2026 Year Horoscope Annual Predictions for Aries to Pisces ಜನವರಿ 2026 ರಿಂದ ಮಾರ್ಚ್ 2026ರವರೆಗೆ ವಿಶ್ವಾವಸು ನಾಮ ಸಂವತ್ಸರ ಮತ್ತು ಮಾರ್ಚ್ 2026 ನಂತರ ಈ ವರ್ಷಪೂರ್ತಿ ಪರಾಭವ ನಾಮ ಸಂವತ್ಸರ ನಡೆಯುತ್ತದೆ.ವಿಶ್ವಾವಸು ಮತ್ತು ಪರಾಭವ ನಾಮ ಸಂವತ್ಸರದ ದ್ವಾದಶರಾಶಿಗಳ ಫಲಾಫಲಗಳು.
ವೀಣಾ ಚಿಂತಾಮಣಿ
ಈ ವರ್ಷದ ಜೂನ್ ತಿಂಗಳಲ್ಲಿ ಗುರುಗ್ರಹ ತಾನು ಇದುವರೆಗೂ ಇದ್ದ ಮಿಥುನ ರಾಶಿಯನ್ನು ಬಿಟ್ಟು ಕರ್ಕರಾಶಿಯನ್ನು ಪ್ರವೇಶಿಸುತ್ತಾನೆ. ಅಕ್ಟೋಬರ್ 31 ರಂದು ಕರ್ಕದಿಂದ ಸಿಂಹರಾಶಿಗೆ ಪ್ರವೇಶಿಸಿ 2026 ಪೂರ್ತಿಯಾಗಿ ಸಿಂಹರಾಶಿಯಲ್ಲೇ ಇರುತ್ತಾನೆ. ಶನಿ ಈ ವರ್ಷ ಪೂರ್ತಿ ಮೀನರಾಶಿಯಲ್ಲೇ ಇರುತ್ತಾನೆ. ರಾಹುಕೇತುಗಳು 06-12-26 ರಂದು ತಾವು ಇದುವರೆಗೂ ಇದ್ದ ಕುಂಭ-ಸಿಂಹ ರಾಶಿಯನ್ನು ಬಿಟ್ಟು ಕಟಕ ಮಕರ ರಾಶಿಗೆ ಪ್ರವೇಶ ಮಾಡುತ್ತಾರೆ. ಈ ವರ್ಷದ ಅದೃಷ್ಟ ರಾಶಿಗಳು ವೃಷಭ, ಮಿಥುನ, ಕನ್ಯಾ, ತುಲಾ,ವೃಶ್ಚಿಕ, ಮಕರ, ಮೀನ
ಮೇಷ ರಾಶಿ: ನಿಮಗೆ ನವೆಂಬರ್‌ವರೆಗೂ ರಾಹು ಲಾಭಸ್ಥಾನದಲ್ಲಿ ಇದ್ದು ನಿರಂತರ ಧನಲಾಭ ಕೊಡುತ್ತಾನೆ. ಅಕ್ಟೋಬರ್ 31ರ ನಂತರ ಗುರು ಸಿಂಹರಾಶಿಗೆ ಪ್ರವೇಶಿಸಿದಾಗ ನಿಮಗೆ ಐದನೇ ಮನೆಯ ಗುರು ಬಹಳ ಶುಭಫಲಗಳನ್ನು ಕೊಡುತ್ತಾನೆ. ಆದರೂ ಸಾಡೆಸಾತಿ ಶನಿಯ ಮೊದಲ ಭಾಗದಲ್ಲಿ ಇದ್ದೀರಿ. ಖರ್ಚುಗಳೂ, ಹಿನ್ನಡೆ, ಮಾನಸಿಕ ತೊಳಲಾಟ, ಕೆಲಸದ ಒತ್ತಡ, ವಿಶ್ರಾಂತಿ ಇಲ್ಲದ ಜೀವನ ಇವೆಲ್ಲ ಇರುತ್ತದೆ. ಸಹನೆ ಇರಲಿ. ಹಾಗೂ ಮನಸ್ಸನ್ನು ಬಿಗಿಯಾಗಿ ಇಟ್ಟುಕೊಳ್ಳಿ. ಮೋಡ ಕಳೆದು ಬೆಳಕು ಮೂಡುತ್ತದೆ ಎಂಬ ಆಶಯ ಇರಲಿ. ಇವುಗಳಿಗೆ ಈಗಿನಿಂದಲೇ ಮನಸ್ಸು ಹೊಂದಿಸಿಕೊಳ್ಳಿ. ಮನೆ ದೇವರ ದರ್ಶನ ಮಾಡಿ. ಶನಿದೇವರಿಗೆ ಎಳ್ಳೆಣ್ಣೆ ಕೊಡಿ.
