ಅದು ವಿಕ್ರಮಾದಿತ್ಯನ ಆಸ್ಥಾನ. ರಾಜ ಸಭೆ ಪ್ರಾರಂಭವಾಗಿತ್ತು. ಸಭೆಯಲ್ಲಿ ಮಂತ್ರಿ ಒಂದು ವಿಷಯ ಪ್ರಸ್ತಾಪ ಮಾಡಿದ. ರಾಜನ್ ನಾವು ಸರಿಯಾದ ರೀತಿಯಲ್ಲಿ ಪ್ರಜೆಗಳ ಯೋಗಕ್ಷೇಮ ವಿಚಾರಿಸಬೇಕಿದ್ದರೆ ನಾವೇ ಮಾರುವೇಶದಲ್ಲಿ ದೇಶ ಪರ್ಯಟನೆ ಮಾಡಬೇಕು. ಆಗಷ್ಟೇ ಪ್ರಜೆಗಳ ಸ್ಥಿತಿಗತಿಗಳನ್ನ ಯಥಾವತ್ತಾಗಿ ಅರ್ಥೈಸಲಿಕ್ಕೆ ಸಾಧ್ಯ ಅಂತ ಒಂದು ಸಲಹೆ ಕೊಟ್ಟ. 

ಮಂತ್ರಿಯ ಮಾತು ನಿಜ ಅನ್ನಿಸಿ ಮಾರನೇ ದಿನವೇ ಮಾರುವೇಶದಲ್ಲಿ ಕುದುರೆಗಳನ್ನ ಹತ್ತಿ ಹೊರಟರು. ಪ್ರಯಾಣ ಮಧ್ಯದಲ್ಲಿ ಓರ್ವ ಭವಿಷ್ಯ ಹೇಳುವ ವ್ಯಕ್ತಿಯ ಬಗ್ಗೆ ಹಲವಾರು ಜನ  ಮಾತನಾಡಿಕೊಳ್ಳುವುದು ಕೇಳಿಸಿತು. ಊರವರ ಮಾತುಗಳಿಂದ ರಾಜನಿಗೆ ಆ ವ್ಯಕ್ತಿಯ ಬಗೆಗೆ ಕುತೂಹಲ ಹುಟ್ಟಿತು. 

ಆ ಭವಿಷ್ಯ ಪ್ರವೀಣನ ಹುಡುಕಾಟಕ್ಕೆ ನಿಂತ ರಾಜನಿಗೆ ಉಜ್ಜೈನಿ ಸಮೀಪದ ಅವನ ಊರು ಸಿಕ್ಕಿತು. ಅಲ್ಲಿ ಈ ಭವಿಷ್ಯ ಪ್ರವೀಣ ಇವರನ್ನು ಕಂಡು ನೀವು ಮಾರುವೇಶದಲ್ಲಿ ಬಂದಂತೆ ಕಾಣುತ್ತಿದೆ. ನೀವು ಇಂಥ ಕಡೆಯವರು ಇಂಥ ಉದ್ದೇಶದಲ್ಲಿ ಬಂದಿದ್ದೀರಿ ಅಂತೆಲ್ಲವನ್ನ ಇದ್ದಹಾಗೆ ವಿವರಿಸಿಬಿಟ್ಟ. ಅದನ್ನ ಕೇಳಿ ರಾಜನಿಗೆ ಪರಮಾಶ್ಚರ್ಯ..! ರಾಜ ಮರು ಮಾತನಾಡದೆ ಆಸ್ಥಾನಕ್ಕೆ ಬಂದು ಮಂತ್ರಿಯ ಬಳಿ ಆ ವ್ಯಕ್ತಿಯನ್ನು ಸಭೆಗೆ ಕರೆತರಲು ಹೇಳಿದ.  ಮಾರನೇ ದಿನ ಆ ಭವಿಷ್ಯ ಪ್ರವೀಣ ಆಸ್ಥಾನಕ್ಕೆ ಬಂದ. ಆತನ ಮುಂದೆ ರಾಜ ತನ್ನ ಮಗನ ಜಾತಕವನ್ನ ಇಟ್ಟ. ಬಂದ ವ್ಯಕ್ತಿ ಆ ಜಾತಕವನ್ನ ಕೂಲಂಕಷವಾಗಿ ಪರಿಗಣಿಸಿ ಈ ಜಾತಕದವನು ಇಂಥ ದಿವಸ, ಇಂಥ ಘಳಿಗೆಯಲ್ಲಿ ಒಂದು ಹಂದಿಯಿಂದ ಮರಣವನ್ನಪ್ಪುತ್ತಾನೆ ಎಂದು ಭವಿಷ್ಯ ನುಡಿದ. 

