Asianet Suvarna News Asianet Suvarna News

ರಾಮಾಯಣವೆಂಬ ವೇದದಲ್ಲಿ ರಾಮನೆಂಬ ಪರಬ್ರಹ್ಮ

ಅವನು ಮನೋಜಯ ಉಳ್ಳವನು, ಮಹಾಪರಾಕ್ರಮೀ, ಕಾಂತಿಯುಕ್ತ, ಧೀರ, ಜಿತೇಂದ್ರಿಯ, ಅತಿ ಬುದ್ಧಿವಂತ, ನೀತಿವಂತ, ವಾಗ್ಮಿ, ಐಶ್ವರ್ಯಶಾಲಿ, ಶತ್ರುವಿನಾಶಕ, ವಿಶಾಲ ಹೆಗಲಿನವ, ಬಾಹುಬಲಶಾಲಿ, ವಿಶಾಲ ಎದೆಯವ, ಮಿಂಚುವ ಮೈಬಣ್ಣದವ, ಸತ್ಯಸಂಧ, ಪ್ರತಾಪಶಾಲಿ, ಬ್ರಹ್ಮನಂತೆ ತೇಜಸ್ವಿ, ಪ್ರಜಾಪೋಷಕ, ಸಕಲ ಜೀವರಾಶಿ ರಕ್ಷಕ, ಧರ್ಮಿಷ್ಠ, ಆರ್ತರಾದವರಿಗೆ ರಕ್ಷಕ ಹೀಗೆ ಆ ಮಹನೀಯನ ಗುಣಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇಂಥ ಓರ್ವ ತೇಜಸ್ವೀ ಪುರುಷ ಇಕ್ಷ್ವಾಕು ಕುಲದಲ್ಲಿ ದಶರಥನ ಜ್ಯೇಷ್ಠ ಮಗನಾಗಿ ಅವತರಿಸಿದ. ಅವನ ಹೆಸರೇ ಶ್ರೀರಾಮ.

Festival of Rama here is the importance of Ramanavami dpl
Author
Bangalore, First Published Apr 21, 2021, 9:13 AM IST

-ಶ್ರೀಕಂಠ ಶಾಸ್ತ್ರಿ.

ರಾಮ ನವಮಿ. ಇದು ಇಡೀ ದೇಶದ, ಅಷ್ಟೇ ಅಲ್ಲ ಇಡೀ ಪ್ರಪಂಚದ ಹಬ್ಬ. ಯಾಕೆ ಅಂದ್ರೆ ಇಂಥ ಒಂದು ಕಾವ್ಯ, ಇಂಥ ಒಂದು ಪಾತ್ರ, ಇಂಥ ಒಂದು ವ್ಯಕ್ತಿತ್ವ ಇಡೀ ಭೂಮಂಡಲದಲ್ಲೇ ಯಾವ ಭಾಗದಲ್ಲೂ ಹುಟ್ಟಿಲ್ಲ, ಹುಟ್ಟಲಿಕ್ಕೆ ಸಾಧ್ಯವಿಲ್ಲ. ಅಂಥ ವಿರಳಾತಿವಿರಳ ವ್ಯಕ್ತಿತ್ವ ಆ ಪಾತ್ರದ್ದು.  ಪ್ರಪಂಚದ ಸಾಹಿತ್ಯವನ್ನ, ಇತಿಹಾಸವನ್ನ ಗಮನಿಸಿಕೊಂಡರೆ ಇಂಥ ಪಾತ್ರ, ಎಲ್ಲೂ ಕಂಡಿಲ್ಲ, ಕಾಣಲಿಕ್ಕೆ ಸಾಧ್ಯವಿಲ್ಲ ಎಂಬುದು ಸ್ಪಷ್ಟ. ಹಾಗಾದರೆ ಆ ಪಾತ್ರಕ್ಕೆ, ಆ ವ್ಯಕ್ತಿಗೆ ಇದ್ದ ಗುಣ ಶ್ರೀಮಂತಿಕೆಗಳು ಯಾವುವು..? ಆ ವ್ಯಕ್ತಿತ್ವ ಎಂಥದ್ದು..? ಅಸಲಿಗೆ ವ್ಯಕ್ತಿಯಾದರೂ ಯಾರು..? ಈ ಪ್ರಶ್ನೆಗೆ ಸ್ವಾಧ್ಯಾಯ ನಿರತರೂ-ತಪಸ್ವಿಗಳೂ ಆದ ಬ್ರಹ್ಮಮಾನಸ ಪುತ್ರ ನಾರದರೇ ಉತ್ತರವನ್ನ ಕೊಡುತ್ತಾರೆ.
  
‘‘ ನಿಯತಾತ್ಮಾ ಮಹಾವೀರ್ಯೋ ದ್ಯತಿಮಾನ್ ಧೃತಿಮಾನ್ ವಶೀ
ಬುದ್ಧಿಮಾನ್ ನೀತಿವಾನ್ ವಾಗ್ಮೀ ಶ್ರೀಮಾನ್ ಶತ್ರು ನಿಬರ್ಹಣ:
ವಿಪುಲಾಂಸೋ ಮಹಾಬಾಹು: ಕಂಬುಗ್ರೀವೋ ಮಹಾಹನು: ...

