ಪಟಾಕಿ ಅಬ್ಬರ: ಯಾದಗಿರಿಯಲ್ಲಿ ಮಾಲಿನ್ಯ ದೇಶದಲ್ಲೇ ಅತಿ ಕಡಿಮೆ!
ಸೋಮವಾರ ಯಾದಗಿರಿ ವಾಯುಮಾಲಿನ್ಯದ ಪರಿಮಿತಿ 34 ಇತ್ತು| ಓಝೋನ್ ಪದರ ಈ ಹಂತದಲ್ಲಿ ಸುರಕ್ಷಿತ ಎಂದು ವೈಜ್ಞಾನಿಕ ರೀತಿಯಲ್ಲಿ ವಿಶ್ಲೇಷಣೆ| ಇದು ದೇಶದಲ್ಲೇ ಅತ್ಯಂತ ಕಡಿಮೆ ಎಂದು ರಾಷ್ಟ್ರೀಯ ವಾಯುಮಾಲಿನ್ಯ ಮಂಡಳಿ ವರದಿಯಲ್ಲಿ ನಮೂದಾಗಿದೆ| ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಅತಿ ಹೆಚ್ಚು 412 ನಮೂದಾಗಿದೆ|ಬೆಂಗಳೂರಿನ ಸಿಟಿ ರೈಲು ನಿಲ್ದಾಣ 96 ರಷ್ಟು ಮಿತಿ ಹೊಂದಿದ್ದರೆ, ಕಲಬುರಗಿ 70 ರಷ್ಟು ಮಿತಿ ಹೊಂದಿತ್ತು|
ಯಾದಗಿರಿ[ಅ.30]: ದೀಪಾವಳಿ ವೇಳೆ ಪಟಾಕಿಯಿಂದ ವಾಯು ಹಾಗೂ ಶಬ್ದ ಮಾಲಿನ್ಯದ ಅಬ್ಬರವೇ ಜಾಸ್ತಿ. ಇಂತಹುದರಲ್ಲಿ ಯಾದಗಿರಿ ನಗರ ಇದಕ್ಕೆ ವ್ಯತಿರಿಕ್ತವಾಗಿ ಇಡೀ ದೇಶದಲ್ಲೇ ಮಾದರಿಯಾಗಿ ಹೊರಹೊಮ್ಮಿದೆ. ಸೋಮವಾರ ಯಾದಗಿರಿ ಏರ್ ಕ್ವಾಲಿಟಿ ಇಂಡೆಕ್ಸ್ (ವಾಯುಮಾಲಿನ್ಯದ ಪರಿಮಿತಿ) 34 ಇದ್ದು, ಇದು ದೇಶದಲ್ಲೇ ಅತ್ಯಂತ ಕಡಿಮೆ ಎಂದು ರಾಷ್ಟ್ರೀಯ ವಾಯುಮಾಲಿನ್ಯ ಮಂಡಳಿ ವರದಿಯಲ್ಲಿ ನಮೂದಾಗಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಅತಿ ಹೆಚ್ಚು 412 ನಮೂದಾಗಿದೆ.
ಸೋಮವಾರ ಮಧ್ಯಾಹ್ನ ಮೂರು ಗಂಟೆಗೆ ಯಾದಗಿರಿಯ ಏರ್ ಕ್ವಾಲಿಟಿ ಇಂಡೆಕ್ಸ್ 34 ರಷ್ಟು ಇದ್ದರೆ, ರಾತ್ರಿ 11ಕ್ಕೆ 42 ರಷ್ಟಿತ್ತು. ಓಝೋನ್ ಪದರ ಈ ಹಂತದಲ್ಲಿ ಸುರಕ್ಷಿತ ಎಂದು ವೈಜ್ಞಾನಿಕ ರೀತಿಯಲ್ಲಿ ವಿಶ್ಲೇಷಿಸಲಾಗುತ್ತದೆ. ರಾಷ್ಟ್ರೀಯ ಮಾಧ್ಯಮಗಳಲ್ಲಿ ಯಾದಗಿರಿಯ ಒಳ್ಳೆಯ ವಾತಾವರಣದ ಬಗ್ಗೆ ಸುದ್ದಿಗಳೂ ಪ್ರಸಾರವಾಗಿ, ಪರಿಸರ ಸ್ನೇಹಿ ಹಬ್ಬಕ್ಕೆ ಯಾದಗಿರಿ ಸಾಕ್ಷಿಯಾದಂತಿತ್ತು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ರಾಜ್ಯದ ಬೆಂಗಳೂರು, ಚಿಕ್ಕಬಳ್ಳಾಪುರ, ಹುಬ್ಬಳ್ಳಿ, ಕಲಬುರಗಿ, ಮೈಸೂರು, ರಾಮನಗರ ಹಾಗೂ ಯಾದಗಿರಿಯಲ್ಲಿ ಈ ಮಾನದಂಡ ಅಳೆಯುವ ಹೈಟೆಕ್ ಉಪಕರಣವನ್ನು ಅಳವಡಿಸಲಾಗಿದೆ. ಬೆಂಗಳೂರಿನ ಸಿಟಿ ರೈಲು ನಿಲ್ದಾಣ 96 ರಷ್ಟು ಮಿತಿ ಹೊಂದಿದ್ದರೆ, ಕಲಬುರಗಿ 70 ರಷ್ಟು ಮಿತಿ ಹೊಂದಿತ್ತು.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿಗಳಿಂದ ವಾತಾವರಣ ಕಲುಷಿತಗೊಳ್ಳುತ್ತದೆ. ಪಟಾಕಿಗಳನ್ನು ಬಿಟ್ಟು, ಪರಿಸರ ಸ್ನೇಹಿ ಹಬ್ಬದ ಆಚರಣೆಗೆ ಇಲಾಖೆ ಮನವಿ ಮಾಡಿದೆ. ಹಾಗೆಯೇ, ಇಲ್ಲಿ ಯಾವುದೇ ಕೈಗಾರಿಕೆಗಳೂ ಇಲ್ಲದಿರುವುದು ಇದಕ್ಕೆ ಪೂರಕವಾಗಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಾಯಕ ಪರಿಸರ ಅಧಿಕಾರಿ ಸಣ್ಣ ವೆಂಕಟೇಶ ಸಣಬಾಳ್ ಅವರು ಹೇಳಿದ್ದಾರೆ.