ಕೂತಿದ್ದ ರಾಜ ಎದ್ದು ನಿಂತ. ಆ ಭವಿಷ್ಯ ಪ್ರವೀಣನನ್ನು ಕುರಿತು ಬಾಯಿಗೆ ಬಂದಂತ ಬೈದ : ಅದು ನನ್ನ ಮಗನ ಜಾತಕ. ನಾನು ಇರುವಾಗಲೇ ಅವನ ಸಾವು ಸಾಧ್ಯವೇ? ಅದೂ ಯ:ಕಶ್ಚಿತ್ ಹಂದಿಯಿಂದ. ನೋಡೇ ಬಿಡೋಣ. ಭಟರೇ ಈ ಅಪವಾಣಿಯನ್ನು ನುಡಿದ ಈ ಅವಿವೇಕಿಯನ್ನು  ಸೆರೆಯಲ್ಲಿಡಿ ಅಂತ ಆಜ್ಞಾಪಿಸಿದ. ಅಷ್ಟರಲ್ಲಿ ಮಂತ್ರಿ ರಾಜನನ್ನು ಸಮಾಧಾನಿಸಿ. ಆ ಭವಿಷ್ಯ ನಿಜವಾದರೆ ಓರ್ವ ನಿರಪರಾಧಿಯನ್ನು ಶಿಕ್ಷಿಸಿದ ಹಾಗಾಗುವುದಿಲ್ಲವೇ? ತಾಳ್ಮೆಯಿಂದ ಕಾಯೋಣ ಅಂತ ಸಮಾಧಾನ ಮಾಡಿದ. 

ಆ ದಿನ ಬಂದೇ  ಬಿಟ್ಟಿತು. ತನ್ನ ಮಗನ ಕಾವಲಿಗೆ ರಾಜನೇ ನಿಂತ. ಎಲ್ಲ ಭಟರೂ, ಆಳು ಕಾಳು ಸರ್ವರೂ ಆ ಮಗುವಿನ ರಕ್ಷಣೆಗೆ ನಿಂತರು. ಒಂದು ಇರುವೆಯೂ ಅವನನ್ನು ಮುತ್ತಲು ಸಾಧ್ಯವಿಲ್ಲ, ಅಷ್ಟು ಭದ್ರತೆ ಇತ್ತು ಆ ಅರಮನೆಯಲ್ಲಿ. ಇನ್ನೇನು ಆ ಸಮಯ ಹತ್ತಿರವಾಗುತ್ತಿದೆ. ರಾಜ ತದೇಕಚಿತ್ತದಿಂದಿ ಆ ಸಮಯವನ್ನೇ ಎದಿರು ನೋಡುತ್ತಿದ್ದ. ಆ ಸಮಯ ಬಂದೇ ಬಿಟ್ಟಿತು ರಾಜನ ಮಗ ಚಿಟಾರನೆ ಚೀರಿದ. ಇದ್ದ ಸ್ಥಳದಿಂದಲೇ ರಾಜ ಬೆವರಿ ಮಗುವಿನ ಬಳಿ ಓಡಿದ. ನೋಡಿದರೆ ಮಗುವಿನ ತಲೆಗೆ ಭೀಕರವಾದ ಪೆಟ್ಟು ಬಿದ್ದು ಮಗು ಸ್ಥಳದಲ್ಲೇ ಮೃತಪಟ್ಟಿತ್ತು.  

ರಾಜ ಬಂದು ನೋಡಿದರೆ ಬಲವಾದ ಕಬ್ಬಿಣದ ವಸ್ತು ಮಗುವಿನ ತಲೆ ಮೇಲೆ ಬಿದ್ದತ್ತು. ಬಿದ್ದ ವಸ್ತು ಏನು ಅಂತ ನೋಡಿದರೆ ಅದು ಆ ರಾಜ್ಯದ ಲಾಂಛನವಾಗಿತ್ತು. ಆ ಲಾಂಛನವನ್ನೇ ನೋಡುತ್ತಾ ಎಷ್ಟು ಕಾವಲಿದ್ದರೂ ಮಗನ ರಕ್ಷಣೆ ಮಾಡಲಾಗಲಿಲ್ಲವಲ್ಲಾ ಎಂದುಕೊಂಡ ರಾಜ ತುಂಬ ಮರುಗಿದ. ನಾನು ಹಂದಿ ಅಂಧರೆ ಪ್ರಾಣಿ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದೆ. ಆದರೆ ನಮ್ಮ ಲಾಂಛನವೇ ಮಗನ ಮೃತ್ಯವಾಯಿತಲ್ಲಾ ಎಂದು ಗೋಳಿಟ್ಟ.  

