Asianet Suvarna News Asianet Suvarna News

ರಾಜನನ್ನಾಗಿಸುವ ಸೂರ್ಯನ ಅನುಗ್ರಹ ಪಡೆಯಲೇನು ಮಾಡಬೇಕು?

ಜಾತಕದಲ್ಲಿ ಸೂರ್ಯನ ಪ್ರಭಾವ ಪ್ರಮುಖ ಪಾತ್ರವಹಿಸುತ್ತದೆ. ಅಕಸ್ಮಾತ್ ಸೂರ್ಯನ ಪ್ರಭಾವ ಜಾತಕದಲ್ಲಿ ಇಲ್ಲವೆಂದಾದಲ್ಲಿ ಏನು ಮಾಡಬೇಕು? ಸೂರ್ಯ ಏಕೆ ಮುಖ್ಯ ಪಾತ್ರವಹಿಸುತ್ತಾನೆ....ಓದಿ ಜಾತಕ ನೋಡಲು ಕಲೀರಿ ಅಂಕಣದಲ್ಲಿ.

Learn to study horoscope what to do get blessings of Sun
Author
Bengaluru, First Published Nov 13, 2018, 1:37 PM IST

ಸಾಕ್ಷಾತ್ ಆತ್ಮ ಸ್ವರೂಪಿಯಂಥ ಸೂರ್ಯನಿಂದಲೇ ಜಗತ್ತಿನ ಗ್ರಹ ಮಂಡಲ ಬೆಳಕಿಗೆ ಬಂದದ್ದು. ಆ ಸೂರ್ಯನ ಆಕರ್ಷಣೆ ಇಲ್ಲದೆ ಜಗತ್ತೇ ಇಲ್ಲ. ಅಂಥ ಸೂರ್ಯನ ಅಧೀನದಲ್ಲೇ ನಾವೂ ನೀವು ಬದುಕಿದ್ದೇವೆ. 

ನಮ್ಮ ಅಂತ: ತೇಜಸ್ಸು ಜ್ವಲಿಸ್ತಾ ಇದೆ ಅಂದ್ರೆ ಅದಕ್ಕೆ ಕಾರಣವೇ ಬೆಳಗುತ್ತಿರುವ ಸೂರ್ಯ. ಆ ಸತ್ ಅಂದ್ರೆ ಪರಮಾತ್ಮ ದೊಡ್ಡ ಆತ್ಮ ಯಾವುದಿದೆಯೋ ಅದರ ಅಂಶವೇ ನಾವಾಗಿದ್ದೀವಿ ಅನ್ನೋದನ್ನ ಹಿಂದಿನ ಸಂಚಿಕೆಯಲ್ಲಿ ಓದಿದ್ದೀರಿ. ಹಾಗಾಗಿಯೇ ಸೂರ್ಯನನ್ನ ಆತ್ಮ ಕಾರಕ ಅಂತ ಕರೆದದ್ದು. ಇಂಥ ಸೂರ್ಯ ಪ್ರಭಾವ ನಮ್ಮ ಮೇಲೆ ಬಿದ್ದರೆ ಏನಾಗುತ್ತೆ..? 

ಸೂರ್ಯ ಅನುಗ್ರಹಿಸಿದರೆ?
ಅಕಸ್ಮಾತ್ ಸೂರ್ಯನ ಅನುಗ್ರಹ ನಮ್ಮ ಮೇಲೆ ಇರದೇ ಹೋದರೆ ಏನಾಗುತ್ತೆ..? ಒಂದು ಅರ್ಥದಲ್ಲಿ ಬದುಕೇ ಕತ್ತಲಾಗತ್ತೆ. ಹಾಗಾದರೆ ನಮ್ಮ ಬದುಕಿನ  ಯಾವ ಯಾವ ಅಂಶಗಳು ಸೂರ್ಯನ ಪರಿಧಿಗೆ ಬರುತ್ತೆ? 
ನಮ್ಮ ಬದುಕಿಗೆ ಸೂರ್ಯನಿಗೂ ಇರುವ ನಂಟು.
 ಅಕಸ್ಮಾತ್ ಸೂರ್ಯ ನಿಮ್ಮ ಜಾತಕದಲ್ಲಿ ಉಚ್ಚಸ್ಥಾನದಲ್ಲಿದ್ದು, ನಿಮ್ಮ ಜಾತಕದಲ್ಲಿ ಮೇಷ ಅಥವಾ ಸಿಂಹರಾಶಿ (ಸ್ವ ಕ್ಷೇತ್ರ) ದಲ್ಲಿದ್ದರೆ ನಿಮ್ಮ ಬದುಕು ಬಂಗಾರ ಅಂತಲೇ ಅರ್ಥ. ಯಾಕೆಂದ್ರೆ ಅವನು ರಾಜ ಗ್ರಹ. ನಿಮ್ಮನ್ನೇ ರಾಜನನ್ನಾಗಿ ಮಾಡಿಬಿಡ್ತಾನೆ. ಮನೆಯೊಳಗೂ ನೀವೇ ಹೊರ ಪ್ರಪಂಚಕ್ಕೂ ನೀವೇ ಚಕ್ರಾಧಿಪತಿ. 

