ಈ ಪ್ರಶ್ನೆ  ಯಾರನ್ನ ಕಾಡಿಲ್ಲ ಹೇಳಿ? ಈ ಕುಜ ದೋಷ ಅನ್ನೋದು ಈಗಿನ ಜನರೇಷನ್ನವರನ್ನೂ ದೊಡ್ಡ ಪೆಡಂಭೂತವಾಗಿ ಕಾಡ್ತಾಇದೆ. ಆದರೆ ಕುಜ ದೋಷವಿದ್ದ ಮಾತ್ರಕ್ಕೆ ಅದು ಸಮಸ್ಯೆ ಅಲ್ಲ. ನಮ್ಮ ಹುಟ್ಟೇ ವ್ಯರ್ಥವಾಯ್ತು ಅಂತ ಅಲ್ಲ. ಅದನ್ನು ಸರಿಯಾದ ತಜ್ಞರಲ್ಲಿ ಪರಿಶೀಲಿಸಿಕೊಳ್ಳಬೇಕು. ಜಾತಕದಲ್ಲಿ ಕುಜ ಎಲ್ಲಿದ್ದರೆ ಸಮಸ್ಯೆ? ಅದನ್ನ ಕಂಡುಕೊಳ್ಳುವುದು ಹೇಗೆ? 

ಸಮಸ್ಯೆ ಕಂಡುಕೊಳ್ಳುವುದು ಅಷ್ಟು ಸುಲಭವಲ್ಲ. ಮೇಲ್ನೋಟಕ್ಕೆ  ಸಮಸ್ಯೆ ಎಂದೆನಿಸುತ್ತದೆ. ಆದರೆ ಒಳ ಹೊಕ್ಕು ನೋಡಿದರೆ ಅಲ್ಲಿ ಸಮಸ್ಯೆಯೇ ಇರುವುದಿಲ್ಲ. ಹಾಗಾದರೆ ಅದನ್ನ ತಿಳಿಯುವುದು ಹೇಗೆ? ಅದೇ ನಿಜವಾದ ದೋಷ. ಯಾವುದನ್ನ ಗುರುತಿಸಲು ಸಾಧ್ಯವಿಲ್ಲವೋ ಅದೇ ಜಾತಕನ ಪಾಲಿಗೆ ಒಂದು ದೋಷ. 

ಅಲಸಿಗೆ ಕುಜ ದೋಷ ಎಲ್ಲಿದೆ? 

ಅದನ್ನೇ ಈಗ ತಿಳಿಯೋಣ. ಈ ಕುಜ ಗ್ರಹದ್ದು ಧೈರ್ಯ, ಸಾಹಸ, ಉದಾರತೆ, ಸರ್ವಾಧಿಕಾರತ್ವದಂಥ ಸ್ವಭಾವ. ಇಂಥ ಕುಜ ಜಾತಕದ ಯಾವ ಸ್ಥಳಗಳಲ್ಲಿದ್ರೆ ದೋಷ ಅನ್ನೋದನ್ನು ಮೊದಲು ತಿಳಿಯೋಣ. ಒಂದು ಜಾತಕದಲ್ಲಿ ಲಗ್ನದಿಂದ ಎರಡನೇ ಮನೆಯಲ್ಲಿ ಕುಜನಿದ್ರೆ ದೋಷ ಅಂತಾರೆ. 

ಲಗ್ನದಿಂದ ದ್ವಿತೀಯ ಸ್ಥಾನ ಅದು ಕುಟುಂಬ ಸ್ಥಾನ. ಹಾಗಾಗಿ ಕುಟುಂಬದವರ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ, ಅಷ್ಟೇ ಅಲ್ಲ ಮಾತಿನ ಮೇಲೆ ಹಿಡಿತ ಇರೋದಿಲ್ಲ ಹಾಗೂ ಹಣದ ಮೇಲೂ ಹಿಡಿತ ಇರೋದಿಲ್ಲ. ನೋಡಿ ಒಬ್ಬ ಮನುಷ್ಯ ಸಾಧು ಅಂತ ಅನ್ನಿಸಿಕೊಳ್ಳಬೇಕಿದ್ರೆ ಹಣ, ಮಾತು ಇವೆರಡೂ ಬಹಳ ಮುಖ್ಯ. ನಮ್ಮ ಬದುಕಿನ ಹಾದಿ ತಪ್ಪಿಸೋದೇ ‘ಹಣ’. ಹಾಗಾಗಿ ಯಾರಿಗೆ ಹಣದ ಹಿಡಿತ ಇರೋದಿಲ್ವೋ ಅವರು ಮುಟ್ಠಾಳರಾಗೋದು ಸಹಜ ತಾನೇ..? 

