ಜ್ಯೋತಿಷದಲ್ಲಿದೆ ನೀವು ನಂಬುವ ಸೈನ್ಸ್

Astrology is based on science
Highlights

ಜ್ಯೋತಿಷ್ಯದ ಬಗ್ಗೆ ವಿವಿಧ ತರ್ಕಗಳಿವೆ. ಇದು ವಿಜ್ಞಾನವೆಂದು ಒಂದು ಗುಂಪು ಹೇಳಿದರೆ, ಮತ್ತೊಬ್ಬರು ಇದು ಉಪಯೋಗಕ್ಕೆ ಬಾರದ್ದು ಎನ್ನುತ್ತಾರೆ. ಕೇವಲ ಮೂಢನಂಬಿಕೆ ಎಂದೂ ದೂಷಿಸುವವರಿದ್ದಾರೆ. ಆದರೆ, ವಿಜ್ಞಾನಕ್ಕೂ, ಜ್ಯೋತಿಷ್ಯ ಶಾಸ್ತ್ರಕ್ಕೂ ಏನು ಸಂಬಂಧ. ಈ ಬಗ್ಗೆ ಖ್ಯಾತ ಜ್ಯೋತಿಷಿ ಗೀತಸುತ ಅವರು ಬರಹವಿಲ್ಲಿದೆ. 

 

- ಗೀತಾಸುತ

'ಜ್ಯೋತಿಷ ಶಾಸ್ತ್ರ ಮನುಷ್ಯನ ಜೀವನವನ್ನೇ ತೆರೆದಿಡುವ ಮಹೋನ್ನತ ಶಾಸ್ತ್ರ. ಇಲ್ಲಿ ಹುಟ್ಟಿನಿಂದ ಸಾವಿನವರೆಗೆ ಎಲ್ಲವೂ ಇದೆ. ಆದರೆ ಅದನ್ನ ಸೂಕ್ಷ್ಮವಾಗಿ ತಿಳಿಯುವ ಅಂತ:ಶಕ್ತಿ ಬೇಕು'. 

ಈ ಮಾತನ್ನು ಪುಷ್ಟೀಕರಿಸಲು ಶೃಂಗೇರಿ ಮೂಲವಾಸಿಗಳಾದ ವೇ.ಬ್ರ.ಶ್ರೀ ಮಂಜುನಾಥ ಶರ್ಮರು ಸಾಕಷ್ಟು ಪುರಾವೆಗಳನ್ನು ನೀಡುತ್ತಾರೆ. ಅವರು ಹೇಳಿಕೊಟ್ಟ ಶಾಸ್ತ್ರದಲ್ಲಿ ನೀವು ಅರಸುವ ಸೈನ್ಸ್ ಎಥೇಚ್ಚವಾಗಿದೆ. ಜ್ಯೋತಿಷ್ಯದೊಳಗೆ ಅಡಕವಾಗಿದೆ. 

ಸಾಮಾನ್ಯವಾಗಿ ನಮ್ಮ ಶಾಸ್ತ್ರಗಳು ಏನನ್ನಾದರೂ ಹೇಳಿದರೆ, ಅವುಗಳನ್ನ ಕೇಳಬೇಕಾದ ಪರಿಸ್ಥಿತಿ  ಬಂದರೆ ಅದನ್ನ ಒಪ್ಪಿಕೊಳ್ಳಲಿಕ್ಕೆ ಈಗಿನ ಜನಕ್ಕೆ ಕಷ್ಟ. ಅವುಗಳಲ್ಲಿ  ಭರವಸೆ ಕಡಿಮೆ. ಅದೇ ಸೈನ್ಸ್ ಹೇಳಿದ್ದು ಅಂದ್ರೆ ತಕ್ಷಣ ಪೂರ್ವಾಪರವನ್ನೂ ನೋಡದೆ ಒಪ್ಕೊಂಡ್  ಬಿಡ್ತೀವಿ. ಯಾಕೆ ಹೇಳಿ..? ಸೈನ್ಸ್ ಏನನ್ನ ಹೇಳತ್ತೋ ಅದನ್ನ ಸಾಬೀತು ಮಾಡತ್ತೆ. ಶಾಸ್ತ್ರಕ್ಕೆ ಆ ಸಾಬೀತು ಮಾಡುವ ಸಾಮರ್ಥ್ಯವಿದ್ದರೂ ದಡ್ಡರಿಂದಾಗಿ ಶಾಸ್ತ್ರವೇ ಸೋಲುವ ಪರಿಸ್ಥಿತಿ ಎದುರಾಗಿದೆ. ಪಾಪ..! ಶಾಸ್ತ್ರ ಅಂದ್ರೆ ಗೊಡ್ಡು ಕಥೆ, ಕೆಲಸಕ್ಕೆ ಬಾರದ ಚಿಂತನೆಗಳು ಅನ್ನುವ ಕಲ್ಪನೆ ಈಗಿನವರಲ್ಲಿ ಬೇರೂರಿಬಿಟ್ಟಿದೆ. ಆ ಅಭಿಪ್ರಾಯಕ್ಕೆ ಬರುವ ಮುನ್ನ ಈ ಲೇಖನ ಓದಿ. 