ಅವನು ಮನೋಜಯ ಉಳ್ಳವನು, ಮಹಾಪರಾಕ್ರಮೀ, ಕಾಂತಿಯುಕ್ತ, ಧೀರ, ಜಿತೇಂದ್ರಿಯ, ಅತಿ ಬುದ್ಧಿವಂತ, ನೀತಿವಂತ, ವಾಗ್ಮಿ, ಐಶ್ವರ್ಯಶಾಲಿ, ಶತ್ರುವಿನಾಶಕ, ವಿಶಾಲ ಹೆಗಲಿನವ, ಬಾಹುಬಲಶಾಲಿ, ವಿಶಾಲ ಎದೆಯವ, ಮಿಂಚುವ ಮೈಬಣ್ಣದವ, ಸತ್ಯಸಂಧ, ಪ್ರತಾಪಶಾಲಿ, ಕೀರ್ತಿಶಾಲಿ, ವಿವೇಕಿ, ಗುರು ಹಿರಿಯರಿಗೆ ವಿಧೇಯ, ಬ್ರಹ್ಮನಂತೆ ತೇಜಸ್ವಿ, ಪ್ರಜಾಪೋಷಕ, ಸಕಲ ಜೀವರಾಶಿ ರಕ್ಷಕ, ಧರ್ಮಿಷ್ಠ, ಆರ್ತರಾದವರಿಗೆ ರಕ್ಷಕ ಹೀಗೆ ಆ ಮಹನೀಯನ ಗುಣಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇಂಥ ಓರ್ವ ತೇಜಸ್ವೀ ಪುರುಷ ಇಕ್ಷ್ವಾಕು ಕುಲದಲ್ಲಿ ದಶರಥನ ಜ್ಯೇಷ್ಠ ಮಗನಾಗಿ ಅವತರಿಸಿದ. ಅವನ ಹೆಸರೇ ಶ್ರೀರಾಮ.

ದೇವರ ತೀರ್ಥ ತೆಗೆದುಕೊಳ್ಳಲೂ ರೀತಿ ನೀತಿ ಇವೆ, ಏನವು?
  
ದೈವಶಕ್ತಿಯೊಂದು ಪುರುಷ ರೂಪದಲ್ಲಿ ಧರೆಗಿಳಿಯಿತು ಎನ್ನಲಿಕ್ಕೆ ರಾಮಾಯಣದಲ್ಲಿ ಅನೇಕ ಸಾಕ್ಷಿಗಳಿದ್ದಾವೆ. ಅವುಗಳನ್ನ ಗಮನಿಸೋಣ. ಅದಕ್ಕೂ ಮುಂಚೆ ಆ ದೈವ ಶಕ್ತಿ ಪುರುಷ ರೂಪದಲ್ಲಿ ಧರೆಗಿಳಿದಿದ್ದಕ್ಕೆ ಕಾರಣ ಏನು..? ಅದನ್ನ ಅರ್ಥಮಾಡಿಕೊಳ್ಳಬೇಕಿದೆ.

Festival of Rama here is the importance of Ramanavami dpl
  
ಪ್ರತಿ ವ್ಯಕ್ತಿಯ ಜೀವನವನ್ನ ಆದರ್ಶ ಮಾಡಿ ತನ್ಮೂಲಕ ಸಮಾಜದ ಸ್ವಾಸ್ಥ್ಯವನ್ನ ಕಾಪಾಡಲಿಕ್ಕೆ ನಮ್ಮಲ್ಲಿ ಮೂರು ಬಗೆಯ ಮಾರ್ಗಗಳಿದ್ದಾವೆ. ಅದರಲ್ಲಿ ಮೊದಲನೆಯದ್ದು ಪ್ರಭು ಸಂಮಿತ.

ಪ್ರಭು ಸಂಮಿತ :

ಇದು ಕಾನೂನು ಇದ್ದ ಹಾಗೆ. ಒಂದು ಬಾರಿ ಆದೇಶ ಹೊರಡಿಸಿದರೆ ಮುಗಿಯಿತು ಅದನ್ನು ಉಲ್ಲಂಘಿಸುವಂತಿಲ್ಲ. ಪಾಲಿಸಲೇ ಬೇಕು. ಸತ್ಯವನ್ನು ಹೇಳು ಎಂದರೆ ಸತ್ಯವನ್ನೇ ಹೇಳಬೇಕು. ಅದನ್ನು ಮೀರುವಹಾಗಿಲ್ಲ. ರಾಜಾಜ್ಞೆ ಇದ್ದಹಾಗೆ. ಇದನ್ನೇ ವೇದಗಳು ಮಾಡಿದ್ದು. ಕಟ್ಟುನಿಟ್ಟಿನ ಕ್ರಮ ಹಾಕಿಟ್ಟು ಸಮಾಜವನ್ನು ತಿದ್ದುವ ಪ್ರಯತ್ನ ಮಾಡಿದವು. ಆದರೆ ಇದನ್ನು ಪಾಲಿಸುವುದು ಕೊಂಚ ಕಷ್ಟ. ಈ ಮಾರ್ಗ ಕಠಿಣವಾಗಿ ಆದೇಶ ಮಾಡುವುದರಿಂದ ಎಲ್ಲರಿಗೂ ರುಚಿಸುವುದು ಕಷ್ಟ. ಆದರೆ ಇದಕ್ಕೆ ಉತ್ತಮ ಫಲವಿದೆ ಎಂಬುದೂ ಸರ್ವ ವೇದ್ಯ ವಿಷಯ. ಆದರೂ ಆಚರಣೆ ಮಾಡುವುದಿಲ್ಲ. ಕುಡಿದು ಗಾಡಿ ಓಡಿಸಿದರೆ ದಂಡ ಕಟ್ಟ ಬೇಕಾಗುತ್ತದೆ ಎಂಬ ಕಾನೂನಿಗೆ ಬೆಲೆ ಎಲ್ಲಿದೆ..?  ದಂಡ ಕಟ್ಟುವವರೇ ಹೆಚ್ಚು..! ಇದರ ಹೊರತಾಗಿ ಬೇರೆ ಯಾವ ಮಾರ್ಗದಲ್ಲಿ ದಂಡ ಕಟ್ಟದೆ, ಮಾತು ಕೇಳಿಯಾರು ಎಂದು ಯೋಚಿಸಿದಾಗ ಹೊಳೆದ ಮಾರ್ಗವೇ ಮಿತ್ರಸಂಮಿತ.