ಜ್ಯೋತಿಷ್ಯಗೆ ಮರ್ಯಾದೆ ನೀಡಿದ ರಾಜ:ತಕ್ಷಣ ರಾಜ ಆ ಭವಿಷ್ಯ ಪ್ರವೀಣನನ್ನು ಕರೆಸಿ ಸಂಭಾವ್ಯ ಮರ್ಯಾದೆ ಮಾಡಿದ.  ಆ ಭವಿಷ್ಯ ಪ್ರವೀಣನೇ ಮಿಹಿರಾಚಾರ್ಯ.  ನಿನ್ನ ಭವಿಷ್ಯ ನಿಜವಾಯಿತು. ನೀನು ಗೆದ್ದೆ. ಇನ್ನು ಮುಂದೆ ನಿನ್ನ ಹೆಸರು 'ವರಾಹಮಿಹಿರ' ಅಂತ ಪ್ರಸಿದ್ಧವಾಗಲಿ ಅಂತ ಘೋಷಿಸಿದ. 
ಇದು ವರಾಹಮಿಹಿರರ ಭವಿಷ್ಯ ದೃಷ್ಟಿಯ ಸಾಮರ್ಥ್ಯ. 

ಈ ಸಾಮರ್ಥ್ಯ ಅವರಲ್ಲಿ ಬರಲಿಕ್ಕೆ ಕಾರಣವೇ ಸೂರ್ಯ. ಮಿಹಿರರ ತಂದೆ ಆದಿತ್ಯ ದಾಸ ಅಂತ. ಅಂದರೆ ಸೂರ್ಯನ ದಾಸ ಅಂತ. ಆ ತಂದೆಯ ತಪ:ಶಕ್ತಿ ಮಗನಲ್ಲಿ ಪ್ರಕಾಶವಾಗಿತ್ತು. ಹಾಗಾಗಿ ಮಿಹಿರಾಚಾರ್ಯ ಅನ್ನುವ ಹೆಸರಿಟ್ಟಿದ್ದ. ಈತನೂ ಮಹಾ ಸೂರ್ಯೋಪಾಸಕನಾಗಿದ್ದ. ಇಂಥ ಮಹನೀಯರೇ ಮುಂದೆ ಪಂಚಸಿದ್ಧಾಂತ ಕೋವಿದ, ಬೃಹಜ್ಜಾತಕ, ಬೃಹತ್ಸಂಹಿತಾ ಮೊದಲಾದ ಮಹಾ ಗ್ರಂಥಗಳನ್ನ ರಚಿಸಿ ಮಾನವ ಕುಲಕ್ಕೆ ಉಪಕಾರ ಮಾಡಿಕೊಟ್ಟಿದ್ದಾರೆ. 

ಇಂಥ ಸಮರ್ಥತೆ ಬರಬೇಕೆಂದರೆ ಅವರು ಸೂರ್ಯನ ಉಪಾಸಕರಾಗಿರಲೇ ಬೇಕು. 

ಸೂರ್ಯ ಆತ್ಮಕಾರಕ ಹೇಗೆ..? 
ಸೂರ್ಯಗ್ರಹದ ಅನುಗ್ರಹವಿದ್ದರಷ್ಟೇ ನಮ್ಮ ಆತ್ಮೋನ್ನತಿ ಸಾಧ್ಯ. ನಮ್ಮೊಳಗಿನ ಶಕ್ತಿ ಬೆಳಗ ಬೇಕಿದ್ದರೆ ಸೂರ್ಯ ಬೇಕು. ಸೂರ್ಯನನ್ನು ಆತ್ಮ ಕಾರಕ ಅಂತಲೂ ಕರೀತಾರೆ. ಸೂರ್ಯನನ್ನ ಸುಮ್ಮನೆ ಆತ್ಮಕಾರಕ ಅಂತ ಹೇಳಿಲ್ಲ. ಇದು ಅರ್ಥವಾಗಬೇಕಿದ್ದರೆ ನಾವು ಸ್ವಲ್ಪ ಅಂತರಾಳಕ್ಕೆ ಇಳಿಯಬೇಕು. 

