ಮೇಷ: ಮಾತು ಸರಳ ಮತ್ತು ಸುಂದರವಾಗಿರಬೇಕು. ಆಗ ಎಲ್ಲರ ಮೆಚ್ಚುಗೆ ಪಡೆಯಲು ಸಾಧ್ಯ. ಕಟು ಮಾತುಗಳು, ಇಲ್ಲ ಸಲ್ಲದ ಮಾತುಗಳು ಬೇರೆಯವರಿಗೆ ಕಿರಿಕಿರಿ ಮೂಡಿಸಬಾರದು. ಅಹಂ ಸ್ವಭಾವ ತೊರೆದು ತಲೆಬಾಗುವುದನ್ನು ಕಲಿತರೆ ನಿಮಗೇ ಒಳಿತು. ಹೆಚ್ಚಿನ ಕೆಲಸದೊತ್ತಡ ಈ ವಾರ ಇರಲಿದೆ.

ವೃಷಭ: ಕನಸುಗಳನ್ನು ಕೂಡಿಟ್ಟುಕೊಳ್ಳುತ್ತಿದ್ದರೆ, ಬೆಟ್ಟದಷ್ಟು ಬೆಳೆದು ನಿಲ್ಲುತ್ತವೆ. ಆದರೆ ಒಂದೊಂದೇ ಕನಸನ್ನು ಆಗಾಗ್ಗೆ ಸಾಕಾರಗೊಳ್ಳುವ ಕಡೆ ಹೆಜ್ಜೆ ಹಾಕಿದರೆ ಬದುಕು ಸುಂದರ. ಸಾವಿರ ಮೆಟ್ಟಿಲು ಹತ್ತ ಬೇಕೆಂದರೆ ಮೊದಲು ನಿಧಾನಕ್ಕೆ ಒಂದೊಂದೇ ಮೆಟ್ಟಿಲನ್ನು ಹತ್ತಲು ಆರಂಭಿಸಬೇಕು. ಆಗ ಗುರಿ ತಲುಪಲು ಸಾಧ್ಯ.

ಮಿಥುನ: ಮಾಡುವ ಕೆಲಸದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ನಿಮ್ಮ ಮೇಲೆ ನಿಮಗೆ ಆತ್ಮವಿಶ್ವಾಸ ಇರಲಿ. ಧೈರ್ಯದಿಂದ ಮುನ್ನಡೆಯಿರಿ. ಎಲ್ಲಾ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿದರೆ ಯಾವುದೂ ಕಷ್ಟ ಎನ್ನುವುದಿರುವುದಿಲ್ಲ. ಹೊಸ ಕೆಲಸಕ್ಕೆ ಕುಟುಂಬದವರ ಬೆಂಬಲ, ಮಾರ್ಗದರ್ಶನ ಸಿಗಲಿದೆ.

ಕಟಕ: ತಪ್ಪು ಮಾಡುವುದು ಸಹಜ, ಅದನ್ನು ಸರಿಪಡಿಸಿಕೊಂಡು ಮುಂದೆ ಸಾಗಬೇಕೆ ಹೊರತು ತಪ್ಪನ್ನೇ ಸರಿ ಎಂದು ವಾದಿಸುವುದು ತರವಲ್ಲ. ನೊಂದ ಜೀವಗಳಿಗೆ ನಿಮ್ಮ ಸಾಂತ್ವಾನ, ಧೈರ್ಯದ ಮಾತುಗಳು, ಪ್ರೋತ್ಸಾಹಿಸುವ ಮಾತುಗಳಿಂದ ಇನ್ನೊಬ್ಬರಿಗೆ ಹತ್ತಿರವಾಗಲಿದ್ದೀರಿ. ಸಿಹಿ ಸುದ್ದಿ ಕೇಳುವಿರಿ.

ಸಿಂಹ: ಅವಸರದಲ್ಲಿ ತಂದುಕೊಂಡ ನಿರ್ಧಾರ ಮುಂದೊಮ್ಮೆ ಅಪಾಯ ತಂದೊಡ್ಡಬಹುದು. ಎಲ್ಲರಿಂದಲೂ ಒಳ್ಳೆಯದನ್ನೇ ಬಯಸದಿರಿ. ಕೆಲವೊಮ್ಮೆ ಒಳ್ಳೆಯದೆನ್ನುವುದೂ ಕೆಟ್ಟದಾಗಿ ಪರಿಣಮಿಸಬಹುದು. ಮನಸ್ಸಿನ ಕಿರಿಕಿರಿಗೆ ಆದಷ್ಟು ಧ್ಯಾನ ಮಾಡಿ ಇಲ್ಲವೆ ದೂರ ಪ್ರಯಾಣ ಮಾಡಿ.

ಕನ್ಯಾ: ನಿಮ್ಮನ್ನು ನೀವು ಮೊದಲು ನಂಬದಿದ್ದರೆ, ಬೇರೆಯವರು ನಿಮ್ಮನ್ನು ನಂಬಬೇಕೆನ್ನುವುದು ತಪ್ಪಲ್ಲವೆ. ನಂಬಿಕೆ ಎನ್ನುವುದು ಕನ್ನಡಿಯಂತೆ ಜೋಪಾನವಾಗಿ ಕಾಪಾಡಬೇಕು. ನಕಾರಾತ್ಮಕ ಆಲೋಚನೆ ಬೇಡ. ಕೆಲಸಗಳಲ್ಲಿ ಆಸಕ್ತಿ ಹೆಚ್ಚಲಿದೆ. ಹೊಸ ಆಲೋಚನೆಗೆ ಹೊಸ ತಿರುವು ಸಿಗಲಿದೆ. ಅದರಲ್ಲಿ ಸಫಲರಾಗುವಿರಿ.