ಮಿತ್ರ ಸಂಮಿತ : ಒಂದು ಕಾನೂನು ಹೇಳುವುದನ್ನೇ ಒಬ್ಬ ಮಿತ್ರ, ಒಬ್ಬ ಸಸ್ನೇಹಿ ಹೇಳಿದಾಗ ಕೇಳುವ ಸಾಧ್ಯತೆ ಕೊಂಚ ಹೆಚ್ಚು. ನಿನ್ನ ಒಳ್ಳೇದಕ್ಕಾಗಿಯೇ ತಾನೇ ಈ ಕೆಲಸ ಮಾಡಬೆಕಾಗಿರೋದು ಮಾಡಿದರಾಯ್ತು. ನಾನೂ ಇದ್ದೀನಲ್ಲಾ ನಿನ್ನ ಬೆನ್ನುಲುಬಾಗಿ ಎಂಬ ಮಿತ್ರನ ಮಾತು ಮನ:ಪರಿವರ್ತನೆಯ ಸಾಧನವಾಗುವುದರಲ್ಲಿ ಸಂಶಯ ಇಲ್ಲ. ಇದನ್ನೇ ಪುರಾಣಗಳು ಹೇಳಿದ್ದು. ಇದನ್ನೂ ಮೀರಿ, ತ್ವರಿತದಲ್ಲಿ, ತಪ್ಪಾಗದ ಹಾಗೆ, ಸರ್ವರೂ ಒಪ್ಪುವ ಹಾಗೆ ತಿದ್ದಬಲ್ಲ ಸಾಮರ್ಥ್ಯ ಯಾರಿಗಾದರೂ ಇದೆಯೇ..? ಎಂಬ ಪ್ರಶ್ನೆಗೆ  ಉತ್ತರವಾಗಿ ಸಿಕ್ಕಿದ್ದೇ ಕಾಂತಾ ಸಂಮಿತ.

ಕಾಂತಾ ಸಂಮಿತ : ಸಾಮಾನ್ಯವಾಗಿ ಇದು ಎಲ್ಲರ ಅನುಭವಕ್ಕೆ ಬಂದಿರುತ್ತದೆ. ಪ್ರೇಯಸಿಯೊಬ್ಬಳು/ಪ್ರಿಯಕರ ಹೇಳಿದ ಮಾತು ಪ್ರತಿಯೊಬ್ಬರಿಗೂ ವೇದ ವಾಕ್ಯ. ಆ ಮಾತು ಎಷ್ಟು ಹಿತ, ಎಷ್ಟು ರಸಪೂರ್ಣ. ಬಾ ಎಂದರೆ ಬಂದೇ ಬರುತ್ತಾರೆ, ಕೂತ್ಕೊ ಎಂದರೆ ಕೂತೇ ಕೂರುತ್ತಾರೆ. ನಿಲ್ಲು ಎಂದರೆ ನಿಂತೇಬಿಡುತ್ತಾರೆ. ಅವಳು/ಅವನು ಹಾಕಿದ ಗೆರೆ ದಾಟೋದೇ ಇಲ್ಲ. ಅದನ್ನೆ ಪ್ರೇಮ ರಸ, ಪ್ರೇಮ ಶಕ್ತಿ ಅನ್ನೋದು. ಓರ್ವ ಪ್ರಿಯತಮೆ/ಪ್ರಿಯತಮ ಹೇಳಿದ ಮಾತು ಹೇಗೆ ಹೃದಯಕ್ಕೆ ಹತ್ತಿರವಾಗುತ್ತದೆಯೋ ಆ ರೀತಿಯಲ್ಲಿ ಮಾರ್ಗದರ್ಶನ ಮಾಡಿ ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಮೂಡಿದ ಮಾರ್ಗವೇ ಈ ಕಾಂತಾ ಸಂಮಿತ. ಅವೇ ನಮ್ಮ ಮಹಾಕಾವ್ಯಗಳು.
  