ಮೇಲ್ಮೈ ತಡಕಿದರೆ ಸಿಗದ ಮಾಹಿತಿ ಅದು. ಅದು ಅರ್ಥವಾಗಬೇಕಿದ್ದರೆ ನಾವು ವೇದಾಂತ ಅಂತ ಕರೆಯುವ ಉಪನಿಷತ್ತುಗಳಿಗೆ ಹೋಗಬೇಕು. ಅಲ್ಲಿ ಸೂರ್ಯನನ್ನು ಯಾಕೆ ಆತ್ಮ ಶಕ್ತಿ ಅಂತಾರೆ ಅನ್ನೋದು ಸ್ಪಷ್ಟವಾಗತ್ತೆ. 
ವಿಜ್ಞಾನಕ್ಕೂ - ಉಪನಿಷತ್ತಿಗೂ ನಂಟೇನು..? 
ಈ ಪ್ರಪಂಚ ಹೇಗಾಯಿತು ಅಂತ ಪ್ರಶ್ನೆ ಹಾಕಿಕೊಂಡರೆ. ವಿಜ್ಞಾನ ಉತ್ತರಿಸುವುದು ಬಿಗ್ ಬ್ಯಾಂಗ್ ಥಿಯರಿಯನ್ನು. ಈಗಿನವರು ಬಿಗ್ ಬ್ಯಾಂಗ್ ಥಿಯರಿ ಅಂತಾರೆ. ಹಿಂದಿನವರು ಅದನ್ನೇ ಆಸ್ಫೋಟ ಅಂತಾರೆ.  

ಇದರ ಮಾಹಿತಿ ಸಿಗೋದು ಛಾಂದೋಗ್ಯೋಪನಿಷತ್‌ನಲ್ಲಿ.  ಅಲ್ಲಿ ಆರುಣಿ ಉದ್ಧಾಲಕ ಎಂಬ ಋಷಿ ತನ್ನ ಮಗ ಶ್ವೇತಕೇತುವಿಗೆ ಹೇಳುವ ಉಪದೇಶದಲ್ಲಿ ಈ ಆತ್ಮ ಎನ್ನುವುದರ ಸ್ಪಷ್ಟ ವಿವರ ಇದೆ. ಅದರ ಪ್ರಕಾರ : ಪೂರ್ವದಲ್ಲಿ ಸತ್ ಅನ್ನುವ ವಸ್ತು ಇತ್ತು. ಅದನ್ನೇ ಆತ್ಮ ಶಕ್ತಿ ಅಂತಾರೆ. 

ಸೂರ್ಯ ಸೃಷ್ಟಿಯಾಗಿದ್ದು ಹೇಗೆ?
ಅದು ಆಸ್ಫೋಟವಾಗಿ ಅದರಿಂದ ಬೃಹತ್ ಬೆಳಕಿನ ಉಂಡೆ ( ಬೆಂಕಿ ಉಂಡೆ ) ಹೊರಬಂತು. ಅದೇ ಸೂರ್ಯ. ಅದನ್ನ ತೇಜಸ್ ಅಂತ ಕರೆದ್ರು. ( ನಮ್ಮ ಮಿಲ್ಕಿ ವೇ ನಲ್ಲಿ ಸಾಕಷ್ಟು ಇಂಥ ಬೆಳಕಿನ ಉಂಡೆಗಳಿವೆ. ಅದನ್ನು ಹೊರತು ಪಡಿಸಿಯೂ ಅನೇಕಾನಿಕ ಉಂಡೆಗಳಿವೆ. ಅವುಗಳಲ್ಲಿ ನಮ್ಮ ಸೂರ್ಯ ಕೂಡ ಒಂದು ) ಆ ಸೂರ್ಯನಿಂದ ಬಂದದ್ದು  ನೀರು ( ವಿಜ್ಞಾನದಲ್ಲಿ ನಾವು ಓದಿದ್ದೇವೆ. ಈ ಭೂಮಿ ಮುಂಚೆ ದ್ರವರೂಪದಲ್ಲಿತ್ತು ಇದೇ ಘನೀಕೃತವಾಯ್ತು ಅಂತ ). ಆ ನೀರಿನಿಂದ  ಅನ್ನ ಉತ್ಪತ್ತಿಯಾಯ್ತು. ಮತ್ತೊಮ್ಮೆ ಗಮನಿಸೋಣ, ಸತ್ ನಿಂದ ಸೂರ್ಯ,  ಸೂರ್ಯನಿಂದ ನೀರು,  ನೀರಿನಿಂದ ಅನ್ನ ಬಂತು. 