ಇನ್ನು ‘ಮಾತು'. 'ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು...' ಎನ್ನುವ ಗಾದೆ ಇದೆ. ಅಷ್ಟೇ ಯಾಕೆ ಮಾತೇ ಮುತ್ತು ಮಾತೇ ಮೃತ್ಯು ಅಂತಲೂ ಹೇಳ್ತಾರೆ. ನಮ್ಮ ಸ್ವಭಾವ ಏನು ಅನ್ನೋದನ್ನ ನಮ್ಮ ಮಾತೇ ನಿರ್ಧರಿಸುತ್ತೆ. ಹಾಗಾಗಿ ಹಣ ಹಾಗೂ ಮಾತಿನ ಮೇಲೆ ಹಿಡಿತ ಇಲ್ಲದಿರುವುದು ದೊಡ್ಡ ದೋಷ. ಹಾಗಾಗಿ ಈ ಕುಜ ಗ್ರಹ ಎರಡನೇ ಮನೆಯಲ್ಲಿದ್ರೆ ಅಂಥ ಪ್ರಮಾದವನ್ನ ತರಬಲ್ಲ ಗುಣವೇ ನಮ್ಮಲ್ಲಿ  ತುಂಬಿಕೊಳ್ಳತ್ತೆ. ಅಷ್ಟೇ ಅಲ್ಲ ಒಂದು ಸ್ತ್ರೀ ಜಾತಕದಲ್ಲಿ ಎರಡನೇ ಮನೆಯಲ್ಲಿ ಕುಜನಿದ್ರೆ ಅಲ್ಲಿಂದ ಕುಜ ಎಂಟನೇ ಮನೆಯನ್ನ ನೋಡ್ತಾನೆ. ಅಂದ್ರೆ ಲಗ್ನದಿಂದ 8ನೇ ಮನೆಯನ್ನು ಕುಜ ನೋಡ್ತಾನೆ. 8 ನೇ ಮನೆ ಸ್ತ್ರೀಯರಿಗೆ ಸೌಭಾಗ್ಯ ಸ್ಥಾನ ಅಂತ ಶಾಸ್ತ್ರ ಹೇಳಿದೆ. ಹೆಣ್ಣಿಗೆ ಮಾಂಗಲ್ಯ ಸ್ಥಾ ನವೇ ಅಷ್ಟಮ. ಇಂಥ ಸೌಭಾಗ್ಯ ಸ್ಥಾನವನ್ನು, ಮಾಂಗಲ್ಯ ಸ್ಥಾನವನ್ನು ಕುಜ ನೋಡಿದ್ರೆ ಅದು ಮಾರಕ ಪರಿಣಾಮ ಬೀರತ್ತೆ. ಕುಜನ ದೃಷ್ಟಿಗೆ ಅಂಥ ಶಕ್ತಿ ಇದೆ. ಕುಜನನ್ನ ಕ್ರೂರ ದೃಕ್ ಅಂತಲೇ ಕರೀತಾರೆ, ಕೆಟ್ಟ ನೋಟದವ ಅಂತ. ಅವನ ಇರುವಿಕೆಗಿಂದ ನೋಟಕ್ಕೇ ಬೆಲೆ ಹೆಚ್ಚು ಅನ್ನತ್ತೆ ಶಾಸ್ತ್ರ. 