ಕಾವ್ಯಗಳಲ್ಲಿ ರಸ ಸ್ವಾದ ಹೆಚ್ಚು. ಕಾವ್ಯದ ಲಕ್ಷಣವೇ ರಸ. ಸವಿದಷ್ಟೂ ಸವಿಯಬೇಕೆನ್ನುವ ಷಡ್ರಸೋಪೇತವಾದ ಗುಣ ಕಾವ್ಯಗಳಲ್ಲಿರುತ್ತದೆ. ವೇದಗಳಲ್ಲೂ ಆ ಪರಮಾತ್ಮ ಶಕ್ತಿಯನ್ನ ‘‘ ರಸೋ ವೈ ಸ: ’’ ಎಂದಿದೆ. ಆ ರಸದಿಂದಲೇ ಆನಂದ ಉಂಟಾಗುತ್ತದೆ ಎಂಬುದು ವೇದ ವಾಣಿ. ಅದೇ ಅಂಶ ನಮ್ಮ ಮಹಾಕಾವ್ಯಗಳಲ್ಲಿ ಪ್ರಕಟವಾಗಿದೆ. ರಾಮಾಯಣದಲ್ಲಿಯೂ ಅದು ಸ್ಪಷ್ಟವಾಗಿದೆ.
ವೇದೇವೇದ್ಯೇ ಪರೇ ಪುಂಸಿ ಜಾತೇ ದಶರಥಾತ್ಮಜೇ |
ವೇದ: ಪ್ರಾಚೇತಸಾದಾಸೀತ್ ಸಾಕ್ಷಾಸ್ರಾಮಾಯಣಾತ್ಮನಾ ||
ಮಹಾವಿಷ್ಣು ಶ್ರೀರಾಮನಾಗಿ ಮನುಷ್ಯರೂಪದಲ್ಲಿ ಅವತರಿಸಿದ. ತದನುಸಾರವಾಗಿ ವೇದವು ರಾಮಾಯಣ ರೂಪದಲ್ಲಿ ಅವತರಿಸಿತು. ಹಾಗಾಗಿ ಪರಮಾತ್ಮ  ಜಗತ್ತಿಗೆ ಆನಂದ ತುಂಬಲು ಧರೆಗೆ ಬಂದ.  

ನಿಜಕ್ಕೂ ಭಗವಂತ ಧರೆಗಿಳಿದು ಬರುತ್ತಾನೆಯೇ..? ಬಂದು ನಂಬಿದವರನ್ನುದ್ಧರಿಸುತ್ತಾನೆಯೇ..? ಅವನಿಗೆ ಹುಟ್ಟು-ಸಾವು ಇಲ್ಲ. ಆತ ಎಲ್ಲೆಡೆಯೂ ವ್ಯಾಪಿಸಿರುವ ಮಹಾಶಕ್ತಿ. ಇಂಥ ಶಕ್ತಿ ಮನುಷ್ಯನಾಗಿ ಅಥವಾ ಇನ್ಯಾವುದೇ ರೂಪದಲ್ಲಿ ಹುಟ್ಟಲಿಕ್ಕೆ ಸಾಧ್ಯವೇ..? ಆ ಶಕ್ತಿ ಹುಟ್ಟುವುದೇ ಆದರೆ ಅದಕ್ಕೆ ಈ ಹಿಂದೆ ಸಾವಿತ್ತೇ..? ಇಂಥ ಪ್ರಶ್ನೆ ಹಲವರನ್ನು ಕಾಡಬುದು, ಕಾಡುತ್ತಿರಬಹುದು. ಈ ಪ್ರಶ್ನೆಗೆ ಅವರಿವರ ಬಾಯಿಂದ ಉತ್ತರ ಕೇಳಿದರೆ ಸಮಾಧಾನವಾಗದು. ಆ ಉತ್ತರ ಅಪೌರುಷೇಯವಾಗಿದ್ದರೆ, ಅಂದರೆ ಪುರುಷ ಮಿತಿಯನ್ನು ಮೀರಿದ ಅತೀಂದ್ರಿಯ ಶಕ್ತಿಯಿಂದ ಪ್ರಕಟವಾದ ಉತ್ತರವಾಗಿದ್ದರೆ ಖಚಿತವಾಗಿ ನಂಬಬಹುದು. ಅಂಥ ಒಂದು ಉತ್ತರ ಸಿಗಲಿಕ್ಕೆ ಸಾಧ್ಯವೇ..? ಹೌದು ಎಂದು ಸಾರಿವೆ ಅಪೌರುಷೇಯವೇ ಎನಿಸಿದ ವೇದಗಳು. 

ಜೀವನ ನೆಮ್ಮದಿಯಾಗಿರಲು ಗುರುಡ ಪುರಾಣದ ಸೂತ್ರಗಳಿವು

ಪುರುಷ ಸೂಕ್ತ ವಿವರಿಸುವ ಹಾಗೆ ‘‘ಅಜಾಯಮಾನೋ ಬಹುಧಾ ವಿಜಾಯತೇ’’ ಎಂಬ ವಚನದಲ್ಲಿ ಅವನು ಹುಟ್ಟದೆಯೇ ಬಹು ಪ್ರಕಾರವಾಗಿ ಹುಟ್ಟುತ್ತಾನೆ. ಎಂಬ ಮಾತು, ದೇವರು ಅವತರಿಸುತ್ತಾನೆ ಎಂಬುದಕ್ಕೆ  ಪುಷ್ಟಿ ನೀಡುತ್ತದೆ. ಮತ್ತೊಂದು ವಿಶೇಷ ಪ್ರಮಾಣ ವಾಕ್ಯ ಎಂದರೆ ಭಗವಂತನ ವಾಣಿ ಎಂದೇ ಪ್ರಸಿದ್ಧವಾಗಿರುವ ಭಗವದ್ಗೀತಾ ವಾಕ್ಯ. ಆತನೇ ವಿವರಿಸುವಂತೆ : ‘‘ ತದಾತ್ಮಾನಂ ಸೃಜಾಮ್ಯಹಂ ’’ ಎಂಬ ಮಾತಿನಲ್ಲಿ ಆಗ ನನ್ನನ್ನು ನಾನು ಸೃಷ್ಟಿಸಿಕೊಳ್ಳುತ್ತೇನೆ ಎಂದಿದ್ದಾನೆ. 