ವೃಷಭ ರಾಶಿ: ಈ ವರ್ಷ ಪೂರ್ತಿ ಶನಿ ಲಾಭಸ್ಥಾನದಲ್ಲಿ ಹಾಗೂ ಜೂನ್‌ವರೆಗೂ ಗುರು ಧನ ಸ್ಥಾನದಲ್ಲಿ ಇದ್ದು ನಿಮಗೆ ಅನೇಕ ಶುಭ ಫಲಗಳನ್ನು ಕೊಡುತ್ತಾರೆ. ಜೂನ್ ನಂತರ ಗುರುಬಲ ಕಡಿಮೆಯಾದರೂ ಶನಿ ವರ್ಷಪೂರ್ತಿ ಲಾಭಸ್ಥಾನದಲ್ಲಿ ಇದ್ದು ನಿಮ್ಮನ್ನು ಕಾಪಾಡುತ್ತಾನೆ. ನವೆಂಬರ್‌ನಲ್ಲಿ ಕೇತು ಮೂರನೇ ಮನೆಗೆ ಬರುತ್ತಾನೆ. ಅದು ಕೂಡ ನಿಮಗೆ ಧನಲಾಭ, ಕಾರ್ಯಸಿದ್ದಿಯನ್ನು ಕೊಡುತ್ತದೆ. ನಿಮ್ಮ ಶಕ್ತಿ ಪರಾಕ್ರಮ ಹೆಚ್ಚುತ್ತದೆ. ಜೀವನದಲ್ಲಿ ಬಹಳ ಯೋಚನೆಗೀಡು ಮಾಡಿದ್ದ ಅಡೆತಡೆಗಳಿಗೆ ಪರಿಹಾರ ದೊರೆಯುತ್ತದೆ. ಅರ್ಹರಿಗೆ ಮದುವೆ ನಿಷ್ಕರ್ಷೆ ಆಗುತ್ತದೆ. ಯಾವುದೇ ಅಡೆತಡೆಗಳು ಎದುರಾದರೂ ಅಲ್ಲಿಗಲ್ಲಿಗೇ ಪರಿಹಾರವೂ ದೊರೆತು ನಿರಾಳರಾಗುತ್ತೀರಿ. ಗುರು ದತ್ತಾತ್ರೇಯನ ದರ್ಶನ ಮಾಡಿ.
ಮಿಥುನ ರಾಶಿ: ಈ ವರ್ಷ ನಿಮಗೆ ಜೂನ್ ನಂತರ ಗುರು ಬಲ ದೊರೆತು ಮನಸ್ಸಿಗೆ ಕೊಂಚ ಹಗುರವಾಗುತ್ತದೆ. ನಿಂತಲ್ಲೇ ನಿಂತಿದ್ದ ಜೀವನ ಈಗ ಸ್ವಲ್ಪ ಮುಂದೆ ಹೋಗುತ್ತದೆ. ನಿಂತು ಹೋಗಿದ್ದ ಕೆಲಸಗಳು ಈಗ ವೇಗ ಪಡೆದುಕೊಳ್ಳುತ್ತದೆ. ಜೂನ್ ನಂತರ ಗುರು ಬಲ ಸಿಗುತ್ತದೆ ಆದರೆ ಬೇರಾವುದೇ ಬಲಾಢ್ಯ ಗ್ರಹಗಳ ಬಲ ಇಲ್ಲ. ಆದರೆ ಕಳೆದ ವರ್ಷಕ್ಕಿಂತ ಈ ವರ್ಷ ನಿಮಗೆ ಕೊಂಚ ನಿರಾಳ ಎನಿಸುತ್ತದೆ. ಅರ್ಹರಿಗೆ ಜೂನ್ ನಂತರ ಮದುವೆ ಮಾತುಕತೆಗಳು ನಡೆಯಬಹುದು. ವೃತ್ತಿ ಸಂಬಂಧ ಕಿರಿಕರಿಗಳು ಜೂನ್ ನಂತರ ಪರಿಹಾರವಾಗುತ್ತದೆ. ಡಿಸೆಂಬರ್‌ನಲ್ಲಿ ಎರಡನೇ ಮನೆಗೆ ಕೇತು ಪ್ರವೇಶದಿಂದ ಕೌಟುಂಬಿಕವಾಗಿ ಕೊಂಚ ಅಶಾಂತಿ ಎದುರಿಸಬೇಕಾಗಬಹುದು. ಪಾರ್ವತಿದೇವಿಯನ್ನು ಪೂಜಿಸಿ.