ಪ್ರಸಿದ್ಧ ಕವಿ ಕಾಳಿದಾಸ ಒಂದು ಮಾತು ಹೇಳ್ತಾನೆ. ಪುರಾಣಮಿತ್ಯೇವ ನ ಸಾಧು ಸರ್ವಂ ನ ಚಾಪಿ ಕಾವ್ಯಂ ನವಮಿತ್ಯವದ್ಯಂ ಅಂದರೆ, ಹಳೆಯದೆಂದ ಮಾತ್ರಕ್ಕೆ  ಎಲ್ಲವೂ ಒಳಿತಲ್ಲ, ಹೊಸದೆಂದ ಮಾತ್ರಕ್ಕೆ ಎಲ್ಲವೂ ಕೆಟ್ಟದ್ದಲ್ಲ. ಇದು ನಮ್ಮ ಮನಸ್ಸಿಗೆ ಬರಬೇಕು. ಆದ್ರೆ ಹೆಚ್ಚಿನ ಜನಕ್ಕೆ ಅನುಮಾನ. ಯಾಕೆ ಗೊತ್ತಾ..? ಆ ವಿಷಯಗಳನ್ನ ಯಾರೂ ಕೂಡ ಅರ್ಥ ಆಗುವ ಹಾಗೆ ಹೊಸ ಪೀಳಿಗೆಗೆ ಹೇಳಲಿಲ್ಲ. ನಿಜ. ಎಲ್ಲದಕ್ಕೂ ಅದರ ಹಿಂದಿನ ಸಮಂಜಸವಾದ ಕಾರಣ ಕೊಡ್ಬೇಕು ಆಗ್ಲೇ ಈಗಿನವರು ಒಪ್ಕೊಳ್ಳೋದು. ಸಮಂಜಸ ಉತ್ತರ ಕೊಡುವ ಸಾಮರ್ಥ್ಯ ನಿಮಗಿಲ್ಲದಾಗ ನೀವು ಸೋಲ್ತೀರ ಜೊತೆಗೆ ನಮ್ಮ ಶಾಸ್ತ್ರಗಳೂ ಕೂಡ ಮಹತ್ವವನ್ನ ಕಳೆದೆಕೊಳ್ಳತ್ವೆ. 