ತುಲಾ: ನಿಮ್ಮ ಸನ್ನಡತೆ ಹಾಗೂ ಒಳ್ಳೆಯ ಮಾತುಗಳು ಇನ್ನೊಬ್ಬರಿಗೆ ದಾರಿದೀಪವಾಗಲಿದೆ. ನಿಮಗೆ ಸಂಬಂಧಿತವಲ್ಲದ ವಿಚಾರಗಳಿಗೆ ತಲೆ ಹಾಕುವುದು ಬೇಡ. ಆದಷ್ಟು ಹೊಸ ಸ್ನೇಹಿತರ ಬಗ್ಗೆ ಎಚ್ಚರ ಇರಲಿ. ಹೊಸದೆಂದು ಎಲ್ಲವನ್ನೂ ಅಪ್ಪಿಕೊಳ್ಳದಿರಿ. ಚೂರಿ ಚುಚ್ಚುವವರು ನಿಮ್ಮ ಬೆನ್ನ ಹಿಂದೇ ಇದ್ದಾರೆ.

ವೃಶ್ಚಿಕ: ಇಚ್ಛಾಶಕ್ತಿ ಒಂದಿದ್ದರೆ ಏನನ್ನುಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಉತ್ತಮ ಉದಾಹರಣೆ ನಿವಾಗಲಿದ್ದೀರಿ. ಕೆಲವೊಮ್ಮೆ ಯಾವುದು ಸರಿಹೊಂದುತ್ತಿಲ್ಲವೊ ಅದನ್ನು ಸರಿಹೊಂದಿಸಿಕೊಳ್ಳಬೇಕಾಗುತ್ತದೆ. ಇನ್ನೊಬ್ಬರ ಖುಷಿಗೆ ಕೆಲ ಕೆಲಸಗಳನ್ನು ಇಷ್ಟವಿಲ್ಲದಿದ್ದರೂ ಮಾಡಬೇಕಾಗುತ್ತದೆ.

ಧನುಸ್ಸು: ಸಂಗಾತಿಯೊಂದಿಗಿನ ಮನಸ್ಥಾಪ ಕ್ಷಣಿಕವಾದದ್ದು, ಅದನ್ನು ತೀರ ಎಳೆದುಕೊಂಡು ಹೋದರೆ ಮಾಯಬೇಕಾದ ಗಾಯ ದೊಡ್ಡದಾಗುತ್ತಾ ಹೋಗುತ್ತದೆ. ಕೈನಲ್ಲೇ ಇರುವ ಪ್ರೀತಿಯ ಅಸ್ತ್ರವನ್ನು ಉಪಯೋಗಿಸಿ.

ಮಕರ: ಸ್ನೇಹ ಎಂಬುದು ಪವಿತ್ರ ಸಂಬಂಧ. ಅಲ್ಲಿ ನೋವು ನಲಿವು, ಪ್ರಿತಿ ದ್ವೇಷ ಎಲ್ಲವೂ ಇರುತ್ತದೆ. ಪ್ರೀತಿ ಪಾತ್ರರಿಂದ ನಿಮ್ಮ ಹೊಸ ಕೆಲಸಕ್ಕೆ ಬೆಂಬಲ ಸಿಗಲಿದೆ. ವಾರಾಂತ್ಯದಲ್ಲಿ ಬಂಧುಗಳ ಆಗಮನ ಸಾಧ್ಯತೆ. ಸಂತೋಷ ಮನೆಮಾಡಲಿ

ಕುಂಭ: ಪುಸ್ತಕ ಓದುವ ಹವ್ಯಾಸ ಇನ್ನೂ ಹೆಚ್ಚಾಗಲಿದೆ. ಪುಸ್ತಕಕ್ಕಿಂತ ಒಳ್ಳೆಯ ಸ್ನೇಹಿತ ಇನ್ನೊಬ್ಬನಿಲ್ಲ. ದುಃಖ ಹೆಚ್ಚಾದಾಗ, ಬೇಸರವಾದಾಗ ಪುಸ್ತಕ ಓದಿ. ಯಾಂತ್ರೀಕೃತ ಬದುಕಿನಿಂದ ಹೊರ ಬಂದು ವಾರಾಂತ್ಯದಲ್ಲಾದರೂ ಹಸಿರಿನ ಮಧ್ಯೆ ಸ್ವಲ್ಪ ಕಾಲಕಳೆಯಿರಿ. ಇದರಿಂದ ಶಾಂತತೆ, ಸಂತೋಷ ಸಿಗಲಿದೆ.

ಮೀನ: ದೇವರ ಮೇಲೆ ನಂಬಿಕೆ ಹೆಚ್ಚಾಗಲಿದೆ. ಮನೆಯಲ್ಲಿನ ಅಶಾಂತತೆಯ ವಾತಾವರಣಕ್ಕೆ ತಾತ್ಕಾಲಿಕ ಮುಕ್ತಿ ಸಿಗಲಿದೆ. ಹಣಕಾಸಿನಿ ವ್ಯವಹಾರದಲ್ಲಿ ಲಾಭ ಹೊಂದಿದರೂ ಅಷ್ಟೇ ಪ್ರಮಾಣದಲ್ಲಿ ಖರ್ಚೂ ಈ ವಾರ ಆಗಲಿದೆ.