ಗೀತೆಯ ಮತ್ತೊಂದು ಮಾತಿನಂತೆ ‘‘ ಸಂಭವಾಮ್ಯಾತ್ಮಮಾಯಯಾ’’  ನನ್ನ ಮಾಯೆಯಿಂದ ನಾನು ಆವಿರ್ಭವಿಸುತ್ತೇನೆ ಎಂದಿದ್ದಾನೆ. ಹೀಗೆ ಭಗವಂತ ಅವತರಿಸುತ್ತಾನೆ ಎನ್ನಲಿಕ್ಕೆ ಅವನದ್ದೇ ಮಾತಿನ ಆಧಾರಗಳಿದ್ದಾವೆ. ಅದರಂತೆಯೇ ಸಾಕ್ಷಾತ್ ಮಹಾವಿಷ್ಣು  ಚೈತ್ರ ಮಾಸದ ಶುಕ್ಲ ನವಮಿಯಲ್ಲಿ ರಾಮನ ರೂಪದಲ್ಲಿ ಧರೆಗಿಳಿದ ಎಂಬುದು ಸತ್ಯ. ಅದಕ್ಕಿರುವ ಸಾಕ್ಷಿಗಳನ್ನು ನೀವೇ ಮುಂದೆ ಅರ್ಥೈಸಿಕೊಳ್ಳುತ್ತೀರಿ ಮುಂದಿನ ಹಂತಗಳಲ್ಲಿ.

ಭೋಲೆನಾಥ, ಶಂಕರ, ಹರ ಎಂದು ಕರೆಯಲ್ಪಡುವ ಶಿವನ ರಹಸ್ಯ

ಒಬ್ಬ ರಾಮ ತನ್ನದೇ ಅಂಶದಿಂದ ತಮ್ಮಂದಿರನ್ನು ಕಟ್ಟಿಕೊಂಡು ಬಂದು ಒಂದು ಕುಟುಂಬದ ವ್ಯವಸ್ಥೆಯನ್ನು ಸರಿಪಡಿಸುವುದರಿಂದ ಹಿಡಿದು ಇಡೀ ರಾಜ್ಯ, ದೇಶ, ಇಡೀ ಬ್ರಹ್ಮಾಂಡಕ್ಕೆ ಕಂಟಕರಾಗಿದ್ದವರನ್ನು ಹೇಗೆ ತಿದ್ದಿದ, ತನ್ಮೂಲಕ ಹೇಗೆ ಸುಂದರ ಸಮಾಜವನ್ನು ನಿರ್ಮಾಣ ಮಾಡಿದ ಎಂಬುದಕ್ಕೆ ಮಹಾ ಸಾಕ್ಷಿಯಾಗಿರುವ ರಸ ಗ್ರಂಥವೇ ರಾಮಾಯಣ. ಇದಕ್ಕೆ ಸಾಲು ಸಾಲು ಸಾಕ್ಷಿಗಳು ರಾಮಾಯಣದಲ್ಲೇ ಸಿಗುತ್ತವೆ.

ರಾಮ-ಲಕ್ಷ್ಮಣರಿನ್ನು ಬಾಲಕರು. ಅರಮನೆಯ ವೈಭವ ವಾತಾವರಣದಲ್ಲಿ ಹೆಮ್ಮರವನ್ನು ಅಂಟಿಕೊಂಡು ಬೆಳೆಯುವ ಬಳ್ಳಿಗಳ ಹಾಗೆ ತಂದೆಯ ಆಸರೆಯಲ್ಲಿ ಬೆಳೆಯುತ್ತಿದ್ದಾರೆ. ಹಾಗಿರುವಾಗ ಒಂದು ದಿನ  ಕಠೋರ ನಿಮಮಶಾಲಿಗಳಾದ ತೇಜಸ್ಸಿನಿಂದ ಜ್ವಲಿಸುವ ವಿಶ್ವಾಮಿತ್ರರು ದಶರಥನನ್ನು ಕಾಣಲು ಬಂದರು. ಬಂದು ಕಾರ್ಯಾರ್ಥವನ್ನು ತಿಳಿಸಿದಾಗ. ದಶರಥ ಮಕ್ಕಳನ್ನು ಕಳುಹಿಸಲು ಭಯಗೊಂಡು. ಅವರ ಬದಲಿಗೆ ನಾನೇ ಬರುತ್ತೇನೆ ಎಂದು ಬೇಡಿಕೊಂಡ. ಆ ಸಂದರ್ಭದಲ್ಲಿ ತುಂಬಿದ ಸಭೆಯಲ್ಲೇ ವಿಶ್ವಾಮಿತ್ರರು ಘೋಷಿಸುತ್ತಾರೆ.