ಪುಟ್ಟ ಉದಾಹರಣೆ ನೋಡಿ -  ಹಿಂದಿನವರು ಹೇಳ್ತಿದ್ರು : ಹೆಣ್ಣು ಮಕ್ಕಳು ಪ್ರತೀದಿನ ಅರಳಿಮರ ಸುತ್ತಿ ಅಂತ. ಯಾಕೆ ಅನ್ನೋದನ್ನ ಹೇಳಲಿಲ್ಲ. ಏನಾದ್ರೂ ಪ್ರಶ್ನೆ ಮಾಡಿದ್ರೆ ಹೇಳಿದ್ದು ಮಾಡು ಅಂತಿದ್ರು. ಅದು ಯುವಕರಲ್ಲಿ ಕೋಪ ಹುಟ್ಟಿಸುವುದರ ಜೊತೆಗೆ ಯಾಕೆ ಸುತ್ಬೇಕು ಸುತ್ತಲ್ಲ ಅನ್ನೋ ಮೊಂಡುತನವನ್ನೂ ಬೆಳೆಸುತ್ತೆ. ಅದೇ ನೀವು ಬೇರೆಲ್ಲ ಮರಗಳಿಗಿಂತ ಹೆಚ್ಚು ಆಕ್ಸಿಜನ್ ಬಿಡುಗಡೆ ಮಾಡುವ ಮರ ಅಂದ್ರೆ ಅರಳಿ ಮರ. ಅದರ ಕೆಳಗೆ ಕೂತ್ಕೋ,  ಇಲ್ಲ ಆ ಮರದ ಬದಿಯಲ್ಲಿ ಪ್ರತಿದಿವಸ  ಓಡಾಡು ದೇಹ ಶುದ್ಧಿಯಾಗತ್ತೆ. ಶುದ್ಧವಾದ ಆಕ್ಸಿಜನ್ ದೇಹಕ್ಕೆ ಹೋಗತ್ತೆ ಅಂತ ಹೇಳಿ ಯಾಕೆ ಕೇಳಲ್ಲ..? ಆದ್ರೆ ಆ ಆಚರಣೆಯ ಹಿಂದಿನ ಗುಟ್ಟು ನಿಮಗೆ ಗೊತ್ತಿರಬೇಕು. ನಿಮ್ಮ ತಲೆಯಲ್ಲಿ ನಿಜವಾದ ಅರಿವೇ ಇಲ್ಲ ಅಂದ್ರೆ ಮುಂದಿನ ಪೀಳಿಗೆಗೆ ಏನು ಹೇಳಲಿಕ್ಕೆ ಸಾಧ್ಯ..? 

ನೀವು ಸಮಂಜಸ ಉತ್ತರ ಕೊಡದೇ ಹೋದಾಗ ಅವ್ರಾದ್ರೂ ನಿಮ್ಮ ಮಾತನ್ನ ಯಾಕೆ ಕೇಳ್ಬೇಕು..? 

ಈ ಹಿನ್ನೆಲೆಯಲ್ಲಿ ನಮ್ಮ ಜನಮಾನಸಕ್ಕೆ ಹತ್ತಿರವಾಗಿರು ಜ್ಯೋತಿಷದ ಬಗ್ಗೆ ಒಂದಷ್ಟು ಸತ್ಯ ಅಂಶಗಳನ್ನ ಅವುಗಳಲ್ಲಿರುವ  ಗಂಭೀರ ಮಹತ್ವಗಳ ವಿಚಾರವನ್ನ ತಿಳಿದುಕೊಳ್ಳುವುದೊಳಿತು. 

ಜ್ಯೋತಿಷ್ಯ ಕಣ್ಣಿದ್ದಂತೆ...

ನಮ್ಮ ಇಂದ್ರಿಯಗಳಲ್ಲಿ ಅತ್ಯಂತ ಪ್ರಧಾನ ಅಂಗ ಅಂದ್ರೆ ಅದು ಕಣ್ಣು. ಸರ್ವೇಂದ್ರಿಯಾಣಾಂ ನಯನಂ ಪ್ರಧಾನಂ ಅನ್ನೋದನ್ನ ಕೇಳಿದ್ದೀರಿ. ಹಾಗೆಯೇ ಶಾಸ್ತ್ರಗಳಲ್ಲೇ ಪ್ರಧಾನ ಯಾವುದು..?  ಕಣ್ಣಿನಂಥ ಶಾಸ್ತ್ರ ಯಾವುದು ಅಂದ್ರೆ ಅದು ಜ್ಯೋತಿಷ. 'ಜ್ಯೋತಿಷಂ ಚಕ್ಷುಶೀಚ ಅಂತಾರೆ' ( ಜ್ಯೋತಿಷವು ಕಣ್ಣಿದ್ದಂತೆ ). ಯಾಕೆ ಈ ಜ್ಯೋತಿಷಕ್ಕೆ ಈ ಮಹತ್ವ ಬಂತು ಅಂದ್ರೆ ಅದರ ಹಿಂದೆ ಅದರ ಹಿಂದೆ ವಿಜ್ಞಾನವಿದೆ. ಆ ಶಾಸ್ತ್ರದ ಪ್ರತಿ ಹಂತದಲ್ಲೂ ವಿಜ್ಞಾನವಿದೆ. ಆ ವೈಜ್ಞಾನಿಕ ಅಂಶಗಳಬಗ್ಗೆ ನಿಧಾನವಾಗಿ ತಿಳೀತಾ ಹೋಗೋಣ.  