ಕಟಕ ರಾಶಿ: ನಿಮಗೆ ಈ ವರ್ಷ ಅಕ್ಟೋಬರ್ ತನಕ ಗುರು ಬಲ ಇಲ್ಲ. ಅಕ್ಟೋಬರ್ ನಂತರ ಈ ವರ್ಷಪೂರ್ತಿ ಗುರು ಸಿಂಹರಾಶಿಯಲ್ಲಿ ಇರುತ್ತಾನೆ. ಹಾಗಾಗಿ ಆ ಸಮಯದಲ್ಲಿ ಕೊಂಚ ಚೇತರಿಕೆ ಇದೆ. ಹಾಗಾಗಿ ಅಕ್ಟೋಬರ್‌ವರೆಗೂ ನಿಮಗೆ ಸವಾಲುಗಳ ಮಹಾಪೂರವೇ ಇದೆ. ಹಣಕಾಸಿಗೆ ಕಷ್ಟ, ಮಾನಸಿಕ ಚಿಂತೆ, ಕೆಲಸದ ಒತ್ತಡ ಇಂಥವೆಲ್ಲ ಅನುಭವಿಸಬೇಕಾಗುತ್ತದೆ. ಬೇರೆ ಗ್ರಹಗಳ ಬಲವೂ ಇರುವುದಿಲ್ಲ. ಕೇತು ಡಿಸೆಂಬರ್ ನಲ್ಲಿ ನಿಮ್ಮ ರಾಶಿಗೇ ಬರುತ್ತಾನೆ. ಇದು ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಧನ್ವಂತರಿ ಜಪ ಮಾಡಿ. ಗುರು ಸಿಂಹರಾಶಿಗೆ ಪ್ರವೇಶವಾದಾಗ ಸಮಸ್ಯೆಗಳು ಹಗುರವಾಗುತ್ತದೆ. ಪ್ರಮೋಷನ್ ದೊರೆಯಬಹುದು. ವಿದೇಶ ಪ್ರವಾಸ ಅವಕಾಶ ಬರಬಹದು.
ಸಿಂಹ ರಾಶಿ: ಈ ವರ್ಷ ಜೂನ್‌ವರೆಗೂ ಗುರು ಲಾಭ ಸ್ಥಾನದಲ್ಲಿ ಇದ್ದು ನಿಮಗೆ ಧನ ಲಾಭ ಕಾರ್ಯಸಿದ್ಧಿ ಅನುಕೂಲ ಮಾಡಿಕೊಡುತ್ತಾನೆ. ಜೂನ್ ನಂತರ ಗುರು ಮಿಥುನದಿಂದ ಕರ್ಕರಾಶಿಗೆ ಪ್ರವೇಶ ಮಾಡುತ್ತಾನೆ. ಇದರಿಂದ ಹಣಕಾಸಿನ ಸಂಕಷ್ಟ, ಕಾರ್ಯ ವೈಫಲ್ಯ, ಮಾನಸಿಕ ತೊಳಲಾಟ ಮೇಲಧಿಕಾರಿಗಳ ದರ್ಪ ಮೊದಲಾದವನ್ನು ಅನುಭವಿಸುತ್ತೀರಿ. ಜಾಗ ಬದಲಾವಣೆ ಸಾಧ್ಯತೆ ಇದೆ. ಕೆಲಸದಲ್ಲಿ ವರ್ಗಾವಣೆ ಆಗಬಹುದು. ಡಿಸೆಂಬರ್ ನಂತರ ಕೇತು ನಿಮ್ಮ ರಾಶಿಯನ್ನು ಬಿಟ್ಟು ಕಟಕರಾಶಿಗೆ ಪ್ರವೇಶ ಮಾಡುತ್ತಾನೆ. ಹಾಗೆಯೇ ರಾಹು ಆರನೇ ಮನೆಗೆ ಬರುತ್ತಾನೆ. ಆರನೇ ಮನೆಯ ರಾಹು ನಿಮಗೆ ಹಣಕಾಸಿನ ಲಾಭವನ್ನು ತಂದು ಕೊಡುತ್ತಾನೆ. ಹೂಡಿಕೆಗಳಲ್ಲಿ ಲಾಭ ಇದೆ. ಅಷ್ಟಮ ಶನಿಯ ಪ್ರಭಾವ ಇರುವುದರಿಂದ ಜಾಗ್ರತೆಯಂತೂ ಇರಬೇಕು.
