ಬೆಂಗಳೂರು [ಸೆ.19]:   ರಾಜ್ಯವನ್ನು ತೀವ್ರವಾಗಿ ಕಾಡಿರುವ ನೆರೆ ಮತ್ತು ಬರ ಪರಿಸ್ಥಿತಿ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ, ಕೇಂದ್ರ ಸರ್ಕಾರದಿಂದ ಪರಿಹಾರ ವಿಳಂಬವಾಗಿದೆ ಮತ್ತು ರಾಜ್ಯಕ್ಕೆ ತಾರತಮ್ಯ ಎಸಗಲಾಗುತ್ತಿದೆ ಎಂದು ಆರೋಪಿಸಿ ಪ್ರತಿಪಕ್ಷ ಕಾಂಗ್ರೆಸ್‌ ಬೃಹತ್‌ ಜನಾಂದೋಲನ ಸಂಘಟಿಸಲು ನಿರ್ಧರಿಸಿದೆ. ಇದರ ಭಾಗವಾಗಿ ಅತಿ ಹೆಚ್ಚು ನೆರೆ ಹಾನಿಗೊಳಗಾಗಿರುವ ಬೆಳಗಾವಿ ಜಿಲ್ಲೆಯಲ್ಲಿ ಸೆ.24ರಂದು ಬೃಹತ್‌ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ.

ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಬುಧವಾರ ನಡೆದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಇದೇ ವೇಳೆ ಸಂತ್ರಸ್ತರಿಗೆ ತಕ್ಷಣ ಸೂಕ್ತ ಪರಿಹಾರ ನೀಡಬೇಕು ಹಾಗೂ ನೆರೆ ಪ್ರದೇಶಗಳಲ್ಲಿ ಕೂಡಲೇ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕು. ನೆರೆ, ಬರ ವಿಚಾರಗಳ ಚರ್ಚೆಗೆ ಬೆಳಗಾವಿಯಲ್ಲಿ ತುರ್ತು ಅಧಿವೇಶ ಕರೆಯಬೇಕು. ರಾಜ್ಯದ ರೈತರು ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕುಗಳಲ್ಲಿನ ಎಲ್ಲ ಸಾಲಗಳನ್ನೂ ಮನ್ನಾ ಮಾಡಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒತ್ತಾಯಿಸುವ ನಿರ್ಣಯಗಳನ್ನು ಸಭೆ ಕೈಗೊಂಡಿದೆ.

ಸಭೆಯಲ್ಲಿ ಶಾಸಕರು ನೆರೆ ಹಾಗೂ ಬರ ಪರಿಸ್ಥಿತಿಯಿಂದ ಸಂಕಷ್ಟದಲ್ಲಿರುವ ಜನರ ನೆರವಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಧಾವಿಸಿಲ್ಲ ಎಂದು ತೀವ್ರ ಆತಂಕ ವ್ಯಕ್ತಪಡಿಸಿದರು. ಜತೆಗೆ, ನೆರೆ ಪ್ರದೇಶದ ಪರಿಹಾರ ಕಾರ್ಯಗಳಿಗೆ ಅನುದಾನ ಬಿಡುಗಡೆಯಲ್ಲೂ ಕಾಂಗ್ರೆಸ್‌-ಬಿಜೆಪಿ ಶಾಸಕರ ನಡುವೆ ತಾರತಮ್ಯ ಮಾಡಲಾಗುತ್ತಿದೆ. ಕಾಂಗ್ರೆಸ್‌ ಶಾಸಕರ ಕ್ಷೇತ್ರಗಳಿಗೆ ವಾರ್ಷಿಕ ಕ್ಷೇತ್ರಾಭಿವೃದ್ಧಿ ಅನುದಾನವನ್ನೂ ಸರಿಯಾಗಿ ನೀಡಿಲ್ಲ. ಇದರ ವಿರುದ್ಧ ಪ್ರತಿಭಟನೆ ನಡೆಸಬೇಕು. ಬಿಜೆಪಿ ಸರ್ಕಾರ ಏನು ಮಾಡುತ್ತಿದೆ ಎಂಬುದರ ಸತ್ಯಾಂಶವನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಡಿಕೆಶಿ ಪರ ಕಾಂಗ್ರೆಸ್‌ ನಿರ್ಣಯ :  ಆದಾಯಕ್ಕಿಂತ ಹೆಚ್ಚು ಹಣ-ಆಸ್ತಿ ಹೊಂದಿರುವ ಸಂಬಂಧ ಇ.ಡಿ. ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ವಿರುದ್ಧ ಬಿಜೆಪಿಯವರು ಧ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಸಭೆಯಲ್ಲಿ ಖಂಡನೆ ವ್ಯಕ್ತವಾಗಿದ್ದು, ಶಾಸಕಾಂಗ ಪಕ್ಷ ಮತ್ತು ಕಾಂಗ್ರೆಸ್‌ ಪಕ್ಷ ಸದಾ ಡಿ.ಕೆ.ಶಿವಕುಮಾರ್‌ ಬೆಂಬಲಕ್ಕೆ ಇರುತ್ತದೆ ಎಂಬ ನಿರ್ಣಯ ಕೈಗೊಳ್ಳಲಾಯಿತು.

ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ, ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌, ಮಾಜಿ ಸಚಿವರಾದ ಎಂ.ಬಿ.ಪಾಟೀಲ್‌, ಕೃಷ್ಣ ಬೈರೇಗೌಡ, ಎಚ್‌.ಕೆ.ಪಾಟೀಲ್‌, ಯು.ಟಿ.ಖಾದರ್‌, ಆರ್‌.ವಿ.ದೇಶಪಾಂಡೆ, ಕೆ.ಜೆ.ಜಾಜ್‌ರ್‍, ಜಮೀರ್‌ ಅಹಮದ್‌ ಖಾನ್‌, ಪರಮೇಶ್ವರ್‌ ನಾಯ್ಕ, ವೆಂಕಟರಮಣಪ್ಪ, ತನ್ವೀರ್‌ ಸೇಠ್‌, ಶಾಸಕರಾದ ಅಂಜಲಿ ನಿಂಬಾಳ್ಕರ್‌, ಅಜಯ್‌ ಸಿಂಗ್‌, ಕುಸುಮಾ ಶಿವಳ್ಳಿ, ಖನೀಜ್‌ ಫಾತಿಮಾ, ನಂಜೇಗೌಡ, ರಾಘವೇಂದ್ರ ಹಿತ್ನಾಳ್‌, ಸೌಮ್ಯಾರೆಡ್ಡಿ, ಪುಟ್ಟರಂಗಶೆಟ್ಟಿ, ರಾಜಶೇಖರ್‌ ಪಾಟೀಲ್‌ ಹುಮ್ನಾಬಾದ್‌, ಅನಿಲ್‌ ಚಿಕ್ಕಮಾದು, ಗಣೇಸ್‌ ಹುಕ್ಕೇರಿ, ಮಹಾಂತೇಶ್‌ ಕೌಜಲಗಿ, ಇ.ತುಕಾರಾಂ, ಜಮೀರ್‌ ಅಹ್ಮದ್‌ ಖಾನ್‌, ಹರಿಹರ ಹಾಲಪ್ಪ ಸೇರಿದಂತೆ ಹಲವು ಶಾಸಕರು ಭಾಗವಹಿಸಿದ್ದರು.

ಸಭೆಗೆ ಗೈರಾದವರು:  ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ಸತೀಶ್‌ ಜಾರಕಿಹೊಳಿ, ಶಿವಾನಂದ ಪಾಟೀಲ್‌ ಸೇರಿದಂತೆ ಕೆಲವರು ಸಭೆ ಹಾಗೂ ಪ್ರತಿಭಟನೆ ಎರಡಕ್ಕೂ ಗೈರು ಹಾಜರಾಗಿದ್ದರು.

ಕಾಂಗ್ರೆಸ್‌ ನಿರ್ಣಯಗಳು

1. ರಾಜ್ಯದ ಹಲವೆಡೆ ತೀವ್ರ ಪ್ರವಾಹ ಮತ್ತು ಕೆಲ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಎದುರಾಗಿರುವುದರಿಂದ ಕೂಡಲೇ ನೆರೆ ಮತ್ತು ಬರಪೀಡಿತ ತಾಲೂಕುಗಳ ಘೋಷಣೆ ಮಾಡಿ ಆ ಪ್ರದೇಶಗಳಲ್ಲಿ ಸಮರೋಪಾದಿಯಲ್ಲಿ ಪರಿಹಾರ ಕಾರ್ಯಗಳನ್ನು ತಕ್ಷಣ ಕೈಗೊಳ್ಳುಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸುವುದು.

2. ರಾಜ್ಯದ ರೈತಾಪಿ ವರ್ಗವು ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕುಗಳಲ್ಲಿ ಮಾಡಿರುವ ಸಾಲ ಮನ್ನಾ ಮಾಡಬೇಕು.

3. ನೆರೆ ಮತ್ತು ಬರದ ವಿಷಯ ಚರ್ಚೆಗೆ ಬೆಳಗಾವಿಯಲ್ಲಿ ಕೂಡಲೇ ಅಧಿವೇಶನ ಕರೆಯಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒತ್ತಾಯಿಸಬೇಕು.