ಇನ್ನು ಇದೇ ದ್ವಿತೀಯದ ಕುಜನಿಗೆ ನಾಲ್ಕನೇ ಮನೆಯನ್ನು ನೋಡುವ ಶಕ್ತಿಯೂ ಇದೆ. ಹೇಗೆ ಅಷ್ಟಮವನ್ನು ನೋಡುತ್ತಾನೋ ಹಾಗೆಯೇ ಚತುರ್ಥ ಸ್ಥಾನವನ್ನೂ ನೋಡ್ತಾನೆ. ಹಾಗೆ ತಾನಿದ್ದ ಮನೆಯಿಂದ ಚತುರ್ಥವನ್ನ ನೋಡಿದಾಗ ಅದು ಲಗ್ನದಿಂದ ಪಂಚಮ ಸ್ಥಾನವಾಗತ್ತೆ. ಪಂಚಮ ಅಂದ್ರೆ ಅದು ಸಂತಾನ ಸ್ಥಾನ. ಆ ಸಂತಾನ ಸ್ಥಾನಕ್ಕೆ ಕುಜ ದೃಷ್ಟಿ ಬಿದ್ದರೆ ಸಂತಾನವಾಗುವುದೂ ಕಷ್ಟವಾಗುತ್ತದೆ ಅನ್ನೋದು ಶಾಸ್ತ್ರವಾಕ್ಯ.  ಹೀಗಾಗಿ ಇದನ್ನ ಕುಜ ದೋಷ ಅಂತ ಕರೆದ್ರು. 

ದೋಷ ಯಾವಾಗ? 
ಹಾಗಿದ್ರೆ ಎರಡನೇ ಮನೆಲ್ಲಿದ್ರೆ ಮಾತ್ರವೇ ಕುಜ ದೋಷವಾ? ಅಲ್ಲ ಲಗ್ನದಿಂದ ಅಥವಾ ಚಂದ್ರನಿಂದ, ಶುಕ್ರನಿಂದ 2ನೇ ಮನೆಯಲ್ಲಿ,  4 ನೇ ಮನೆಯಲ್ಲಿ, 5 ನೇ ಮನೆಯಲ್ಲಿ, 7 ನೇ ಮನೆಯಲ್ಲಿ, 8 ನೇ ಮನೆಯಲ್ಲಿ, 12 ನೇ ಮನೆಯಲ್ಲಿ ಕುಜ ಇದ್ರೆ ದೋಷ ಅನ್ನತ್ತೆ ಶಾಸ್ತ್ರ. ಇಲ್ಲಿ ಗಮನಿಸ ಬೇಕಾದದ್ದೇನು ಅಂದ್ರೆ ಈ ಮನೆಗಳಲ್ಲಿ ಇದ್ದ ಮಾತ್ರಕ್ಕೆ ಕುಜ ದೋಷ ಬಂತು ಅಂತ ನಿರ್ಣಯ ಮಾಡಿದ್ರೆ ಅವ್ರು ನಿಜವಾದ ಜ್ಯೋತಿಷಿಗಳಲ್ಲ. ಯಾಕಂದ್ರೆ ಇವು ಮೇಲ್ಮೈನಲ್ಲಿ ಕಾಣಿಸುವ ದೋಷ. ಇವುಗಳ ಜೊತೆಗೆ ಸ್ಥಾನ ಬಲ, ದಿಗ್ಬಲ, ಕಾಲ ಬಲ,  ಚೇಷ್ಠಾಬಲ, ಎಲ್ಲವನ್ನೂ ಪರಾಮರ್ಶಿಸಬೇಕು. ಹಾಗೆ ಪರಾಮರ್ಶಿಸುವುದೇ ನೈಜ ಸವಾಲು. ಸೂಕ್ಷ್ಮವಾಗಿ ಗಮನಿಸದೇ ನಿನಗೆ ಕುಜ ದೋಷ ಇದೆ ಅಂತ ಯಾರಾದ್ರೂ ಹೇಳಿಬಿಟ್ರೆ ಒಬ್ಬರ ಜೀವನವನ್ನೇ ಹಾಳುಮಾಡಿದಂತಾಗುತ್ತದೆ. ಹಾಗಾಗಿ ದೋಷದ ತೀವ್ರತೆಯನ್ನು ಮೊದಲು ಪತ್ತೆ ಹಚ್ಚಬೇಕು. ಹೇಗೆ ಓರ್ವ ವೈದ್ಯ ತನ್ನ ಬಳಿ ಬಂದ ವ್ಯಕ್ತಿ ರೋಗದ ಮೂಲವನ್ನ ಪತ್ತೆಹಚ್ಚುತ್ತಾನೋ ಹಾಗೆ ಜ್ಯೋತಿಷಿಯಾದವನು ನಿಜವಾದ ದೋಷ ಇದೆಯಾ ಎಂಬುದನ್ನ ದೃಢಮಾಡಿಕೊಳ್ಳಬೇಕಾಗುತ್ತದೆ. 