ಕನ್ಯಾ ರಾಶಿ: ಗುರು ಜೂನ್ ನಂತರ ಲಾಭಸ್ಥಾನಕ್ಕೆ ಪ್ರವೇಶಿಸಿ, ನಿಮಗೆ ಧನಲಾಭ, ಅಧಿಕಾರ ಲಾಭ ಮಾಡಿಸುತ್ತಾನೆ. ಕೇತು ಸಹ ಡಿಸೆಂಬರ್‌ನಲ್ಲಿ ಲಾಭಸ್ಥಾನಕ್ಕೆ ಪ್ರವೇಶಿಸಿ ನಿಮ್ಮ ಹಣಕಾಸಿನ ಅನುಕೂಲತೆಯನ್ನು ಇನ್ನಷ್ಟು ಗಟ್ಟಿ ಮಾಡುತ್ತಾನೆ ಅವಿವಾಹಿತರಿಗೆ ಜೂನ್ ನಂತರ ವಿವಾಹ ಪ್ರಾಪ್ತಿ ಇದೆ. ದೊಡ್ಡ ಹುದ್ದೆ ಅಧಿಕಾರ ಸಿಗುತ್ತದೆ. ರಾಜಕೀಯ ನಾಯಕರಿಗೂ ಜೂನ್ ನಂತರ ಶುಭಕಾಲ. ಅಕ್ಟೋಬರ್ ನಂತರ ಗುರು 12ನೇ ಮನೆಗೆ ಪ್ರವೇಶ ಮಾಡುವುದರಿಂದ ಕೊಂಚ ಏರುಪೇರು ಅನುಭವಿಸುತ್ತೀರಿ. ಗುರುತರವಾದ ಕೆಲಸಗಳನ್ನು ಜೂನ್ ಒಳಗೆ ಮುಗಿಸಿಕೊಳ್ಳಿ. ಅಕ್ಟೋಬರ್ ನಂತರ ಸ್ಥಳ ಬದಲಾವಣೆ ಸಾಧ್ಯತೆ ಇದೆ. ಮುಖ್ಯ ಸಂಗತಿಗಳು ತೀರ್ಮಾನಗಳು ಮುಗ್ಗರಿಸಬಹುದು. ಎಚ್ಚರಿಕೆ ಇರಲಿ
ತುಲಾ ರಾಶಿ: ನಿಮ್ಮ ರಾಶಿಗೆ ಜೂನ್‌ವರೆಗೂ ಗುರುಬಲ ಇದ್ದು ಸಂಗತಿಗಳು ನಿಮ್ಮ ಮನಸ್ಸಿನ ಆಶಯದಂತೆ ನಡೆಯುತ್ತದೆ. ಜೂನ್‌ನಿಂದ ಅಕ್ಟೋಬರ್‌ವರೆಗೂ ಗುರು ಎಂಟನೇ ಮನೆಗೆ ಪ್ರವೇಶಿಸಿ, ಕೊಂಚ ಏರಪೇರುಗಳು ಆಗುತ್ತವೆ. ಹಣಕಾಸು ಸ್ಥಿತಿ ಇಕ್ಕಟ್ಟಾಗಬಹುದು. ಅಕ್ಟೋಬರ್ ನಂತರ ಗುರು ಸಿಂಹ ರಾಶಿಗೆ ಪ್ರವೇಶವಾದಾಗ ಪರಿಸ್ಥಿತಿ ಕೊಂಚ ಸುಧಾರಿಸುತ್ತದೆ. ಲಾಭ ಸ್ಥಾನದ ಗುರು ನಿಮ್ಮ ಕೈ ಹಿಡಿಯುತ್ತಾನೆ. ಶನಿ ಈ ವರ್ಷಪೂರ್ತಿ ಆರನೇ ಮನೆಯಲ್ಲಿ ಇದ್ದು ನಿಮಗೆ ಸಕಲ ಅನುಕೂಲಗಳಿಗೆ ಸಹಕಾರ ಕೊಡುತ್ತಾನೆ. ರಾಹುಕೇತುಗಳ ನಾಲ್ಕನೇ ಮನೆ ಹಾಗೂ ಹತ್ತನೇ ಪ್ರವೇಶದಿಂದ ನಿಮಗೇನೂ ಲಾಭನಷ್ಟ ಇಲ್ಲ. ತಾಯಿಯ ಆರೋಗ್ಯಕ್ಕೆ ಧಕ್ಕೆ ಬರಬಹುದು. ದುರ್ಗಾದೇವಿಯನ್ನು ಆರಾಧಿಸಿ.
ವೃಶ್ಚಿಕ ರಾಶಿ: ನಿಮಗೆ ಈ ವರ್ಷ ಪೂರ್ತಿ ಪಂಚಮ ಶನಿಯ ಪ್ರಭಾವ ಇರುತ್ತದೆ. ಹಣಕಾಸಿಗೆ ಬಿಕ್ಕಟ್ಟು, ವೃತ್ತಿಯಲ್ಲಿ ಒತ್ತಡ, ಅನಾರೋಗ್ಯ ಕುಟುಂಬದಲ್ಲಿ ಕಿರಿಕಿರಿ ಮೊದಲಾದವು ಸಾಮಾನ್ಯ. ಜೂನ್ ನಂತರ ಅಕ್ಟೋಬರ್‌ವರೆಗೂ ಗುರು ಒಂಬತ್ತನೇ ಮನೆಗೆ ಪ್ರವೇಶವಾದಾಗ ಸಮಸ್ಯೆಗಳು ಹಗುರವಾಗುತ್ತದೆ. ಜೂನ್ ನಿಂದ ಅಕ್ಟೋಬರ್ ಒಳಗೆ ಏನಾದರೂ ಮುಖ್ಯ ತೀರ್ಮಾನಗಳಿದ್ದರೆ ಅದನ್ನು ಮಾಡಿಕೊಳ್ಳಿ. ಅಕ್ಟೋಬರ್ ನಂತರ ಗುರು ಹತ್ತನೇ ಮನೆಗೆ ಪ್ರವೇಶವಾದಾಗ ವೃತ್ತಿಯಲ್ಲಿ ಏರುಪೇರು ಆಗಬಹದು. ರಾಜಕೀಯ ನಾಯಕರಿಗೂ ಅನಪೇಕ್ಷಿತ ಬದಲಾವಣೆಗಳು ಆಗಬಹುದು. ಡಿಸೆಂಬರ್ ನಂತರ ರಾಹು ಮಕರರಾಶಿಗೆ ಪ್ರವೇಶವಾದಾಗ ನಿಮಗೆ ಹಣಕಾಸಿನ ಬಲ ಬರುತ್ತದೆ. ಹೂಡಿಕೆಗಳಲ್ಲಿ ಲಾಭ ಇದೆ. ಸುಬ್ರಹ್ಮಣ್ಯನ ಆರಾಧಿಸಿ.