ಪಿತೃಕಾರಕ ಸೂರ್ಯ
ಉನ್ನತ ಅಧಿಕಾರ, ಸರ್ಕಾರಿ ಅಧಿಕಾರ ಎಲ್ಲವೂ ಸೂರ್ಯನಿಂದಲೇ ಚಿಂತನೆ ಮಾಡ್ತಾರೆ. ಯಾವುದೇ ಸಂಸ್ಥೆಯ ಮುಖ್ಯಸ್ಥರಾಗಿರಲೂ ಸಾಧ್ಯವಿದೆ. ಸೂರ್ಯನನ್ನ ಪಿತೃಕಾರಕ ಅಂತಾರೆ. ಅಂದರೆ ತಂದೆ-ಮಕ್ಕಳ ಬಾಂಧವ್ಯ ಬಂಗಾರದಂತೆ ಮೌಲ್ಯಯುತವಾಗಿರತ್ತೆ. ಹಾಗಂತ ನೀವು ಸುಮ್ಮನೆ ಕೂತರೂ ಈ ಸೌಭಾಗ್ಯಗಳು ನಿಮ್ಮ ಜೀವನದಲ್ಲಿ ಲಭಿಸಲ್ಲ. ‘ಕ್ರಿಯಾ ಸಿದ್ಧಿ: ಸತ್ವೇ ಭವತಿ ಮಹತಾಂ ನೋಪಕರಣೆ’ಅನ್ನು ಮಾತಿದೆ. ಹಾಗೆಂದರೆ ನೀವು ಕಾರ್ಯ ಮಾಡದೇ ಯಾವುದೂ ಸಾಧಿಸಲು ಆಗುವುದಿಲ್ಲ. ಮೇಲೆ ಹೇಳಿದ ಮಾತು ಕೇಳಿ ಎಲ್ಲವೂ ಕಾಲ ಬುಡಕ್ಕೆ ಬರತ್ತೆ ಅಂತ ಕನಸು ಕಾಣಬೇಡಿ. ಸೂರ್ಯನ ಅನುಗ್ರಹವಿದ್ದರೆ ಸ್ವಲ್ಪ ಕೆಲಸ ಮಾಡಿದರೂ ಸಾಕು ಹೆಚ್ಚು ಅನುಕೂಲವಾಗತ್ತೆ. 

ಪ್ರಯತ್ನಿಸುವುದು ನಿಮ್ಮ ಜವಾಬ್ದಾರಿ 
ಅಕಸ್ಮಾತ್ ಸೂರ್ಯ ನಿಮ್ಮ ಜಾತಕದಲ್ಲಿ ನೀಚನಾಗಿದ್ದರೆ, ಬದುಕೇ ಕತ್ತಲಾಗಿಬಿಡತ್ತೆ. ಸೂರ್ಯನ ನಿರ್ಬಲ ಕ್ಷೇತ್ರಗಳು ಅಂದ್ರೆ ತುಲಾರಾಶಿ, ಮಕರ, ಕುಂಭ, ವೃಷಭ ಕ್ಷೇತ್ರಗಳಲ್ಲಿ ಸೂರ್ಯನಿದ್ದರೆ ಕಣ್ಣಿನ ಸಮಸ್ಯೆ ಕಾಡುತ್ತೆ, ಯಾವುದೇ ನಿರ್ಧಾರ ಮಾಡುವಾಗ ತೋಚದಂತಾಗುತ್ತೆ, ರಕ್ತಹೀನತೆ ಬರತ್ತೆ, ಜೀರ್ಣಾಂಗದ ಸಮಸ್ಯೆ ಬರತ್ತೆ, ಅಜೀರ್ಣವೂ ಆಗತ್ತೆ, ಇನ್ನು ಮಕರ, ಕುಂಭಗಳು ಸಪ್ತಮ ಕ್ಷೇತ್ರಗಳಾಗಿದ್ದು ಅಲ್ಲೇನಾದರೂ ರವಿ ಇದ್ದರೆ (ಉದಾಹರಣೆಗೆ ಸಿಂಹ ಲಗ್ನವಾಗಿ ಅಲ್ಲಿಂದ ಸಪ್ತಮದಲ್ಲಿ ಅಂದರೆ ಕುಂಭದಲ್ಲಿ ರವಿ ಇದ್ದರೆ) ಅವರ ದಾಂಪತ್ಯ ಕಥೆ ಮುಗಿಯಿತು ಅಂತಲೇ ಅರ್ಥ. ( ಉತ್ಸೃಷ್ಟಾ ತರಣೌ ಎಂಬ ಆಧಾರವಿದೆ ) ಕೇವಲ ಒಂದು ಗ್ರಹದಿಂದ ನೋಡಿ ಇದನ್ನು ನಿರ್ಧರಿಸಲು ಸಾಧ್ಯವಿಲ್ಲ. ಎಲ್ಲ ಗ್ರಹಗಳ ಸ್ಥಿತಿ ಗತಿ ನೋಡಬೇಕು. 