ಕುಜ ದೋಷದ ಪತ್ತೆ ಹೇಗೆ?
ಹಾಗಾದರೆ ಈ ಜಾತಕದಲ್ಲಿ ಕುಜ ದೋಷ  ಇದೆ ಅಂತ ಪತ್ತೆ ಹಚ್ಚುವುದು ಹೇಗೆ? 

ಉದಾಹರಣೆಯಾಗಿ ಇಲ್ಲೊಂದು ಜಾತಕ ಇದೆ ಗಮನಿಸಿ :


ಈ ಜಾತಕದಲ್ಲಿ ಕುಜ ಲಗ್ನದಿಂದ ದ್ವಿತೀಯದಲ್ಲಿದ್ದಾನೆ. ಚಂದ್ರನಿಂದಲೂ ದ್ವಿತೀಯದಲ್ಲಿದ್ದಾನೆ. ಹಾಗಾಗಿ ತಕ್ಷಣವೇ ನೋಡಲಿಕ್ಕೆ ಕುಜ ದೋಷದ ಜಾತಕ ಅಂತ  ಅನ್ನಿಸತ್ತೆ. ಆದರೆ ಹಾಗೆ ಹೇಳಿಬಿಟ್ಟರೆ ಶಾಸ್ತ್ರವೇ ತಪ್ಪಾಗಿ ಆ ವ್ಯಕ್ತಿಯ ಜೀವನವೇ ಹಾಳಾಗಿಬಿಡತ್ತೆ. ಇಲ್ಲಿ ಸೂಕ್ಷ್ಮವಾಗಿ ಗಮನಿಸಬೇಕಾದ ವಿಚಾರಗಳಿವೆ. ನೋಡಿ ಮೊತ್ತಮೊದಲಿಗೆ ಇದು ಕರ್ಕಟಕ ರಾಶಿಯ ಜಾತಕ. ಕರ್ಕಟಕ ಹಾಗೂ ಸಿಂಹ ರಾಶಿಗಳವರಿಗೆ ಕುಜ ದೋಷ ತಟ್ಟೋದಿಲ್ಲ. ಜೊತೆಗೆ ಬಲಿಷ್ಠನಾದ ಗುರು ಕುಜ ನನ್ನ ಹಾಗೂ ದ್ವಿತೀಯ ಸ್ಥಾನವನ್ನು ವೀಕ್ಷಿಸಿರುತ್ತಾನೆ. ಜೊತೆಗೆ ನವಾಂಶದಲ್ಲೂ ಕುಜ ಲಗ್ನದಿಂದ 8ನೇ ಮನೆಯಲ್ಲಿರಬಹುದು. ಆದರೆ ಆ 8ನೇ ಮನೆಯ ಅಧಿಪತಿಯಾದ ಬುಧನಿಗೂ ಗುರು ದೃಷ್ಟಿ ಇದೆ. ಅಷ್ಟೇ ಅಲ್ಲ ನವಾಂಶದಲ್ಲಿ ದ್ವಿತಿಯಾಧಿಪತಿ ಹಾಗೂ ಪಂಚಮಾಧಿಪತಿಯಾದ ಗುರು ಲಾಭದಲ್ಲಿದ್ದಾನೆ. ಅಷ್ಟೇ ಅಲ್ಲ ಲಗ್ನವನ್ನೂ 9ನೇ ಮನೆಯಿಂದ ನೋಡುತ್ತಿದ್ದಾನೆ. 
ನವಾಂಶವೇ ಮುಖ್ಯವಾದದ್ದು. ಗ್ರಹಾಣಾಂ ಅಂಶಕ ಬಲಂ ಎಂಬ ಆಧಾರದಲ್ಲಿ. ಹಾಗಾಗಿ ಇಷ್ಟೆಲ್ಲಾ ಸೂಕ್ಷ್ಮ ವಿಚಾರಗಳನ್ನ ಗಮನಿಸಬೇಕಾಗುತ್ತದೆ. 