ಈ ಅನ್ನ ನಮ್ಮ ದೇಹ ಸೇರಿದ ಮೇಲೆ ಮೂರು ವಿಭಾಗವಾಗತ್ತೆ. ಹೇಗೆ ಅಂದ್ರೆ ಅನ್ನದ ಸ್ಥೂಲ ರೂಪ ವಿಸರ್ಜನೆಯಾಗತ್ತೆ. ಅದರ ಮಧ್ಯ ರೂಪ ಮಾಂಸವಾಗತ್ತೆ ಅದರ ಸೂಕ್ಷ್ಮ ರೂಪ ಮನಸ್ಸಾಗತ್ತೆ.  ( ಮತ್ತೊಮ್ಮೆ ಓದಿಕೊಳ್ಳಿ ಅನ್ನ ಸೂಕ್ಷ್ಮದಲ್ಲಿ ಮನಸ್ಸಾಗತ್ತೆ. ) ಅನ್ನದ ಮೇಲಿನ ಅಂಶ ನೀರು. ನೀರಿನ ಸ್ಥೂಲ ರೂಪ ಮೂತ್ರವಾಗತ್ತೆ. ಮಧ್ಯಮ ರೂಪ ರಕ್ತವಾಗತ್ತೆ. ಸೂಕ್ಷ್ಮ ರೂಪ ಪ್ರಾಣವಾಗತ್ತೆ. (ಅಂದ್ರೆ ನೀರು ಪ್ರಾಣ ವಸ್ತು ಮತ್ತೊಮ್ಮೆ ಓದಿಕೊಳ್ಳಿ ). ಇನ್ನು ನೀರಿಗೂ ಮೇಲಿನ ಅಂಶ ತೇಜಸ್ ಅದೇ ಸೂರ್ಯ. ಆ ತೇಜಸ್ಸಿನ ಸ್ಥೂಲ ರೂಪ ಮೂಳೆಯಾಗುತ್ತೆ. ಮಧ್ಯಮ ರೂಪ ಕೊಬ್ಬು ಅನ್ನಿಸಿಕೊಳ್ಳತ್ತೆ. ಸೂಕ್ಷ್ಮ ರೂಪ ವಾಕ್ ಆಗತ್ತೆ. ಅಂದ್ರೆ 


ಈಗ ಗಮನಿಸಿ ಸತ್ ಎಂಬ ಆತ್ಮವೇ ತೇಜಸ್ಸಾಯ್ತು ( ಸೂರ್ಯ ಶಕ್ತಿ ). ಆ ತೇಜೋ ಶಕ್ತಿಯಿಂದಲೇ ನಾವು ಕುಡಿಯುವ ನೀರು ( ಅಂದ್ರೆ ಪ್ರಾಣ ಶಕ್ತಿ ) ಆ ತೇಜೋ ಶಕ್ತಿಯಿಂದಲೇ ಅನ್ನವೂ ಬಂತು ಅದೇ ಮನಸ್ಸಾಯ್ತು. ಅದೇ ತೇಜೋ ಶಕ್ತಿಯಿಂದ ವಾಕ್ ಶಕ್ತಿ ಬಂತು. ಇದೆಲ್ಲವೂ ಸೇರಿ ಮನುಷ್ಯನ ಅಂತ: ತೇಜಸ್ಸು ಸೃಷ್ಟಿಯಾಯ್ತು. ಇದನ್ನೇ ಆತ್ಮ ಶಕ್ತಿ ಅಂತ ಕರೆಯುವುದು. ಈಗ ನಮಗೆ ನಾವೇ ಪ್ರಶ್ನೆ ಹಾಕಿಕೊಳ್ಳೋಣ ನಾವು ಯಾರು..? ಉತ್ತರ ಹುಡುಕಿ ಹೊರಟರೆ ಅದರ ಮೂಲ ಸಿಗುತ್ತದೆ.  ಗಮನಿಸಿ ಪ್ರಾಥಮಿಕವಾಗಿ ನಾವು ಅನ್ನ, ಅನ್ನದ ಮೂಲ ನೀರು, ನೀರಿನ ಮೂಲ ತೇಜಸ್ಸು, ತೇಜಸ್ಸಿನ ಮೂಲ ಆತ್ಮಶಕ್ತಿ. ಇದು ಬಂದದ್ದು ಎಲ್ಲಿಂದ ಆತ್ಮದಿಂದ. ಆತ್ಮದಿಂದ ತೇಜಸ್ಸು ಬಂತು,  ತೇಜಸ್ಸಿನಿಂದ ಉಳಿದೆಲ್ಲವೂ ಬಂದವು. 

