನ ಪೂಜೆಗಳು ಆಗಲಿ. 
ಶುಭವಾರ - ಶುಕ್ರ. 
ವರ್ಣ- ಹಳದಿ, ಹಸಿರು.

ವೃಷಭ: ಭಾಗ್ಯವು ಚೆನ್ನಾಗಿದೆ ಅಂತ ಬೀಗುವ ಸಮಯ. ಬಂಧು ಮಿತ್ರರು ನಿಮ್ಮ ಅಹಂಭಾವ, ಕೋಪದ ಮಾತಿನಿಂದ ದೂರಾದಾರು. ಶತ್ರು ವೃದ್ಧಿ ಕಾಲ. ಜಾಗರೂಕರಾಗಿ ವರ್ತಿಸಿ. ಉದ್ಯೋಗ, ಆದಾಯ ಉತ್ತಮ. ಪರರ ನಂಬಿ ಹಣ ಹೂಡದಿರಿ. ತಿರುಗಾಟ, ಆಯಾಸ ಹೆಚ್ಚುವುದು. ವಿದೇಶ ವಾಸಾದಿಯೋಗವಿದೆ. ಶ್ರೀ ದುರ್ಗೆಯ ಅರ್ಚನೆ, ನಾಗಶಾಂತಿಗಳಿಂದ ದೋಷ ದೂರ. 
ಶುಭ ವಾರ- ಬುಧ. 
ವರ್ಣ- ಕೇಸರಿ, ಬೂದು.

ಮಿಥುನ: ಜನ್ಮರಾಹುವಿನ ಪ್ರಭಾವದಿಂದ ವಿವಿಧ ಚಟುವಟಿಕೆಯಲ್ಲಿ ಮನಸಾಗುವುದು. ವಿವಾಹಾದಿ ಶುಭ ಕಾರ್ಯಗಳಲ್ಲಿ ಆಸಕ್ತಿ, ಸಹಾಯ, ಸಿದ್ಧಿಯ ವರ್ಷವಿದು. ದೈವಬಲ ವೃದ್ಧಿಸುತ್ತ ಸಾಗುವ ಕಾಲವಾದ್ದರಿಂದ ಧೈರ್ಯವಾಗಿ ಮುನ್ನಡೆಯಿರಿ. ಆಹಾರ-ಆರೋಗ್ಯದ ಬಗ್ಗೆ ಜಾಗ್ರತೆ ಇರಲಿ. ಅನ್ಯದೇಶ ಪ್ರಯಾಣ, ವಾಸಾದಿ ಯೋಗವಿದೆ. 
ಶುಭ ವಾರ- ಸೋಮ, ಗುರು. 
ವರ್ಣ- ಬೂದು, ಬಿಳಿ, ಹಳದಿ.

ಕಟಕ: ಪಂಚಮ ಗುರು, ಷಷ್ಠ ಶನಿ ಅಧಿಯೋಗವನ್ನು ಕೊಡುವ ವರ್ಷ. ಇಷ್ಟಾರ್ಥಗಳಲ್ಲದೇ ಇನ್ನೂ ಅನೇಕ ಏಳಿಗೆ ಕಾಣುವಿರಿ. ಕುಟುಂಬ ದೇವರು, ಪಿತೃಗಳ ವಿಷಯದಲ್ಲಿ ದೋಷಗಳಿವೆ. ಪರಿಹಾರದತ್ತ ಯೋಜಿಸಿ ಧರ್ಮ ವೃದ್ಧಿಸುವುದು. ರಾಜಕಾರಣಿಗಳಿಗೆ ಬಲವೃದ್ಧಿ. ಸ್ವಂತ ಉದ್ಯೋಗಕ್ಕೆ ಸೂಕ್ತ ವರ್ಷವಿದು. ಸೀತಾರಾಮ ಕಲ್ಯಾಣ ಸೇವೆ, ದುರ್ಗಾ ಶಾಂತಿಗಳಿಂದ ಮನೆಯಲ್ಲಿ ಶುಭ.  
ವಾರ- ಸೋಮ, ರವಿ. 

ಸಿಂಹ: ಗತವೈಭವ ಪುನಃ ಪಡೆಯುವಿರಿ. ಉದ್ಯೋಗದಲ್ಲಿ ನಿಧಾನ ಏರುಗತಿ. ಹಳೆಯ ವ್ಯಾಜ್ಯಗಳು ಪರಿಹಾರವಾಗುವುದು. ಅಲ್ಪಕಾಲಿಕ ರಾಜಯೋಗವೂ ಇರುವ ವರ್ಷ, ಕೀರ್ತಿ ಸಮ್ಮಾನಗಳ ಪಡೆಯುವಿರಿ. ಕುಟುಂಬದ ಮಾತಾ ವರ್ಗ ಅನಾರೋಗ್ಯ ಸಾಧ್ಯತೆ. ಪಿತೃಕಾರ್ಯಾದಿಗಳ ಬಿಡದೇ ಆಚರಿಸಿ. ಶ್ರೀ ಲಲಿತಾ ಪಾರಾಯಣಂ, ಶ್ರೀ ನರಸಿಂಹನ ದರ್ಶನ ನಡೆಯಲಿ. 
ಶುಭವಾರ- ರವಿ, ಬುಧ. 
ವರ್ಣ- ಕೇಸರಿ, ಹಸಿರು. 