‘‘ ಅಹಂ ವೇದ್ಮೀ ಮಹಾತ್ಮಾನಂ ರಾಮಂ ಸತ್ಯಪರಾಕ್ರಮಮ್||
ಸತ್ಯಪರಾಕ್ರಮನೂ ಮಹಾತ್ಮನೂ ಆದ ರಾಮ ಯಾರು, ಎಂಥವನು ಎಂಬುದು ನನಗೆ ಗೊತ್ತು. ಅಷ್ಟೇ ಅಲ್ಲ ಇಲ್ಲಿರುವ ವಸಿಷ್ಠರಿಗೂ ಗೊತ್ತು ಎಂಬುದಾಗಿ ರಾಮನ ಆ ಅನೂಹ್ಯ ಶಕ್ತಿಯ ವಿಚಾರವನ್ನು ಪ್ರಕಟ ಮಾಡುತ್ತಾರೆ. ಅಲ್ಲಿಂದ ಆ ಪುರುಷೋತ್ತಮನ ದೈವ ಶಕ್ತಿ ಅಲ್ಲಲ್ಲಿ ಮಿಂಚಿನಂತೆ ಪ್ರಕಟವಾಗುವುದನ್ನು ರಾಮಾಯಣದ ಪ್ರತಿ ಕಾಂಡದಲ್ಲೂ ನಾವು ಕಾಣತ್ತೇವೆ. ಆ ಮಿಂಚಿನ ಬೆಳಕನ್ನೇ ಕಣ್ತುಂಬಿಕೊಳ್ಳುವುದಾದರೆ:
  
ಗೌತಮ ಮಹರ್ಷಿಗಳ ಶಕ್ತಿ ಎಂಥದ್ದು..? ಅವರ ಪತ್ನ ಅಹಲ್ಯೆ ಎಂಥ ಮಹನೀಯೆ. ಆಕೆ ಶಪಿತಳಾಗಿದ್ದು  ದೇವೇಂದ್ರನಂಥ ದೇವೇಂದ್ರನ ಸಾಹಚರ್ಯೆಯಿಂದ ಎಂಬುದು ಗೊತ್ತಿರುವ ಸಂಗತಿಯೇ. ಸದಾ ಬ್ರಹ್ಮಚರ್ಯೆಯಲ್ಲಿರುವ ಮುನಿಯೋರ್ವ ಕೊಟ್ಟ ಶಾಪವನ್ನೇ ಶಮನ ಮಾಡಿ ಆಕೆಯನ್ನ ಉದ್ಧರಿಸುವ ಶಕ್ತಿ ಸಾಮಾನ್ಯರಿಗೆ ಸಾಧ್ಯವೇ..? ಅಲ್ಲಿ ಕಾಣುತ್ತದೆ ಆ ಬೆಳಕು. ಹಿಂದೆ ದಕ್ಷ ಯಜ್ಞವನ್ನು  ಧ್ವಂಸ ಮಾಡುವಾಗ ರುದ್ರನು ಒಂದು ಧನಸ್ಸನ್ನು ತನ್ನ ಲೀಲೆಯಿಂದ ಹಿಡಿದು ಹೆದೆಯೇರಿಸಿ ರೋಷಾವೇಶಪೂರ್ಣವಾಗಿ ದೇವತೆಗಳನ್ನುದ್ದೇಶಿಸಿ ಎಲೈ ದೇವತೆಗಳೇ ಯಜ್ಞದಲ್ಲಿ ನನಗೆ ಸಲ್ಲಬೇಕಾದ ಭಾಗವನ್ನು ನೀವು ಸಲ್ಲಿಸಲಿಲ್ಲ. ಆದ್ದರಿಂದ ಮಹಾಪೂಜ್ಯವೆಂದು ಸೆಡೆದು ನಿಂತಿರುವ ನಿಮ್ಮ ಶಿರಸ್ಸುಗಳನ್ನು ಭೇದಿಸುತ್ತೇನೆ ಎಂದಾಗ ದೇವತೆಗಳು ಶಿವನಲ್ಲಿ ಬೇಡಿಕೊಂಡು ಜೀವ ಉಳಿಸಿಕೊಂಡರು. ಆರ್ದ್ರನಾದ ಶಿವ ತನ್ನ ಲೀಲೆಯಿಂದ ಸೃಷ್ಟಿಸಿದ್ದ ಧನಸ್ಸನ್ನು ದೇವತೆಗಳ ಎದುರಲ್ಲೇ ದೇವರಾತನಿಗೆ ಕೊಟ್ಟು ಅನುಗ್ರಹಿಸಿದ್ದನು. ಅಂಥ ಶಿವಧನಸ್ಸನ್ನು ಒಬ್ಬ ಸಾಮಾನ್ಯ ಮನುಷ್ಯ ಭಂಗ ಮಾಡಲಿಕ್ಕೆ ಸಾಧ್ಯವೇ..? ಅಲ್ಲಿ ಕಾಣುತ್ತದೆ ಬೆಳಕು.

ಪರಶುರಾಮರು ಹೇಳುತ್ತಾರೆ : ರಾಮ ಶಿವ ಧನಸ್ಸು ಮುರಿದದ್ದು ದೊಡ್ಡದಲ್ಲ. ಘೋರವೂ ಮಹತ್ತರವೂ ಆದ ಈ ಧನಸ್ಸು ವೈಷ್ಣವ ಧನಸ್ಸು. ಶಿವ ಧನಸ್ಸಿನಷ್ಟೇ ಬಲವಾದದ್ದು, ಮಹಾವಿಷ್ಣು ಭೃಗುವಂಶೋತ್ಪನ್ನನಾದ ಜಮದಗ್ನಿಗೆ ಇದನ್ನು ಕೊಟ್ಟ, ಜಮದಗ್ನಿಯೇ ನನ್ನ ತಂದೆ. ಅವರಿಂದ ನನ್ನ ವಶಕ್ಕೆ ಬಂದ ಈ ಧನಸ್ಸನ್ನು ಕೈಯಲ್ಲಿ ಹಿಡಿ. ಶರವನ್ನು ಹೂಡು ಆಗ ನಿನ್ನ ಪರಾಕ್ರಮವನ್ನು ಒಪ್ಪಿಕೊಳ್ಳುತ್ತೇನೆ ಎಂಬ ಮಾತಿಗೆ ರಾಮರು ಥಟ್ಟನೆ ಧನಸ್ಸುನ್ನು ಎಳೆದುಕೊಂಡು ನಿಂತಾಗ ಪರಶುರಾಮರು ನಿರ್ವೀರ್ಯರಾಗಿ ಜಡರಾದರು. ಸಾಮಾನ್ಯರ ತೋಳ್ಬಲದಲ್ಲಿ ವೈಷ್ಣವ ಧನಸ್ಸನ್ನು ಕಟ್ಟಲು ಸಾಧ್ಯವೇ..? ಅಲ್ಲಿ ಕಾಣುತ್ತದೆ ಬೆಳಕು.