ಇದು ಒಂದು ಗುರುತರ ಜವಾಬ್ದಾರಿಯೂ ಹೌದು. ಇಂಥ ಅಂಶಗಳನ್ನು ಗಮನಿಸಿಯೇ ಗಂಡು ಹೆಣ್ಣಿನ ಸಾರಾವಳಿ ನೋಡಬೇಕು. ಸ್ವಲ್ಪ ವ್ಯತ್ಯಯವಾದರೂ ಜೀವನ ಹಾಳಾಗಿಬಿಡುತ್ತದೆ. ಈಗಿನ ಕಾಲದಲ್ಲಿ ಇವೆಲ್ಲಾ ಯಾರು ನೋಡ್ತಾರೆ ಸ್ವಾಮಿ ಅಂತೀರೇನೋ ಇಲ್ಲ. ಈಗಿನವರೂ ಇವೆಲ್ಲ ನೋಡ್ತಾರೆ. ಇತ್ತೀಚೆಗೆ ಇವುಗಳ ಮಹತ್ವ ಜನರಿಗೆ ಅರ್ಥವಾಗುತ್ತಿದೆ. ಹೆಚ್ಚು ಹೆಚ್ಚು ನಂಬಿಕೆಯನ್ನೂ ಇಡುತ್ತಿದ್ದಾರೆ. ಯಾಕೆ ಗೊತ್ತಾ ಶಾಸ್ತ್ರ ಎಂದಿಗೂ ಸುಳ್ಳಾಗುವುದಿಲ್ಲ. ಯಾಕಂದ್ರೆ ಅದು ನಮ್ಮ ನಿಮ್ಮಗಳ ಮಾತಲ್ಲ. ಅದು ಋಷಿವಾಣಿ. ಇಂಥ ಸತ್ಯ ಶಾಸನವನ್ನು ತುಂಬ ಆಸ್ಥೆಯಿಂದ ಗಮನಿಸಬೇಕು.

ಜಾತಕಗಳಲ್ಲಿ ಕೆಲವೊಮ್ಮೆ ಕುಜ ದೋಷವೇ ಇಲ್ಲ ಅಂತ ಅನ್ನಿಸತ್ತೆ.  ಆದ್ರೆ ಸೂಕ್ಷ್ಮವಾಗಿ ಗಮನಿಸಿದ್ರೆ ಇರುತ್ತೆ. ಇಂಥ ಎಷ್ಟೋ ಜಾತಕಗಳಿದ್ದವೆ. ಹಾಗಾಗಿ ಎಲ್ಲ ಸಾಧಕ ಬಾಧಕಗಳೊಡನೆ ಜಾತಕ ಪರಿಶೀಲಿಸಿದರೆ ಜೀವನ ಸುಖವಾಗಿರುವುದರಲ್ಲಿ ಸಂಶಯವಿಲ್ಲ. 

ದೋಷಕ್ಕೆ ಪರಿಹಾರವೇ ಇಲ್ಲವೆ?