ಕನ್ಯಾ: ಯುಗಾದಿಯ ರೇವತೀ ರವಿಚಂದ್ರಯೋಗವು ನಿಮಗೆ ಅನೇಕ ದೋಷಗಳ ದೂರ ಮಾಡುವುದು. ಹಿಡಿದ ಕಾರ್ಯಗಳು ತುಸು ನಿಧಾನವಾದರೂ, ಒಳ್ಳೆಯ ಬದಲಾವಣೆ ಪಡೆಯುವಿರಿ. ದಶಮ ರಾಹು, ರವಿಚಂದ್ರ, ಗುರು ಶನಿಗಳ ಪ್ರಭಾವ ವೈದ್ಯರಿಗೆ ವಿಶೇಷ ಸಿದ್ಧಿಗಳ ತರುವುದು. ವಿದೇಶ ಪ್ರವಾಸ, ಜನರ ಸಹವಾಸಾದಿಗಳು- ಹೊಸ ಉದ್ದಿಮೆ ಚಿಂತನೆಗೆ ಸೂಕ್ತ ವರ್ಷ. ಶ್ರೀ ಸುಬ್ರಹ್ಮಣ್ಯ ಶಾಂತಿ- ನಾಗಪೂಜೆಗಳಿಂದ ಅಭಿವೃದ್ಧಿ. 
ಶುಭ ವಾರ-ಬುಧ. 
ವರ್ಣ-ಹಸಿರು. 

ತುಲಾ: ದ್ವಿತೀಯ ಗುರು, ಪಂಚಮ ಶುಭ ಸಂಚಾರಗಳಿಂದ ಬಹುಕೌತುಕ ವರ್ಷ ಕಾಣಲಿರುವಿರಿ. ಸಾವಧಾನ ಚಿತ್ತರಾಗಿರುವ ನೀವು ಎಲ್ಲವನ್ನು ಗಮನಿಸಿ, ತಿಳಿದು ಮುನ್ನಡೆಯಿರಿ. ಅನ್ಯರಿಂದ, ಸ್ತ್ರೀಯರಿಂದ ಪ್ರಭಾವಿತರಾಗಿ ಉದ್ಯೋಗ ಪಡೆಯುವಿರಿ. ವಿವಾಹ ವಿಷಯ ಗೊಂದಲವಾದೀತು. ವರ್ಷಾಂತ್ಯಕ್ಕೆ ದಾರಿಯಾಗುವುದು. ಶ್ರೀ ವೆಂಕಟೇಶ್ವರ ದರ್ಶನ, ಕಲ್ಯಾಣ ಸೇವೆಗಳಾಗಲಿ. ರಾಜಕಾರಣಿಗಳು ಅಧಿಕ ಒತ್ತಡದ ಶುಭ ಫಲ ಪಡೆವರು. 
ಶುಭ ವಾರ- ಬುಧ, 
ಗುರು. ವರ್ಣ- ಕೇಸರಿ.

ವೃಶ್ಚಿಕ: ಗುರು ಶನಿಗಳ ಜನ್ಮಸಂಚಾರದ ಉಭಯ ಅಧಿಯೋಗವೂ-ರವಿ ಕುಜರ ಬಲವೂ ವೃದ್ಧಿಯ ಕಾಲ. ರಾಜಕಾರಣ, ಅಧಿಕಾರದ ಯೋಗಗಳು, ಉದ್ಯೋಗಗಳು ಹೆಚ್ಚಿ ಕೆಲಸ 
ಕಾರ್ಯ ಒತ್ತಡವೂ ಹೆಚ್ಚುವುದು. ಕುಜ ರಾಹುಗಳ ಯತಿ ಅಪಯೋಗಗಳಿಂದ ಅನಾರೋಗ್ಯಬಾಧೆ. ಕುಟುಂಬದ ದೇವರ ಪೂಜೆ-ಗ್ರಹಶಾಂತಿ-ನಾಗಪೂಜೆಗಳು ನಡೆಯಲಿ. ವರ್ಷಾಂತ್ಯಕ್ಕೆ ಸುಗಮವಾಗುವುದು. 
ಶುಭ ವಾರ-ಗುರು. 
ವರ್ಣ-ಶ್ವೇತ.