ಮೀನ ರಾಶಿಯಿಂದ ಮೇಷ ರಾಶಿಗೆ ಸೂರ್ಯನ ಚಲನೆ: ನಿಮ್ಮ ರಾಶಿಗೆ ಏನು ಫಲ?

ಹದಿನಾಲ್ಕು ಸಾವಿರ ಮಂದಿ ಶೂರ್ಪನಖಿಯ ಮಾತನ್ನು ಕಟ್ಟಿಕೊಂಡು ರಾಮನ ಮೇಲೆ ಯುದ್ಧಕ್ಕೆ ಬಂದಾಗ ಆಪತ್ತಿನಲ್ಲಿ ಪರಿಹಾರ ಕಂಡುಕೊಳ್ಳಬೇಕು. ತಮ್ಮ ಲಕ್ಷ್ಮಣ ವೈದೇಹಿಯನ್ನು ಕರೆದುಕೊಂಡು ಬೆಟ್ಟದ ಗುಹೆಯೊಳಗೆ ಹೋಗು ನನ್ನ ಮಾತನ್ನು ಮೀರಬೇಡ. ನನ್ನ ಪಾದಗಳ ಮೇಲೆ ಆಣೆ. ಸ್ವಯಂ ತು ಹಂತುಮಿಚ್ಛಾಮಿ ಸರ್ವಾನೇವ ನಿಶಾಚರಾನ್. ನಾನೇ ಇವರನ್ನು ಸಂಹರಿಸಬೇಕೆಂದಿದ್ದೇನೆ ಎಂದು ಹೇಳಿ ಅಷ್ಟೂ ದುಷ್ಟರನ್ನೂ ಸಂಹರಿಸುತ್ತಾನೆ. ಒಬ್ಬೇ ಒಬ್ಬ ಪುರುಷ ಪುಂಗವ ಹದಿನಾಲ್ಕು ಸಾವಿರ ಮಂದಿಯನ್ನು ಜಯಿಸಲು ಸಾಧ್ಯವೇ..? ಅಲ್ಲಿ ಕಾಣುತ್ತದೆ ಬೆಳಕು.

ಸಮುದ್ರ ದಾಟುವಾಗ ರಾಮನ ಪ್ರಾರ್ಥನೆಗೂ ಪ್ರಕಟವಾಗದ ಸಮುದ್ರರಾಜನನ್ನು ಕಂಡು ಕನಲಿ ಕೆಂಡವಾದಾಗ ರಾಮರ ಮಾತು : ‘‘ ಸಮುದ್ರಂ ಶೋಷಯಿಷ್ಯಾಮಿ ಪದ್ಭ್ಯಾಂಯಾಂತು ಪ್ಲವಂಗಮಾಃ ’’ ಎನ್ನುವ ಮಾತು ನೋಡಿ ಸಮುದ್ರವನ್ನು ಒಣಗಿಸಿ ಬಿಡುತ್ತೇನೆ..! ವಾನರರು ಕಾಲ್ನಡಿಗೆಯಿಂದಲೇ ಸಮುದ್ರವನ್ನು ದಾಟಿಹೋಗಲಿ’’ ಈ ಮಾತನ್ನು ಮನುಷ್ಯ ಮಾತ್ರನಾದವನು ಹೀಗೆ ಮಾನತಾಡಲು ಸಾಧ್ಯವೇ..? ಅಲ್ಲಿ ಕಾಣುತ್ತದೆ ಬೆಳಕು.

ಇಂದ್ರಜಿತು ನಾಗಪಾಶ ಪ್ರಯೋಗಿಸಿದಾಗ ಮೂರ್ಛಿತರಾಗಿದ್ದ ರಾಮ-ಲಕ್ಷ್ಮಣರನ್ನು ಸಾಕ್ಷಾತ್ ಗರುಡನೇ ಬಂದು ಕಾಪಾಡಿ ಹೇಳುವ ಮಾತು ಹೇಗಿದೆಯೆಂದರೆ ಕಾಕುತ್ಸ್ಥ ನೀನು ನನ್ನ ಗೆಳೆಯ. ನೀವು ಹೊರಗಿನ ಪ್ರಾಣವಾಗಿದ್ದೇಯೇ. ಈ ನಾಗಪಾಶ ಅತಿ ಭೀಕರವಾದದ್ದು. ಅಸುರರಾಗಲಿ, ದಾನವರಾಗಲಿ, ದೇವ-ಗಂಧರ್ವರಾಗಲಿ ಸಾಕ್ಷಾತ್ ದೇವೇಂದ್ರನಾಗಲಿ ಈ ನಾಗಪಾಶವನ್ನು ಬಿಡಿಸಲು ಶಕ್ತರಲ್ಲ ಎಂಬ ಗರುಡನ ಮಾತಿನಲ್ಲೂ ಆ ಬೆಳಕು ಕಾಣುತ್ತದೆ. ಅಷ್ಟೆ ಯಾಕೆ ಕೊನೆಯಲ್ಲಿ ಸಾಕ್ಷಾತ್ ಚತುರ್ಮುಖ ಬ್ರಹ್ಮನೇ ಬಂದು ಅಯ್ಯಾ ನೀನು ಮಹಾವಿಷ್ಣು ಎಂಬುದನ್ನು ನೆನಪು ಮಾಡಿಹೋಗುತ್ತಾನೆ.
  