ಇದೆ. ಸಮಸ್ಯೆ ಇರೋದು ನಿಜವಾದ್ರೆ ಪರಿಹಾರವೂ ಇದೆ. ಆ ಜಾತಕದವರು ಏನು ಮಾಡಬೇಕು ಅಂದ್ರೆ ಎಲ್ಲ ಪರಿಹಾರಗಳಿಗಿಂತ ಮೊದಲು ಆದಷ್ಟು ಅವರೇ ಸ್ವಲ್ಪ ಬದಲಾವಣೆಗೊಳ್ಳಬೇಕು. ಧ್ಯಾನ, ಪ್ರಾಣಾಯಾಮ, ಯೋಗದಂಥ ಅಭ್ಯಾಸ ಬೆಳೆಸಿಕೊಳ್ಳಬೇಕು. ಸಜ್ಜನರ ಸಹವಾಸ, ಸತ್ಸಂಗದ ಮೊರೆ ಹೋಗಿ. ವ್ಯಕ್ತಿತ್ವ ವಿಕಸನದಂಥ ತರಗತಿಗಳಿಗೆ ಹೋಗಿ ನಿಮ್ಮನ್ನ ನೀವೇ ಉಗ್ರತೆಯಿಂದ ಶಾಂತತೆಯ ಕಡೆ ತಿರುಗಿಸುವುದು ಅತ್ಯುತ್ತಮ ಪರಿಹಾರ. 

ಮದುವೆಯಾಗಿದ್ದರೆ ಅಂಥವರ ಕಥೆ ಏನು..?


ಅದಕ್ಕೂ ಇದೆ ಪರಿಹಾರ. ಗಂಡ - ಹೆಂಡಿರಾಗಿದ್ದಲ್ಲಿ ಆದಷ್ಟು ಸಹನೆ ರೂಢಿಸಿಕೊಳ್ಳಿ, ಮತ್ತೊಬ್ಬರ ಮಾತನ್ನು ಸಮಾಧಾನವಾಗಿ ಕೇಳಿ. ನೀವಾಡುವ ಮಾತಿನಲ್ಲಿ ಅರ್ಥವಿದೆಯಾ ಎಂಬುದನ್ನ ಪರೀಕ್ಷಿಸಿಕೊಳ್ಳಿ. ಇದಾದ ಮೇಲೆ ಭಕ್ತಿಯಿಂದ ಭಗವಂತನ ಪ್ರಾರ್ಥನೆ ಮಾಡಿ. ಕುಜನಿಗೆ ಹೇಳಿದ ಕೆಲವು ಮಂತ್ರಗಳಿವೆ. ಉಪಾಸಕರಿಂದ ಅದರ ಉಪದೇಶ ತೆಗೆದುಕೊಂಡು ಅನುಷ್ಠಾನ ಮಾಡಿ, ಸುಬ್ರಹ್ಮಣ್ಯ ಸ್ವಾಮಿಯ ಮಂತ್ರಗಳಿವೆ. ಬೀಜಾಕ್ಷರಗಳ ಸಹಿತ ಅವುಗಳ ಉಪದೇಶ ಮಾಡಿಸಿಕೊಳ್ಳಿ. 

ಉಪಾಸನೆ ಮಾಡುವುದು ಕಷ್ಟವಾದರೆ ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ, ಕುಜ ಶಾಂತಿ ಮಾಡಿಸಿ. ಏನೂ ಮಾಡಲಾಗಲಿಲ್ಲವಾ ಸುಬ್ರಹ್ಮಣ್ಯ ಸ್ವಾಮಿಯನ್ನು ನೆನೆದು ಒಂದು ದೀಪ ಹಚ್ಚಿ. ನಿಮ್ಮ ಆರ್ಥಿಕ ಬಲಾಬಲಗಳನ್ನ ನೋಡಿಕೊಂಡು ಪೂಜೆಗಳನ್ನ ಮಾಡಿ. ಪೂಜೆ ಮಾಡುವುದೇ ಹಿಂಸೆ ಮಾಡಿಕೊಳ್ಳಬೇಡಿ. ಪ್ರೀತಿಯಿಂದ, ಭಕ್ತಿಯಿಂದ, ನಿಷ್ಠೆಯಿಂದ ಮಾಡಿದ ಪ್ರಾರ್ಥನೆ ಭಗವಂತನಿಗೆ ತಲುಪುವುದರಲ್ಲಿ ಸಂದೇಹವಿಲ್ಲ. ಹೆದರದಿರಿ.  

ಜಾತಕ ನೋಡಲು ಕಲಿಯಿರಿ
-ಗೀತಾಸುತ
ಸಂಪರ್ಕ ಸಂಖ್ಯೆ :  9741743565 / 9164408090