ಧನುಸ್ಸು: ಭಾವನಾತ್ಮಕ ಏಳುಬೀಳು ಏರುಜಾರಿನ ವರ್ಷವಿದು. ಸಮಾಹಿತ ಸಮಭಾವಃ ಪ್ರಯತ್ನತಃ ಸಂಭಾಳಿಸಿಕೊಳ್ಳಿ. ಯೋಗ ವ್ಯಾಯಾಮ, ಪ್ರಾಣಾಯಾಮ, ಶ್ರೀ ಹನುಮ ಗುರು ಜಪಾದಿಗಳ ಸಾಧನೆ ನಡೆಯಲಿ. ಆರಾಮ ದೊರೆಯುವುದು. ಯಾವುದೇ ಹೊಸ ವ್ಯವಹಾರ ನಡೆಯದು. ಇದ್ದುದರಲ್ಲಿ ತೂಗಿ ಸಾಗಿರಿ. ಜೂನ್-ಜುಲೈನಲ್ಲಿ ವಿಧಿವತ್ ಗ್ರಹಶಾಂತಿ, ನಾಗ ಶಾಂತಿಗಳ ಮಾಡಿಸಿಕೊಳ್ಳಿ. ಆದಷ್ಟು ಕುಟುಂಬ ಮಿತ್ರರ ಸಹಚಾರಿಯಾಗಿರಿ. 
ಶುಭ ವಾರ- ಗುರು. 
ವರ್ಣ- ಶ್ವೇತ, ಹಳದಿ.

ಮಕರ: ಬೇಕಾದಷ್ಟು ಶುಭ ವಾರ್ತೆ, ಧನಲಾಭ, ಸಹಕಾರ ಪಡೆವ ಯೋಗವಿದೆ. ಸರ್ವರಿಗೂ ರಾಜಕೀಯವಾಗಿ ಸವಾಲಿನ ವರ್ಷವಾದರೂ ನಿಮಗೆ ವಿಶೇಷವಾಗುವುದು. ಆದಾಯ ಖರ್ಚು ಸಮವಾಗುವುದು. ದುಂದುವೆಚ್ಚಕ್ಕೆ ಕಡಿವಾಣ ಇರಲಿ. ವಿವಾಹ, ಉಪನಯನ, ನೂತನ ಶುಭ ಕಾರ್ಯಗಳು ಕೈಗೂಡುವುದು. ಪಿತೃಪೂಜೆ, ಕುಲದೇವತಾ ಆರಾಧನೆ ಶ್ರದ್ಧೆಯಿಂದ ಮಾಡಿರಿ. 
ಶುಭ ವಾರ-ಶುಕ್ರ. 
ವರ್ಣ- ಕೆಂಪು, ಬಿಳಿ. 

ಕುಂಭ: ಶಾಂತ ಸಮತ್ವ ಮನೋಭಾವದ ನಿಮಗೆ ಈ ವರ್ಷ ಆಶಾದಾಯಕವಾಗಿ ಶುರುವಾಗಿ, ನಿರೀಕ್ಷೆಯಷ್ಟು ಫಲ ಕೈ ಜಾರುವ ಸಮಯ. ಏಕಾದಶದ ಶನಿ-ಗುರುಯೋಗದ ಹೊರತಾಗಿ ಎಲ್ಲ ಗ್ರಹವೂ ಉತ್ಪಾತಕಾರರಾಗಿ ನಿಮ್ಮ ಸತ್ವ ಪರೀಕ್ಷೆಗೆ ದೂಡುವರು. ಕರ್ಮಯೋಗದಂತೆ, ಸ್ವಾರ್ಥತ್ಯಾಗ- ಬುದ್ಧಿಯಿಂದ ನಿರ್ಲಿಪ್ತರಾದರೆ, ವರ್ಷಂತ್ಯಕ್ಕೆ ಉತ್ತಮ ಫಲ ಪಡೆಯುವಿರಿ. ಪೂರ್ವಪಿತೃಗಳ ವಿಧಿವತ್ ಶಾಂತಿ- ರುದ್ರದೇವನ ಆರಾಧನೆ ನಡೆಯಲಿ. 
ಶುಭ ವಾರ-ಗುರು. 
ವರ್ಣ-ನೀಲಿ, ಶುಭ್ರ.

ಮೀನ: ವ್ಯವಹಾರ ಉತ್ತಮವಾಗಿ ಆದಾಯ ವೃದ್ಧಿ. ಕುಟುಂಬದ ಖರ್ಚು ವೆಚ್ಚ ಹೆಚ್ಚಳ. ಸ್ತ್ರೀಯರಿಗೆ ವಿಶೇಷ ಧನ ಮಾನ ಪ್ರಾಪ್ತಿ. ಸಿನಿಮಾದವರಿಗೆ ಅನೇಕ ಅವಕಾಶ. ಕುಜ-ರಾಹುದಶಾ ಅಲ್ಲದವರಿಗೆ ಅಧಿಕ ಶುಭ ವರ್ಷವಿದು. ರಾಜಕಾರಣ ವೃದ್ಧಿಯ ಪಥವಾಗುವುದು. ಸತ್‌ಕರ್ಮದಲ್ಲಿ ದಾನ-ಧರ್ಮಕ್ಕೆ ಮನಸು ಇರಲಿ. ಮುಂದೆ ಅದೇ ಕಾಯುವುದು. 
ಶುಭ ವಾರ-ಗುರು, ಶುಕ್ರ. 
ವರ್ಣ-ತಿಳಿ ನೀಲಿ.

 

Follow Us:
Download App:
  • android
  • ios