ಅಂತೂ ಭಕ್ತರ, ನಂಬಿದವರ ಉದ್ಧಾರಕ್ಕಾಗಿ ಪ್ರಭುವೂ ಆಗಬಲ್ಲ, ಮಿತ್ರನೂ ಆಗಬಲ್ಲ, ಸಂತೈಸುವ ಹಿತ ಕಾಂತನೂ ಆಗಬಲ್ಲ. ಅಷ್ಟಲ್ಲದೆ ಧರೆಗಿಳಿದೂ ಬರಬಲ್ಲ ಎಂಬುದಕ್ಕೆ ನಮ್ಮ ವೇದ-ಪುರಾಣ-ಮಹಾಕಾವ್ಯಗಳೇ ಸಾಕ್ಷಿ. ಜನರನ್ನುದ್ಧರಿಸುವ ಮಾರ್ಗವೇ ಇದು. ಇದೇ ಸರ್ವ ಸಮ್ಮತವಾದದ್ದೂ ಕೂಡ. ಈ ಮಾರ್ಗಗಳಲ್ಲಿ ಕಾಂತಾ ಸಂಮಿತ ಅತ್ಯಂತ ಪ್ರಭಾವಶಾಲಿ ಎನ್ನಲಿಕ್ಕೆ ರಾಮಾಯಣ ಮಹಾ ಸಾಕ್ಷಿ. ಹಾಗಾಗಿಯೇ ಈ ಕಾವ್ಯ ಇಂದು ಭಾರತ ಮಾತ್ರವಲ್ಲದೆ ಥಾಯ್ಲೆಂಡ್, ಕೆನಡಾ, ಬೆಲ್ಜಿಯಮ್, ನೇಪಾಳ, ಮಲಯಾ, ದಕ್ಷಿಣ ಆಫ್ರಿಕಾ, ಸುಮಾತ್ರಾ, ಸಿಂಗಾಪುರ, ಕಾಂಬೋಡಿಯಾ, ಇಂಡೋಚೈನಾ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ತನ್ನ ಪ್ರಭಾವ ಬೀರಿ ದೇಶಾತೀತ ಕಾವ್ಯವಾಗಿದೆ. ಇಂಡೋನೇಷಿಯಾದಲ್ಲಿ 700 ವರ್ಷಗಳ ಕೆಳಗೆ ವಾಲ್ಮೀಕಿ ಮಹರ್ಷಿಗಳ ಭವನ ನಿರ್ಮಾಣವಾಗಿದೆ. ಮುಸಲ್ಮಾನರು, ಬೌದ್ಧರು, ಜೈನರೂ ಕೂಡ ಈ ಕಾವ್ಯವನ್ನು ಒಪ್ಪಿಕೊಂಡ ಮೇಲೆಯೇ ಇದು ಧರ್ಮಾತೀತ ಗ್ರಂಥ ಎಂದು ಪರಿಗಣಿಸ್ಪಟ್ಟಿದೆ. ಅಷ್ಟೇ ಅಲ್ಲ ಇದು ಜಾತ್ಯತೀತ ಗ್ರಂಥ. ರಾಮರನ್ನು ಆ ಜಾತಿ, ಈ ಜಾತಿ ಅಂತ ಅಲ್ಲ ಎಲ್ಲ ಜಾತಿಯವರೂ, ಎಲ್ಲ ವರ್ಗದವರೂ, ಎಲ್ಲ ವರ್ಣದವರೂ ಆರಾಧಿಸುತ್ತಾರೆ. ಭಾರತದ ಮನೆ ಮನೆಯಲ್ಲೂ  ರಾಮರ ಫೋಟೋ ಇದೆ. ಪ್ರತಿಮನೆಯಲ್ಲೂ ರಾಮನ ಆದರ್ಶವಿದೆ. ಹಾಗಾಗಿಯೇ ಯುಗಯುಗಗಳು ಕಳೆದರೆ ಇಂದಿಗೂ ರಾಮ ನವಮಿ ಬಂದರೆ ಬೀದಿ ಬೀದಿಗಳಲ್ಲಿ ಉತ್ಸವಗಳು ನೆರವೇರುತ್ತಿವೆ, ಪಾನಕ-ಕೋಸುಂಬರಿ ಹಂಚಿ ಭಾತೃತ್ವ ಮೆರೆಯುತ್ತಾರೆ. ರಾಮ ನವಮಿಯ ದಿನ ನಾವು ಸ್ಮರಿಸಿಕೊಳ್ಳಬೇಕಾದದ್ದು ಇದನ್ನೇ ತಾನೆ..

Follow Us:
Download App:
  • android
  • ios