ಸೂರ್ಯ ಮನುಷ್ಯನ ಜೀವಾಳ
ಸೂರ್ಯನೇ ಮನುಷ್ಯನ ಒಳ-ಹೊರಗಿನ ಜೀವಾಳ. ಇದಕ್ಕಾಗಿಯೇ ಸೂರ್ಯನನ್ನ ಆತ್ಮ ಕಾರಕ ಅಂದ್ರು. ವೇದಗಳಲ್ಲಿ ಸೂರ್ಯನ ಕುರಿತಾಗಿ ಅರುಣ ಪ್ರಶ್ನ, ಸೌರ ಸೂಕ್ತ ಇತ್ಯಾದಿ ಇತ್ಯಾದಿ ಮಹಾ ಮಂತ್ರ ಸಮುಚ್ಛಯವೇ ಇದೆ. ಅಲ್ಲಿ ಇನ್ನೂ ವಿಸ್ತಾರವಾಗಿ ಸೂರ್ಯ ವಿವರ ಬರುತ್ತದೆ. ಋಗ್ವೇದವಂತೂ ಸೂರ್ಯ ಆತ್ಮಾ  ಜಗತತ್ಸತ್ಥುಷಶ್ಚ ಅನ್ನುತ್ತೆ. ಹಾಗಂದರೆ ಈ ಗತಿಶೀಲವಾದ ಜಗತ್ತಿನ ಸ್ಥಾವರ ಜಂಗಮಗಳಿಗೆ ಅವನೇ ಆತ್ಮ ಅಂತ. ಇಂಥ ಪರಮ ಗ್ರಹ ಸೂರ್ಯ. ಇಂಥ ಸೂರ್ಯನಿಗೆ ಜ್ಯೋತಿಷ್ಯದಲ್ಲಿ ಕೆಲ ಗುಣ ಲಕ್ಷಣ ಹೇಳಿದೆ. ಯಾರ ಜಾತಕದಲ್ಲಿ ಸೂರ್ಯ ಚೆನ್ನಾಗಿರ್ತಾನೋ ಅಂತವರಿಗೆ ಆ ಗುಣಗಳನ್ನು ಧಾರಾಳವಾಗಿ ಕೊಡ್ತಾನೆ. ಯಾರಿಗೆ ಅನುಕೂಲಕರವಾಗಿಲ್ಲವೋ ಅವರಿಗೆ ಆ ಗುಣಗಳ ಲೋಪ ಮಾಡ್ತಾನೆ ಅಂತ ಹೇಳತ್ತೆ. 

ಜೊತೆಗೆ ಈ ಸೂರ್ಯ ಜಾತಕದಲ್ಲಿ ಎಲ್ಲಿದ್ರೆ ಅಂಥ ಫಲಗಳನ್ನ ಕೊಡ್ತಾನೆ..?  ಯಾವಾಗ ಕೊಡ್ತಾನೆ..? ಹೇಗೆ ಚಿಂತನೆ ಮಾಡಬೇಕು..? ನೋಡೋಣ ಮುಂದಿನ ಸಂಚಿಕೆಯಲ್ಲಿ...

ಜಾತಕ ನೋಡುವುದು ಹೇಗೆ? ಇಲ್ಲಿದೆ ಉಳಿದ ಸಂಚಿಕೆಗಳು

( ಮುಂದುವರೆಯುವುದು )

ಗೀತಾಸುತ.

ಸಂಪರ್ಕ ಸಂಖ್ಯೆ :  9741743565 / 9164408090