ಧನಸ್ಸು ರಾಶಿ: ನಿಮಗೆ ಈ ವರ್ಷ ಜೂನ್‌ವರೆಗೂ ಗುರುಬಲ ಇದೆ. ಯಾವ ಕೆಲಸ ಮಾಡಬೇಕೆಂದರೂ ಸಹಾಯ ಸಹಕಾರ ಸಿಗುತ್ತದೆ. ಅವಿವಾಹಿತರಿಗೆ ಜೂನ್ ಒಳಗೆ ವಿವಾಹ ನಿಷ್ಕರ್ಷೆ ಆಗುತ್ತದೆ. ಹೊಸ ಕೆಲಸ ಸಿಗುತ್ತದೆ. ಗುರು ಜೂನ್ ನಂತರ ಎಂಟನೇ ಮನೆಗೆ ಪ್ರವೇಶ ಮಾಡಿದಾಗ ಕೊಂಚ ಹಿನ್ನೆಡೆ ಆಗಬಹುದು. ಆರೋಗ್ಯ ಏರುಪೇರು ಆಗಬಹುದು ಜಾಗ್ರತೆ ವಹಿಸಿ. ಈ ವರ್ಷ ಪೂರ್ತಿ ರಾಹು ಮೂರನೇ ಮನೆಯಲ್ಲಿ ಇದ್ದು ನಿಮಗೆ ಅತ್ಯಂತ ಬಲ ಸಹಕಾರ ಕೊಡುತ್ತಾನೆ. ಏನೇ ತೊಂದರೆಗಳು ಎದುರಾದರೂ ಎದುರಿಸುವ ಧೈರ್ಯ ಕೊಡುತ್ತಾನೆ. ಅಕ್ಟೋಬರ್ ನಂತರ ಗುರು ಸಿಂಹರಾಶಿಗೆ ಪ್ರವೇಶವಾದಾಗ ನಿಮಗೆ ಶುಭಫಲಗಳು ಇವೆ.
ಮಕರ ರಾಶಿ: ಈ ವರ್ಷಪೂರ್ತಿ ಶನಿ ನಿಮ್ಮ ರಾಶಿಯಿಂದ ಮೂರನೇ ಮನೆಯಲ್ಲಿ ಇರುತ್ತಾನೆ. ಗುರು ಜೂನ್ ವರೆಗೂ ಆರನೇ ಮನೆಯಲ್ಲಿ ಇದ್ದು ಜೂನ್ ನಂತರ ಏಳನೇ ಮನೆಗೆ ಪ್ರವೇಶವಾದಾಗ ನಿಮಗೆ ಧನಲಾಭ ಖ್ಯಾತಿ ಕೀರ್ತಿ ಪ್ರಸಿದ್ಧಿಗಳು ಸಿಗುತ್ತವೆ. ಅರ್ಹರಿಗೆ ಜೂನ್ ನಂತರ ಮದುವೆಯಾಗುತ್ತದೆ. ಡಿಸೆಂಬರ್ ಕಳೆದ ನಂತರ ರಾಹು ನಿಮ್ಮ ರಾಶಿಗೆ ಬರುತ್ತಾನೆ. ಕೇತು ಏಳನೇ ಮನೆಗೆ ಪ್ರವೇಶಿಸುತ್ತಾನೆ. ರಾಹುವಿನ ಮಕರರಾಶಿ ಪ್ರವೇಶ ನಿಮಗೆ ತೊಂದರೆ ಇಲ್ಲ್ಲ. ಗುರು ಏಳನೇ ಮನೆಯಲ್ಲಿ ಇರುವ ಐದು ತಿಂಗಳು ನಿಮಗೆ ಅದೃಷ್ಟವನ್ನು ತಂದುಕೊಡುತ್ತದೆ. ವೃತ್ತಿಯಲ್ಲಿ ಏಳ್ಗೆ, ವಿದೇಶ ಪ್ರಯಾಣ ಕೆಲವು ಸಮಸ್ಯೆಗಳಿಗೆ ಪರಿಹಾರ ಮೊದಲಾದವನ್ನು ಕಾಣುವಿರಿ. ಮಹಾವಿಷ್ಣುವನ್ನು ಧ್ಯಾನಿಸಿ. ವಿಷ್ಣುಸಹಸ್ರನಾಮ ಪಠಿಸಿ.