ಈ ಸೂರ್ಯನ ಅನುಗ್ರಹ ಎಲ್ಲರಿಗೂ ಇರಲೇ ಬೇಕು. ಯಾರಿಗೆ ಸೂರ್ಯನ ಅನುಗ್ರಹ ಇಲ್ಲವೋ ಅವರು ಗಾಯತ್ರೀ ಉಪಾಸನೆ ಮಾಡಬೇಕು. ಗಾಯತ್ರೀ ಅಂದರೆನೇ ಸೂರ್ಯ ಅಂತ. ಅದೇ ಒಂದು ಮಹಾ ವಿಶೇಷ ವಸ್ತು.  ಆ ಮಂತ್ರದ ಭಾಗವನ್ನು ಮತ್ತೆ ಎಂದಾದರೂ  ಸವಿವರವಾಗಿ ವಿವರಿಸುವೆ. ಸದ್ಯಕ್ಕೆ ಸೂರ್ಯನ ಗುಣಗಳ ಬಗ್ಗೆ ನೋಡೋಣ. 


ಸೂರ್ಯನ ಗುಣವೇನು..?

ವರಾಹ ಮಿಹಿರರು ಹೇಳುವ ಹಾಗೆ ಸೂರ್ಯನಿಗೆ ದೊಡ್ಡ ದೇಹವಿದೆ, ಮುಂಗುಸಿಯಂಥ ಕಣ್ಣುಗಳಿವೆ, ಆತ ಪಿತ್ತದ ಗುಣ ಹೊಂದಿದ್ದಾನೆ, ಸ್ವಲ್ಪ ಕೂದಲು ಹೊಂದಿದ್ದಾನೆ ಅಂತ ಹೇಳ್ತಾರೆ. ಈ ಗುಣಗಳು ಸೂರ್ಯನಿಂದ ನಮ್ಮ ಮೇಲೂ ಪ್ರಭಾವ ಬೀರುತ್ತೆ. ಅಕಸ್ಮಾತ್ ಸೂರ್ಯ ಜಾತಕದಲ್ಲಿ ಚೆನ್ನಾಗಿದ್ರೆ ಅವ್ರ ಶರೀರ ಚೆನ್ನಾಗಿರತ್ತೆ, ಪುಟ್ಟ ಕೂದಲಿರತ್ತೆ, ತೀಕ್ಷ ಕಣ್ಣು, ಹೊಂಬಣ್ಣದ ಕಣ್ಣು ಇರತ್ತೆ ಅಂತ ಶಾಸ್ತ್ರ ವಿವರಿಸತ್ತೆ. ಅಷ್ಟೇ ಅಲ್ಲ ಇದೇ ಸೂರ್ಯ ಇರುವ ಹನ್ನೆರಡೂ ಭಾವಗಳಲ್ಲಿ ಹನ್ನೆರಡು ಬಗೆಯ ಗುಣ-ದೋಷಗಳನ್ನ ನಮ್ಮ ಮೇಲೆ ಪ್ರಭಾವ ಬೀರುತ್ತಾನೆ. 

ಆ ಸೂರ್ಯ ಫಲವೇ ಒಂದು ವಿಶಿಷ್ಟವಾಗಿದೆ. ದ್ವಾದಶ ಭಾವಗಳಲ್ಲಿ ಸೂರ್ಯನಿದ್ದರೆ ಮನುಷ್ಯನ ಮೇಲೆ ಹೇಗೆ ಪ್ರಭಾವ ಬೀರ್ತಾನೆ, ಯಾವ ಭಾವದಲ್ಲಿ ಯಾವೆಲ್ಲ ಫಲ ಕರುಣಿಸ್ತಾನೆ ಎಂಬುದೇ ಒಂದು ರೋಚಕ ಸಂಗತಿ. 

ಆ ಹನ್ನೆರಡೂ ಭಾವಗಳ ಫಲಗಳನ್ನ ಒಂದೊಂದಾಗಿ ತಿಳಿಯೋಣ ಮುಂದಿನ  ಸಂಚಿಕೆಯಲ್ಲಿ..

ಜಾತಕ ನೋಡಲು ಕಲಿಯಿರಿ: ಹಿಂದಿನ ಅಂಕಣಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
( ಮೂಂದುವರೆಯುವುದು.. ) 

ಸಂಪರ್ಕ ಸಂಖ್ಯೆ :  9741743565 / 9164408090
 

Follow Us:
Download App:
  • android
  • ios