ಈಗ ಪ್ರಧಾನವಾದ ಒಂದು ಅಂಶ ಗಮನಿಸೋದಾದ್ರೆ ಒಬ್ಬ ಆರೋಗ್ಯವಂತ ಮನುಷ್ಯ ಒಂದು ದಿನಕ್ಕೆ ಎಷ್ಟು ಬಾರಿ ಉಸಿರಾಡಬೇಕು ಅಂತ ನೀವು ವೈದ್ಯರನ್ನ ಪ್ರಶ್ನಿಸಿದರೆ  21600 ಬಾರಿ ಅಂತ ಹೇಳ್ತಾರೆ. ಉತ್ತರ ಪಕ್ಕಕ್ಕಿಡಿ. ಈಗ ಜ್ಯೋತಿಷಕ್ಕೆ ಬನ್ನಿ. ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ನಮ್ಮ ಜ್ಯೋತಿಷದಲ್ಲಿ 12 ರಾಶಿಗಳಿವೆ. ಈ ರಾಶಿಗಳನ್ನ ಸೂಕ್ಷ್ಮವಾಗಿ ವಿಭಾಗಿಸಿ ಫಲ ಹೇಳುವ ಕ್ರಮ ಸ್ತ್ರದಲ್ಲಿದೆ.  ಪ್ರತಿಯೊಂದು ರಾಶಿಯಲ್ಲೂ 1800 ಕಲೆಗಳು ಇರತ್ವೆ. ಅಂದ್ರೆ ಒಂದು ರಾಶಿಯನ್ನ 1800 ಭಾಗಗಳನ್ನಾಗಿ ಮಾಡಬಹುದು. ಹಾಗೆ ಭಾಗ ಮಾಡಿ ಯಾವ ಅಂಶದಲ್ಲಿ ಗ್ರಹಗಳಿರ್ತಾರೋ ಅದಕ್ಕೆ ತಕ್ಕ ಫಲ ಹೇಳಬೇಕು. ಅದನ್ನೇ ಸೂಕ್ಷ್ಮ ದೃಷ್ಟಿ ಫಲ ಅಂತಾರೆ. ಅದೇ ನಿಜವಾದ ಜ್ಯೋತಿಷ ತಂತ್ರ. 

ನೋಡಿ ಒಂದು ರಾಶಿಗೆ 1800 ಕಲೆ ಅಂದ್ರೆ 12 ರಾಶಿಗೆ ಎಷ್ಟಾಯ್ತು. 1800ನ್ನ 12 ರಿಂದ ಗುಣಿಸಿದ್ರೆ 21600 ಉತ್ತರ ಬರತ್ತೆ. ಈಗ ಹೇಳಿ ಜ್ಯೋತಿಷ ಗೊಡ್ಡು ಶಾಸ್ತ್ರವೋ ವಿಜ್ಞಾನವೋ..? 

ನಮ್ಮ ಜೀವಕ್ಕೂ ಈ ಜ್ಯೋತಿಷಕ್ಕೂ ಅನ್ಯೋನ್ಯ ನಂಟಿದೆ. ನಮ್ಮ ಉಸಿರಾಟದ ಆಧಾರದಲ್ಲೇ ನಮ್ಮ ಬದುಕು ನಿರ್ಧಾರವಾಗತ್ತೆ. ಆ ಬದುಕಿಗೆ ನಮ್ಮ ಜ್ಯೋತಿಷ್ಯ ಮುಖ್ಯ  ಆಧಾರವಾಗಿ ನಿಲ್ಲುತ್ತೆ. ಇದು ನಮ್ಮ ಶಾಸ್ತ್ರದ ಒಳ ಗುಟ್ಟು. ಇದನ್ನ ಬಗೆಯುತ್ತಾ ಹೋದರೆ ನೀವು ನಿಬ್ಬೆರಗಾಗುವ ಎಷ್ಟೋ ಅಂಶಗಳು ಇದರಲ್ಲಿ ಅಡಕವಾಗಿವೆ. 

loader