ಕುಂಭ ರಾಶಿ: ಜೂನ್‌ವರೆಗೂ ಗುರು ನಿಮಗೆ ಐದನೇ ಮನೆಯಲ್ಲಿದ್ದು ಸಕಲ ಅನುಗ್ರಹವನ್ನೂ ಕೊಡುತ್ತಾನೆ. ಹಣಕಾಸಿನ ಸ್ಥಿತಿ ಸುಧಾರಿಸುತ್ತದೆ. ಪದವಿ ಅಧಿಕಾರ ಲಭಿಸುತ್ತದೆ. ಬಹುದೊಡ್ಡ ಯೋಜನೆ ನಿಮ್ಮ ಕೈ ಸೇರುತ್ತದೆ. ಹೂಡಿಕೆಗಳಲ್ಲಿ ಲಾಭ ಇದೆ. ಈ ವರ್ಷ ಪೂರ್ತಿ ನೀವು ಸಾಡೆಸಾತಿ ಶನಿಯ ಪ್ರಭಾವವನ್ನು ಅನುಭವಿಸುತ್ತೀರಿ. ಆದರೆ ಈ ಪ್ರಭಾವ ಅಲ್ಪ ಪ್ರಮಾಣದ್ದಾಗಿರುತ್ತದೆ. ಸಾಡೆಸಾತಿಯ ಕೊನೆಯ ಹಂತಕ್ಕೆ ಬಂದಿದ್ದೀರಿ. ಇನ್ನು ಕಷ್ಟಗಳು ಕಡಿಮೆಯಾಗುತ್ತದೆ. ಹಣದ ಹರಿವು ಉತ್ತಮವಾಗುತ್ತದೆ. ಡಿಸೆಂಬರ್ ನಂತರ ಕೇತು ಆರನೇ ಮನೆಗೆ ಪ್ರವೇಶವಾದಾಗ ಧನ ಲಾಭ ಇನ್ನಷ್ಟು ಉತ್ತಮವಾಗುತ್ತದೆ. ಜೂನ್‌ನಿಂದ ಅಕ್ಟೋಬರ್‌ವರೆಗೆ ಕೊಂಚ ಎಚ್ಚರಿಕೆ ವಹಿಸಿ. ದಿಢೀರ್ ಅನಾರೋಗ್ಯ ಅಥವಾ ಏನಾದರೂ ನಷ್ಟ ಸಂಭವಿಸಬಹುದು. ಗುರುಗಳನ್ನು ಪೂಜಿಸಿ.
ಮೀನ ರಾಶಿ: ಈ ವರ್ಷ ಪೂರ್ತಿ ಶನಿ ನಿಮ್ಮ ರಾಶಿಯಲ್ಲೇ ಇರುತ್ತಾನೆ. ಖರ್ಚುಗಳು ಬಹಳ ಇರುತ್ತವೆ. ಆದರೆ ಜೂನ್ ನಂತರ ಗುರು ಕರ್ಕರಾಶಿಗೆ ಪ್ರವೇಶವಾದಾಗ ನಿಮಗೆ ಅನುಕೂಲಗಳು ಒದಗಿ ಬರುತ್ತದೆ. ಹೊಸ ಕೆಲಸ ಸಿಗುವುದು ಅರ್ಹರಿಗೆ ಮದುವೆಯಾಗುವುದು ಮುಂತಾದ ಶುಭಸಂಗತಿಗಳು ಇವೆ. ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಶುಭವಿದೆ. ಉನ್ನತ ವ್ಯಾಸಂಗಕ್ಕೆ ಪ್ರಯತ್ನ ಮಾಡುತ್ತಿರುವವರಿಗೆ ಅನುಕೂಲವಾಗುತ್ತದೆ. ಡಿಸೆಂಬರ್ ನಂತರ ರಾಹು ವ್ಯಯಸ್ಥಾನದಿಂದ ಲಾಭ ಸ್ಥಾನಕ್ಕೆ ಪ್ರವೇಶವಾದಾಗ ನಿಮಗೆ ಇನ್ನೂ ಬಹಳ ಅನುಕೂಲಗಳು ಒದಗಿ ಬರುತ್ತದೆ. ಈ ವರ್ಷ ನಿಮಗೆ ಜೂನ್ ನಂತರ ಒಳ್ಳೆಯ ಸಂಗತಿಗಳು ಇವೆ. ಪದವಿ ಅಧಿಕಾರ ಪ್ರಾಪ್ತಿ ಇದೆ. ಹೊಸ ಯೋಜನೆಗಳು ನಿಮ್ಮನ್ನು ಹುಡುಕಿ ಬರುತ್ತವೆ.
